Independence Day: ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ
Team Udayavani, Aug 14, 2023, 10:24 AM IST
ಬೆಂಗಳೂರು: ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಗೆಯೇ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ನೀಡಲು ಖಾಕಿ ಪಡೆ ಸಜ್ಜಾಗಿದೆ.
ಆ.15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮೈದಾನ ಸಿದ್ದಗೊಂಡಿದ್ದು, ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡ್ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಅಲಂಕಾರಿಕ ಬ್ರಾಸ್ ಪರಿಕರ ಅಳವಡಿಸಲಾಗಿದೆ. ಹಾಗೆಯೇ ಪಥ ಸಂಚಲನ ನಡೆಸುವ ತಂಡಗಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳು ಕೊನೆ ಕ್ಷಣದ ತಾಲೀಮಿನಲ್ಲಿ ನಿರತವಾಗಿವೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆ.15ರ ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನಕ್ಕೆ ಆಗಮಿಸಲಿದ್ದು, ಬಳಿಕ ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳ ಪರಿಚಯ ಮಾಡಿಕೊಳ್ಳಲಿದ್ದಾರೆ. ತದ ನಂತರ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವವದ ಸಂದೇಶ ನೀಡಲಿದ್ದಾರೆ ಎಂದು ವಿವರಿಸಿದರು.
ಇನ್ನು ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿ ವಿವಿಧ ಇಲಾಖೆಯ 38 ತುಕಡಿಗಳಲ್ಲಿ 1,350 ಮಂದಿ ಪಥ ಸಂಚಲನ ನಡೆಸಿಕೊಡಲಿದ್ದಾರೆ. ಸಾರ್ವಜನಿಕರಿಗೆ 3,000 ಆಸನ, ಅತಿ ಗಣ್ಯ ಮತ್ತು ಗಣ್ಯರಿಗೆ 2,000 ಆಸನ, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ 750 ಆಸನ, ಇತರೆ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗೆ 2,000 ಆಸನ ಸೇರಿ 8 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ವಿವಿಧ ಶಾಲೆಗಳ 1,450 ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗಾವಿಯ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 50 ವಿದ್ಯಾರ್ಥಿಗಳು “ರೋಪ್ ಸ್ಕಿಪಿಂಗ್’ ಕಾರ್ಯಕ್ರಮ ನಡೆಸಿಕೊಡಲಿರುವುದು ಈ ಬಾರಿಯ ವಿಶೇಷತೆ. ಜೆ.ಪಿ. ನಗರದ ಪಬ್ಲಿಕ್ ಶಾಲೆಯ 750 ಮಕ್ಕಳು ವೀರ ನಮನ’ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.
ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಂದ ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ’ವನ್ನು ಮಾಡಲಿದ್ದಾರೆ. ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಮತ್ತು ಆರ್ಮಿ ಪಬ್ಲಿಕ್ ಸ್ಕೂಲ್ ಗಳಿಂದ ಮೊದಲ ಬಾರಿ ಪಥ ಸಂಚಲನ ನಡಯಲಿದೆ. ಎಂ.ಇ.ಜಿ. ತಂಡದಿಂದ ಕಲಾರಿಪಯಟ್ಟು, ಎ.ಎಸ್‌ಸಿ ತಂಡದಿಂದ ಟೆಂಟ್ ಪೆಗ್ಗಿಂಗ್ ಮತ್ತು ಎ.ಎಸ್.ಸಿ ತಂಡದಿಂದ ಬೈಕ್ ಸಾಹಸ ಪ್ರದರ್ಶನ ನೀಡಲಿದ್ದಾರೆ. ಪಥ ಸಂಚಲನದಲ್ಲಿ ಗೋವಾ ಪೊಲೀಸ್ ತಂಡವೂ ಭಾಗವಹಿಸಲಿದೆ’ ಎಂದು ಹೇಳಿದರು.
ಹರ್ ಘರ್ ತಿರಂಗ ಅಭಿಯಾನ:
ಬೆಂಗಳೂರು: ನಗರದಲ್ಲಿ ಆ.13 ರಿಂದ ಮೂರು ದಿನ ಹರ್ ಘರ್ ತಿರಂಗ ಅಭಿಯಾನದಡಿ ರಾಷ್ಟ್ರ ಧ್ವಜ ಹಾರಾಟಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಮನೆ, ಕಟ್ಟಡ, ಕಚೇರಿಗಳ ಮೇಲೆ ಧ್ವಜ ಹಾರಾಟ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ ಘರ್ ತಿರಂಗ ಅಭಿಯಾನದಡಿ ಸರ್ಕಾರ ಬಿಬಿಎಂಪಿಗೆ 5 ಲಕ್ಷ ಧ್ವಜ ನೀಡಿದೆ. ಆ ಧ್ವಜಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವುದಕ್ಕೆ ಎಂಟು ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
15 ದಿನದಿಂದ ಮೈದಾನಕ್ಕೆ ಪೊಲೀಸ್ ಕಣ್ಣುಗಾವಲು:
ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಮಾಣಿಕ್ ಷಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಚಾರ ನಿರ್ವಹಣೆ ಹಾಗೂ ಆಚರಣೆಗೆ ಆಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ಸೂಕ್ತ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಬಂದೋಬಸ್ತಿಗಾಗಿ 9 ಡಿಸಿಪಿ, 15 ಎಸಿಪಿ, 43 ಪಿಐ, 110 ಪಿಎಸ್‌ಐ, 72 ಎಎಸ್‌ಐ, 554 ಹೆಚ್‌ಸಿ, 157 ಸಾದಾ ಉಡುಪಿನ ಅಧಿಕಾರಿಗಳು 56 ಜನ ಕ್ಯಾಮೆರಾ ಸಿಬ್ಬಂದಿ ನಿಯೋಜಿಸಲಾಗಿದೆ. 10 ಕೆ.ಎಸ್.ಆರ್.ಪಿ ತುಕಡಿ, 2 ಅಗ್ನಿ ಶಾಮಕ ವಾಹನ, 2 ಆ್ಯಂಬುಲೆನ್ಸ್, 4 ಖಾಲಿ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ ಸ್ಪಾಟ್, 1 ಆರ್‌ಐವಿ ನಿಯೋಜಿಲಾಗಿದ್ದು ಒಂದು ಗರುಡ ಫೋರ್ಸ್ ಕಾಯ್ದಿ ರಿಸಲಾಗಿದೆ. ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆ ಗಾಗಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ, ಮೂರು ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ಎಂಡಿ, 40 ಎಚ್‌ಎಚ್‌ಎಂಡಿ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಂಚಾರ ನಿರ್ವಹಣೆಗೆ 3 ಡಿಸಿಪಿ, 6 ಎಸಿಪಿ, 22 ಪಿಐ, 31 ಪಿಎಸ್‌ಐ, 124 ಎಎಸ್‌ಐ, 507 ಎಚ್‌ಸಿ ಸೇರಿ ಒಟ್ಟಾರೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಿರ್ವಹಣೆಗೆ 1,786 ಅಧಿಕಾರಿಗಳು ಮತ್ತು ಸಿಬ್ಬಂದಿ ಆಯೋಜಿಸಲಾಗಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಆಚರಣೆ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗರೂಕತಾ ಕ್ರಮವಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸ್ ಕಣ್ಗಾವಲು ಇಡಲಾಗಿದೆ. ನಗರದ ಎಲ್ಲಾ ಹೋಟೆಲ್, ಲಾಡ್ಜ್, ತಂಗುದಾಣ, ಇನ್ನಿತರ ಸ್ಥಳಗಳಲ್ಲಿ ಅನುಮಾನಾಸ್ಪದ ವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
ಪರ್ಯಾಯ ಸಂಚಾರ ವ್ಯವಸ್ಥೆ :
ಇನ್ ಫೆಂಟ್ರಿ ರಸ್ತೆಯಿಂದ ಮಪಾಲ್ ಸೆಂಟರ್ ಕಡೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್ ಮೂಲಕ ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆ ಮಪಾಲ್ ಸೆಂಟರ್ ಕಡೆಗೆ ಸಾಗುವುದು.
ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆ ವಾಹನಗಳು, ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆ ಮೂಲಕ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಸಾಗುವುದು.
ಸಾರ್ವಜನಿಕರಿಗೆ ಭದ್ರತಾ ಮಾರ್ಗಸೂಚಿ:
ಸಮಾರಂಭಕ್ಕೆ ಆಗಮಿಸುವವವರು ಬೆಳಗ್ಗೆ 8.30ರೊಳಗೆ ತಮ್ಮ ಆಸನಗಳಲ್ಲಿ ಆಸೀನರಾಗಬೇಕು
ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ 4ಕ್ಕೆ ಆಗಮಿಸಬೇಕು
ಅನುಮಾನಸ್ಪದ ವಸ್ತುಗಳು ಮತ್ತು ವ್ಯಕ್ತಿಗಳು ಕಂಡು ಬಂದರೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು
ಸಿಗರೇಟ್, ಬೆಂಕಿಪಟ್ಟಣ, ಹರಿತ ವಸ್ತುಗಳು, ಕರಪತ್ರ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ತಿಂಡಿ ತಿನಿಸು, ಕ್ಯಾಮರಾ, ಮದ್ಯದ ಬಾಟಲ್, ನೀರಿನ ಬಾಟಲ್, ಕ್ಯಾನ್, ನ್ಪೋಟಕಗಳು ಮತ್ತು ಶಸ್ತ್ರಾಸ್ತ್ರ ತರುವುದನ್ನು ನಿಷೇಧಿಸಲಾಗಿದೆ.
ಅನಗತ್ಯ ಲಗೇಜ್ ತರುವಂತಿಲ್ಲ.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿಯನ್ನು ಹೊಂದಿರಬೇಕು.
ಮೊಬೈಲ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ತರುವಂತಿಲ್ಲ.
ಬಿಎಂಟಿಸಿ ಹಾಗೂ ಮೆಟ್ರೋ ಸೇವೆ ಬಳಸಬೇಕು
ಸಹಾಯಕ್ಕೆ 112ಗೆ ಕರೆ ಮಾಡಿ ಅಥವಾ ಸ್ಥಳದಲ್ಲಿನ ಪೊಲೀಸರನ್ನು ಸಂಪರ್ಕಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.