![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 6, 2023, 5:50 AM IST
ಅಧ್ಯಾತ್ಮ ಎಂದರೆ ಗುಡಿ, ಚರ್ಚು, ಮಸೀದಿಗಳಿಗೆ ಹೋಗುವುದು. ಮೈಮೇಲೆ ಯಾವುದಾದರೂ ಚಿಹ್ನೆಯನ್ನು ಧರಿಸುವುದು. ಬೆಂಕಿಯ ಮೇಲೋ, ನೀರಿನ ಮೇಲೋ ಓಡಾಡುವುದು. ಇಲ್ಲವೆಂದರೆ ಪವಾಡಗಳನ್ನು ಮಾಡುವುದು ಎಂದು ನಮ್ಮಲ್ಲಿ ಅನೇಕರಿಗೆ ಭಾವನೆಯಿದೆ. ಆದರೆ ಅಧ್ಯಾತ್ಮ ಎಂದರೆ ನಿಜವಾಗಲೂ ತನ್ನ ನಿಜ ಸ್ವರೂಪವನ್ನು ಅನುಭವಕ್ಕೆ ತಂದುಕೊಳ್ಳುವುದು ಅಥವಾ ಭಗವಂತನನ್ನು ಕಾಣುವುದು. ಈ ಮಹಾ ಸತ್ಯವನ್ನು ಅರಿಯುವುದೇ, ತಿಳಿಯುವುದೇ, ಅನುಭವಕ್ಕೆ ತಂದುಕೊಳ್ಳುವುದೇ ಅಧ್ಯಾತ್ಮ. ನಮ್ಮ ನಿಜ ಸ್ವರೂಪ ಸತ್-ಚಿತ್-ಆನಂದ. “ಸತ್’ ಎಂದರೆ ಸದಾ ಇರುವುದು ಹಾಗೂ ಅದು ಎಲ್ಲದರ ಮೂಲ ಅಸ್ಥಿತ್ವ, ತಳಹದಿ. “ಚಿತ್’ ಎಂದರೆ ಅರಿವು, ಜ್ಞಾನ. “ಆನಂದ’ ಎಂದರೆ ಸುಖವಲ್ಲ, ಶಾಂತಿ ಅಥವಾತನ್ನನ್ನು ತಾನು ಅರಿಯುವುದರಿಂದ ಉಂಟಾಗುವ ಆನಂದ.
ನಮ್ಮ ನಿಜ ಸ್ವರೂಪ ಆನಂದವಾಗಿರುವಲ್ಲಿ, ನಾವು ಅನೇಕ ಬಾರಿ ಏಕೆ ದುಃಖೀತರಾಗುತ್ತೇವೆ. ಕಾರಣ ಅಜ್ಞಾನ ಎನ್ನುತ್ತದೆ ಅದ್ವೈತ ವೇದಾಂತ. ನಾವು ಇಡೀ ಬ್ರಹ್ಮಾಂಡವನ್ನು ಅರಿತಿರಬಹುದು. ಆದರೆ ನಮಗೆ ನಮ್ಮ ಸ್ವರೂಪದ ಕುರಿತು ಅಜ್ಞಾನ ಅಥವಾ ತಪ್ಪು ತಿಳುವಳಿಕೆ ಇರುವುದರಿಂದ ನಾವು ದುಃಖವನ್ನು ಅನುಭವಿಸುತ್ತೇವೆ. ಇಲ್ಲಿ ಕಷ್ಟ ಮತ್ತು ದುಃಖಗಳ ನಡುವೆ ಇರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದಿರಬೇಕು.
ಪಾಶ್ಚಾತ್ಯ ದೇಶದಲ್ಲಿ ಸ್ವಾಮಿ ವಿವೇಕಾನಂದರನ್ನು ಒಬ್ಬರು ಹೀಗೆ ಪ್ರಶ್ನಿಸಿದರು, ಮಹಾಶಯರೇ ನೀವು ಗಂಭೀರವಾಗಿ ಇರುವುದಿಲ್ಲವಲ್ಲ, ಏಕೆ? ಸ್ವಾಮೀಜಿ ನಾನು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಮಾತ್ರ ಹಾಗೆ ಇರುತ್ತೇನೆ. ನಾವು ಧಾರ್ಮಿಕರು ಎನ್ನುವುದಕ್ಕೆ ಮೊದಲ ಕುರುಹು ಏನೆಂದರೆ ಉಲ್ಲಾಸಭರಿತರಾಗಿರುವುದು. ಪೆಚ್ಚುಮೋರೆ ಹಾಕಿಕೊಂಡಿದ್ದರೆ, ಅದು ಹೊಟ್ಟೆನೋವಿನಿಂದ ಇರುಬಹುದೇ ಹೊರತು, ಎಂದಿಗೂ ಅದು ಆಧ್ಯಾತ್ಮಿಕತೆಯ ಗುರುತಲ್ಲ.
ಇನ್ನು ಭಗವಂತನನ್ನು ಕಾಣಲಿಲ್ಲ ಎಂಬ ವ್ಯಾಕುಲತೆಯನ್ನು ಹಲವಾರು ಸಂತರಲ್ಲಿ ನಾವು ಕಾಣುತ್ತೇವೆ. ಆದರೆ ಅಲ್ಲಿ ಸಪ್ಪೆಮೋರೆ ಕಾಣುವುದಿಲ್ಲ. ನಮ್ಮಲ್ಲಿ ಆಂತರಿಕವಾಗಿ ಯಾವುದೋ ಸಂಕಟ, ಖನ್ನತೆ, ಚಿಂತೆ, ಕೊರತೆ ಇರುವುದರಿಂದ ಆ ರೀತಿಯಾಗಿ ನಾವು ವರ್ತಿಸುತ್ತೇವೆ. ಭಗವಾನ್ ಶ್ರೀರಾಮಕೃಷ್ಣರು ತಮ್ಮ ಜೀವನವನ್ನೇ ಒಂದು ಅಧ್ಯಾತ್ಮ ಪ್ರಯೋಗಾಲಯವನ್ನಾಗಿ ಮಾಡಿಕೊಂಡಿದ್ದರು. ಶ್ರೀಶಾರದೇ ದೇವಿಯವರು ಹೇಳುವಂತೆ ಶ್ರೀರಾಮಕೃಷ್ಣರು ಎಂದೂ ಸಪ್ಪೆಮೋರೆಯನ್ನು ಹಾಕಿಕೊಂಡಿರಲಿಲ್ಲ. ಅಲ್ಲದೆ, ತಾನು ಅವರ ಜತೆ ಇದ್ದಾಗ ನನ್ನ ಹೃದಯದಲ್ಲಿ ಒಂದು ಆನಂದದ ಕಲಶವಿದ್ದಂತೆ ಅನುಭವ ಆಗುತ್ತಿತ್ತು.
ಪತಂಜಲಿ ಮಹರ್ಷಿಗಳು ಹೇಳುವಂತೆ,
ಸತ್ವಶುದ್ಧಿ ಸೌಮನಸ್ಯ ಐಕಾಗ್ರ್ಯ ಇಂದ್ರಿಯಜಯ
ಆತ್ಮದರ್ಶನಯೋಗ್ಯತ್ವಾನಿ ಚ | (2.41)
ಆತ್ಮದರ್ಶನವಾಗಬೇಕಾದರೆ ಪರಿಶುದ್ಧತೆ, ಉಲ್ಲಾಸ, ಏಕಾಗ್ರತೆ, ಮತ್ತು ಇಂದ್ರಿಯಜಯ ಇರಬೇಕು ಎಂದು. ಸೌಮನಸ್ಯ ಎಂದರೆ ಉಲ್ಲಾಸ, ಆನಂದ, ಇತ್ಯಾದಿ. ನಾವು ಅಮೃತ ಪುತ್ರರು ಎಂದು ಮತ್ತೆ ಮತ್ತೆ ಉಪನಿಷತ್ತುಗಳು ಸಾರಿವೆ. ನಾವು ಅಮೃತ ಸ್ವರೂಪರಾಗಿದ್ದಾಗ, ನಮ್ಮ ನಿಜಸ್ವರೂಪವೇ ಆನಂದದ ಸ್ವರೂಪವಾಗಿರುವಾಗ, ದುಃಖ, ಚಿಂತೆ, ಕೊರಗು ಏತಕ್ಕೆ! ನಮ್ಮ ನೈಜ ಸ್ವರೂಪವನ್ನು ಅರಿಯೋಣ, ಹೆಚ್ಚು ಹೆಚ್ಚು ಅದನ್ನು ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲಿ, ಕೆಲಸಗಳಲ್ಲಿ ವ್ಯಕ್ತ ಗೊಳಿಸೋಣ. ಆನಂದದಿಂದ ಇರೋಣ. ಅದೇ ಅಧ್ಯಾತ್ಮ.
– ಸ್ವಾಮಿ ಶಾಂತಿವ್ರತಾನಂದಜೀ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.