ವಿದೇಶ ಸಂಪರ್ಕಕ್ಕೆ “ಮಂಗಳೂರು ವಿಮಾನ’ ಕಷ್ಟ!
ಸೀಮಿತ ಏರ್‌ಲೈನ್ಸ್‌ನಿಂದ ಪ್ರಯಾಣಿಕರಿಗೆ ನಷ್ಟ
Team Udayavani, Aug 14, 2023, 9:57 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಬೆಂಗಳೂರಿನ ಕೆಂಪೇಗೌಡ ನಿಲ್ದಾಣವನ್ನು ಬಿಟ್ಟರೆ ರಾಜ್ಯದ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಮಂಗಳೂರಿನಲ್ಲಿ ಎಂಬುದೇನೋ ನಿಜ. ಆದರೆ ಇಲ್ಲಿಂದ ಎಲ್ಲ ವಿದೇಶಗಳಿಗೂ ವಿಮಾನಯಾನ ಮಾತ್ರ ದೂರದ ಮಾತು!
ಮಂಗಳೂರಿನಿಂದ ಅಬುಧಾಬಿ, ಬಹ್ರೈನ್, ದಮಾಮ್, ದೋಹಾ, ದುಬೈ, ಕುವೈಟ್ ಹಾಗೂ ಮಸ್ಕತ್‌ಗೆ ನೇರ ವಿಮಾನ ಇದೆಯಾದರೂ ಪ್ರತೀ ದಿನ ಲಭ್ಯವಿಲ್ಲ. ಜತೆಗೆ ಜೆದ್ದಾ, ಶಾರ್ಜಾ ಸಹಿತ ಅನಿವಾಸಿ ಭಾರತೀಯರು ನೆಲೆಸಿರುವ ಹಲವು ದೇಶಗಳಿಗೆ ನೇರ ವಿಮಾನವಿಲ್ಲ. ಇನ್ನು ಸಿಂಗಾಪುರ, ಮಾಲ್ಡೀವ್ಸ್ ಸಹಿತ ಹಲವು ಪ್ರವಾಸಿ ನೆಲೆಯ ದೇಶಗಳಿಗೆ ನೇರ ಸಂಪರ್ಕವಂತೂ ಸಾಧ್ಯವೇ ಇಲ್ಲ.
ಗಲ್ಫ್ ರಾಷ್ಟ್ರಗಳಲ್ಲಿ ಬಹು ಸಂಖ್ಯೆಯಲ್ಲಿ ಕರಾವಳಿ ಯವರು ಇರುವ ಕಾರಣದಿಂದ ಅಲ್ಲಿಗೆ ವಿಮಾನ ಸದ್ಯ ಇದೆ. ಆದರೆ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಸಮಯಕ್ಕೆ ಹೊಂದುವ ರೀತಿಯಲ್ಲಿಲ್ಲ. ದೋಹಾ, ಅಬುಧಾಬಿ, ಕುವೈಟ್‌ಗೆ ಹೆಚ್ಚುವರಿ ವಿಮಾನ ಯಾನ ಬೇಕಿದ್ದರೂ ಇನ್ನೂ ಸಿಕ್ಕಿಲ್ಲ. ಜತೆಗೆ ಬೆಂಗಳೂರು ಸಹಿತ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ವಿದೇಶೀ ಏರ್‌ಲೈನ್ಸ್‌ಗಳ ಸೇವೆ ಇದೆ; ಮಂಗಳೂರಿಗೆ ಆ ಭಾಗ್ಯವೂ ಇಲ್ಲ.
ಕುವೈಟ್‌ಗೆ ಮಂಗಳೂರಿನಿಂದ ವಾರ ದಲ್ಲಿ ಒಂದೇ ವಿಮಾನವಿದೆ. ಅದು ಕೂಡ ರವಿವಾರ. ಕುವೈಟ್‌ನಲ್ಲಿ ಶುಕ್ರವಾರ, ಶನಿವಾರ ರಜೆ ಇರುವುದರಿಂದ ಅನಿವಾಸಿ ಭಾರತೀಯರಿಗೆ ಈ ವೇಳಾಪಟ್ಟಿ ಸಮಸ್ಯೆ. ಕುವೈಟ್ ನಿಂದ ಮುಂಬಯಿ ಮೂಲಕ ಬರಲು ಅವಕಾಶ ಇದ್ದರೂ ಸುಮಾರು 7 ತಾಸು ಕಾಯಬೇಕಾಗುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾದರೂ ಪ್ರಯಾಣಿಕರಿಗೆ ಬೇಕಾದಷ್ಟು ವಿಮಾನ ಸೇವೆ ಮಂಗಳೂರಿನಲ್ಲಿ ಇಲ್ಲ ಎನ್ನುತ್ತಾರೆ ಅನಿವಾಸಿ ಭಾರತೀಯರೊಬ್ಬರು.
ಯಾಕೆ ಅಗತ್ಯ?
ಶೈಕ್ಷಣಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ದೇಶಗಳಿಂದ ವಿದ್ಯಾಭ್ಯಾಸದ ನಿಮಿತ್ತ ಬರುವವರಿದ್ದಾರೆ. ಜತೆಗೆ ಇಲ್ಲಿಂದ ವಿದ್ಯಾಭ್ಯಾಸಕ್ಕಾಗಿ ತೆರಳುವವರಿದ್ದಾರೆ. ಉದ್ಯೋಗ, ಪ್ರವಾಸಕ್ಕಾಗಿ ಬೇರೆ ದೇಶಗಳಿಗೆ ಭೇಟಿ ನೀಡುವವರು ಅಥವಾ ಇಲ್ಲಿಗೆ ಆಗಮಿಸುವವರಿದ್ದಾರೆ. ಆದರೆ ನೇರ ವಿಮಾನ ಇಲ್ಲದೆ ದುಬಾರಿ ಹಣ ಪಾವತಿಸಿ, ಹೆಚ್ಚು ಸಮಯ ವ್ಯಯಿಸಿ “ಕನೆಕ್ಟಿಂಗ್’ ವಿಮಾನ ಅವಲಂಬಿಸುವುದು ಅನಿವಾರ್ಯ. ಏರ್‌ಲೈನ್ಸ್‌ನವರು ಹೇಳುವ ಪ್ರಕಾರ, ಬೇಕಾದಷ್ಟು ವಿಮಾನಗಳು ಸದ್ಯ ಇಲ್ಲ. ಎರಡು ದೇಶಗಳ ಮಧ್ಯೆ ಆದ ಒಪ್ಪಂದಗಳ ಪ್ರಕಾರ ಅನುಮತಿ ಸಿಗಲು ಕೊಂಚ ಕಷ್ಟವಿದೆ. ಈ ವಿಚಾರದಲ್ಲಿ ಪ್ರಯಾಣಿಕರ ಬೇಡಿಕೆಯೂ ಪರಿಗಣಿಸಲ್ಪಡುತ್ತದೆ.
ದೇಶೀಯ ಸಂಚಾರಕ್ಕೆ ಹೊಸ ಏರ್‌ಲೈನ್ಸ್ ಅಲಭ್ಯ!
ಹೊಸದಿಲ್ಲಿ, ಬೆಂಗಳೂರು, ಮುಂಬಯಿ, ಚೆನ್ನೈ, ಹೈದರಾಬಾದ್, ಪುಣೆಗೆ ಸದ್ಯ ಇಂಡಿಗೋ ವಿಮಾನಗಳು ಮಾತ್ರ ಬಹು ಸಂಖ್ಯೆಯಲ್ಲಿ ಹಾರಾಟ ನಡೆಸುತ್ತಿವೆ. ಏರ್‌ಇಂಡಿಯಾದಿಂದ ಮುಂಬಯಿಗೆ ಮಾತ್ರ ಸಂಚಾರವಿದೆ. ಉಳಿದೆಡೆಗೆ ಸದ್ಯಕ್ಕೆ ಮಂಗಳೂರಿನಿಂದ ದೇಶೀಯ ನೇರ ವಿಮಾನಯಾನವೂ ಇಲ್ಲ. ಅಂದಹಾಗೆ ಮಂಗಳೂರು ಏರ್‌ಪೋರ್ಟ್‌ಗೆ ಹೊಸ ಏರ್ ಲೈನ್ಸ್ ಸಿಗಲಿದೆ ಎಂಬ ಬಗ್ಗೆ ಈ ಹಿಂದಿನಿಂದಲೂ ಚರ್ಚೆ ನಡೆದಿತ್ತು. ಗೋ ಏರ್, ಅಕಾಶ, ವಿಸ್ತಾರ, ಏರ್ ಏಷ್ಯಾ ಹೀಗೆ ವಿವಿಧ ಏರ್‌ಲೈನ್ಸ್ ಸಂಸ್ಥೆಗಳು ಮಂಗಳೂರಿನಿಂದ ಸಂಚಾರ ಆರಂಭಿಸುವ ಬಗ್ಗೆ ಮಾತುಕತೆ ನಡೆದಿತ್ತಾದರೂ ಯಾವುದೂ ಅಂತಿಮ ಹಂತಕ್ಕೆ ಬಂದಿಲ್ಲ.
ಕರಾವಳಿಯ ಬೇಡಿಕೆಯನ್ನು ಪರಿಗಣಿಸಿ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಸೇವೆ ಆರಂಭಿಸಬೇಕು. ಅದೇ ರೀತಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೊಲಂಬೋ, ಮಲೇಷ್ಯಾ, ಸಿಂಗಾಪುರ, ಮಾಲ್ಡೀವ್ಸ್‌ಗಳಿಗೆ ವಾರದಲ್ಲಿ ಕನಿಷ್ಠ ಒಂದು ದಿನವಾದರೂ ನೇರ ವಿಮಾನ ಸೇವೆ ಲಭಿಸಿದರೆ ಉತ್ತಮ. ಈ ನಿಟ್ಟಿನಲ್ಲಿ ಏರ್‌ಲೈನ್ಸ್‌ನವರಿಗೆ ಮನವಿ ಮಾಡಲಾಗುವುದು. ಗಣೇಶ್ ಕಾಮತ್, ಅಧ್ಯಕ್ಷರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ-ಮಂಗಳೂರು
ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರ ನಿರ್ವಹಣೆ
(2023 ಜನವರಿ-ಜುಲೈ)
ದೇಶೀಯ ಪ್ರಯಾಣಿಕರು: 1,07,455
ಅಂತಾರಾಷ್ಟ್ರೀಯ ಪ್ರಯಾಣಿಕರು: 55,212
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.