ವೃತ್ತಿಪರ ಕೋರ್ಸ್‌ಗಳ ಪ್ರವೇಶ: ಒಂದೇ ಸೂತ್ರಕ್ಕೆ ತೀರ್ಮಾನ!
Team Udayavani, Jul 25, 2023, 7:00 AM IST
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೆ ಪ್ರತ್ಯೇಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ ಎಲ್ಲವನ್ನೂ ಒಟ್ಟಿಗೆ, ಒಮ್ಮೆಗೆ ನಡೆಸಲು ತೀರ್ಮಾನಿಸಿದೆ.
ಈ ಸಂಯೋಜಿತ ಸೀಟು ಹಂಚಿಕೆಯ ಪ್ರಕಾರ ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್‌ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ಅನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್‌ಗಳು ಇವೆಯೋ ಅಷ್ಟೂ ಕೋರ್ಸ್‌ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು.
ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲವು ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್‌ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ ಎಂಟ್ರಿ ಸ್ಕ್ರೀನ್‌ನಲ್ಲಿ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ದಾಖಲಾತಿ ಆದೇಶವನ್ನು ಆನ್‌ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಡೇಟ್ ಮಾಡಿಸಬೇಕು.
ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿ ಮಾಡಿರುವ ಆಪ್ಷನ್ ಎಂಟ್ರಿ ಪ್ರಕಾರ ಯಾವುದಾದರೊಂದು ಕೋರ್ಸ್‌ನಲ್ಲಿ ಸೀಟು ಪಡೆಯಬೇಕು. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಅನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸದರಿ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. 2ನೇ ಸುತ್ತಿನಲ್ಲಿ ವೈದ್ಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ 2ನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್‌ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.
ಎಂಜಿನಿಯರಿಂಗ್ ಸೀಟುಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಚಾಯ್ಸ-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ಮಾಡಿದ್ದ ಆಪ್ಷನ್ ಎಂಟ್ರಿಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು ಮೂರನೇ ಸುತ್ತಿಗೆ ಹೊಸದಾಗಿ ಆಪ್ಷನ್ ಎಂಟ್ರಿ ಮಾಡಬೇಕು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಪ್ಷನ್ ಎಂಟ್ರಿ ಮಾಡಬೇಕು.
ಮಾಪ್‌ಅಪ್ ಸುತ್ತು
ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್, ನರ್ಸಿಂಗ್, ಆರ್ಕಿಟೆಕ್ಚರ್, ಪಶು ವೈದ್ಯಕೀಯ, ಕೃಷಿ – ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ಅನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಬಹುದು. ಅದೇ ರೀತಿ 2ನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದ್ದುಪಡಿಸಿದ ಅನಂತರ ಎಂಜಿನಿಯರಿಂಗ್ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.
ಈ ಹೊಸ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿರುವ ಕೆಇಎಯ ಕಾಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳಲ್ಲಿ ಸೀಟು ಪಡೆದು, ಅನಂತರ ಯಾವುದಾದರೂ ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್‌ಗಳಲ್ಲಿನ ಸೀಟು ಬೇರೆ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಯಾವುದೇ ಕೋರ್ಸ್‌ಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ಬಳಿಕ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.