Life: ಸತ್ಸಂಗಕಿಂ ಸಂಪದಮುಂಟೆ…?
Team Udayavani, Aug 18, 2023, 6:35 AM IST
ಮನುಷ್ಯ “ಸಂಘಜೀವಿ”. ಜತೆಗೆ ಆತ ಸಂಘದೊಳಗಿನ ಸದಸ್ಯರೊಂದಿಗೆ “ಸಂಗಜೀವಿ’ಯೂ ಆಗಿರಬೇಕು. ಆ “ಸಂಗ’ದ ಬದುಕಿಗೆ ಅರ್ಥ ಬರುತ್ತದೆ. “ಸಂಗ’ವದು “ಸತ್ಸಂಗ’ ವಾಗಿರಬೇಕು. ಸಜ್ಜನರ ಸಂಗವೇ ಸತ್ಸಂಗ. ಜನರೊಂದಿಗಿನ ಸಂಗ ಸತ್ಸಂಗವಲ್ಲ. ಸತ್-ಜನರ ಜತೆಗಿನ ಸಂಗವೇ ಸತ್ಸಂಗ.
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ದುರ್ಜನರ ಸಂಗವದು ಬಚ್ಚಲ ರೊಜ್ಜಿನಂತಿಕ್ಕು ಸರ್ವಜ್ಞ
ಜ್ಞಾನಮೂರುತಿ ಸರ್ವಜ್ಞ ಕವಿಗಳು ಸಜ್ಜನ ಹಾಗೂ ದುರ್ಜನರ ಒಡನಾಟದ ವರ್ಣನೆಯನ್ನು ಮಾಡಿರುವ ಪರಿ ಇದು. ನಮಗೆ ಸಂಗ ಸಿಗಬಹುದು. ಆದರೆ ಸತ್ ಪ್ರತಿಪಾದನೆಯ ಸಂಗ ಸಿಗುವುದು ಸುಲಭವಲ್ಲ. ಸತ್ಚಿಂತನ, ಸದಾಚಾರ, ಸದ್ವರ್ತನೆ, ಸದ್ವಿಚಾರ, ಸದ್ಭೋಧನ, ಸತ್ಕ್ರಿಯೆ, ಈ ಮುಂತಾದ ಸನ್ನಡತೆಯ ಸಂಗಜೀವಿಗಳು ಅಪರೂಪ….ಬಲು ಅಪರೂಪ. ಇಂತಹ ಸನ್ಮಾರ್ಗಿಗಳೊಂದಿಗಿನ ಒಡನಾಟ ಪುಷ್ಟ – ಸಂಪುಷ್ಟವಾದ, ಮೃದು – ಮಧುರವಾದ, ಇಷ್ಟ – ಸ್ವಾದಿಷ್ಟವಾದ ಜೇನು ಸವಿದಂತೆ. ಬರೀ ಜೇನಲ್ಲ, ಅದು ಹೆಜ್ಜೇನು. ಆ ಮಧುರ ಜೇನನ್ನು ತಿನ್ನುವುದಲ್ಲ ಅದನ್ನು ಸವಿಯುವುದು. ಅಂದರೆ ಅದರ ರಸವನ್ನು ಸ್ವಾದಿಸುವುದು, ನಿಧಾನವಾಗಿ ಆಸ್ವಾದಿಸುವುದು. ಷಡ್ಗುಣಗಳಾದ ಮಧುರ, ಆಮ್ಲ, ಲವಣ, ಕಟು, ಕಷಾಯ, ತಿಕ್ತ ರಸಗಳ ರಸನೆಯೊಂದಿಗೆ ಮಧುರ ರಸ ಪ್ರಧಾನವಾದ ಹೆಜ್ಜೇನನ್ನು ಸವಿಯುವುದರ ಹೋಲಿಕೆ ಸಜ್ಜನರ ಸಂಗ.
ಅದೇ ದುಷ್ಟ ಜನಗಳ ಸಂಗ ಬಚ್ಚಲ ಮೋರಿಯ ನೀರಿನಂತೆ. ಎಂದೂ ತೊಳೆ ಯದ, ಹುಚ್ಚು ಹುಳುವೆದ್ದು, ಗಬ್ಬೆದ್ದು ನಾರುವ ದುರ್ವಾಸನೆಯೊಂದಿಗಿನ ಅನುಭವವಾಗುವುದು ದುರ್ಜನರ ಸಂಗದಿಂದ. ಆದ್ದ ರಿಂದ ಸಜ್ಜನರ ಸಂಗಕ್ಕೆ ಅದೆಷ್ಟಾದರೂ ಬೆಲೆತೆತ್ತು ಅದನ್ನು ಉಪಯೊಗಿಸಿಕೊಳ್ಳಬೇಕು. ಇದು ಸರ್ವಜ್ಞಮೂರ್ತಿಗಳ ಅಂಬೋಣ.
ಅನುಭಾವಿಗಳೂ ಸಹ ಸತ್ಸಂಗಕ್ಕೆ ಮಹತ್ವ ವನ್ನೀಡಿದ್ದಾರೆ. ಯಾವುದನ್ನು ಬೇಕಾದರೂ ಕಳೆದುಕೊಳ್ಳಬಹುದು ಆದರೆ ಸತ್ಸಂಗ ವನ್ನು ಮಾತ್ರ ಕಳೆದುಕೊಳ್ಳಬಾರದು ಎನ್ನುವುದು ಅವರ ಮನದಿಂಗಿತ.
ಸಾರ ಸಜ್ಜನರ ಸಂಗವ ಮಾಡು
ದೂರ ದುರ್ಜನರ ಸಂಗ ಬೇಡವಯ್ಯ
ಆವ ಹಾವಾದರೇನು ವಿಷ ಒಂದೆ
ಅಂಥವರ ಸಂಗ ಬೇಡವಯ್ಯ
ಅಂತರಂಗ ಶುದ್ಧವಿಲ್ಲದವರ ಸಂಗ ಸಿಂಗಿಕಾಳ ಕೂಟ ವಿಷವೋ ಕೂಡಲ ಸಂಗಮದೇವ
ಅನುಭಾವಿಗಳ ಮಾತು. ಸಂಗದ ಸಾಂಗತ್ಯದೊಳಗಿದ್ದ ಮನುಷ್ಯನಿಗೆ ಸತ್ಸಂಗ ದೊರೆತರೆ ಆತನ ಜನ್ಮ ಸಾರ್ಥಕ. ಆದರ್ಶಗಳ ಅನುಕರಣೆ ಸಾಧ್ಯ. ನೀತಿ – ನಿಯಮಗಳ ಅನು ಸಂದಾ ನದ ಮಾರ್ಗದಲ್ಲಿ ಜೀವನದ ಸಾರ್ಥಕ್ಯ. ಜೀವನ ಮೌಲ್ಯಗಳ ಅನು ಕರಣೆ ಬದುಕಿನ ಭಾಗವಾಗಿ ಬದುಕು ಸಾರ್ಥಕವಾಗುತ್ತದೆ. ಅದೇ ದುರ್ಜನ ಸಹವಾಸದಿಂದ ಬದುಕು ಬರ್ಬರವಾಗುತ್ತದೆ. ಬದುಕು ನಿಸ್ತೇಜವಾಗುತ್ತದೆ. ಬದುಕು ಮಾರಕವಾಗುತ್ತದೆ. ಅಶಾಂತಿ, ಅಸಹನೆಗಳು ತಾಂಡವವಾಡುತ್ತವೆ. ಎಲ್ಲದಕ್ಕೂ ಕಾರಣ ಸಂಗ.
ಈಚಲ ಮರದ ಕೆಳಗಡೆ ಕುಳಿತು ಶುದ್ಧ ದೇಸಿ ಗೋವಿನ ಹಾಲನ್ನು ಕುಡಿದರೂ ಲೋಕ ಮದ್ಯವನ್ನೇ ಕುಡಿದಿದ್ದಾನೆ ಎಂದಾಡಿಕೊಳ್ಳುತ್ತದೆ. ಹಾಗೆ ದುರ್ಜನ ಸಂಗವನ್ನು ಒಂದು ಬಾರಿ ಮಾಡಿದರೂ ಅದು ಕಾಳಕೂಟ ವಿಷವಾಗುತ್ತದೆ. ಅದರ ಪರಿಣಾಮ ತೀಕ್ಷ್ಣ.” ಸಹವಾಸದಿಂದ ಸಂನ್ಯಾಸಿ ಕೆಟ್ಟ’ ಜಾನಪದರ ಈ ಗಾದೆ ಮಾತು ಸಂಗ ಹಾಗೂ ಸಹವಾಸ ಎಂತೆಂಥಹವರನ್ನು ಕೆಡಿಸುತ್ತದೆ ಎಂಬುದಕ್ಕೆ ಅತ್ಯುತ್ತಮ ಶಿರೋಪಂಕ್ತಿಯಾಗಿದೆ.
ಅನುಭಾವಿ ಕವಯಿತ್ರಿಯಾದ ಅಕ್ಕಮಹಾದೇವಿ ಸಂಗದ ಪ್ರಯೋಜನ ಮತ್ತು ಪರಿಣಾಮಗಳನ್ನು ಹಾಗೂ ಅದರ ಫಲಗಳನ್ನು ಮಾರ್ಮಿಕವಾಗಿ ವಚನದಲ್ಲಿ ಬಿಂಬಿಸಿದ್ದಾರೆ.
ಸಂಗದಿಂದಲ್ಲದೆ ಅಗ್ನಿಹುಟ್ಟದು
ಸಂಗದಿಂದಲ್ಲದೆ ಅಪ್ಪುಮಳೆದೋರದು
ಸಂಗದಿಂದಲ್ಲದೆ ಬೀಜ ಮೊಳೆದೋರದು
ಸಂಗದಿಂದಲ್ಲದೆ ಸರ್ವಸುಖತೋರದು
ಚನ್ನಮಲ್ಲಿಕಾರ್ಜುನದೇವ, ನಿಮ್ಮ ಶರಣರ ಸಂಗದಿಂದಾನು ಪರಮಸುಖೀಯಾದೆನಯ್ಯ.
ಸಂಗ ಜಗತ್ತಿನ ಸರ್ವ ವಸ್ತುಗಳಿಗೂ ಬೇಕು. ಜೀವ – ಜಡ ಅನೇಕ ಚರಾಚರ ವಸ್ತುಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹಾಗೂ ಅರಿವಿಗಾಗಿ ಸಂಗದ ಸಾನಿಧ್ಯವನ್ನು ಬಯಸಿಕೊಂಡಿರುತ್ತವೆ. ಈ ಜಗತ್ತು ಮುನ್ನಡೆಯಲೂ ಸಂಗವು ಸರ್ವ ರೀತಿಯಲ್ಲೂ ಸಹಾಯಮಾಡಿಕೊಂಡಿರುತ್ತದೆ. ಅದನ್ನೇ ಅಕ್ಕ ಮಹಾದೇವಿಯವರು ಈ ವಚನದಲ್ಲಿ ವಿಶ್ಲೇಸಿಸಿದ್ದಾರೆ.
ಈ ಜಗತ್ತು ಆಧುನಿಕ ಜಗತ್ತಾಗಿದ್ದುದೇ ಅಗ್ನಿಯ ಆವಿಷ್ಕಾರದಿಂದ. ಮಾನವನ ನಾಗರಿಕತೆಯ ವಿಕಾಸದಲ್ಲಿ ಅಗ್ನಿಯ ಪಾತ್ರ ಬಹು ಮುಖ್ಯವಾದದು. ಆ ಅಗ್ನಿಯು ಉತ್ಪತ್ತಿಯಾಗಲು ಎರಡು ವಸ್ತುಗಳ ಸನ್ನಿಕರ್ಷದಿಂದ ಮಾತ್ರ ಸಾಧ್ಯ. ಎರಡು ಘನ ವಸ್ತುಗಳ ಘರ್ಷಣೆಯಿಂದ ಅಗ್ನಿಯ ಉದಯವಾಗುತ್ತದೆ. ಕಟ್ಟಿಗೆ, ಕಲ್ಲು, ಅಥವಾ ಆಕಾಶದಲ್ಲಿ, ಭೂಮ್ಯಂತರಂಗದಲ್ಲಿ, ಹೀಗೆ ಹಲವಾರು ಕಡೆ ಎರಡು ವಸ್ತುಗಳ ಸಂಗದಿಂದಲೇ ಅಗ್ನಿಯ ಉದಯ. ಅದರ ಉದಯವೇ ಜಗತ್ತಿನ ಚಲನೆಗೆ ಮುನ್ನುಡಿ.
ಭೂಮಂಡಲದ ಜೀವಗಳ ಮೂಲ ಸೆಲೆ ನೀರು. ಜೀವಿಗಳ ಉದಯವಾದದ್ದೇ ನೀರಿನಿಂದ. ಈ ನೀರು ವಾತಾವರಣದಲ್ಲಿ ಆವಿಯಾಗಿ, ಮೋಡವಾಗಿ ಮಳೆಯಾಗಿ ಚಕ್ರಾಕಾರವಾಗಿ ಚಲಿಸುವ ಪ್ರಕ್ರಿಯೆಯೂ ಸಹ ಸಂಗದಿಂದಲೇ. ನೀರು ಸೂರ್ಯನ ಸಂಗದಿಂದ ಆವಿಯಾಗಿ ಮೋಡವಾಗಿ ಮತ್ತೆ ವಾತಾವರಣದ ಸಂಗದಿಂದ ಗಾಳಿಯ ಸಂಗದಿಂದ ಚಲನೆ ಗೊಂಡು ಮತ್ತೆ ಮಳೆಯಾಗಿ ಭೂಮಿಯ ಮೇಲೆ ಬೀಳುತ್ತದೆ. ಇದಕ್ಕೆ ಕಾರಣ ಮೋಡ ಹಾಗೂ ವಾಯುವಿನ ಸಂಗ.
ಸೃಷ್ಟಿಗೆ ಕಾರಣ ಭೂಮಿ. ಹದವಾದ ಭೂಮಿಯಲ್ಲಿ ಶಕ್ತವಾದ ಬೀಜ ಬಿದ್ದರೆ ಮೊಳೆ ತೋರುತ್ತದೆ. ಭೂಮಿಯ ಹಾಗೂ ಬೀಜದ ಸಂಗವೇ ಹೊಸ ಸಸಿಯ ಉದಯಕ್ಕೆ ಕಾರಣ. ಎರಡರ ಸಂಗ ಭೂಮಂಡಲದ ಹಸುರಿಗೆ ಕಾರಣ.
ಹಾಗೆಯೇ ಪ್ರಪಂಚದಲ್ಲೂ ಸಂಪೂರ್ಣ ಸುಖ ತೋರ ಬೇಕಾದರೆ ಎರಡು ವಸ್ತುಗಳ ಸಂಪೂರ್ಣ ತಾದಾತ್ಮತೆಯ ಒಳಗೊಳ್ಳುವಿಕೆ ಆ ಆನಂದ ಹಾಗೂ ಸುಖದ ಪ್ರಾಪ್ತಿಗೆ ಕಾರಣ ವಾಗುತ್ತದೆ. ಸರ್ವ ಸುಖ ತೋರಬೇಕಾದರೆ ಸಂಪೂರ್ಣ ಸಂಗ ಸಿದ್ಧಿಸಬೇಕಾಗುತ್ತದೆ.
ಅಂತೆಯೆ ಮನುಷ್ಯ ಜನ್ಮದ ಅಷ್ಟೆ ಏಕೆ ಜಗತ್ತಿನ ಸರ್ವ ವಸ್ತು ಗಳಿಗೆ ಪರಮ ಗುರಿಯಾದ ಮೋಕ್ಷ (ಬಿಡುಗಡೆ) ಪ್ರಾಪ್ತಿ ಯಾಗಬೇಕಾದರೆ ತಾದಾತ್ಮತೆಯ ಒಳಗೊಳ್ಳುವಿಕೆ ಸ್ಥಿತಿ ಬೇಕಾಗುತ್ತದೆ. ಆ ಮಹಾಮಹಿಮ ಸಜ್ಜನರಾದ ಸತ್ಸಂಗಿಗಳಾದ ಶರಣರ ಸಂಗದಿಂದ ಅಕ್ಕ ಆನಂದದ ಸುಖವನ್ನು ಅನುಭವಿಸಿ ಸುಖೀಯಾಗುತ್ತಾಳೆ. ಕೇವಲ ಸುಖೀಯಲ್ಲ ಪರಮ ಸುಖೀಯಾಗುತ್ತಾಳೆ. ಶಿವನ ಸಂಗವನ್ನು ಅನುಭವಿಸಿದವರು ಶಿವ ಶರಣರು. ಆ ಶಿವ ಸಂಗವೇ ಪರಮ ಸಂಗ. ಅದು ಪರಮ ಸುಖ. ಆ ಸುಖವನುಂಡವರು ಪರಮಸುಖೀಗಳು. ಹಾಗೆ ಅಕ್ಕನೂ ಪರಮಸುಖೀಯಾಗಿದ್ದಾಳೆ. ಇದಕ್ಕೆಲ್ಲ ಕಾರಣ ಸಂಗ.
ಸಂಗವು ಆತ್ಮದ ಶ್ರೇಯಸ್ಸಿಗೂ ಕಾರಣವಾಗುತ್ತದೆ. ಅದರ ಪ್ರೇಯಸ್ಸಿಗೂ ಕಾರಣವಾಗುತ್ತದೆ.
ಭಗವದ್ಗೀತೆಯಲ್ಲಿ….
ಸಂಗಾತ್ ಸಂಜಾಯತೆ ಕಾಮಃ
ಕಾಮಃ ಕ್ರೋಧೋಭಿಜಾಯತೆ
ಕ್ರೋಧಾದ್ಭವತಿ ಸಂಮೋಹಃ
ಸಂಮೋಹಾತ್ ಸ್ಮತಿ ವಿಭ್ರಮಃ
ಒಂದು ವಸ್ತುವನ್ನು ಒಮ್ಮೆ ನೋಡಿದರೆ ಏನೂ ಅನ್ನಿಸುವುದಿಲ್ಲ. ಪದೇ ಪದೇ ಆ ವಸ್ತುವನ್ನು ನೋಡುತ್ತಿದ್ದರೆ ಆ ವಸ್ತುವಿನ ಮೇಲೆ ಆಸೆ ಉತ್ಪತ್ತಿಯಾಗುತ್ತದೆ. ಆಸೆಯುಂಟಾದ ಮೇಲೆ ಅದರ ಮೇಲೆ ಮೋಹ ಗಟ್ಟಿಗೊಳ್ಳುತ್ತದೆ. ಅದು ಸಿಗುವುದು ಅಸಾಧ್ಯ ವೆಂದಾ ದರೆ ಕ್ರೋಧ ಹುಟ್ಟುತ್ತದೆ. ಕ್ರೋಧದಿಂದ ಮತ್ಸರ ಉಂಟಾಗಿ ಮನುಷ್ಯ ಕುತ್ಸಿತನಾಗಿ ಮನೋವ್ಯಾಕುಲಗೊಂಡು ಸ್ಮತಿ ಚಂಚಲನಾಗಿ ತನ್ನ ಆತ್ಮದ ಅಧಃಪತನಕ್ಕೆ ಕಾರಣನಾಗುತ್ತಾನೆ. ಕಾರಣ ಸಂಗ. ಕೇವಲ ಕಣ್ಣು ಮಾಡಿದ ವಸ್ತುವಿನ ಸಂಗ ಇದಕ್ಕೆಲ್ಲ ಕಾರಣ.
ಸತ್ಸಂಗ ಸಂಪದ ಪ್ರಿಯರೆ…….
ಸಂಪತ್ತಿನಲ್ಲಿ ಸತ್ಸಂಗ ಸಂಪತ್ತೂ ಘನತರವಾದುದು. ಈ ಸಜ್ಜನರ ಸತ್ಸಂಗ ಸಂಪತ್ತಿನ ಮುಂದೆ ಭೌತಿಕ ಸಂಪತ್ತು ಕ್ಷಣಿಕ. ಸಂತ ಸಂಗ – ಸತ್ಸಂಗ – ಸಜ್ಜನರ ಸಂಗವದು ದೊರೆವುದು ದುರ್ಲಭ. ದೊರೆತರ ದುವೇ ಪುಣ್ಯ ಪಾವನ. ಸತ್ಸಂಗದಿಂದ ಮನುಷ್ಯ ಏಕಾಂತನಾಗು ತ್ತಾನೆ. ಲೋಕಾಂತನಾಗಿರಿಸದೇ ಏಕಾಂತ ನಾಗಿರಿ ಸುವುದೇ ಸತ್ಸಂಗ. ಸತ್ಸಂಗ ನಮ್ಮನ್ನು ನಿಸ್ಸಂಗಿ ಯಾಗಿಸುತ್ತದೆ. ನಿಸ್ಸಂಗದಿಂದ ನಮ್ಮಲ್ಲಿ ನಿರ್ವೋಹತ್ವ ಚಿಗುರೊಡೆ ಯುತ್ತದೆ. ನಾನು ಜಗತ್ತಿನಲ್ಲಿ ಏನೂ ಅಲ್ಲ. ಭಗವಂತನ ಕೃಪೆಯೇ ಸರ್ವಕ್ಕೂ ಮೂಲಕಾರಣ ಎಂಬ ಭಾವ ನಿರ್ವೋಹತ್ವ. ಈ ಮನಸ್ಥಿತಿಯಲ್ಲಿ ಏಕಮೇವಾದ್ವೀತೀಯ ಪರತತ್ತ್ವದಲ್ಲಿ ಮನಸ್ಸು ಗಟ್ಟಿಗೊಳ್ಳುತ್ತದೆ. ಈ ನಿಶ್ಚಲ ತತ್ತ್ವದಲ್ಲಿ ನೆಲೆ ನಿಂತ ಮನಸ್ಸು ನಿಧಾನವಾಗಿ ಜೀವನ್ಮುಕ್ತ ಸ್ಥಿತಿಯ ಅನುಭವನ್ನು ಹೊಂದುತ್ತದೆ. ಇದು ಸಂಗದಿಂದ ಸಾಧ್ಯ. ಅಲ್ಲಲ್ಲ…. ಸತ್ಸಂಗದಿಂದ ಮಾತ್ರ ಸಾಧ್ಯ.
ಶ್ರವಣ ಕಾರ್ಯವನ್ನು ಪ್ರಧಾನವಾಗಿಸಿದ ಮಾಸ ಶ್ರಾವಣ ಮಾಸ. ಸತ್ಕಿàರ್ತನೆಯನ್ನು ಕೇಳುವ ಮಾಸ. ಸಜ್ಜನರ ಸಹವಾಸವನ್ನು ಸವಿಯುವ ಮಾಸ ಶ್ರಾವಣ ಮಾಸ. ಶ್ರವಣ ಮಾಸದಲ್ಲಿ ಪುಣ್ಯಕೀರ್ತನೆಗಳ ಶ್ರವಣಮಾಡಿ ಸತ್ಸಂಗಿಗಳಾಗಿ, ಸತ್ಸಮಾಜದ ಸನ್ಮಾರ್ಗಿಗಳಾಗಿ.
ಶ್ರೀ ಷ ಬ್ರ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಹಿರೇಮಠ. ಜಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.