ಮಾದಪ್ಪ ಸನ್ನಿಧಿಯಲ್ಲಿ ಆರೋಗ್ಯ ಸೇವೆಗೆ ಪರದಾಟ
Team Udayavani, Jul 24, 2023, 1:41 PM IST
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಪ್ರಮುಖ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ಸಮರ್ಪಕ ಆರೋಗ್ಯ ಸೇವೆ ದೊರಕದೆ ಇರುವುದು ವಿಪರ್ಯಾಸವೇ ಸರಿ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದೈನಂದಿನ ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು, ಅಮಾವಾಸ್ಯೆ- ಹುಣ್ಣಿಮೆ, ವಿಶೇಷ ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ವಾರ್ಷಿಕವಾಗಿ ನಡೆಯುವ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಇಂಥ ಪುಣ್ಯಕ್ಷೇತ್ರದಲ್ಲಿ ಇನ್ನೂ ಕೂಡ 10 ಹಾಸಿಗೆಗಳುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರವೇ ಕಾರ್ಯನಿರ್ವಹಿಸುತ್ತಿದ್ದು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಕಳೆದ 10 ವರ್ಷಗಳಿಂದಲೂ ಭಕ್ತಾದಿಗಳಿಂದ ಒತ್ತಾಯ ಕೇಳಿ ಬರುತ್ತಿದ್ದರು ಇನ್ನೂ ಕೂಡ ಆಸ್ಪತೆಯನ್ನು ಮೇಲ್ದರ್ಜೆಗೇರಿಸಿಲ್ಲ. ಇದು ಸಹಜವಾಗಿಯೇ ಭಕ್ತಾದಿಗಳ ಬೇಸರಕ್ಕೆ ಕಾರಣವಾಗಿದೆ.
ಸ್ಥಳೀಯರಿಗೂ ದೊರಕದ ಆರೋಗ್ಯ ಸೇವೆ: ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲು ಇರುವ ಕಾಡಂಚಿನ ಗ್ರಾಮಗಳ ನಿವಾಸಿಗಳೂ ಕೂಡ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇಲ್ಲಿನ ನಿವಾಸಿಗಳು ತುರ್ತು ಆರೋಗ್ಯ ಸೇವೆ ಅವಶ್ಯಕವಾಗಿದ್ದಲ್ಲಿ ನೆರೆಯ ತಮಿಳುನಾಡು ರಾಜ್ಯದ ಮೆಟ್ಟೂರು ಆಸ್ಪತ್ರೆ ಅಥವಾ 130 ಕಿ.ಮೀ. ದೂರದ ಮೈಸೂರು ಆಸ್ಪತ್ರೆಗಳನ್ನು ಅವಲಂಬಿಸಬೇಕಿದೆ.
ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ನಿವಾಸಿಗಳು ಕರ್ನಾಟದ ರಾಜ್ಯದ ವಿಳಾಸವಿರುವ ಆಧಾರ್ ಕಾರ್ಡ್ ಅಥವಾ ಇನ್ನಿತರ ವಿಳಾಸ ಪುರಾವೆ ದಾಖಲಾತಿಗಳೊಂದಿಗೆ ತಮಿಳುನಾಡು ಆಸ್ಪತ್ರೆಗೆ ತೆರಳಿದರೆ ಕರ್ನಾಟಕದ ಆಸ್ಪತ್ರೆಗಳನ್ನು ಬಿಟ್ಟು ಇಲ್ಲಿಗೆ ಏಕೆ ಬಂದಿದ್ದೀರಿ ಎಂದು ಚಿಕಿತ್ಸೆ ನಿರಾಕರಿಸಿರುವ ಪ್ರಕರಣಗಳೂ ಜರುಗಿವೆ. ಪ್ರಸ್ತುತ ಮಹದೇಶ್ವರ ಬೆಟ್ಟದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ 10 ಬೆಡ್‌ಗಳು ಮಾತ್ರ ಇದ್ದು ಪ್ರಥಮ ಚಿಕಿತ್ಸೆಗೆ ಅವಶ್ಯಕವಾದ ಸೇವೆ ಮಾತ್ರ ದೊರಕುತ್ತಿದೆ.
ಘೋಷಣೆಯಾಗಿಯೇ ಉಳಿದ ಯಡಿಯೂರಪ್ಪ ಭರವಸೆ: ನವೆಂಬರ್ 2020ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ಘೋಷಣೆಯಾಗಿ ಎರಡೂವರೆ ವರ್ಷ ಕಳೆದಿದ್ದರೂ ಘೋಷಣೆ ಘೊಷಣೆಯಾಗಿಯೇ ಉಳಿದಿದೆ.
ದುರಸ್ತಿಗೊಂಡಿರುವ ಆ್ಯಂಬುಲೆನ್ಸ್: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ತುರ್ತು ಸಂದರ್ಭದಲ್ಲಿ ನೆರವಿಗಾಗಿ 108 ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಆದರೆ ಈ ಆ್ಯಂಬುಲೆನ್ಸ್‌ನ ಟೈರುಗಳು ಸಂಪೂರ್ಣವಾಗಿ ಸವೆದು ಹೋಗಿದ್ದು, ಟೈರಿನ ಒಳಗಡೆ ಇರುವ ತಂತಿಗಳು ಕಾಣುತ್ತಿವೆ. ಹೇಳಿಕೇಳಿ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳು ಅರಣ್ಯದೊಳಗಿನ ಗ್ರಾಮಗಳಾಗಿದ್ದು ಮಣ್ಣಿನ ರಸ್ತೆಯನ್ನೇ ಕಾಣದ ರಸ್ತೆಗಳಾಗಿವೆ. ಇಂಥ ಸ್ಥಿತಿಯಲ್ಲಿ ಆ್ಯಂಬುಲೆನ್ಸ್‌ನ ಟೈರುಗಳನ್ನು ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೆ ಇರುವುದು ದುರ್ದೈವವಾಗಿದೆ.
ಈ ಆ್ಯಂಬುಲೆನ್ಸ್ ನಿಂದ ಸಾರ್ವಜನಿರಿಗೆ ಉಪಯೋಗವಾಗುವ ಬದಲು ಏನಾದರೂ ಅನಾಹುತ ಸಂಭವಿಸುವ ಮುನ್ನ ಆ್ಯಂಬುಲೆನ್ಸ್‌ನ ಟೈರುಗಳನ್ನು ಬದಲಾಯಿಸಿ ಆ್ಯಂಬುಲೆನ್ಸ್ ಅನ್ನು ದುರಸ್ತಿಪಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಭಕ್ತಾದಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವಂತಹ ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಆವೃತ್ತವಾಗಿರುವ ಸ್ಥಳೀಯ ನಿವಾಸಿಗಳ ಆರೋಗ್ಯ ಸೇವೆಗಾಗಿ ಶೀಘ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಅಗತ್ಯ ಆ್ಯಂಬುಲೆನ್ಸ್ ಮತ್ತು ಔಷಧೋಪಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಭಕ್ತಾದಿಗಳ ಆಗ್ರಹವಾಗಿದೆ.
ಮಹದೇಶ್ವರಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೆರೆಯಲು ಪ್ರಾಧಿಕಾರದವತಿಯಿಂದಲೇ ಸ್ಥಳ ಗುರುತಿಸಿದ್ದು, ಅಗತ್ಯ ಅನುಮೋದನೆ ದೊರೆತಿದೆ. ಇನ್ನೂ ಕೂಡ ಆಡಳಿತಾತ್ಮಕ ಪ್ರಕ್ರಿಯೆಗಳು ಜರುಗುತ್ತಿದ್ದು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು. ● ಡಾ.ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ
-ವಿನೋದ್ ಎನ್ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.