CSR ನಿಧಿ ಮೂಲಕ ಶಾಲಾಭಿವೃದ್ಧಿಗೆ ಆಕ್ಷೇಪ- ಗ್ರಾಮೀಣ ಕನ್ನಡ ಶಾಲೆಗಳಿಗೆ ಆಪತ್ತು ಸಾಧ್ಯತೆ
ಶಿಕ್ಷಣ ಕ್ಷೇತ್ರದ ತಜ್ಞರಿಂದಲೇ ಪ್ರಬಲ ವಿರೋಧ
Team Udayavani, Aug 18, 2023, 6:26 AM IST
ಬೆಂಗಳೂರು : ಸಿಎಸ್‌ಆರ್ ನಿಧಿಯಲ್ಲಿ ಪಂಚಾಯಿತಿ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿನೊಂದಿಗೆ ಹೊಸ ಶಾಲೆ ನಿರ್ಮಿಸುವ ಪ್ರಸ್ತಾಪ ಈಗ ವಿವಾದದ ವಸ್ತುವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಶಾಲೆಗಳ ಜತೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಅಪಾಯವುಂಟಾಗುವ ಸಾಧ್ಯತೆ ಇದೆ ಎಂಬ ವಾದ ಕೇಳಿ ಬಂದಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಯನ್ನು ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ವಿಸ್ತರಿಸುವ ಪ್ರಯತ್ನ ಎಂಬ ಕೂಗು ಶಿಕ್ಷಣ ವ್ಯವಸ್ಥೆಯಿಂದಲೇ ಪ್ರಾರಂಭವಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಸಿಎಸ್‌ಆರ್ ಅನುದಾನದ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಡಿ.ಕೆ.ಸುರೇಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಸಭೆಯ ಬೆನ್ನಲ್ಲೇ ಆಕ್ಷೇಪ ಹಾಗೂ ಅನುಮಾನಗಳು ಸೃಷ್ಟಿಯಾಗುತ್ತಿವೆ. ಖಾಸಗಿ ಹಾಗೂ ಕಾರ್ಪೋರೇಟ್ ಮಾಫಿಯಾಗಳು ಈ ಮೂಲಕ ಸರ್ಕಾರಿ ಶಾಲೆಗಳ ವಿಶಾಲ ಭೂಮಿಯ ಮೇಲೆ ಕಣ್ಣು ಹಾಕಿದಂತಾಗಿದೆ ಎಂಬ ವ್ಯಾಖ್ಯಾನ ಕೇಳಿ ಬಂದಿದೆ.
ಕುತೂಹಲಕಾರಿ ಸಂಗತಿ ಎಂದರೆ 2000 ನೇ ಇಸ್ವಿಯಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಇದೇ ಬಗೆಯ ಪ್ರಸ್ತಾಪ ಕೇಳಿ ಬಂದಿತ್ತು. 2020ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಖಾಸಗಿ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಮುಂದಿಡಲಾಗಿತ್ತು. ಆದರೆ ಶಿಕ್ಷಣ ತಜ್ಞರು ಹಾಗೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಡಿ ಇಡಲಾಗಿತ್ತು. ಆದರೆ ಈಗ ಮತ್ತೆ ಸಿಎಸ್‌ಆರ್ ನಿಧಿಯ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಜಾಗದ ಮೇಲೆ ರಿಯಲ್ ಎಸ್ಟೇಟ್ ಕುಳಗಳು ಕಣ್ಣು ಹಾಕುವ ವ್ಯವಸ್ಥೆಗೆ ದಾರಿ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
2, 800 ಕೋಟಿ ರೂ., 2000 ಶಾಲೆ
ಸುಮಾರು 2800 ಕೋಟಿ ರೂ. ಸಿಎಸ್‌ಆರ್ ನೆರವು ಇದರಿಂದ ಹರಿದು ಬರಬಹುದೆಂಬುದು ಸರ್ಕಾರದ ಲೆಕ್ಕಾಚಾರ. ಇದರಿಂದ 2000 ಹೊಸ ಮಾದರಿ ಶಾಲೆಗಳನ್ನು ನಿರ್ಮಿಸುವ ಬಗ್ಗೆ ಮೊದಲ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದರ ಲೆಕ್ಕಾಚಾರಗಳು ಹೀಗಿವೆ….
– ಎರಡು ಅಥವಾ ಮೂರು ಎಕರೆಗಿಂತ ಜಾಸ್ತಿ ಜಾಗ ಹೊಂದಿರುವ ಶಾಲೆಗಳನ್ನು ಪ್ರತಿ ಎರಡು ಅಥವಾ ಮೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಎಂದು ಗುರುತಿಸಿ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನೆರವಿನೊಂದಿಗೆ ಹೊಸದಾಗಿ ಕಟ್ಟುವುದು.
– ಸುಮಾರು 2800 ಕೋಟಿ ರೂ. ಸಿಎಸ್‌ಆರ್ ನಿಧಿಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ.
– ಪ್ರಾಥಮಿಕ, ಉನ್ನತ ಶಿಕ್ಷಣ, ಐಟಿಬಿಟಿ, ವಾಣಿಜ್ಯ, ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಒಳಗೊಂಡ ಸಮಿತಿ ರಚನೆ
– ಶಿಕ್ಷಣ ಇಲಾಖೆಯಿಂದ ತುರ್ತು ಕ್ರಿಯಾ ಯೋಜನೆಗೆ ಸೂಚನೆ
– ಹೊಸದಾಗಿ ನಿರ್ಮಾಣವಾಗುವ ಶಾಲೆಗಳು ಒಂದೇ ಮಾದರಿಯಲ್ಲಿರಬೇಕು.
ಆಕ್ಷೇಪಗಳೇನು ? :
– ಶಾಲೆ ನಿರ್ಮಾಣದ ಬಳಿಕ ಅದರ ಒಡೆತನ ಸೇರುವುದು ಯಾರಿಗೆ ?
– ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದು ಸರ್ಕಾರವೋ, ಖಾಸಗಿಯೋ ?
– ಹೊಸದಾಗಿ ನಿರ್ಮಾಣಗೊಂಡ ಶಾಲೆಗೆ ಅನುದಾನ ನೀಡಿದ ಸಂಸ್ಥೆಯ ಹೆಸರಿಡಲಾಗುತ್ತದೆಯೇ ?
– ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ನಿರ್ದಿಷ್ಟ ವಿಧಾನ ಹಾಗೂ ಅರ್ಹತೆ ಇದೆ. ಖಾಸಗಿಯವರು ಇದನ್ನು ಪಾಲಿಸುತ್ತಾರೆಯೇ ?
– ಇದು ಸರ್ಕಾರಿ ಶಾಲೆಗಳ ಖಾಸಗಿಕರಣದ ಭಾಗವಲ್ಲವೇ ?
– ಮಾತೃ ಭಾಷಾ ಶಿಕ್ಷಣದ ಸ್ಥಿತಿ ಏನು ?
ಈ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂಬುದನ್ನು ಮೊದಲು ಖಾತ್ರಿ ಕೊಡಬೇಕು. ಶಾಲೆಯನ್ನು ಕಟ್ಟುವ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವುದಿಲ್ಲ, ಸರ್ಕಾರವೇ ಅದರ ಜವಾಬ್ದಾರಿ ಹೊರತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು.
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್.
ಸಿಎಸ್‌ಆರ್ ನಿಧಿಯಲ್ಲಿ ಖಾಸಗಿ ಶಾಲೆಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳ ನೆರವಿನೊಂದಿಗೆ ಕಟ್ಟುವ ಶಾಲೆಗಳು ಖಾಸಗಿಯವರದ್ದಾಗಿರುತ್ತದೋ ಅಥವಾ ಸರ್ಕಾರದ್ದಾಗಿರುತ್ತದೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಈ ಬಗ್ಗೆ ನೀತಿ ರೂಪಿಸುವುದಕ್ಕೆ ಮುನ್ನ ವಿಪಕ್ಷಗಳು ಹಾಗೂ ಶಿಕ್ಷಣ ತಜ್ಞರ ಜತೆಗೆ ಚರ್ಚೆ ನಡೆಸಲಿ. ಸರ್ಕಾರದ ಈ ನಿರ್ಧಾರದಿಂದ ಶಿಕ್ಷಣ ದುಬಾರಿಯಾಗುವ ಜತೆಗೆ ಖಾಸಗಿಕರಣಕ್ಕೆ ಬಾಗಿಲು ತೆರೆದಂತಾಗುತ್ತದೆ. ಮಾತೃ ಭಾಷಾ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ.
ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.
ಖಾಸಗಿ ಶಾಲೆಗಳನ್ನು ನಡೆಸುವ ಸಚಿವರುಗಳೇ ಸಿಎಸ್‌ಆರ್ ನೆರವಿನೊಂದಿಗೆ ಸರ್ಕಾರಿ ಜಾಗದಲ್ಲಿ ಮಾದರಿ ಶಾಲೆ ನಿರ್ಮಿಸುತ್ತೇವೆ ಎಂದು ಹೇಳುವುದು ಹಿತಾಸಕ್ತಿಗಳ ಸಂಘರ್ಷವಾಗುತ್ತದೆ. ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಇಂಥ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಪ್ರಬುದ್ಧತೆ ಇಲ್ಲದ ಕೆಟ್ಟ ಪ್ರಸ್ತಾಪ. ಬಹುಶಃ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲದೇ ಇರಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾರುಕಟ್ಟೆ ವಿಸ್ತರಣೆಗೆ ಸರ್ಕಾರ ನೆರವು ನೀಡಲು ಹೊರಟಿದೆಯೇ ? ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರೆಲ್ಲರೂ ಈ ಪ್ರಸ್ತಾಪವನ್ನು ವಿರೋಧಿಸಬೇಕು.
ಪಿ.ವಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು.
ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.