Dakshina Kannada: ಅಪರಾಧ ಸುದ್ದಿಗಳು- 11/08/2023
Team Udayavani, Aug 12, 2023, 12:38 AM IST
ಸುಳ್ಯ: ಅಸೌಖ್ಯದಿಂದ ಯುವಕ ಸಾವು
ಸುಳ್ಯ: ಸುಳ್ಯ ಕುರುಂಜಿಗುಡ್ಡೆ ಕೃಷ್ಣಪ್ಪ ಪೂಜಾರಿ ಅವರ ಪುತ್ರ, ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಸಂತ ಕುರುಂಜಿಗುಡ್ಡೆ (39) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಮೃತರು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಎರಡು ದಿನದ ಹಿಂದೆ ಅಸ್ವಸ್ಥಗೊಂಡಿದ್ದ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತರಾಗಿದ್ದಾರೆ. ಕ್ರಿಕೆಟ್ ಪಟುವಾಗಿದ್ದ ವಸಂತ ಅವರು ತಾಲೂಕಿನ ಪ್ರತಿಷ್ಠಿತ ತಂಡಗಳಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ತಲೆಮರೆಸಿಕೊಂಡಿದ್ದಾತ ಸೆರೆ
ಮಂಗಳೂರು: ಕಳೆದ 30 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಮಂಗ ಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕುಳಾಯಿ ನಿವಾಸಿಯಾಗಿದ್ದು ಪ್ರಸ್ತುತ ನಂದಿಕೂರು ಗ್ರಾಮದ ಪಲಿಮಾರಿನಲ್ಲಿ ವಾಸವಾಗಿದ್ದ ಮುಸ್ತಫಾ ಆಲಿಯಾಸ್ ಮೊಹಮ್ಮದ್ ಮುಸ್ತಫಾ(63) ಬಂಧಿತ ಆರೋಪಿ.
1993ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ. ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐಯವರಾದ ಸುದೀಪ್ ಎಂ.ವಿ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.
ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಸಾವು
ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಮಾರು 80 ವರ್ಷದ ಅಪರಿಚಿತ ವ್ಯಕ್ತಿ ಆ. 8ರಂದು ಮೃತಪಟ್ಟಿದ್ದಾರೆ. ಸುಮಾರು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು ಎದೆಯ ಎಡಬದಿಯಲ್ಲಿ ಕಪ್ಪು ಮಚ್ಚೆ ಇದೆ. ವಾರಸುದಾರರು ಇದ್ದರೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಯುವತಿ ನಾಪತ್ತೆ: ದೂರು
ಪುತ್ತೂರು: ಇರ್ದೆ ಗ್ರಾಮದಲ್ಲಿ ಮನೆಯಲ್ಲಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರ್ದೆ ಗ್ರಾಮದ ನಿವಾಸಿ ಲಿಖೀತಾ (23) ನಾಪತ್ತೆಯಾದಕೆ. ಯುವತಿಯ ತಾಯಿ ಸುಶೀಲಾ ಅವರು ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಮರಳಿದ ಸಂದರ್ಭದಲ್ಲಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ.
ಕೆಎಸ್‌ಆರ್‌ಟಿಸಿ ಬಸ್ಸು-ಬೈಕ್ ಢಿಕ್ಕಿ: ಸವಾರನಿಗೆ ಗಾಯ
ಬಂಟ್ವಾಳ: ಬಿ.ಸಿ. ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಆ. 10ರಂದು ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಫ್ರಾನ್ಸಿಸ್ ಪೌಲ್ ಲೋಬೊ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಘಟನೆಯ ವೇಳೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದರು ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಚಾಲಕ ವಿನೋದ್ ಗಣೇಶ್ ನಾಯ್ಕ ನೀಡಿದ ದೂರಿನಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.