Desi Swara: ರಂಗಿನ ಅನುಭೂತಿಯ ಭಾವ-ಬಣ್ಣಗಳನ್ನೂ ಅನುಭವಿಸಬಹುದು…!
ಬಣ್ಣಗಳಿಗೆ ವಾಸನೆ ಮತ್ತು ರುಚಿಯನ್ನು ಕೂಡ ಮನಸ್ಸು ಹೊಸೆಯಬಲ್ಲದು!
Team Udayavani, Aug 14, 2023, 11:39 AM IST
ಬಣ್ಣಗಳಲ್ಲಿನ ಪ್ರತಿಯೊಂದು ಬಣ್ಣಗಳು ನಮ್ಮಲ್ಲಿ ಒಂದೊಂದು ಭಾವನೆಯನ್ನು ಮೂಡಿಸುತ್ತವೆ. ಅವುಗಳು ನಮ್ಮಲ್ಲಿ ಮೂಡಿಸುವ ಭಾವನೆಯ ಮೇಲೆ ಅವುಗಳೆಡೆಗೆ ನಮ್ಮ ಪ್ರತಿಕ್ರಿಯೆ ಇರುತ್ತದೆ. ನಾವು ನಮ್ಮ ಸುತ್ತಮುತ್ತಲಿನ ಆಗು – ಹೋಗುಗಳನ್ನು ಹೇಗೆ ಅನುಭವಿಸುತ್ತೇವೆಯೋ ಅದೇ ರೀತಿ ಬಣ್ಣಗಳನ್ನು ಅನುಭವಿಸುತ್ತೇವೆ. ಈ ಬಣ್ಣಗಳ ಉಪಸ್ಥಿತಿ ಕೇವಲ ಭೌತಿಕ ಎಂದು ತಿಳಿದಿದ್ದರೂ ನಮ್ಮ ಮನಸ್ಸು, ಮೆದುಳು ಅದನ್ನು ನೋಡುತ್ತದೆ, ಜೀವಿಸುತ್ತದೆ ಹಾಗೂ ಅದಕ್ಕೆ ಸ್ಪಂದಿಸುತ್ತದೆ. ಬಣ್ಣಗಳು ಹೇಗೆ ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀಳಬಹುದು ಎಂದು ಕೆಲವು ದೇಶಗಳು ಪ್ರಯೋಗಗಳನ್ನು ಮಾಡಿ ನೋಡಿದೆ. ನಿಜವಾಗಿಯೂ ಬಣ್ಣಗಳ ಅನುಭೂತಿಯನ್ನು ಮನುಷ್ಯ ಪಡೆಯುತ್ತಾನೆಯೇ? ಅದು ಮನುಷ್ಯನ ಭಾವೆನಯನ್ನು ಬದಲಾಯಿಸಬಲ್ಲದೇ ? ಎನ್ನುವುದರ ಬಗ್ಗೆ ಈ ವಾರ…
ಪಂಚೇಂದ್ರಿಯಗಳ ಮೂಲಕ ನಾವು ಜಗತ್ತನ್ನು ಅನುಭವಿಸುತ್ತೇವೆ. ಆದರೆ ಕೆಲವು ಅನುಭೂತಿಗಳನ್ನು ನಾವು ಹಲವು ಇಂದ್ರಿಯಗಳ ಮೂಲಕ ಅನುಭವಿಸಬಲ್ಲೇ ವು. ಉದಾಹರಣೆಗೆ ಗಾಳಿಯಲ್ಲಿನ ತಂಪು, ವಾಸನೆ, ಉಷ್ಣಾಂಶ ಇವನ್ನೆಲ್ಲ ನಾವು ಮೂಗಿನ ಮೂಲಕ ಅನುಭವಿಸುತ್ತೇವೆ. ಮತ್ತೊಂದು ಇಂದ್ರಿಯವಾದ ಚರ್ಮವೂ ಇದೇ ಗಾಳಿಯ ಸೋಕನ್ನು ಅನುಭವಿಸಬಲ್ಲದು. ಗಾಳಿಯ ಬಿರುಸು, ನವಿರು, ಹಿತ ಎಲ್ಲವನ್ನೂ ಮೆದುಳಿಗೆ ತಲುಪಿಸಬಲ್ಲದು. ಆಶ್ಚರ್ಯವೆಂದರೆ ಈ ಗಾಳಿಯನ್ನು ಕಣ್ಣು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಿಲ್ಲದಿರುವುದು. ಬಣ್ಣಗಳದ್ದು ಕೂಡ ಇದೇ ರೀತಿಯ ಅಚ್ಚರಿಯ ವಿಚಾರ. ಅವುಗಳ ಭೌತಿಕ ಉಪಸ್ಥಿತಿ ಇಲ್ಲ ಎಂದಾಗಲೂ ಕಣ್ಣುಗಳು ಅವುಗಳನ್ನು ನೋಡಬಲ್ಲವು. ಮನಸ್ಸು ಮತ್ತು ಮಿದುಳು ಸ್ಪಂದಿಸಬಲ್ಲವು. ಅಷ್ಟೇ ಏಕೆ ಬಣ್ಣಗಳಿಗೆ ವಾಸನೆ ಮತ್ತು ರುಚಿಯನ್ನು ಕೂಡ ಮನಸ್ಸು ಹೊಸೆಯಬಲ್ಲದು!
ಕೆಲವು ಬಣ್ಣಗಳು ಮನಸ್ಸಿಗೆ ಸಂತೋಷ ಮತ್ತು ಆಹ್ಲಾದಗಳನ್ನು ಮೂಡಿಸಿದರೆ. ಇನ್ನು ಕೆಲವು ಬಣ್ಣಗಳು ವಾಕರಿಕೆ ತರಿಸುತ್ತವೆ. ಅಂದರೆ ಬಣ್ಣಗಳನ್ನು ನಾವು ಅನುಭವಿಸುತ್ತೇವೆ. ಕಣ್ಣಿನ ಮೂಲಕ ಮಿದುಳಿನಲ್ಲಿ ಇವು ಸ್ಪಂದನೆಗಳನ್ನು ಉಂಟುಮಾಡುತ್ತವೆ. ಇದರ ಅಧ್ಯಯನಕ್ಕಾಗಿ ಇಂಗ್ಲೆಂಡಿನಲ್ಲಿ ಬೆಳಕಿನ ಲ್ಯಾಬೊರೇಟರಿ ಅಥವಾ ಪ್ರಯೋಗಾಲಯವನ್ನು ನಿರ್ಮಿಸಿ ಅಧ್ಯಯನಗಳನ್ನು ಮಾಡಲಾಗಿದೆ. ಈ ಪ್ರಯೋಗದಲ್ಲಿ ಬೆಳಕಿನ ಇನ್ನಿತರ ಬಣ್ಣಗಳನ್ನು ಸೋಸಿ, ಒಂದೊಂದೇ ತರಂಗಾಂತರದ ಬಣ್ಣದ ಬೆಳಕನ್ನು ಮಾತ್ರ ಪ್ರಯೋಗಾಲಯದ ಕೋಣೆಯೊಳಗೆ ಹಾಯಿಸಲಾಯಿತು. ಕೆಂಪು ಬಣ್ಣ ಜನರ ಹೃದಯ ಬಡಿತ ಮತ್ತು ರಕ್ತದ ಒತ್ತಡಗಳನ್ನು ಹೆಚ್ಚಿಸಿತು. ನೀಲಿ ಬಣ್ಣ ಅವನ್ನು ಕಡಿಮೆ ಮಾಡಿತು. ವ್ಯತ್ಯಾಸ ಸಣ್ಣದಿದ್ದರೂ ಫಲಿತಾಂಶ ನಿಖರವಾಗಿತ್ತು.
ಕೆಲವು ಬಣ್ಣಗಳು ಜನರನ್ನು ಶಾಂತಗೊಳಿಸಬಲ್ಲವು. ಬದುಕನ್ನು ಸ್ವೀಕರಿಸಲು ಪ್ರೇರೇಪಿಸಬಹುದು. ಈ ಕಾರಣ ಅತೀ ಹೆಚ್ಚು ಖಿನ್ನತೆ ಮತ್ತು ಆತ್ಮಹತ್ಯೆಗಳಾಗಿರುವ ಜಪಾನಿನ ಟೋಕಿಯೋ ನಗರದ ಯಾಮನೋಟೆ ರೈಲು ನಿಲ್ದಾಣದಲ್ಲಿ ನೀಲಿ ದೀಪಗಳನ್ನು ಹಾಕಲಾಗಿದೆ. ಅಕಸ್ಮಾತ್ ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳಲು ಬರುವವರ ಆತಂಕಗಳು ಅಲ್ಪ ಕಡಿಮೆಯಾದರೂ ಅವರು ಸಾವಿನಿಂದ ವಿಮುಖರಾಗಬಹುದೇ? ಎಂಬ ಆಶಯ ಅವರದು.
ಅವರಿಗೆ ದೊರೆತ ಫಲಿತಾಂಶ ಧನಾತ್ಮಕವಾಗಿತ್ತು. ಆತ್ಮಹತ್ಯೆಗಳ ಪ್ರಕರಣ ಶೇ. 74 ರಷ್ಟು ಕಡಿಮೆಯಾಯಿತು. ಈ ಕಾರಣ ಇಂಗ್ಲೆಂಡಿನ ಗ್ಯಾಟ್ವಿಕ್ ರೈಲು ನಿಲ್ದಾಣದಲ್ಲಿಯೂ ಇದೇ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೆ ಈ ಅಧ್ಯಯನವಿನ್ನೂ ದೊಡ್ಡ ಮಟ್ಟದಲ್ಲಿ ನಡೆದಿಲ್ಲ. ಹಾಗಾಗಿ ಆರಂಭಿಕ ಹಂತದ ಬದಲಾವಣೆಗಳನ್ನು ಕೆಲವೆಡೆ ಅಳವಡಿಸಿ, ಜನರ ಮನಸ್ಸನ್ನು ಶಾಂತಗೊಳಿಸಿ, ಪ್ರಾಣ ಕಳೆದುಕೊಳ್ಳುವ ಆತುರವನ್ನು ಶಮನ ಮಾಡಲು ಬಣ್ಣದ ಪ್ರಯೋಗ ಮುಂದುವರೆಯಲಿದೆ. ಆದರೆ ಬಣ್ಣಗಳ ಬಗೆಗಿನ ಅಧ್ಯಯನ ಅಷ್ಟು ಸುಲಭದ ಕೆಲಸವಲ್ಲ.
ಬಣ್ಣದ ಬಗೆಗಿನ ಪ್ರಯೋಗಗಳು ಕಷ್ಟವಾಗಲು ಕಾರಣವೆಂದರೆ ವಯಸ್ಸು, ಲಿಂಗ, ಧರ್ಮ, ನಂಬಿಕೆ, ಸಂಪ್ರದಾಯ ಮತ್ತು ಕಲಿಕೆಗಳ ನಡುವಿನ ಸಂಬಂಧಗಳನ್ನು ಹೊರತುಪಡಿಸಿ ಅಧ್ಯಯನಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಹಾಗೆ ಮಾಡಲು ಸಾಧ್ಯವಾದಾಗ ಮಾತ್ರವೇ ನಮಗೆ ಬಣ್ಣಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಸಾಧ್ಯವಿದೆ.
ಬಣ್ಣದ ಬದುಕಿದು ಜಗಮಗ…
ಬಿಸಿಲು, ಸೂರ್ಯ, ಬೆಂಕಿಗೆ ಸಂಬಂಧಿಸಿದ ಕೆಲವು ಬಣ್ಣಗಳನ್ನು ಬೆಚ್ಚಗಿನ ಬಣ್ಣಗಳೆಂದು ಮತ್ತು ಹಿಮ, ಮಂಜು, ಬಿಳಿ, ಮಳೆ, ಆಗಸ, ನೀರಿನ ಕೆಲವು ಬಣ್ಣಗಳನ್ನು ತಂಪಾದ ಬಣ್ಣಗಳೆಂದು ನಾವು ಕರೆಯುತ್ತೇವೆ. ಇಲ್ಲಿ ನಮ್ಮ ಕಲಿಕೆಗೂ ಮತ್ತು ಬಣ್ಣಗಳ ವರ್ಣನೆಗೂ ಸಂಬಂಧವಿರುವುದನ್ನು ನೋಡಬಹುದು. ಇದೇ ಕಾರಣಕ್ಕೆ ಚಳಿಯ ದೇಶದ ಜನರು ಬಿಸಿಲ ಬಣ್ಣಗಳನ್ನು ಮತ್ತು ಬಿಸಿಲ ದೇಶದ ಕೆಲವರು ತಂಪಿನ ಬಣ್ಣಗಳನ್ನು ಇಷ್ಟಪಡಬಹುದು. ಇನ್ನು ಕೆಲವರಿಗೆ ಗಾಢ ಪ್ರೀತಿಯನ್ನು ಬಿಂಬಿಸುವ ಕಡುಕೆಂಪಿನ ಧಿರಿಸಿನ ಜನರು ಹೆಚ್ಚು ಕಾಮೋದ್ರೇಕಗಳನ್ನು ಮೂಡಿಸಬಹುದು. ಮನಃಶಾಸ್ತ್ರಜ್ಞ ಆಂಡ್ರೂ ಜೆ. ಎಲಿಯಟ್ ಈ ಬಗ್ಗೆ ಪ್ರಯೋಗ ಮಾಡಿದ. ಕೆಂಪು ಬಣ್ಣದ ಧಿರಿಸಿನ ಹೆಂಗಸರು ಮತ್ತು ಗಂಡಸರು ಪರಸ್ಪರರಿಗೆ ಆಕರ್ಷಣೀಯವಾಗಿ ಕಾಣುವುದನ್ನು ದಾಖಲಿಸಿದ್ದಾನೆ.
ಮಾತ್ರೆಗಳ ಬಣ್ಣಗಳು ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಕಾರಣ ಈಗಾಗಲೇ ದೃಢವಾಗಿರುವ ವಿಚಾರ. ಇನ್ನು ಬ್ರ್ಯಾಂಡ್ ಹೆಸರುಗಳು ಕೂಡ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಬಣ್ಣ ಮತ್ತು ಆಕೃತಿಗಳ ಮೂಲಕ ಎನ್ನುವುದನ್ನು ನಾವು ದಿನನಿತ್ಯ ನೋಡುತ್ತೇವೆ. ಮನುಷ್ಯರು ಶಾಪಿಂಗ್ ಮಾಡುವಾಗ ಈ ಬಣ್ಣಗಳ ಪರಿಣಾಮಕ್ಕೆ ಅರಿವೇ ಇಲ್ಲದಂತೆ ಒಳಗಾಗಿರುತ್ತಾರೆ. ಬಣ್ಣಗಳ ಮೇಲೆ ಬೀಳುವ ಬೆಳಕು ಕೂಡ ಅತೀ ಮುಖ್ಯ. ಜಗಮಗಿಸುವ ಬಣ್ಣ , ಬೆಳಕು ಮತ್ತು ಲೈಟಿಂಗ್‌ಗಳನ್ನು ಬಳಸಿ ಕ್ಯಾಸಿನೋಗಳು, ಹೊಟೇಲ್‌ಗಳು, ಅಂಗಡಿ ಮತ್ತು ಮಾಲ್‌ಗಳು ಜನರನ್ನು ಅತೀ ಹೆಚ್ಚು ಕಾಲ ಹಿಡಿದಿಟ್ಟುಕೊಂಡು ಹೆಚ್ಚು ಹಣ ಖರ್ಚು ಮಾಡಲು ತಯಾರು ಮಾಡುತ್ತವೆ.
ಬಣ್ಣದ ಬೇರಿನ ಹಬ್ಬಗಳು
ಪ್ರತೀ ಹಬ್ಬವೂ ಬಣ್ಣಗಳನ್ನು ಬೇಡುತ್ತವೆ. ಹಬ್ಬಗಳೆಂದರೆ ಸಂಭ್ರಮ ಮತ್ತು ಈ ಸಂಭ್ರಮ ಮೂಡಲು ಬಣ್ಣಗಳು ಬೇಕು. ಭಾರತ ಮತ್ತು ನೇಪಾಲದಲ್ಲಿ ಆಚರಿಸಲ್ಪಡುವ ಹೋಳಿ ಹಬ್ಬ ಬಣ್ಣವನ್ನೇ ಆಧರಿಸಿದ ಹಬ್ಬ. ಹೋಳಿ ಹಬ್ಬಕ್ಕೆ ಇನ್ನೂ ಹಲವು ಕಥೆಗಳಿವೆ. ಈ ಬಣ್ಣದ ಹೋಳಿಯನ್ನು ಶ್ರೀಕೃಷ್ಣ ತನ್ನ ಗೋಪಿಕೆಯರೊಂದಿಗೆ ಆಡುತ್ತಿದ್ದ ಎನ್ನುವ ಪ್ರತೀತಿಗಳಿವೆ. ಕೆಟ್ಟತನದ ಮೇಲೆ ಒಳಿತಿನ ವಿಜಯದ ಸಂಭ್ರಮದ ಆಚರಣೆ ಎಂದೂ ಹೇಳಲಾಗುತ್ತದೆ. ಇದು ಬಣ್ಣಗಳ ಎರಚಾಟದಲ್ಲಿಯೇ ಬದುಕಿನ ಜಂಜಡಗಳಿಗೆ ಮುಕ್ತಿ ನೀಡಿ, ಖುಷಿಯನ್ನು ತರುವ ಹಬ್ಬವೆಂದು ವರ್ಣಿಸಲ್ಪಟ್ಟಿದೆ. ಹೋಲಿ ಹಬ್ಬ, ವಸಂತ ಋತುವನ್ನು ಅದರದೇ ಸಾವಿರಾರು ಬಣ್ಣಗಳ ಮೂಲಕ ಆಚರಿಸುವ ಹಬ್ಬವೂ ಆಗಿದೆ. ಇಂತಹ ಹಬ್ಬ ಬೇರೆಡೆ ಮತ್ತೂಂದಿಲ್ಲ. ಇಡೀ ಜಗತ್ತಿನಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಆದರೆ ಬಣ್ಣಗಳನ್ನು ಬೇಡುವ ಸಂಪ್ರದಾಯ ಇರವ ಆಚರಣೆಯನ್ನೇ ಮುಖ್ಯವಾಗಿಟ್ಟುಕೊಂಡಿರುವ ಇತರೆ ಹಲವು ಹಬ್ಬಗಳಿವೆ. ಮೆಕ್ಸಿಕೋದ ” ಡೇ ಆಫ್ ಡೆಡ್ ‘. ಆ ದಿನ ಸತ್ತ ಪ್ರೀತಿ ಪಾತ್ರರು ಹಿಂತಿರುಗಿ ಬಂದು ಹೋಗುತ್ತಾರೆ ಎಂಬ ನಂಬಿಕೆಯಲ್ಲಿ ಬಣ್ಣ ಬಣ್ಣದ ಮುಖವಾಡಗಳನ್ನು ಧರಿಸಿ ನರ್ತಿಸುತ್ತಾರೆ. ಇದು ಅಕ್ಟೋಬರಿನಲ್ಲಿ ಬರುತ್ತದೆ.
ಸ್ಪೇನ್‌ನ ” ಲ ಟೊಮಾಟಿನ ‘ ಹಬ್ಬದಲ್ಲಿ ಟೊಮೇಟೊ ಹಣ್ಣುಗಳದ್ದೇ ಬಣ್ಣ. ಅಂದರೆ ಒಂದೇ ಒಂದು ಬಣ್ಣ. ಇದು ಶುರುವಾದದ್ದು ತೀರ ಇತ್ತೀಚೆಗೆ. 1945 ರಲ್ಲಿ ಯಾವುದೋ ಅವಘಡದಲ್ಲಿ ಯುವಜನತೆ ಒಬ್ಬ ಸಂಗೀತಕಾರನನ್ನು ಒಂದು ತರಕಾರಿ ಅಂಗಡಿಗೆ ಎಸೆಯುತ್ತಾರೆ. ಅಲ್ಲಿ ತರಕಾರಿ ತೂರಾಡಿ ಜಗಳ ಕಾಯುತ್ತಾರೆ. ಅಂದಿನಿಂದ ಇದು ಪ್ರತೀ ವರ್ಷ ನಡೆಯುವ ಮೋಜಿನ ಹಬ್ಬವಾಗಿ ಪರಿವರ್ತಿತವಾಗಿದೆ. ಇದು ಆಗಸ್ಟ್‌ನಲ್ಲಿ ಬರುವ ಹಬ್ಬ.
ಮಾರ್ಚ್‌ನಿಂದ ಮೇ ವರೆಗೆ ಜಪಾನಿನಲ್ಲಿ ನಡೆವ ಹನಮಿ (ಚೆರಿì ಹೂಗಳ ಹಬ್ಬ) ಆ ಹೂಗಳ ಬಣ್ಣದಿಂದಲೇ ತುಂಬಿರುತ್ತದೆ. ಇದು ಶತಮಾನಗಳಿಂದ ನಡೆದು ಬಂದಿರುವ ವಸಂತನ ಆಗಮನದ ಖುಷಿಯನ್ನು ಆಚರಿಸುವ ಹಬ್ಬ. ಹೀಗೆ ಪ್ರತೀ ಹಬ್ಬಕ್ಕೂ ಒಂದು ರಂಗಿದೆ. ಪ್ರತೀ ಹಬ್ಬ ಬಣ್ಣಗಳ ಆಚರಣೆಯೂ ಆಗಿಬಿಡುತ್ತದೆ. ಆಶ್ಚರ್ಯವೆಂದರೆ ಈ ಯಾವ ಬಣ್ಣಗಳೂ ನಿಜದಲ್ಲಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಬೆಳಕಿನಲ್ಲಿ ನಮಗೆ ದೃಶ್ಯಗಳು ಕಾಣುತ್ತವೆ ಅಷ್ಟೆ. ಆ ದೃಶ್ಯಗಳನ್ನು ನಮ್ಮ ಮಿದುಳು ವಿಶ್ಲೇಷಿಸುವಾಗ ಅವುಗಳ ಬಣ್ಣದ ಅನುಭವ ಅಥವಾ ಅರಿವು ನಮಗೆ ಮೂಡುತ್ತದೆ. ಯಾವ ವಸ್ತು ಯಾವ ತರಂಗಾಂತರ ಹೊಂದಿರುವ ಬೆಳಕನ್ನು ಪ್ರತಿಫಲಿಸುತ್ತದೆ ಎನ್ನುವುದರ ಮೇಲೆ ಬಣ್ಣದ ಸಂವೇದನೆ ನಮಗೆ ಆಗುತ್ತದೆ. ನಡುವೆ ಹಲವು ಭಾವಗಳು ಬೆರೆಯುತ್ತವೆ. ಈ ಜಗತ್ತು ಒಂದು ದೊಡ್ಡ ಮಾಯೆ ಎಂಬ ತತ್ವ ಜ್ಞಾನದ ಆಳ ಮತ್ತು ಹರವು ಬಹಳ ದೊಡ್ಡದಿದೆಯಲ್ಲವೇ? ಈ ಸರಣಿ ಇಲ್ಲಿಗೆ ಮುಕ್ತಾಯ.
*ಡಾ| ಪ್ರೇಮಲತಾ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.