ಹೈವೇ ಆಯ್ತು, ಇನ್ನು ಸರ್ವೀಸ್ ರಸ್ತೆ ಸಮಸ್ಯೆ ಶುರು
Team Udayavani, Aug 1, 2023, 3:34 PM IST
ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೆಂಗಳೂರು-ಮೈಸೂರು ನಡುವೆ ನಿರ್ಮಾಣ ಮಾಡಿರುವ ದಶಪಥ ರಸ್ತೆಯ ಪೈಕಿ 6 ಪಥಗಳ ಎಕ್ಸ್ಪ್ರಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಮೊದಲಾದ ಮಂದಗತಿಯ ವಾಹನಗಳಿಗೆ ನಿಷೇಧಿಸಿದ್ದು, ಈ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ತಿರುಗಾಡುವಂತೆ ಸೂಚಿಸಿದೆ. ಇದರೊಂದಿಗೆ ಇದುವರೆಗೆ ಎಕ್ಸ್‌ಪ್ರೆಸ್‌ವೇನ ಅವಾಂತರಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಮುಂದೆ ಸರ್ವೀಸ್ ರಸ್ತೆಗೂ ವಿಸ್ತರಿಸಲಿದೆ.
ಹೌದು.., 8 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ದಶಪಥ ರಸ್ತೆ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ವೇನ ಕಾಮಗಾರಿಯಲ್ಲಿ ನಡೆದಿರುವ ಅದ್ವಾನಗಳು ಒಂದೊಂದಾಗಿ ಬಯಲಾಗುತ್ತಿದೆ. ಇನ್ನು ಸರ್ವೀಸ್ ರಸ್ತೆಯನ್ನು ಬೇಕಾಬಿಟ್ಟಿ ನಿರ್ಮಿಸಿದ್ದು, ಈ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಹೇಗೆ ಸಂಚರಿಸುತ್ತವೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಸುತ್ತಾಡ ಬೇಕಾದ ಅನಿವಾರ್ಯತೆ: ಬೆಂಗಳೂರು- ಮೈಸೂರು ನಡುವೆ ಸರ್ವೀಸ್ ರಸ್ತೆ ಅಲ್ಲಲ್ಲಿ ಬಂದ್ ಆಗಿದ್ದು, ರೈಲ್ವೆ ಹಳಿಯ ಸಮೀಪ, ನದಿಯ ಸಮೀಪ ಸಂಪರ್ಕ ತುಂಡಾಗಿದೆ. ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸರ್ವೀಸ್ ರಸ್ತೆ ತುಂಡಾದ ಜಾಗದಿಂದ ಮತ್ತೆ ಮುಖ್ಯರಸ್ತೆಗೆ ಪ್ರವೇಶ ಪಡೆಯಲು ಎರಡರಿಂದ ಮೂರು ಕಿ.ಮೀ. ದೂರು ಸುತ್ತಿ ಬಳಸಿ ಹೋಗಬೇಕಾಗಿದೆ. ಹೆದ್ದಾರಿ ಪ್ರಾಧಿಕಾರ ಅಲ್ಲಲ್ಲಿ ಸರ್ವೀಸ್ ರಸ್ತೆ ನೀಡದೆ ಬೈಕ್, ಆಟೋ ನಿಷೇಧ ಮಾಡಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಲಿದೆ.
ಅವೈಜ್ಞಾನಿಕ ಸರ್ವಿಸ್ ರಸ್ತೆಗಳು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನ ಎರಡೂ ಬದಿಯಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ರಸ್ತೆಯ.ಲ್ಲಿ ಅಲ್ಲಲ್ಲಿ ಹಂಪ್ ಹಾಕಿದ್ದು, ವಾಹನಗಳು ಸುಗಮವಾಗಿ ಚಲಿಸುವುದು ಸಾಧ್ಯವಿಲ್ಲ. ಇನ್ನು ಸರ್ವೀಸ್ ರಸ್ತೆ ಬದಿಯಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ಹೆಜ್ಜಾಲಾ, ವಂಡರ್ ಲಾ ಗೇಟ್, ಸಂಘಬಸವನದೊಡ್ಡಿ, ಬೈರಾಪಟ್ಟಣ ಸೇರಿದಂತೆ ಹಲವು ಗ್ರಾಮಗಳ ಬಳಿ ಸರ್ವಿಸ್ ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದ್ದು, ಪ್ರಯಾ ಣಿಕರಿಗೆ ಸಮಸ್ಯೆಯಾಗಿದೆ. ಇನ್ನು ಅಲ್ಲಲ್ಲಿ ಸರ್ವೀಸ್ ರಸ್ತೆಯಲ್ಲಿ ಗುಂಡಿ ಬಿದಿದ್ದು, ನಿಷೇಧಿತ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಆರಂಭಿಸಿದರೆ ಸಾಕಷ್ಟು ಅನಾನುಕೂಲ ಎದುರಾಗಲಿದೆ.
ಅಡ್ಡಾದಿಡ್ಡಿ ಪಾರ್ಕಿಂಗ್: ಎಕ್ಸ್‌ಪ್ರೆಸ್ ವೇ ಎಂಟ್ರಿ ಮತ್ತು ಎಕ್ಸಿಟ್‌ಗಳು ಅವೈಜ್ಞಾನಿಕವಾಗಿದ್ದು, ಈ ಸ್ಥಳದಲ್ಲಿ ಸರ್ವೀಸ್‌ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು ಪರದಾಡುವಂತಾಗಿದೆ. ಎಂಟ್ರಿ- ಎಕ್ಸಿಟ್ ಬಳಿಯೇ ಕೆಲ ಸಣ್ಣಪುಟ್ಟ ಅಂಗಡಿ ತೆರೆದಿ ದ್ದು, ಈ ಅಂಗಡಿಗಳ ಬಳಿ ವಾಹನ ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಯಾಗಿದೆ. ಕೆಲ ಹೋಟೆಲ್ ಹಾಗೂ ಅಂಗಡಿಗಳ ಮುಂಭಾಗ ಸರ್ವೀಸ್‌ರಸ್ತೆಯಲ್ಲಿ ಅರ್ಧಭಾಗಕ್ಕೆ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಸರ್ವೀಸ್ ರಸ್ತೆಯ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದ್ದೇ ಆದಲ್ಲಿ ಹಲವು ಅವಾಂತರಗಳಿಗೆ ಕಾರಣವಾಗಲಿದೆ.
ಪಾದಚಾರಿಗಳು ಎಲ್ಲಿ ಹೋಗೋದು?: ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ, ಆಟೋ, ಟ್ರ್ಯಾಕ್ಟರ್‌ಗಳ ಸಂಚಾರ ಆರಂಭಗೊಂಡಿದ್ದೇ ಆದಲ್ಲಿ ಸರ್ವೀಸ್ ರಸ್ತೆಯೂ ವಾಹನ ಜಂಗುಳಿಯಿಂದ ತುಂಬಲಿದೆ. ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದೇ ಆದಲ್ಲಿ ಗ್ರಾಮಗಳ ಪರಿಮಿತಿಯಲ್ಲಿ ಪಾದಚಾರಿಗಳು ತಿರುಗಾಡಲು ಪುಟ್‌ಪಾತ್ ನಿರ್ಮಿಸಿಲ್ಲದ ಕಾರಣ ಪಾದಚಾರಿಗಳು ಎಲ್ಲಿ ಹೋಗುವುದು ಎಂಬ ಪ್ರಶ್ನೆ ಎದುರಾಗಿದೆ. ಕಚೇರಿಯಲ್ಲಿ ಕುಳಿತು ನಮ್ಮದು ಎಕ್ಸ್‌ಪ್ರೆಸ್ ವೇ ಸ್ಟಾಂಡರ್ಡ್ ಎಂದು ನಿಯಮ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ನಿಯಮಗಳ ಜಾರಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸದೆ ಬೇಕಾಬಿಟ್ಟಿ ಕಾನೂನು ಮಾಡುತ್ತಿರುವುದು ಹಲವು ಸಮಸ್ಯೆಗೆ ಎಡೆಮಾಡಿ ಕೊಟ್ಟಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸುವರೇ ಕಾಯ್ದು ನೋಡಬೇಕಿದೆ.
ಸ್ಥಳೀಯ ವ್ಯಾಪಾರಸ್ಥರಲ್ಲಿ ಚಿಗುರಿದ ಕನಸು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಬಂದ್ ಆಗಿರುವ ಹಿನ್ನೆಲೆ ಬೈಕ್ ಸವಾರರು ಹಳೇ ರಸ್ತೆಯಲ್ಲೇ ಸಂಚರಿಸಬೇಕಿದ್ದು, ಬೈಪಾಸ್ ರಸ್ತೆ ನಿರ್ಮಾಣದಿಂದ ವ್ಯಾಪಾರ ಕಳೆದುಕೊಂಡಿದ್ದ ಸ್ಥಳೀಯ ವ್ಯಾಪಾರಿಗಳಲ್ಲಿ ಮತ್ತೆ ನಮ್ಮ ವ್ಯಾಪಾರ ಚರುಕುಗೊಳ್ಳಲಿದೆ ಎಂಬ ನಿರೀಕ್ಷೆ ಗರಿಗೆದರಿದೆ. ಬೈಕ್ ಸವಾರರು ಹಳೇ ರಸ್ತೆಯಲ್ಲಿ ಸಂಚರಿಸುವುದರಿಂದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಭಾಗದ ಸ್ಥಳೀಯ ಸಣ್ಣಪುಟ್ಟ ಅಂಗಡಿಗಳು, ಹೋಟೆಲ್‌ಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು ವ್ಯಾಪಾರ ವಾಗಲಿದೆ ಎಂದು ಸಂತಸಗೊಂಡಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ಸೋಲಾರ್ ಲೈಟ್ಸ್ ಅಳವಡಿಸುವುದು ಸೇರಿದಂತೆ ಕೆಲ ಸುಧಾರಣೆಗಳನ್ನು ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಸರ್ವೀಸ್ ರಸ್ತೆಯಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ● ಕಾರ್ತಿಕ್ ರೆಡ್ಡಿ, ರಾಮನಗರ, ಎಸ್‌ಪಿ
ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್ ನಿಷೇಧಿಸಿ ಅದ್ವಾನದಿಂದ ಕೂಡಿರುವ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಎನ್ನುತ್ತಿರುವುದು ನಿಜಕ್ಕೂ ವಿಷಾದನೀಯ. ಎಕ್ಸ್‌ಪ್ರೆಸ್ ವೇ ಶ್ರೀಮಂತರಿಗೆ ಮಾತ್ರ ಎಂಬಂತೆ ಎನ್ ಎಚ್‌ಎಐ ವರ್ತಿಸುತ್ತಿದೆ. ಅಪಘಾತ ಹೆಚ್ಚಳಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣವೇ ಹೊರತು, ಬೈಕ್ ಸಂಚಾರವಲ್ಲ. ನಿಜಕ್ಕೂ ಇದು ಬಡವರ ವಿರೋಧಿ ನೀತಿ. ● ಕಿರಣ್‌ಕುಮಾರ್, ಮತ್ತೀಕೆರೆ
–ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.