ಅರಿಶಿಣ ಖರೀದಿ ಹಣ ನೀಡುವಲ್ಲಿ ವಿಳಂಬ
Team Udayavani, Jul 27, 2023, 3:24 PM IST
ಗುಂಡ್ಲುಪೇಟೆ: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ಅರಿಶಿಣದ ಹಣ ರೈತರ ಖಾತೆಗೆ ಜಮೆ ಮಾಡಲು ವಿಳಂಬ ಧೋರಣೆ ಅನುಸರಿಸಿದ ಕ್ರಮ ಖಂಡಿಸಿ ಹಾಗೂ ಅರಿಶಿಣ ವಾಪಸ್ ಕೊಡುವಂತೆ ಆಗ್ರಹಿಸಿ ರೈತರು ಓವರ್‌ಹೆಡ್ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ ಘಟನೆ ಪಟ್ಟಣದ ಎಪಿಎಂಸಿ ಉಗ್ರಾಣ ಬಳಿ ಬುಧವಾರ ನಡೆಯಿತು.
ಪಟ್ಟಣದ ಹೊರವಲಯದ ಉಗ್ರಾಣದ ಬಳಿಯಲ್ಲಿ ಕಳೆದ ಎರಡು ದಿನಗಳಿಂದ ರೈತ ಮುಖಂಡರು ಅಹೋರಾತ್ರಿ ಧರಣಿ ನಡೆಸಿ, ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಿದ್ದ ಅರಿಶಿಣದ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಮಣಿದ ಅಧಿಕಾರಿಗಳು ಮಂಗಳವಾರ ಸಂಜೆ ರೈತರ ಖಾತೆಗೆ ಹಣ ಜಮೆ ಮಾಡಿದ್ದರು. ಆದರೂ, ಧರಣಿ ನಿರತರು ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದರು.
ಡೀಸಿ ಸ್ಥಳಕ್ಕೆ ಬರಲು ಒತ್ತಾಯ: ಪ್ರತಿಭಟನಾ ಸ್ಥಳಕ್ಕೆ ಬುಧವಾರ ಮಧ್ಯಾಹ್ನವಾದ್ರೂ ಜಿಲ್ಲಾಧಿಕಾರಿಗಳು ಆಗಮಿಸದ ಹಿನ್ನೆಲೆ ಆಕ್ರೋಶಗೊಂಡ ಧರಣಿ ನಿರತ ರೈತರಾದ ಕಂದೇಗಾಲ ಮಾದಪ್ಪ, ಶ್ಯಾನಡ್ರಹಳ್ಳಿ ಬಸವರಾಜು ಎಂಬುವವರು ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಮೇಲೇರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮನವೊಲಿಕೆಗೆ ಜಗ್ಗಲಿಲ್ಲ: ನಂತರ ಕೆಳಗಿಳಿಯಿರಿ ಏನೇ ಸಮಸ್ಯೆ ಇದ್ದರೂ ನಾವು ಬಗೆಹರಿಸುತ್ತೇವೆ ಎಂದು ರೈತ ಸಂಘಟನೆಯವರು, ಅರಿಶಿಣ ಬೆಳೆಗಾರರ ಒಕ್ಕೂಟದವರು ಮನವೊಲಿಸುವ ಪ್ರಯತ್ನ ನಡೆಸಿದರೂ ಅವರು ಒಪ್ಪಲಿಲ್ಲ.
ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜ್, ಅಗ್ನಿಶಾಮಕ ದಳ ಅಧಿಕಾರಿ ಸಿದ್ದೇಗೌಡ ಟ್ಯಾಂಕ್ ಬಳಿ ಹೋದಾಗಲೂ ಬೇಡಿಕೆ ಈಡೇರಿಸದೇ ನಮ್ಮನ್ನು ಇಳಿಸುವ ಪ್ರಯತ್ನ ಮಾಡಬೇಡಿ. ನೀವು ಮುಂದಾದರೆ ಕೆಳಗೆ ಜಿಗಿಯುತ್ತೇವೆ. ಇಲ್ಲಾ ಟ್ಯಾಂಕ್ ತುಂಬಿದ್ದು, ನೀರಿಗೆ ಜಿಗಿಯು ತ್ತೇವೆ ಎನ್ನುತ್ತಿದ್ದರು. ಇದರಿಂದ ಆತಂಕ ಮುಂದುವರಿದಿತ್ತು. ಮುಂಜಾಗ್ರತಾ ಕ್ರಮ ವಾಗಿ ಪೊಲೀಸರು ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲುಪಡೆ, ತುರ್ತು ಚಿಕಿತ್ಸಾ ವಾಹನ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ಮತ್ತು ನೌಕರರು ಬೀಡು ಬಿಟ್ಟಿದ್ದರು.
ಸ್ಥಳಕ್ಕೆ ಶಾಸಕರ ಭೇಟಿ: ಪ್ರತಿಭಟನಾನಿರತರ ಬೇಡಿಕೆ ಹಿನ್ನೆಲೆಯಲ್ಲಿ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್, ಎಡೀಸಿ ಗೀತಾ ಹುಡೇದ ಪ್ರತಿಭಟನಾನಿರತರ ಮನವಿ ಆಲಿಸಿದರು. ಕೃಷಿ ಮಾರುಕಟ್ಟೆ ಇಲಾಖೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಮೂರು ದಿನದಲ್ಲಿ ಅರಿಶಿಣ ವಾಪಸ್ ಕೊಡಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಖರೀದಿಸಿ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿರುವ ಅರಿಶಿಣ ಎತ್ತುವಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಪ್ರತಿಭಟನೆ ವಾಪಸ್: ನಂತರ ಟ್ಯಾಂಕ್ ಏರಿದ್ದವರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕೆಳಗಿಳಿದರು. ಶಾಸಕರು ಮತ್ತು ಉಪವಿಭಾಗಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ರೈತ ಸಂಘಟನೆ ಮತ್ತು ಅರಿಶಿಣ ಬೆಳೆಗಾರರ ಒಕ್ಕೂಟದವರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ಈ ವೇಳೆ ತಹಶೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ, ರೈತ ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ನಾಗಾರ್ಜುನ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್, ರೈತ ಸಂಘಟನೆ ಮುಖಂಡರಾದ ಕುಂದಕೆರೆ ಸಂಪತ್ತು, ಮಂಗಳಸಂಪತ್ತು, ದಡದಹಳ್ಳಿ ಮಹೇಶ್, ರಾಜಪ್ಪ, ಕಂದೇಗಾಲ ಮಾದಪ್ಪ, ಮಹೇಂದ್ರ, ವಿನೋದ್, ನಾಗೇಂದ್ರ, ಮಾದಪ್ಪ, ನಂಜಪ್ಪ, ರಾಜು, ಶಿವಕುಮಾರ್, ಶಿವಣ್ಣ, ಉಪ ತಹಶೀಲ್ದಾರ್ ಜಯಪ್ರಕಾಶ್, ಶಿರಸ್ತೇದಾರ್ ಮಹೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಲಕ್ಷ್ಮೀ, ಜವರೇಗೌಡ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.