ಮಹಾ ಪಲಾಯನ….ಈಗ ಪ್ರತಿಭೆಗಳನ್ನೇ ಕಳೆದುಕೊಳ್ಳುತ್ತಿದೆ ಪಾಕಿಸ್ತಾನ


Team Udayavani, Jul 25, 2023, 6:20 AM IST

ಮಹಾ ಪಲಾಯನ….ಈಗ ಪ್ರತಿಭೆಗಳನ್ನೇ ಕಳೆದುಕೊಳ್ಳುತ್ತಿದೆ ಪಾಕಿಸ್ತಾನ

ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನವು ಮೂಲಭೂತವಾದ ಮತ್ತು ಗಂಭೀರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗುತ್ತಿರುವ ವಿಚಾರ ಹೊಸದೇನಲ್ಲ. ಆದರೆ “ಗಾಯದ ಮೇಲೆ ಉಪ್ಪು ಸವರಿದಂತೆ’ ಪಾಕ್‌ ಈಗ ಹೊಸ ತಲೆನೋವು ಶುರುವಾಗಿದೆ. ಅದುವೇ, “ಪ್ರತಿಭಾ ಪಲಾಯನ’! ಈ ವರ್ಷದ ಮೊದಲ 6 ತಿಂಗಳಲ್ಲೇ ಬರೋಬ್ಬರಿ 8 ಲಕ್ಷದಷ್ಟು ಪಾಕಿಸ್ತಾನೀಯರು ದೇಶ ತೊರೆದಿದ್ದಾರೆ. ಈ ಬ್ರೈನ್‌ ಡ್ರೈನ್‌ನ ಹಿಂದಿನ ಕಾರಣ ಹೀಗಿದೆ:

ಬೇಡಪ್ಪಾ ಬೇಡ, ದೇಶದ ಸಹವಾಸವೇ ಸಾಕು!
ದಿನೇ ದಿನ ಪತನಗೊಳ್ಳುತ್ತಿರುವ ಆರ್ಥಿಕತೆ, ಅತ್ಯಧಿಕ ಹಣದುಬ್ಬರ, ರಾಜಕೀಯ ಅಸ್ಥಿರತೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ರೋಸಿಹೋಗಿರುವ ಪಾಕಿಸ್ತಾನದ ಶಿಕ್ಷಿತರು, ಕೌಶಲ್ಯಯುತ ವೃತ್ತಿಪರರು, ಎಂಜಿನಿಯರ್‌ಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರು ದಾಖಲೆ ಸಂಖ್ಯೆಯಲ್ಲಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಅದರಲ್ಲೂ ಈ ವರ್ಷದ ಮೊದಲ 6 ತಿಂಗಳಲ್ಲೇ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಮಂದಿ ಪಾಕಿಸ್ತಾನದ ಸಹವಾಸವೇ ಬೇಡ ಎಂದು ವಿದೇಶಗಳಿಗೆ ಹಾರಿದ್ದಾರೆ.

ಅಕ್ರಮ ಮಾರ್ಗದಲ್ಲಿ…
ಪ್ರಸಕ್ತ ವರ್ಷ 8.32 ಲಕ್ಷ ಮಂದಿ ಪಾಕ್‌ ತೊರೆದಿದ್ದಾರೆ ಎಂಬುದು ಸರ್ಕಾರದ ಅಧಿಕೃತ ಅಂಕಿಅಂಶವಾಗಿದೆ. ಇನ್ನೂ ಸಾವಿರಾರು ಮಂದಿ ಅಕ್ರಮ ಮಾರ್ಗದ ಮೂಲಕ ಐರೋಪ್ಯ ದೇಶಗಳನ್ನು ಪ್ರವೇಶಿಸಿದ್ದಾರೆ ಎನ್ನುತ್ತವೆ ಮೂಲಗಳು. ಕಳೆದ ಜೂನ್‌ 14ರಂದು ಗ್ರೀಸ್‌ ಕರಾವಳಿಯಾಚೆ ಜನದಟ್ಟಣೆ ಹೆಚ್ಚಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿ, ಕನಿಷ್ಠ 350 ಪಾಕಿಸ್ತಾನೀಯರು ಸಾವಿಗೀಡಾಗಿದ್ದರು. ದೇಶದಲ್ಲಿ ಇರಲು ಬಯಸದ ಪಾಕ್‌ ನಾಗರಿಕರು ದುಬೈ, ಈಜಿಪ್ಟ್, ಲಿಬಿಯಾಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿ, ನಂತರ 8 ಸಾವಿರ ಡಾಲರ್‌ ಪಾವತಿಸಿ ಅಕ್ರಮವಾಗಿ ಯುರೋಪ್‌ಗೆ ಹಡಗುಗಳ ಮೂಲಕ ಪ್ರಯಾಣಿಸುತ್ತಾರೆ. ಹಣಕಾಸಿನ ಒತ್ತಡ ಹಾಗೂ ಹತಾಶೆ ಅವರಿಂದ ಇಂಥ ಕೆಲಸಗಳನ್ನು ಮಾಡಿಸುತ್ತದೆ.

ಪಂಜಾಬ್‌ ಪ್ರಾಂತ್ಯದವರೇ ಹೆಚ್ಚು
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ಅತಿ ಹೆಚ್ಚು ವಲಸೆ ಬಿಕ್ಕಟ್ಟನ್ನು ಕೂಡ ಎದುರಿಸುತ್ತಿದೆ. ಕಳೆದ ವರ್ಷ ಸುಮಾರು 7.65 ಲಕ್ಷ ಮಂದಿ ಪಾಕಿಸ್ತಾನ ತೊರೆದಿದ್ದಾರೆ. ಆ ಪೈಕಿ ಸುಮಾರು ಒಂದು ಲಕ್ಷ ಮಂದಿ ಉನ್ನತ ಕೌಶಲ್ಯ ಹೊಂದಿರುವ ವೃತ್ತಿಪರರೇ ಆಗಿದ್ದಾರೆ. ವಿಶೇಷವೆಂದರೆ, ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಪಾಕ್‌ನ ಪಂಜಾಬ್‌ ಪ್ರಾಂತ್ಯದವರು ಎನ್ನುತ್ತದೆ ಪಾಕಿಸ್ತಾನದ ವಲಸೆ ಸಂಸ್ಥೆಯ ದತ್ತಾಂಶ. ಇನ್ನು, ಸುಮಾರು 27 ಸಾವಿರ ಮಂದಿ ಪಾಕ್‌ ಆಕ್ರಮಿತ ಕಾಶ್ಮೀರದವರು. 2021ರಲ್ಲಿ 2.25 ಲಕ್ಷ ಪಾಕಿಸ್ತಾನೀಯರು ಬೇರೆ ದೇಶಗಳಿಗೆ ವಲಸೆ ಹೋಗಿದ್ದರೆ, 2022ರಲ್ಲಿ ಈ ಸಂಖ್ಯೆ ಮೂರು ಪಟ್ಟು (7.54 ಲಕ್ಷ) ಹೆಚ್ಚಳವಾಗಿದೆ. 2020 ಮತ್ತು 2021 ಕೊರೊನಾ ಸೋಂಕು ಉತ್ತುಂಗದಲ್ಲಿದ್ದ ಅವಧಿಯಾಗಿದ್ದ ಕಾರಣ, ಆ ಸಮಯದಲ್ಲಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧವಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಅಂದರೆ, ಈ ನಿರ್ಬಂಧ ಇಲ್ಲದೇ ಇರುತ್ತಿದ್ದರೆ ಈ ಎರಡು ವರ್ಷಗಳಲ್ಲೂ ಪಾಕ್‌ನಿಂದ ಪಲಾಯನಗೈದವರ ಸಂಖ್ಯೆ ಹೆಚ್ಚೇ ಇರುತ್ತಿತ್ತು.

ದೇಶ ಬಿಟ್ಟವರು ಹೋಗುವುದೆಲ್ಲಿಗೆ?
ಅಧಿಕೃತ ಮಾಹಿತಿಯ ಪ್ರಕಾರ, ಪಾಕಿಸ್ತಾನದಿಂದ ವಲಸೆ ಹೋದವರು ಪೈಕಿ ಬಹುತೇಕ ಮಂದಿ ಹೋಗಿರುವುದು ಪಶ್ಚಿಮ ಏಷ್ಯಾ ದೇಶಗಳಿಗೆ. ಅದರಲ್ಲೂ ಪ್ರಮುಖವಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ಗೆ. ಐರೋಪ್ಯ ರಾಷ್ಟ್ರಗಳ ಪೈಕಿ ಪಾಕಿಸ್ತಾನೀಯರ ಫೇವರಿಟ್‌ ಆಯ್ಕೆಯೆಂದರೆ ರೊಮೇನಿಯಾ.

ದ್ವಿ ಪೌರತ್ವದ ಅವಕಾಶ
ಭಾರತದಲ್ಲಿ ದ್ವಿ ಪೌರತ್ವದ ಅವಕಾಶವಿಲ್ಲ. ಆದರೆ, ಪಾಕಿಸ್ತಾನದಲ್ಲಿ ಅಂಥ ನಿಯಮವಿಲ್ಲ. ಇನ್ನೊಂದು ದೇಶಕ್ಕೆ ಹೋಗುವ ಪಾಕಿಸ್ತಾನೀಯರು ತಮ್ಮ ಪಾಕಿಸ್ತಾನಿ ಪಾಸ್‌ಪೋರ್ಟ್‌ ಅನ್ನು ಇಟ್ಟುಕೊಂಡು, ಪ್ರಯಾಣಕ್ಕೂ ಅದನ್ನು ಬಳಸಬಹುದು. ಜತೆಗೆ, ಇನ್ನೊಂದು ದೇಶದ ಪೌರತ್ವವನ್ನೂ ಪಡೆದುಕೊಳ್ಳಬಹುದು. ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಂಪುಟದಲ್ಲಿದ್ದ ಕನಿಷ್ಠ 7 ಸಚಿವರು ದ್ವಿ ಪೌರತ್ವ ಅಥವಾ ಮತ್ತೂಂದು ದೇಶದ ಕಾಯಂ ವಾಸ ಪ್ರಮಾಣಪತ್ರವನ್ನು ಹೊಂದಿದ್ದರು. ದ್ವಿ ಪೌರತ್ವಕ್ಕೆ ಅವಕಾಶ ನೀಡುವ ನಿಯಮ ಕೂಡ ಪಾಕ್‌ಗೆ ಶಾಪವಾಗಿದೆ. ಏಕೆಂದರೆ, ಆ ದೇಶದಲ್ಲಿ ಭ್ರಷ್ಟಾಚಾರಕ್ಕೂ ಇದುವೇ ಮೂಲ ಎಂದು ಹೇಳಲಾಗುತ್ತಿದೆ. ಈ ಅವಕಾಶವನ್ನೇ ಬಳಸಿಕೊಂಡು ಬಹುತೇಕ ಮಂದಿ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸೇನಾಧಿಕಾರಿಗಳು ಅಕ್ರಮ ಹಣವನ್ನು ವಿದೇಶಗಳಲ್ಲಿ ಕೂಡಿಡುತ್ತಿದ್ದಾರೆ.

ಗುರಿಯೂ ಇಲ್ಲ, ಗುರುವೂ ಇಲ್ಲ
ಉನ್ನತ ಶಿಕ್ಷಣ ಪಡೆದ, ಕೌಶಲ್ಯಭರಿತ ವೃತ್ತಿಪರ ಯುವಕರು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಅರಸಿಕೊಂಡು ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೆ ಹೋದವರು ಅಲ್ಲಿಂದ ರವಾನಿಸುವ ಹಣವು ಪಾಕ್‌ ಆರ್ಥಿಕತೆಯ ಬಹುದೊಡ್ಡ ಪಾಲೂ ಹೌದು. ಆದರೆ, ಇದು ಆ ದೇಶದ ವ್ಯಾಪಾರದ ಅಸಮತೋಲನವನ್ನು ಸರಿದೂಗಿಸುತ್ತಿಲ್ಲ. ಪಾಕಿಸ್ತಾನವು ರಫ್ತು ಮಾಡುವುದಕ್ಕಿಂತಲೂ ಹೆಚ್ಚಿನ ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ. ಅಲ್ಲದೇ, ಭಾರತದ ಮೇಲೆ ಕಣ್ಣಿಟ್ಟು ಪ್ರತಿ ವರ್ಷವೂ ಅತ್ಯಧಿಕ ಮೊತ್ತವನ್ನು ತನ್ನ ಸೇನಾಪಡೆಯ ವೆಚ್ಚಕ್ಕೆಂದೇ ಸುರಿಯುತ್ತದೆ. ಇನ್ನು, ಈ ದೇಶಕ್ಕೆ ಗುರಿಯೂ ಇಲ್ಲ, ಗುರುವೂ ಇಲ್ಲ ಎಂಬಂಥ ಸ್ಥಿತಿಯಿದೆ. ಇಸ್ಲಾಮಿಕ್‌ ಮೂಲಭೂತವಾದವನ್ನು ನೆಚ್ಚಿಕೊಂಡು, ಉಗ್ರರನ್ನು ಪೋಷಿಸುತ್ತಿರುವ ಕಾರಣ ಅಲ್ಲಿನ ಪರಿಸ್ಥಿತಿ ಹದಗೆಡುತ್ತಲೇ ಇದೆ. ಮೂಲಭೂತವಾದ ಮತ್ತು ಉಗ್ರವಾದವು ತೀವ್ರಗೊಂಡಿರುವುದು ಆ ದೇಶದ ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಹತ್ತಿ ಉತ್ಪಾದಕ ದೇಶವಾಗಿದ್ದರೂ, ಜವಳಿ ಉದ್ಯಮವನ್ನು ಬೆಳೆಸುವಲ್ಲಿ ಪಾಕ್‌ ವಿಫ‌ಲವಾಗಿದೆ. ಪ್ರತಿಭಾವಂತರು, ಕ್ರಿಯಾತ್ಮಕ ಮನಸ್ಸುಗಳು, ಕೌಶಲ್ಯಯುತ ಯುವಜನತೆಯ ಸಂಖ್ಯೆ ಸಾಕಷ್ಟಿದ್ದರೂ ಭಾರತದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲೂ ಆ ದೇಶಕ್ಕೆ ಸಾಧ್ಯವಾಗಿಲ್ಲ. ಪದೇ ಪದೆ ಪಾಕಿಸ್ತಾನವು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗುತ್ತಿರುವ ಕಾರಣ, ಉದ್ಯಮ ಸಂಸ್ಥೆಗಳೂ ಆ ದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿವೆ. ಈ ಎಲ್ಲ ಕಾರಣಗಳೂ ಪಾಕ್‌ನಲ್ಲಿ ಪ್ರತಿಭಾ ಪಲಾಯನ ಹೆಚ್ಚಲು ಕಾರಣ. ಒಟ್ಟಿನಲ್ಲಿ, ಭವಿಷ್ಯದ ಅನಿಶ್ಚಿತತೆಯನ್ನು ಮನಗಂಡು ಜನ ತಮ್ಮದೇ ನೆಲವನ್ನು ತೊರೆದು ಮತ್ತೆಲ್ಲೋ ಬದುಕು ಅರಸಿ ಹೋಗುತ್ತಿದ್ದಾರೆ.

ಪಾಕ್‌ ತೊರೆದವರು

2019- 6,25,000

2020- 2,88,000

2021- 2,25,000

2022- 7,65,000

2023- 8,32,000*

ಪ್ರಸಕ್ತ ವರ್ಷದ ಜೂನ್‌ ತಿಂಗಳವರೆಗೆ

ಪ್ರಸಕ್ತ ವರ್ಷದ ಪ್ರತಿಭಾ ಪಲಾಯನ
 -ಮ್ಯಾನೇಜರ್‌ಗಳು- 37,500
– ಟೆಕ್ನೀಷಿಯನ್‌ಗಳು – 34,000
– ಅಕೌಂಟೆಂಟ್‌ಗಳು- 11,000
– ಎಂಜಿನಿಯರ್‌ಗಳು- 11,0000
– ವೈದ್ಯರು – 4,000
– ನರ್ಸ್‌ಗಳು – 4,000

ಪ್ರತಿ ವರ್ಷ ಪಾಕ್‌ನಲ್ಲಿ ಪದವಿ ಪಡೆದು ಹೊರಬರುವವರ ಸಂಖ್ಯೆ – 4,45,000

ಈ ಪೈಕಿ ವೃತ್ತಿಪರ ಪದವಿ ಪಡೆದೂ ನಿರುದ್ಯೋಗಿಗಳಾಗಿ ಉಳಿಯುವವರು- ಶೇ.31

ದೇಶ ಬಿಡಲು ಕಾರಣವೇನು?
– ಗಂಭೀರ ಆರ್ಥಿಕ ಬಿಕ್ಕಟ್ಟು
–  ರಾಜಕೀಯ ಅಸ್ಥಿರತೆ,
– ಕಾನೂನು ಮತ್ತು ಸುವ್ಯವಸ್ಥೆ ದುರ್ಬಲಗೊಂಡಿರುವುದು
– ನಿರುದ್ಯೋಗ
– ಕಡಿಮೆ ವೇತನ
– ಪಾಕ್‌ ರೂಪಾಯಿ ಮೌಲ್ಯ ಕುಸಿತ
– ಗಗನಕ್ಕೇರಿರುವ ಹಣದುಬ್ಬರ,
– ಇಸ್ಲಾಮಿಕ್‌ ಮೂಲಭೂತವಾದ

ವಾಪಸಾಗದ ವಿದ್ಯಾರ್ಥಿಗಳು
ದೇಶದ ಆರ್ಥಿಕ ದುಸ್ಥಿತಿಯು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಾಕ್‌ ಮೂಲದ ವಿದ್ಯಾರ್ಥಿಗಳಲ್ಲೂ ಅನಿಶ್ಚಿತತೆ ಮೂಡಿಸಿದೆ. ಸಾಮಾನ್ಯವಾಗಿ ವಿದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುತ್ತಿದ್ದರು. ಆದರೆ, ಈಗ ಬಹುತೇಕ ಮಂದಿ ವ್ಯಾಸಂಗ ಮುಗಿಸಿದ ಮೇಲೂ ಅಲ್ಲೇ ಉದ್ಯೋಗ ಹುಡುಕಿಕೊಂಡು, ಕಾಯಂ ವಾಸ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಭಾರತದ ಸ್ಥಿತಿ ಹೇಗಿದೆ?
2023ರಲ್ಲಿ ಜೂನ್‌ವರೆಗೆ ಅಂದರೆ 6 ತಿಂಗಳಲ್ಲಿ ಸುಮಾರು 87 ಸಾವಿರ ಭಾರತೀಯರು ತಮ್ಮ ಪೌರತ್ವವನ್ನು ತೊರೆದಿದ್ದಾರೆ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಲೋಕಸಭೆಗೆ ನೀಡಿರುವ ಮಾಹಿತಿಯಿದು. 2011ರಿಂದ ಈವರೆಗೆ ಒಟ್ಟು 17.50 ಲಕ್ಷ ಭಾರತೀಯರು ಪೌರತ್ವ ತೊರೆದಿರುವುದಾಗಿ ಅವರು ತಿಳಿಸಿದ್ದಾರೆ. ಜಾಗತಿಕ ಅವಕಾಶಗಳನ್ನು ಹುಡುಕುತ್ತಾ ಮತ್ತು ವೈಯಕ್ತಿಕ ಆರಾಮದಾಯಕತ್ವವನ್ನು ಅರಸಿ ದೇಶ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಜನ ಏನೆನ್ನುತ್ತಾರೆ?
ನಮ್ಮಲ್ಲಿರುವ ಬೆಸ್ಟ್‌ ಡಾಕ್ಟರ್‌ಗಳು ಅಮೆರಿಕಕ್ಕೋ, ಮತ್ತೊಂದು ದೇಶಕ್ಕೋ ಹೋಗುವುದು ನೋಡಿ ನೋವಾಗುತ್ತದೆ. ಆದರೆ, ಯಾರನ್ನು ದೂಷಿಸಬೇಕು? ನಮ್ಮ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಆ ದೇವರಿಗೇ ಪ್ರೀತಿ. ಇಲ್ಲಿ ವ್ಯವಸ್ಥೆಯೂ ಸರಿಯಿಲ್ಲ, ಸರಿಯಾದ ವೇತನವೂ ಸಿಗುವುದಿಲ್ಲ.
– ಅಫಿÏàನ್‌ ಅಕ್ಬರ್ , ಕರಾಚಿ ಮೂಲದ ಸ್ತ್ರೀರೋಗ ತಜ್ಞೆ

ಇಷ್ಟೊಂದು ಮಂದಿ ದೇಶ ಬಿಟ್ಟು ಹೋಗುವುದನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಯುವಕರು ಮಾತ್ರವಲ್ಲ ಎಲ್ಲ ವಯೋಮಾನದವರೂ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಅವರ ಹತಾಶೆ ನೋಡಿದರೆ, ಒಮ್ಮೆ ಇಲ್ಲಿಂದ ಹೋದರೆ ಸಾಕು ಎಂಬ ಮನಸ್ಥಿತಿಯಿರುವುದು ಸ್ಪಷ್ಟವಾಗುತ್ತದೆ.
– ನಾಸಿರ್‌ ಖಾನ್‌, ವಲಸೆ ಏಜೆಂಟ್‌

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.