Cauvery: ರಾಜಕೀಯ ಬದಿಗಿಟ್ಟು ಕಾವೇರಿ ವಿವಾದ ಬಗೆಹರಿಸಲಿ
Team Udayavani, Aug 20, 2023, 11:41 PM IST
ಜುಲೈಯಲ್ಲಿ ಬಂದ ಮಳೆ, ಆಗಸ್ಟ್‌ನಲ್ಲಿ ಕಾಣೆಯಾಗಿದ್ದು, ಸದ್ಯ ರಾಜ್ಯವೀಗ ಮಳೆ ಕೊರತೆ ಅನುಭವಿಸುತ್ತಿದೆ. ರಾಜ್ಯದ ಜಲಾಶಯಗಳಿಗೂ ಸರಿಯಾದ ಪ್ರಮಾಣದಲ್ಲಿ ನೀರು ಹರಿದುಬರದ ಕಾರಣ, ರಾಜ್ಯವೀಗ ಸಂಕಷ್ಟದ ಪರಿಸ್ಥಿತಿಯಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ ಆಗಿದೆ. ಇಂಥ ಹೊತ್ತಿನಲ್ಲಿ ರಾಜ್ಯ ಸರಕಾರ ಸರ್ವಪಕ್ಷಗಳ ಸಭೆ ಕರೆದಿರುವುದು ಸ್ವಾಗತಾರ್ಹ ವಿಚಾರ.
ಮೊದಲಿನಿಂದಲೂ ನೆಲ,ಜಲ ಮತ್ತು ನಾಡು ವಿಚಾರದಲ್ಲಿ ರಾಜ್ಯದ ಪಕ್ಷಗಳು ರಾಜಕೀಯ ಬದಿಗಿಟ್ಟು ಕೆಲಸ ಮಾಡಿವೆ. ಇದು ಕರ್ನಾಟಕದ ಹೆಗ್ಗಳಿಕೆಯೂ ಹೌದು. ರಾಜ್ಯಕ್ಕೆ ಎದುರಾಗುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಿಗೆ ಸೇರಿ ಕುಳಿತು ಚರ್ಚೆ ಮಾಡಿ ನಿರ್ಧಾರಕ್ಕೆ ಬರುತ್ತವೆ. ಈ ಹಿಂದೆಯೂ ನಾವು ಇಂಥ ಹಲವಾರು ಸಂದರ್ಭಗಳಿಗೆ ಸಾಕ್ಷಿಯಾಗಿದ್ದೇವೆ. ಈಗ ಕಾವೇರಿ, ಮಹದಾಯಿ ಸೇರಿದಂತೆ ನದಿ ನೀರಿನ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸರ್ವಪಕ್ಷ ಸಭೆಯ ಮೊರೆ ಹೋಗಿದೆ. ಬುಧವಾರ ಈ ಸಭೆ ನಡೆಯಲಿದ್ದು, ಈ ಸಮಸ್ಯೆಗಳನ್ನು ಎದುರಿಸುವ ಮತ್ತು ನಿವಾರಿಸುವ ಬಗ್ಗೆ ಚಿಂತನೆ ನಡೆಸಲಿ ಎಂಬುದು ಎಲ್ಲರ ಆಶಯ.
ಮೊದಲೇ ಹೇಳಿದ ಹಾಗೆ, ಕಾವೇರಿ ಉಗಮ ಸ್ಥಾನವಾಗಿರುವ ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾಗಿಲ್ಲ. ಹೀಗಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರು ಸಮರ್ಪಕವಾಗಿ ಹರಿದು ಬಂದಿಲ್ಲ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೆಆರ್‌ಎಸ್ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದವು. ಆದರೆ ಈಗ ಮಳೆ ಕೊರತೆಯಿಂದಾಗಿ ಜಲಾಶಯಗಳು ತುಂಬಿಲ್ಲ.
ಈಗ ನೆರೆಯ ತಮಿಳುನಾಡು ಕಾವೇರಿ ನದಿ ನೀರಿಗಾಗಿ ಕ್ಯಾತೆ ತೆಗೆಯುತ್ತಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ದಿನವೂ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂಬ ಹಠ ಹಿಡಿದು, ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದೆ. ಇತ್ತೀಚೆಗೆ ರಾಜ್ಯದ ರೈತರ ವಿರೋಧದ ಹೊರತಾಗಿಯೂ ತಮಿಳುನಾಡಿಗೆ ನೀರು ಹರಿಸಲಾಗಿದೆ.
ಇದರ ಮಧ್ಯೆಯೇ ಸೋಮವಾರ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ರಾಜ್ಯದ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಮುಂದಾಗಿದೆ. ಈಗಾಗಲೇ ತಮಿಳುನಾಡು ಸರಕಾರ ಸುಪ್ರೀಂ ಬಾಗಿಲು ಬಡಿದಿದ್ದು, ರಾಜ್ಯ ಸರಕಾರವೂ ಸುಪ್ರೀಂನಲ್ಲಿ ಸಮರ್ಥವಾದ ಮಂಡನೆಗೂ ತಯಾರಿ ನಡೆಸಿದೆ. ಈ ಎಲ್ಲದರ ಮಧ್ಯೆ, ಪದೇ ಪದೆ ನೀರಿನ ವಿಚಾರದಲ್ಲಿ ತಗಾದೆ ಎತ್ತುತ್ತಿರುವ ತಮಿಳುನಾಡು ಸರಕಾರಗಳಿಗೆ ಸಂಕಷ್ಟ ಸೂತ್ರದ ಅರಿವು ಮಾಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ಈ ವಿಚಾರದಲ್ಲಿ ಸರಕಾರದ ನಿಲುವು ಗಟ್ಟಿಯಾಗಬೇಕಾದರೆ, ಎಲ್ಲ ಪಕ್ಷಗಳು ಒಂದಾಗುವ ಅನಿವಾರ್ಯತೆಯಂತೂ ಇದ್ದೇ ಇದೆ. ಕೇವಲ ಕಾವೇರಿಯೊಂದೇ ಅಲ್ಲ, ಮಹದಾಯಿ ವಿಚಾರದಲ್ಲೂ ಇದೇ ಒಗ್ಗಟ್ಟನ್ನು ರಾಜ್ಯದ ಪಕ್ಷಗಳು ತೋರಬೇಕಾಗಿದೆ.
ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಆಡಳಿತವಿದ್ದು, ಕಾಂಗ್ರೆಸ್ ಮತ್ತು ಡಿಎಂಕೆ ರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಭಾಗೀದಾರಿ ಪಕ್ಷಗಳಾಗಿವೆ. ಈ ಎರಡೂ ಐಎನ್‌ಡಿಐಎ ಒಕ್ಕೂಟದಲ್ಲಿವೆ. ಅತ್ತ ಮಹದಾಯಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಗೋವಾದಲ್ಲಿ ಬಿಜೆಪಿ ಸರಕಾರವಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮನಸ್ಸು ಮಾಡಿದರೆ, ಈ ವಿವಾದಕ್ಕೆ ಶಾಶ್ವತ ತೆರೆ ಎಳೆಯಬಹುದು. ಆದರೆ ಇದನ್ನು ರಾಜಕೀಯ ವಿಚಾರವಾಗಿ ಪರಿಗಣಿಸದೇ ದೂರದೃಷ್ಟಿಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.