NH169 ಭೂಮಾಲಕರ ಧರಣಿ ಆರಂಭ: ಆ.30ರೊಳಗೆ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ
Team Udayavani, Aug 22, 2023, 11:24 PM IST
ಮಂಗಳೂರು: ಕುಲಶೇಖರ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡದೆ ಸತಾಯಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಭೂಮಾಲೀಕರ ಹೋರಾಟ ಸಮಿತಿ ಒಂದು ವಾರದ ಧರಣಿ ಸತ್ಯಾಗ್ರಹವನ್ನು ಮಂಗಳವಾರ ಆರಂಭಿಸಿದೆ.
ನಂತೂರಿನ ತಾರೆತೋಟ ಬಳಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕರ ಕಚೇರಿ ಮುಂಭಾಗ ಆ. 30ರ ವರೆಗೂ ಪ್ರತಿ ದಿನ ವಿವಿಧ ಗ್ರಾಮಗಳ ಸಂತ್ರಸ್ತರು ಪ್ರತಿಭಟನೆ ನಡೆಸಲಿದ್ದಾರೆ.ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಮಾತನಾಡಿ, ಹೆದ್ದಾರಿ ವಿಸ್ತರಣೆಗೆ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ನೀಡಲೇಬೇಕು. ಕೃಷಿ ಜಮೀನಿಗೆ ಕನಿಷ್ಠ ಪರಿಹಾರ ನಿಗದಿಪಡಿಸಿದ್ದು ಸರಿಯಲ್ಲ, ಗರಿಷ್ಠ ಮೊತ್ತವನ್ನು ಭೂಸ್ವಾಧೀನಾಧಿಕಾರಿ ನಿಗದಿಪಡಿಸಿದೆ. ಅದನ್ನು ನೀಡುವಂತೆ ಹೈಕೋರ್ಟ್, ಡಿಸಿ ಆರ್ಬಿಟ್ರೇಶನ್‌ನಲ್ಲಿ ಆದೇಶ ಬಂದಿದೆ. ಈಗ ಅದರ ವಿರುದ್ಧ ಈಗ ಮತ್ತೆ ಎನ್‌ಎಚ್‌ಎಐ ಜಿಲ್ಲಾ ನ್ಯಾಯಾಲಯಕ್ಕೆ ಅಪೀಲು ಮಾಡುವ ಮೂಲಕ ಸತಾಯಿಸುತ್ತಿದೆ ಎಂದರು.
ನಾವೆಲ್ಲರೂ ಕೋರ್ಟ್ ಕಚೇರಿ ಅಲೆದು ಸುಸ್ತಾಗಿದ್ದೇವೆ. ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ವೇತನ ಪಡೆದುಕೊಂಡು ನ್ಯಾಯಾಲಯದಲ್ಲಿ ಖರ್ಚನ್ನೂ ನಮ್ಮ ತೆರಿಗೆ ಹಣದಿಂದಲೇ ಕಡಿತ ಮಾಡುತ್ತಾರೆ. ಮೊನ್ನೆ ಒಬ್ಬರಿಗೆ 18 ಸಾವಿರ ರೂ. ಪರಿಹಾರ ಕಡಿಮೆ ಆಗಿದೆ ಎಂದು ಆರ್ಬಿಟ್ರೇಶನ್‌ಗೆ ಹೋಗಿದ್ದರು. ಡಿಸಿಯವರು ಅದನ್ನು ಸರಿಪಡಿಸಿ ಸೂಚಿಸಿದ್ದರೆ, ಅದರ ವಿರುದ್ಧ ಕೂಡಾ ಕೋರ್ಟ್‌ಗೆ ಅಪೀಲು ಹೋಗಿರುವುದು ದುರದೃಷ್ಟಕರ ಎಂದರು.
ಧರಣಿಯ ಪ್ರಥಮ ದಿನ ಪದವು ಗ್ರಾಮ ಹಾಗೂ ಆಸುಪಾಸಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದು, ಧರಣಿಯ ಉಳಿದ 8ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಈ 8 ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುವುದಾಗಿ ಹೇಳಿದರು.
ಸಂಚಾಲಕ ಪ್ರಕಾಶ್ಚಂದ್ರ, ಕಾರ್ಯದರ್ಶಿ ವಿಶ್ವಜಿತ್, ಖಜಾಂಚಿ ರತ್ನಾಕರ ಶೆಟ್ಟಿ ಬೆಳುವಾಯಿ, ಪದಾಧಿಕಾರಿಗಳಾದ ಬೃಜೇಶ್ ಶೆಟ್ಟಿ ಮಿಜಾರ್, ಸಾಣೂರು ನರಸಿಂಹ ಕಾಮತ್ ಮುಂತಾದವರಿದ್ದರು.
ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ
ಧರಣಿಯ ಉದ್ಘಾಟನೆಗೂ ಮುನ್ನ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಗುರುಪುರ ಅಡೂxರು ಬಳಿ ಈಗಾಗಲೇ ಒಂದು ಸೇತುವೆ ಇದೆ. ಆ ಸೇತುವೆಯನ್ನು ಬಿಟ್ಟು ಮತ್ತೆ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಡೂxರಿನಿಂದ ಉಳಿಪಾಡಿವರೆಗೆ ಸುತ್ತುಬಳಸಿ ರಸ್ತೆ ಮಾಡಿರುವುದರಿಂದ ನಾಲ್ಕೈದು ಕಿ.ಮೀ. ಹೆಚ್ಚುವರಿ ರಸ್ತೆಯಾಗಿದೆ. ಇದರಿಂದ 125 ಕೋಟಿ ರೂ. ಹೆಚ್ಚುವರಿ ಜನರ ತೆರಿಗೆ ಹಣ ಬಳಕೆಯಾಗುತ್ತಿದೆ. ಕೆಲವೆಡೆ ಅನುಕೂಲಕ್ಕೆ ತಕ್ಕ ಹಾಗೆ ನಕ್ಷೆ ಬದಲಾವಣೆ ಮಾಡಲಾಗಿದೆ ಎಂದು ಬೆಳುವಾಯಿಯ ಜಯರಾಮ್ ಪೂಜಾರಿ ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತನ್ನ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಶತಾಯುಷಿ ಸೀತಾರಾಮ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.