World Left Handers Day: ‘ಎಡ’ವಟ್ಟಿನವರು! ಲೆಫ್ಟ್ಈಸ್ ರೈಟ್!
Team Udayavani, Aug 13, 2023, 11:05 AM IST
ಆಗಸ್ಟ್ 13 “ವಿಶ್ವ ಎಡಚರ ದಿನ’ವಂತೆ. ಎಲ್ಲ ಎಡಗೈಯವರಿಗೂ ಶುಭಾಶಯಗಳನ್ನು ತಿಳಿಸುತ್ತಾ ಒಂದು ಕಿವಿ ಮಾತು: ನೀವು ಎಡಚರ ಹೆತ್ತವರೋ, ಹತ್ತಿರದವರೋ ಆಗಿದ್ದರೆ ನೆನಪಿಡಿ. ಎಡಗೈ ಪ್ರಧಾನದ ಮಗುವಿನದ್ದು ದುರ್ವರ್ತನೆ ಎನ್ನುವ ಮೂಢಭಾವದಿಂದ ಆಚೆ ಬನ್ನಿ. ಬಲಗೈ ಬಳಕೆಯ ಕುರಿತು ಮಕ್ಕಳ ಮೇಲೆ ಒತ್ತಡ ಹಾಕಲು ಹೋಗಬೇಡಿ
ತೀರ ಇತ್ತೀಚೆಗೆ ಆಫೀಸಿನ ಹತ್ತಿರದ ಸೀರೆ ಮೇಳವೊಂದಕ್ಕೆ ಹೋಗಿದ್ದೆ. ಅಲ್ಲಿದ್ದ ಹತ್ತಾರು ಮಳಿಗೆಗಳ ನಡುವೆ ಖಾಲಿ ಹೊಡೆಯುತ್ತಿದ್ದ ಮಳಿಗೆಯೊಂದರಲ್ಲಿದ್ದ ಚಂದದ ಸೀರೆಯೊಂದು ಮಡದಿಗೆ ಇಷ್ಟವಾಗಿತ್ತು. ದರದ ಚೌಕಾಸಿ ಬಗೆಹರಿಸಿ ಸೀರೆ ಖರೀದಿಗೆಂದು ಯುಪಿಐ ವಿಚಾರಿಸಲಾಗಿ, ಆತನ ಬಳಿ ಯುಪಿಐನ ವ್ಯವಸ್ಥೆ ಇರಲಿಲ್ಲ. ಅದೃಷ್ಟಕ್ಕೆ ಜೇಬಿನಲ್ಲಿ ಕಾಸಿತ್ತು. ಪರ್ಸಿನಿಂದ ಕಾಸೆತ್ತಿ, ಲೆಕ್ಕ ಮಾಡಿ ಅವನ ಎದುರು ಹಿಡಿದೆ ಅಷ್ಟೇ..!!
ಆತ ಸರ್ಪ ಕಂಡವರಂತೆ ಬೆಚ್ಚಿದ. ಕಾರಣವೇನು ಗೊತ್ತಾ? ನಾನು ಹಣವನ್ನು ಎಡಗೈಯಲ್ಲಿ ಕೊಟ್ಟಿದ್ದೆ. ಸಹಜವಾಗಿ ಎಡಚನಾದ ನಾನು ಎಡಗೈ ಮುಂದೆ ಮಾಡಿದ್ದೇನಾದರೂ, ಆತನಿಗೆ ಅದು ಮಹಾಪರಾಧವಾಗಿ ಕಂಡಿತ್ತು. ಅದು ಶೌಚದ ಕೈಯೆಂದು, ಎಡಗೈ ಬಳಕೆ ಹೇಗೆ ತಪ್ಪೆಂದು ಐದತ್ತು ನಿಮಿಷಗಳ ಆತನ ಬೋಧನೆ ಕೇಳಿ ಕೋಪ ಬಂದಿತ್ತಾದರೂ, ಅನಗತ್ಯ ವಾದದ ಹುಮ್ಮಸ್ಸಿನಲ್ಲಿ ನಾನಿರಲಿಲ್ಲ. ಹಾಗಾಗಿ ನಕ್ಕು, ಬಲಗೈಯಲ್ಲಿ ಕಾಸು ಕೊಟ್ಟು ಸೀರೆಯೆತ್ತಿಕೊಂಡು ಬಂದದೆ.
ವಿಚಿತ್ರ ನಂಬಿಕೆಗಳು
ಪ್ರತಿ ಎಡಚನೂ ಒಂದಲ್ಲ ಒಂದು ಹಂತಕ್ಕೆ ಬದುಕಿನಲ್ಲಿ ಅನುಭವಿಸಬೇಕಾದ ಮುಜುಗರದ ಸನ್ನಿವೇಶಕ್ಕೆ ಚಿಕ್ಕ ಉದಾಹರಣೆಯಿದು. ದೇವಸ್ಥಾನದಲ್ಲಿ, ಮದುವೆ ಮುಂಜಿಯಂಥ ಕಾರ್ಯಕ್ರಮಗಳಲ್ಲಿ ಊಟ ಬಡಿಸುವಾಗ, ಹಣ ಹಸ್ತಾಂತರದ ವಿಷಯಗಳಲ್ಲಿ ವಾಮಹಸ್ತಿಗಳಿಗೆ ಗೋಳು ಇದ್ದಿದ್ದೇ. ತೀರ ಇತ್ತೀಚಿನ ದಿನಗಳಲ್ಲಿ ಕೊಂಚ ಕಡಿಮೆಯಾಗಿರುವುದು ಹೌದಾದರೂ, ಪೂರ್ತಿಯಾಗಿ ಲುಪ್ತವಂತೂ ಆಗಿಲ್ಲವೆನ್ನುವುದು ದುರದೃಷ್ಟಕರ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇ. 10ರಷ್ಟಿರುವ ಎಡಚರ ಬಗ್ಗೆ ಬಹುಸಂಖ್ಯಾತ ಬಲಹಸ್ತಿಗಳ ಕುತೂಹಲವಂತೂ ಇದ್ದಿದ್ದೇ. ಕೆಲವರದ್ದು ಅಚ್ಚರಿಯಾದರೆ, ಕೆಲವರದ್ದು ಅಸಹ್ಯ. ಕೆಲವರ ಪ್ರಕಾರ ಎಡಗೈ ಬಳಸುವವರು ಪರಮ ಬುದ್ದಿವಂತರು! ಇನ್ನು ಕೆಲವರಿಗೆ ಎಡಚರೆಂದರೆ ಅಪಶಕುನ ಮುಂಡೇವು. ಒಟ್ಟಾರೆಯಾಗಿ ವಾಮಹಸ್ತಿಯರನ್ನು ತೀರ ಸಹಜವಾಗಿ ನೋಡುವವರ ಸಂಖ್ಯೆಯೇ ವಿರಳವೆನ್ನಬಹುದು.
ಪೂರ್ವಾಗ್ರಹಗಳ ಮೇಲುಗೈ
ಇತಿಹಾಸವನ್ನು ಗಮನಿಸುವುದಾದರೆ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಅನೇಕ ಸಂಸ್ಕೃತಿಗಳಲ್ಲಿ ಎಡಗೈ ಬಳಸುವವರ ಕುರಿತು ಪೂರ್ವಾಗ್ರಹಗಳಿದ್ದವು. ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಎಡಚರೆಂದರೆ ಅಶುಭದ ಸಂಕೇತ ಎಂದೇ ಗುರುತಿಸಲಾಗುತ್ತಿತ್ತು. ಪ್ರಸಿದ್ಧ ಲೇಖಕ ಸ್ಟೀಫನ್ ಕಿಂಗ್, ಹಾರರ್ ಸಾಹಿತ್ಯ ಮತ್ತು ಸಿನಿ ಜಗತ್ತಿನ ಕುರಿತು ಬರೆದ “ಡ್ಯಾನ್ಸ್ ಮಕಾಬ್ರ’ ಎಂಬ ಕೃತಿಯಲ್ಲಿ- “ನನ್ನಮ್ಮ ಎಡಗೈ ಬಳಸುತ್ತಾಳೆ ಎನ್ನುವುದೇ ಆ ಕಾಲಕ್ಕೆ ಅವರ ಮನೆಯಲ್ಲಿ ಚಿಂತೆಯ ವಿಷಯವಾಗಿತ್ತಂತೆ. ಹೊತ್ತಲ್ಲದ ಹೊತ್ತಲ್ಲಿ ಆಕೆಯನ್ನು ಕಂಡಾಗ ನೆರೆಹೊರೆಯವರ ಅವ್ಯಕ್ತ ಅಸಹನೆ ಗೋಚರವಾಗುತ್ತಿತ್ತಂತೆ. ಎಡಗೈ ಬಳಸುವವರು ಅಪಶಕುನದ ಜನ ಎಂದು ತನ್ನ ಸಹಪಾಠಿಗಳೇ ನಂಬುತ್ತಾರೆ ಎಂದಾಗ ಆಕೆಗೆ ನಿಜಕ್ಕೂ ಕಷ್ಟವಾಗಿತ್ತಂತೆ. ಬರೆಯುತ್ತ ಕೂತಿದ್ದರೆ, ಹಿಂದಿನಿಂದ ಕೋಲು ಹಿಡಿದು ಬಂದ ಶಿಕ್ಷಕ ಬೆರಳುಗಳ ಮೇಲೆ ರಪ್ಪನೆ ಬಾರಿಸುತ್ತಿದ್ದ. ನಾನು ತಕ್ಷಣವೇ ಪೆನ್ನನ್ನು ಎಡಗೈಯಿಂದ ಬಲಗೈಗೆ ದಾಟಿಸುತ್ತಿದ್ದೆ. ಆದರೆ ಅದು ಕ್ಷಣಿಕವಷ್ಟೇ. ಶಿಕ್ಷಕ ಮುಂದೆ ಹೋಗುತ್ತಿದ್ದಂತೆಯೇ ಪುನಃ ಪೆನ್ನು ಎಡಗೈಗೆ ಬಂದಿರುತ್ತಿತ್ತು ಎನ್ನುತ್ತಿದ್ದಳು ಅಮ್ಮ’ ಎಂದು ಬರೆಯುತ್ತಾನೆ.
ಜಗತ್ತಿನ ಇತಿಹಾಸವನ್ನು ಕೆದಕುವುದಾದರೆ ಅನೇಕ ಸಂಸ್ಕೃತಿಗಳಲ್ಲಿಯೂ ಎಡ ಭಾಗವನ್ನ, ಎಡಚರನ್ನ ಋಣಾತ್ಮಕವಾಗಿಯೇ ಕಂಡಿರುವ ಉಲ್ಲೇಖಗಳಿವೆ. ಲ್ಯಾಟಿನ್ ಭಾಷೆಯ ಪದ “ಸಿನಿಸ್ತ್ರ’ (Sinistra) ಎಂದರೆ “ಎಡ’ ಎಂದರ್ಥ. ಆದರೆ ಶಾಸ್ತ್ರೀಯ ಲ್ಯಾಟಿನ್ ಜಗತ್ತು “ಸಿನಿಸ್ತ್ರ’ (Sinistra) ಎನ್ನುವ ಪದಕ್ಕೆ “ದುರದೃಷ್ಟ’ ಅಥವಾ “ದುಷ್ಟ’ ಎನ್ನುವುದನ್ನು ಸಮನಾರ್ಥಕವಾಗಿ ಬಳಸಿಕೊಂಡಿದೆ.
ವಿಜ್ಞಾನದ ಭಿನ್ನ ನೋಟ
ಆದರೆ ಇತಿಹಾಸ ಮತ್ತು ಸಂಸ್ಕೃತಿಗಳಿಂದ ಕೊಂಚ ಭಿನ್ನವಾಗಿ ಮಾತನಾಡುವುದು ವಿಜ್ಞಾನ. ಎಡಚರು ಸಾಮಾನ್ಯರಿಗಿಂತ ಬುದ್ದಿವಂತರು ಎನ್ನುವ ಸಾರ್ವತ್ರಿಕ ನಂಬಿಕೆಯನ್ನು ಅಲ್ಲಗಳೆಯುತ್ತದೆ ವಿಜ್ಞಾನ. “ಬುದ್ದಿವಂತಿಕೆಯ ವಿಷಯಕ್ಕೆ ಕೈಗಳ ಬಳಕೆಯ ವ್ಯತ್ಯಾಸವಿಲ್ಲ’ ಎನ್ನುವುದು ಹತ್ತಾರು ಸಂಶೋಧನೆಗಳ ಪ್ರಕಾರ ವಿಜ್ಞಾನಕ್ಕೆ ಅರ್ಥವಾದ ಸತ್ಯ. ಆಲೋಚನಾ ಧಾಟಿ, ಮೆದುಳಿನ ಕಾರ್ಯ ನಿರ್ವಹಣೆಯ ಅತಿಸಣ್ಣ ಬದಲಾವಣೆಯ ಹೊರತಾಗಿ ಇನ್ಯಾವ ವ್ಯತ್ಯಾಸವನ್ನೂ ವಿಜ್ಞಾನ ಗುರುತಿಸಿಲ್ಲ. ಆಲೋಚನಾ ಧಾಟಿ ಭಿನ್ನವೆನ್ನುವ ಕಾರಣಕ್ಕೆ ಸೃಜನಶೀಲ ಕ್ಷೇತ್ರಗಳಲ್ಲಿ, ಕ್ರೀಡಾ ಕ್ಷೇತ್ರಗಳಲ್ಲಿ ಎಡಚರು ಕೊಂಚ ಹೆಚ್ಚಿನ ಯಶಸ್ಸು ಸಾಧಿಸುತ್ತಿದ್ದಾರೆ ಎಂಬುದನ್ನು ವಿಜ್ಞಾನ ಪುಷ್ಠೀಕರಿಸುತ್ತದೆ. ಕೆಲವು ಆರೋಗ್ಯದ ಸಮಸ್ಯೆಗಳು ಸಹ ಎಡಗೈ ಬಳಕೆದಾರರಲ್ಲಿ ಹೆಚ್ಚು ಎನ್ನುವುದೂ ಸಹ ವಿಜ್ಞಾನದ ಅಂಬೋಣ.
ಎರಡು ಕೈಗಳಿಂದಲೇ ಚಪ್ಪಾಳೆ…
ಆಗಸ್ಟ್ 13 “ವಿಶ್ವ ಎಡಚರ ದಿನ’ವಂತೆ. ಎಲ್ಲ ಎಡಗೈಯವರಿಗೂ ಶುಭಾಶಯಗಳನ್ನು ತಿಳಿಸುತ್ತಾ ಕೊನೆಯಲ್ಲೊಂದು ಮಾತು: ನೀವು ಎಡಚರ ಹೆತ್ತವರೋ, ಹತ್ತಿರದವರೋ ಆಗಿದ್ದರೆ ನೆನಪಿಡಿ. ಎಡಗೈ ಪ್ರಧಾನದ ಮಗುವಿನದ್ದು ದುರ್ವರ್ತನೆ ಎನ್ನುವ ಮೂಢಭಾವದಿಂದ ಆಚೆ ಬನ್ನಿ. ಒತಾ ಯಪೂರ್ವಕ ಬಲಗೈ ಬಳಕೆಯ ಹೇರಿಕೆ ಪ್ರಯತ್ನ ಬೇಡ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಡಗೈಯವರನ್ನು, “ಲೊಡ್ಡೆ, ರೊಡ್ಯಾ ‘ ಎನ್ನುವ ಹಂಗಿಸುವಿಕೆಯಿಂದ ದೂರವಿರಿ. ಹಾಗೆ ಮಾತನಾಡುವುದು ಸಹ ಒಂದು ರೀತಿಯಲ್ಲಿ ಮಾನಸಿಕ ದೌರ್ಜನ್ಯವೇ. ಕೈಗಳಲ್ಲಿ ಶುದ್ಧ, ಅಶುದ್ಧ ಎನ್ನುವ ವಾದಗಳು ಅರ್ಥಹೀನ. ಎರಡು ಕೈಗಳಿಂದಲೇ ಚಪ್ಪಾಳೆ ಎನ್ನುವುದರ ಧನಾತ್ಮಕ ಅರಿವು ನಿಮ್ಮದಾಗಿದ್ದರೆ ನಿಮ್ಮ ಅಲೋಚನಾ ಧಾಟಿ ಚಂದ
ಉಳಿವಿಗಾಗಿ ಹೋರಾಟ…
ದೈನಂದಿನ ಜೀವನ ಪದ್ದತಿಯಲ್ಲಿ ಎಡಚರ ಬದುಕು ಕೊಂಚ ಇಂಟರೆಸ್ಟಿಂಗ್ ಎನ್ನಬಹುದು. ಬಹುತೇಕ ದಿನಬಳಕೆ ವಸ್ತು ಮತ್ತು ವ್ಯವಸ್ಥೆಗಳು ಬಹುತೇಕ ಬಲಗೈ ಪ್ರಧಾನವಾಗಿಯೇ ರೂಪಿಸಲ್ಪಟ್ಟಿರುವುದರಿಂದ, ಎಲ್ಲದರಲ್ಲೂ ಎಡಚರದ್ದು ವಿಲಕ್ಷಣವೇ. ಕತ್ತರಿಯಿಂದ ಹಿಡಿದು, ಅಳತೆಗೆ ಬಳಸುವ ಅಳತೆ ಪಟ್ಟಿ, ಕಂಪ್ಯೂಟರ್‌ನ ಮೌಸ್ ಪ್ಯಾಡ್, ಕ್ಯಾಮರಾ, ಹಲವಾರು ಯಂತ್ರಗಳ ನಿರ್ವಹಣಾ ಪದ್ದತಿ, ಕೊನೆಗೆ ಯುದ್ಧಕಾಲಕ್ಕೆ ಬಳಕೆಯಾಗುವ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಸಹ ಬಲಗೈ ಪ್ರಧಾನವೇ ಆಗಿರುವುದರಿಂದ “ಉಳಿವಿಗಾಗಿ ಹೋರಾಟ’ ಎನ್ನುವ ಡಾರ್ವಿನ್ನನ ವಾದ ಎಡಗೈ ಬಳಕೆದಾರರಿಗೆ ರಕ್ತಗತವಾಗಿಯೇ ಅರ್ಥವಾಗಿದೆ ಎಂದರೆ ತಪ್ಪಾದೀತಾ? ಗೊತ್ತಿಲ್ಲ.
ಗುರುರಾಜ ಕೊಡ್ಕಣಿ, ಯಲ್ಲಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.