ಅಮರ ಮಧುರ ಸ್ನೇಹ; ನಿಷ್ಕಲ್ಮಶ ಸ್ನೇಹ ಯಾವತ್ತೂ ಮುರಿದು ಬೀಳುವುದಿಲ್ಲ!
ಸ್ನೇಹಹಸ್ತ ಚಾಚದ ಯಾವೊಬ್ಬನನ್ನು ಕೂಡ ಮನುಷ್ಯನೆಂದು ಪರಿಗಣಿಸಾಲು ಆಗುವುದಿಲ್ಲ.
Team Udayavani, Jul 31, 2023, 12:37 PM IST
ನಿಜವಾದ ಸ್ನೇಹ ಯಾವತ್ತೂ ನಿಸ್ವಾರ್ಥದಿಂದ, ಅಭಿಮಾನದಿಂದ ಕೂಡಿರುತ್ತದೆ. ಅಲ್ಲಿ ವ್ಯಕ್ತಿಯ ಹೊರತಾಗಿ ಅವನ ಯಾವ ಬಲಹೀನತೆ, ಅಂತಸ್ತುಗಳು ಮುಖ್ಯವಾಗಿರದೆ ವ್ಯಕ್ತಿಯ ಸ್ನೇಹವಷ್ಟೇ ಮುಖ್ಯವಾಗಿರುತ್ತದೆ. ಒಳ್ಳೆಯ ಸ್ನೇಹಿತರನ್ನು ಹೊಂದಿರುವವನು ಮಾತ್ರ, ನಿಜವಾದ ಶ್ರೀಮಂತ…
ಪ್ರೇಮದ ವ್ಯಾಕರಣ ಎಂದಿಗೂ ಬದಲಾಗುವುದಿಲ್ಲ. ಹಾಗೇ ಸ್ನೇಹದ್ದು ಕೂಡ. ಭಗ್ನ ಪ್ರೇಮ, ಸ್ವಾರ್ಥ ಪ್ರೇಮ, ಟೈಂಪಾಸ್ ಪ್ರೇಮಗಳ ನಡುವೆ ದಿವಿನಾದ ದಿವ್ಯ ಪ್ರೇಮವೊಂದು ಇದ್ದು, ಯಾವಾಗಲೂ ಪ್ರೇಮಲೋಕವನ್ನು ದೈವತ್ವಕ್ಕೇರಿಸಿದಂತೆ, ಒಂದು ನಿಸ್ವಾರ್ಥ ಸ್ನೇಹವೂ ಕೂಡ ಸ್ನೇಹಲೋಕವನ್ನು ಯಾವತ್ತೂ ಕೂಡ ಹಸಿರಾಗಿರಿಸುತ್ತದೆ. ಸ್ನೇಹಿತರನ್ನು ಹೊಂದಿರದ, ಸ್ನೇಹಹಸ್ತ ಚಾಚದ ಯಾವೊಬ್ಬನನ್ನು ಕೂಡ ಮನುಷ್ಯನೆಂದು ಪರಿಗಣಿಸಾಲು ಆಗುವುದಿಲ್ಲ.
ಉತ್ತಮ ಗೆಳೆಯರನ್ನು ಹೊಂದಿರುವ ವ್ಯಕ್ತಿ ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸುತ್ತಾನೆ. ಮತ್ತು ಆತ ಸ್ವರ್ಗವನ್ನು ಇಲ್ಲೇ ಕಾಣುತ್ತಾನೆ. ಅಷ್ಟರಮಟ್ಟಿಗೆ ಸ್ನೇಹ ಅಮರ, ಮಧುರ. ಅಮರ ಸ್ನೇಹಕ್ಕೆ ಸಾಕ್ಷಿಯಾಗಿ ಆಧುನಿಕ ಕಾಲದ ಬೇಕಾದಷ್ಟು ಕಥೆಗಳಿದ್ದರೂ ಕೂಡ, ಯಾವಾಗಲೂ ನಮ್ಮ ಮನಸಿನಲ್ಲಿ ಬರುವುದು ಅದೇ ದುರ್ಯೋಧನ-ಕರ್ಣ, ಶ್ರೀಕೃಷ್ಣ-ಸುಧಾಮ, ಪೈಥಿಯಸ್-ದಮನ್. ಈ ಸ್ನೇಹದ ಕಥೆಗಳು ಯಾವತ್ತಿಗೂ ಜನಮಾನಸದಿಂದ ದೂರವಾಗಲಾರವು.
***
ಅದೊಂದು ದಿನ ಕರ್ಣ ಮತ್ತು ದುರ್ಯೋಧನನ ರಾಣಿ ಭಾನುಮತಿ ಪಡಸಾಲೆಯಲ್ಲಿ ಕೂತು ಪಗಡೆ ಆಡುತ್ತಿರುತ್ತಾರೆ. ಸೋತ ಭಾನುಮತಿ ಒಪ್ಪಂದದಂತೆ ಮಣಿಹಾರವನ್ನು ಕೊಡಲು ನಿರಾಕರಿಸಿದಾಗ ಕರ್ಣ ಅವಳ ಕೊರಳಿಗೆ ಕೈ ಹಾಕಿ ಹಾರ ಕಿತ್ತುಕೊಳ್ಳುತ್ತಾನೆ. ಹಾಗೆ ಕೀಳುವಾಗ ದಾರಕಿತ್ತು, ಮಣಿಗಳೆಲ್ಲ ಚೆಲ್ಲಾಪಿಲ್ಲಿಯಾಗುವುದಕ್ಕೂ, ಎಲ್ಲಿಗೋ ಹೋಗಿದ್ದ ದುರ್ಯೋಧನ ಅಲ್ಲಿಗೆ ಬರುವುದಕ್ಕೂ ಸರಿ ಹೋಗುತ್ತದೆ. “ಬಿಡಬೇಡ ಕರ್ಣ, ಮಣಿಹಾರ ಹೋದರೆ ಏನಂತೆ? ಅವಳ ಕೊರಳಲ್ಲಿರುವ ಕಂಠೀಹಾರವನ್ನು ಕಿತ್ತುಕೋ…’ ಎನ್ನುತ್ತಾನೆ! ತನ್ನ ಹೆಂಡತಿಯ ಕೊರಳಿಗೆ ಕೈ ಹಾಕಿದವನ ಕುರಿತು ಕಿಂಚಿತ್ತೂ ಅನುಮಾನ ಪಡೆದ ದುರ್ಯೋಧನ ಆ ಕರ್ಣನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದ ಮತ್ತು ಕರ್ಣ ಹೇಗೆ ನಂಬಿಕೆಯನ್ನು ಉಳಿಸಿಕೊಂಡಿದ್ದ ಎಂಬುದಕ್ಕೆ ಈ ಪ್ರಸಂಗ ಸಾಕ್ಷಿ.
***
ಗುರುಕುಲದಲ್ಲಿ ಒಟ್ಟಿಗೆ ಓದಿದ ಸ್ನೇಹಿತ ಕೃಷ್ಣ ಈಗ ಮಹಾರಾಜನಾಗಿದ್ದಾನೆ. ಸುಧಾಮ ಬಡವ. ಅಳುಕಿನಿಂದಲೇ ಆತ ಬಹಳ ವರ್ಷವಾದರೂ ಗೆಳೆಯನನ್ನು ಭೇಟಿಯಾಗಿರಲಿಲ್ಲ. ಹೆಂಡತಿಯ ಒತ್ತಾಯಕ್ಕೆ ಮಣಿದು, ಸ್ನೇಹಿತನಿಗೆ ಪ್ರಿಯ ವಾಗಿದ್ದ ಅವಲಕ್ಕಿ ಕಟ್ಟಿಕೊಂಡು ಮಾತನಾಡಿಸುವನೋ ಇಲ್ಲವೋ ಎಂಬ ಅನುಮಾನದಿಂದಲೇ ಹೋದ ಸುಧಾಮ ನನ್ನು ತುಂಬಿದ ಸಭೆಯಲ್ಲಿಯೇ ಅಪ್ಪಿಕೊಳ್ಳುವ ಕೃಷ್ಣ, ಸಂಭ್ರಮದಿಂದ ಅವಲಕ್ಕಿ ತಿನ್ನುತ್ತಾನೆ. ಅವರ ಸ್ನೇಹಕ್ಕೆ ಅಂತಸ್ತು ಅಡ್ಡಿ ಬರಲೇ ಇಲ್ಲ. ಸುಧಾಮನ ಕಣ್ಣಂಚಿನಲ್ಲಿ ನೀರಾಡುತ್ತದೆ.
***
ಪೈಥಿಯಸ್ ಎನ್ನುವ ಯುವಕ, ಕ್ರೂರಿರಾಜ ನೀಚತನದಿಂದ ಪ್ರಜೆಗಳ ಪೀಡಕನಾಗಿದ್ದಾನೆ ಎಂದು ಜರಿಯುತ್ತಾನೆ. ಆ ಮಾತು ರಾಜನ ಕಿವಿಗೆ ಬಿದ್ದು, ಪೈಥಿಯಸ್‌ಗೆ ಮರಣ ದಂಡನೆ ವಿಧಿಸುತ್ತಾನೆ. “ತಂಗಿಯ ಮದುವೆ ಮಾಡಿ, ತಾಯಿಯ ಜೀವನಕ್ಕೆ ಒಂದು ವ್ಯವಸ್ಥೆ ಮಾಡಿ ವಾಪಸ್ ಬಂದು ಬಿಡುತ್ತೇನೆ. ಆಗ ನನ್ನನ್ನು ಗಲ್ಲಿಗೇರಿಸಿ’ ಎಂದು ಪೈಥಿಯಸ್ ಕೇಳಿಕೊಂಡರೂ ರಾಜ ಒಪ್ಪುವುದಿಲ್ಲ. ಪೈಥಿಯಸ್‌ನ ಸ್ನೇಹಿತ ದಮನ್-ಅವನ ಕಾರ್ಯ ಮಾಡಲು ಬಿಡುವಂತೆಯೂ ಅವನು ವಾಪಸ್ ಬರುವವರೆಗೆ ಅವನ ಪರವಾಗಿ ತಾನು ಬಂಧಿಯಾಗಿರುತ್ತೇನೆಂದೂ ರಾಜನಿಗೆ ಹೇಳುತ್ತಾನೆ. ಗೊತ್ತು ಪಡಿಸಿದ ಸಮಯಕ್ಕೆ ಪೈಥಿಯಸ್ ಬರಬೇಕು. ಇಲ್ಲದಿದ್ದರೆ ಅವನ ಬದಲು ದಮನ್‌ನನ್ನು ಗಲ್ಲಿಗೇರಿಸುವುದು ಎಂಬ ಕರಾರಿನ ಮೇಲೆ ಪೈಥಿಯಸ್‌ನನ್ನು ಕಳಿಸಿಕೊಡುತ್ತಾನೆ ರಾಜ. ಗೊತ್ತು ಪಡಿಸಿದ ದಿನದ ಸಮಯಕ್ಕೆ ಕಾರಣಾಂತರಗಳಿಂದ ಪೈಥಿಯಸ್ ಬರಲಾಗುವುದಿಲ್ಲ. ರಾಜ, ದಮನ್‌ನನ್ನು ಛೇಡಿಸುತ್ತಾ, “ನಿನ್ನ ಸ್ನೇಹಿತ ನಿನ್ನನ್ನು ಸಿಕ್ಕಿಸಿ ತಾನು ಮೋಸಮಾಡಿ ಪಾರಾದ’ ಎಂದು ಗಲ್ಲಿಗೇರಿಸಲು ಆಜ್ಞೆ ನೀಡುವ ಹೊತ್ತಿಗೆ ಸರಿಯಾಗಿ ಪೈಥಿಯಸ್ ಬಂದುಬಿಡುತ್ತಾನೆ. “ನನ್ನ ಗೆಳೆಯ ಸಮಯಕ್ಕೆ ಸರಿಯಾಗಿ ಬಂದಿಲ್ಲವಾದ್ದರಿಂದ ನನ್ನನ್ನೇ ಗಲ್ಲಿಗೇರಿಸಿ’ ಎಂದು ದಮನ್, ಶಿಕ್ಷೆ ಆಗಿರುವುದು ನನಗೆ, ನನ್ನನ್ನೇ ಗಲ್ಲಿಗೇರಿಸಿ ಎಂದು ಪೈಥಿಯಸ್ ಪರಸ್ಪರ ವಾದ ಮಾಡುತ್ತಾರೆ. ಅವರ ಅಮರ ಸ್ನೇಹ ಕಂಡ ದೊರೆ ಇಬ್ಬರನ್ನೂ ಬಿಡುಗಡೆಗೊಳಿಸುತ್ತಾನೆ.
ಅಂದಹಾಗೆ ಜುಲೈ 30 ವಿಶ್ವ ಸ್ನೇಹಿತರ ದಿನ. ಜಗತ್ತಿನಾದ್ಯಂತ ಬಹಳಷ್ಟು ದೇಶಗಳಲ್ಲಿ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತಾರೆ. ಸ್ನೇಹಿತರ ದಿನದ ಹಿಂದೆಯೂ ಕೆಲವು ಕುತೂಹಲಕಾರಿ ಸಂಗತಿಗಳಿವೆ. ಒಂದನೇ ಮಹಾಯುದ್ಧದ ನಂತರ ಪರಸ್ಪರ ದ್ವೇಷ, ಅಸೂಯಗಳಿಂದ ಜಗತ್ತು ಜರ್ಜರಿತವಾಗಿತ್ತು. ಪರಸ್ಪರ ದೇಶಗಳ ನಡುವೆ ಶಾಂತಿ, ಸೌಹಾರ್ದತೆ ಹಾಗೂ ಸ್ನೇಹದ ವಾತಾವರಣ ನಿರ್ಮಿಸಲು ಮೊದಲ ಬಾರಿಗೆ ಅಮೆರಿಕವು ಸ್ನೇಹದ ದಿನದ ಪ್ರಸ್ತಾಪವನ್ನಿಟ್ಟು 1935ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸಿತ್ತು. ಇದಕ್ಕೂ ಮೊದಲೇ 1919ರಲ್ಲಿ ಜಾಯ್ಸ್ ಹಾಲ್ ಎಂಬಾತ ತನ್ನ ಹಾಲ್ ಮಾರ್ಕಿನ ಕಾರ್ಡು ಗಳನ್ನು ಸ್ನೇಹಿತರಿಗೆ ಹಂಚುತ್ತಾ ಸ್ನೇಹ ದಿನವನ್ನು ಆಚರಿಸಿದ್ದ. ಡಾ. ಅರ್ಟೆಮಿಯೋ ಬ್ರಾಚೋ ಎಂಬಾತ 1958 ಜುಲೈ 20ರಂದು ಜಾಗತಿಕ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂದು ಅಧಿಕೃತವಾಗಿ ಬೇಡಿಕೆ ಇಟ್ಟ. ವಿಶ್ವ ಫ್ರೆಂಡ್‌ಶಿಪ್ ಕ್ರುಸೇಡ್ ಕೂಡ ಜುಲೈ 30ನ್ನು ವಿಶ್ವ ದಿನವನ್ನಾಗಿ ಆಚರಿಸು ವಂತೆ ವಿಶ್ವಸಂಸ್ಥೆಗೆ ಪ್ರಸ್ತಾಪ ಇಡುತ್ತಲೇ ಬರುತ್ತಿತ್ತು. ಅಂತಿಮವಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಜುಲೈ 30ರಂದು “ಅಂತಾರಾಷ್ಟ್ರೀಯ ಸ್ನೇಹದಿನ’ ವೆಂದು ಗೊತ್ತುಪಡಿಸಲು ತನ್ನ ನಿರ್ಧಾರ ಪ್ರಕಟಿಸಿತು.
ಇಷ್ಟೆಲ್ಲಾ ಪರಂಪರೆ ಮತ್ತು ಮಹತ್ವ ಇರುವ ಸ್ನೇಹವನ್ನು, ಅದರಲ್ಲೂ ನಿಸ್ವಾರ್ಥ ಸ್ನೇಹವನ್ನು ಸಂಪಾದಿಸುವುದು ಹೇಗೆ? ಉಳಿಸಿಕೊಳ್ಳುವುದು ಹೇಗೆ? ಇವತ್ತಿನ ಕಾಲದಲ್ಲೂ ಸ್ನೇಹಕ್ಕಾಗಿ ಪ್ರಾಣ ಕೊಡುವ ಸ್ನೇಹಿತರು ನಿಜಕ್ಕೂ ನಮ್ಮ ನಡುವೆ ಇದ್ದಾರ? ಎಂಬ ಅನುಮಾನ ಯಾರಿಗೂ ಬೇಡ. ಕಾಲ, ಧರ್ಮ, ದೇಶಗಳ ಆಚೆ ಒಂದು ಪರಿಶುದ್ಧ ಸ್ನೇಹ ಎಲ್ಲಾ ಕಾಲಕ್ಕೂ ಇದ್ದೇ ಇರುತ್ತದೆ. ಸ್ನೇಹವನ್ನು ಅಳೆಯಲು ನಿರ್ದಿಷ್ಟ ಮಾನದಂಡವೇನೂ ಇಲ್ಲ. ನಮ್ಮ ಅಂತರಾಳ ಖಂಡಿತ ಗುರುತಿಸುತ್ತದೆ. ಅದಾಗಿಯೂ ಒಮ್ಮೊಮ್ಮೆ ಎಲ್ಲೋ ಎಡವಟ್ಟಾಗಿ ಸ್ನೇಹದ ತಪ್ಪು ಆಯ್ಕೆ ಮಾಡಿಕೊಂಡು ಬಿಟ್ಟಿರುತ್ತೇವೆ. ನಿಮಗೆ ಗೊತ್ತಿರಲಿ, ನಿಷ್ಕಲ್ಮಶ ಸ್ನೇಹ ಯಾವತ್ತೂ ಮುರಿದು ಬೀಳುವುದಿಲ್ಲ. ಸ್ವಾರ್ಥದಿಂದ ಕೂಡಿರುವುದಿಲ್ಲ.
ಹೀಗೂ ಉಂಟು!
“ಅಂತಾರಾಷ್ಟ್ರೀಯ ಸ್ನೇಹ ದಿನ’ ಜುಲೈ 30 ಎಂದು ಘೋಷಣೆಯಾಗಿದ್ದರೂ ಕೂಡ, ತಮ್ಮ ಸ್ಥಳೀಯ ಆಸ್ಥೆಗಳಿಗನುಗುಣವಾಗಿ ಭಿನ್ನಭಿನ್ನ ದಿನಾಂಕಗಳಲ್ಲಿ ವಿಶ್ವದ ರಾಷ್ಟ್ರಗಳು ಸ್ನೇಹ ದಿನವನ್ನು ಆಚರಿಸುತ್ತವೆ. ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ; ಸಿಂಗಾಪುರ್, ಸೌತ್ ಆಫ್ರಿಕಾದಲ್ಲಿ ಏಪ್ರಿಲ್ 16ರಂದು, ಉಕ್ರೇನ್‌ನಲ್ಲಿ ಜೂನ್ 9 ರಂದು, ಮೆಕ್ಸಿಕೋ, ಫಿನ್ ಲ್ಯಾಂಡ್, ವೆನಿಜುವೆಲಾ, ಎಸ್ಟೋನಿಯ ಮುಂತಾದ ರಾಷ್ಟ್ರಗಳಲ್ಲಿ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವ ಸಲುವಾಗಿ ಫೆಬ್ರವರಿ 14ನೇ ತಾರೀಕಿನಂದು ಸ್ನೇಹದ ದಿನವನ್ನಾಗಿ ಆಚರಿಸಲಾಗುತ್ತಿದೆ.
*ಸ್ವಾಮಿ ಪೊನ್ನಾಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.