Varalakshmi Vratam ಸರ್ವರಿಗೂ ಸೌಭಾಗ್ಯ ಕಲ್ಪಿಸುವ ವರಮಹಾಲಕ್ಷ್ಮೀ
Team Udayavani, Aug 25, 2023, 6:25 AM IST
ಸನಾತನ ಹಿಂದೂ ಧರ್ಮ ಎಲ್ಲರಿಗೂ ಅವರವರ ಸ್ವಭಾವ, ಸಾಮರ್ಥ್ಯಗಳಿಗೆ ಅನುಸಾರವಾದ ಆರಾಧನೆಯ ವ್ಯವಸ್ಥೆ ಗಳನ್ನು ನೀಡಿದೆ. ಯಜ್ಞ ಯಾಗ ತಪಸ್ಸುಗಳ ಕ್ಲಿಷ್ಟ ಮಾರ್ಗಗಳಿದ್ದಂತೆ, ಜನಸಾಮಾನ್ಯರು ತಮ್ಮ ವ್ಯಾವಹಾರಿಕ ಜೀವನದ ಜತೆಜತೆಯಲ್ಲಿ ಸುಲಭವಾಗಿ ನಡೆಸಬಹುದಾದ ವ್ರತಗಳನ್ನು ಶಾಸ್ತ್ರ ಪುರಾಣಗಳು ಬೋಧಿಸುತ್ತವೆ. ಈಗ ನಡೆಯುತ್ತಿರುವ ಶ್ರಾವಣ ಮಾಸವು ಸುಲಭವಾದ, ಸಾರ್ವತ್ರಿಕವಾದ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸಂಭ್ರಮ ನೀಡುವ ವ್ರತಗಳ ಪರ್ವಕಾಲ.
ವ್ರತ ಎಂದರೆ “ಆವೃಣೋತಿ ಕರ್ತಾರಂ’ ಎಂದು ದೇವತಾ ಕಾರ್ಯವನ್ನು ನಿಯಮ ನಿಷ್ಠೆಯಿಂದ ಮಾಡಿ ಅದರ ಪುಣ್ಯದ ರಕ್ಷಾಕವಚದಿಂದ ನಮ್ಮ ಜೀವನವನ್ನು ಸಂರಕ್ಷಿಸಿಕೊಳ್ಳುವುದು ಎಂದು ಅರ್ಥ. ವ್ರತಗಳ ಆಚರಣೆಯಿಂದ ನಮಗೆ ಇರುವ ಕಂಟಕಗಳು ದೂರವಾಗಿ ನಮ್ಮ ಇಷ್ಟಾರ್ಥಗಳು ಸಿದ್ಧಿಸುವುದು ತಾತ್ಕಾಲಿಕ ಫಲ. ವ್ರತಾಚರಣೆಗಳಿಂದ ನಮ್ಮ ತ್ರಿಕರಣಗಳು ಶುದ್ಧಿಯಾಗಿ ನಮ್ಮ ಜೀವನ ಯೋಗ್ಯತೆ ವೃದ್ಧಿಯಾಗುವುದು ಶಾಶ್ವತ ಫಲ. ಗೀತಾ ಭಾಷ್ಯಾದಲ್ಲಿ ಶ್ರೀಮನ್‌ಮಧ್ವಾಚಾರ್ಯರು ಹೇಳುವಂತೆ
“ಯಥಾ ದರ್ಶೋ ಮಲೇನಾವೃತಃ – ತಥಾ ಅಂತಃಕರಣಂ ಪರಮಾತ್ಮದೇಃ ವ್ಯಕ್ತಿಹೇತುರ್ನ ಭವತಿ’.
ಕನ್ನಡಿ ಕೊಳೆಯಾಗಿದ್ದರೆ ಪ್ರತಿಬಿಂಬ ಕಾಣದೇ ಹೋಗುವಂತೆ ಅಂತಃಕರಣ ಅಶುದ್ಧವಾಗಿದ್ದರೆ ದೇವರ ದರ್ಶನ ನಮಗೆ ಆಗುವುದಿಲ್ಲ. ವ್ರತಗಳ ಆಚರಣೆಯ ಸಮಯದಲ್ಲಿ ಸ್ನಾನ, ಆಹಾರ, ನಿಯಂತ್ರಣಗಳಿಂದ ದೇಹಶುದ್ಧಿ, ಹರಿನಾಮ, ಸಂಕೀರ್ತನೆಯಿಂದ ಮಾತಿನ ಶುದ್ಧಿ, ದೇವರ ಸ್ಮರಣೆ, “ಸರ್ವೇ ಜನಾಃ ಸುಖೀನೋ ಭವಂತು’ ಎಂಬ ಭಾವನೆಗಳಿಂದ ಮನಸ್ಸಿನ ಶುದ್ಧಿ ಸಾಧನೆಯಾಗಿ ದೇವರ ಇರುವು ನಮ್ಮಲ್ಲಿ ನಮಗೆ ಭಾಸವಾಗುತ್ತದೆ. ಜೀವನ ಇಡೀ ದೇವರಲ್ಲಿ ಮನಸ್ಸಿಟ್ಟಿರುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಶಾಸ್ತ್ರಗಳು ವ್ರತಗಳಿಗೆ ವಿಶೇಷ ದಿನಗಳಿಗಳನ್ನು ಸೂಚನೆ ಮಾಡಿರುತ್ತವೆ. ವರ್ಷದ ಆಯಾ ದಿವಸಗಳಲ್ಲಿ ಆ ದಿನಕ್ಕೆ ಹೊಂದುವ ದೇವತಾ ಸ್ವರೂಪಗಳನ್ನು ಆರಾಧನೆ ಮಾಡುವುದರಿಂದ ನಮಗೆ ಜೀವನದಲ್ಲಿ ಪರಿಪೂರ್ಣತೆಗೆ ಬೇಕಾದ ಸುವ್ಯವಸ್ಥೆ ನೆಲೆಯಾಗುತ್ತದೆ.
ಈಗಿನ ಶ್ರಾವಣ ಮಾಸದ ನಿಯಮಕವಾದ ಮಹಾವಿಷ್ಣುವಿನ ರೂಪಕ್ಕೆ ಶ್ರೀಧರ ಎಂದು ಹೆಸರು. ಶ್ರೀ ಎಂದರೆ ಮಹಾಲಕ್ಷ್ಮೀ. ಮಹಾಲಕ್ಷ್ಮೀಯನ್ನು ವಕ್ಷಃ ಸ್ಥಲದಲ್ಲಿ ಧರಿಸಿದ ನಾರಾಯಣ ದೇವರು ಎಂದರ್ಥ. ಈ ರೀತಿ ಮಹಾಲಕ್ಷ್ಮೀಯ ಹೆಸರನ್ನು ಒಳಗೊಂಡ ಶ್ರಾವಣಮಾಸ “ಚಾಂದ್ರೀ ಕಲಾ ಯಥಾ ಶುಕ್ಲೇ ವರ್ಧತೇ ಸಾ ದಿನೇ ದಿನೇ ‘ ಎಂದು ಶುಕ್ಲಪಕ್ಷದ ವೃದ್ಧಿ ಚಂದ್ರನ ರೂಪದಲ್ಲಿ ನಮ್ಮ ಮನೆಯಲ್ಲಿ ಲಕ್ಷ್ಮೀ ಕಟಾಕ್ಷ ವೃದ್ಧಿಸುತ್ತಿರಲಿ ಎಂಬ ಲಕ್ಷ್ಮೀ ಸ್ತೋತ್ರ ಇದೆ. ಶುಕ್ರವಾರ ಲಕ್ಷ್ಮೀ ದೇವಿ ನೆಲೆಯಾಗುವ ದಿನ ಎಂಬುದು ಪ್ರಸಿದ್ಧ ವಿಷಯ.
ಹೀಗೆ ಮಾಸ-ಪಕ್ಷ-ವಾರ ಮೂರರಲ್ಲೂ ಲಕ್ಷ್ಮೀ ನೆಲೆಯಾಗಿರುವ ಶ್ರಾವಣ ಶುಕ್ಲಪಕ್ಷದ ಎರಡು ಶುಕ್ರವಾರ ದಿನಗಳು ಸಂಪತ್ ಸಮೃದ್ಧಿಗೆ ಕಾರಣವಾಗುವ ಲಕ್ಷ್ಮೀ ಕಟಾಕ್ಷವನ್ನು ನೀಡುವ ವಿಶೇಷ ದಿನಗಳು. ಇವುಗಳಲ್ಲಿ ಮೊದಲ ಶುಕ್ರವಾರ ಸಂಪತ್ ಶುಕ್ರವಾರ ಎಂದೆನಿಸಿಕೊಳ್ಳುತ್ತದೆ. “ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯ ಭಾರ್ಗವೇ| ವರಲಕ್ಷ್ಮಾ$Â ವ್ರತಂ ಕಾರ್ಯಂ ಸರ್ವಮಾಂಗಲ್ಯ ಸಿದ್ಧಯೆ||’ ಎಂದು ಹೇಳಿರುವಂತೆ ಶುಕ್ಲಪಕ್ಷದ 2ನೇ ಶುಕ್ರವಾರ ಎಂದರೆ ಹುಣ್ಣಿಮೆಗೆ ಮುಂಚಿತವಾದ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ನಮ್ಮ ಕಾರ್ಯಗಳಿಗೆ ಜಯವನ್ನೂ, ಸೌಮಂಗಲ್ಯವನ್ನೂ ನೀಡುತ್ತದೆ.
ಎಲ್ಲ ದೇವತೆಗಳಿಗಿಂತ ಶ್ರೇಷ್ಠಗಳಾಗಿರುವುದರಿಂದ ಮತ್ತು ಎಲ್ಲ ವರಗಳನ್ನು ದಯಪಾಲಿಸುವುದರಿಂದ ವರಮಹಾಲಕ್ಷ್ಮೀ ಎಂಬುವುದು ಈ ದಿನದ ಲಕ್ಷ್ಮೀಯ ಆರಾಧನ ಸ್ವರೂಪವಾಗಿದೆ. ಲಕ್ಷ್ಮೀ ಎಂದರೆ ಹಣದ ರೂಪದ ಸಂಪತ್ತು ಮಾತ್ರ ಅಲ್ಲ- “ಜ್ಞಾನೈಶ್ವರ್ಯ ಸುಖಾರೋಗ್ಯಧನಧಾನ್ಯ ಜಯಾದಿಕಂ|’ ಜ್ಞಾನ,ಅಷ್ಟೆಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ ಜಯಶೀಲತೆಗಳನ್ನು ಸೇರಿ ಲಕ್ಷ್ಮೀ ಕಟಾಕ್ಷ ಎನಿಸಿಕೊಳ್ಳುತ್ತದೆ. ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮೀ, ಶೌರ್ಯಲಕ್ಷ್ಮೀ, ಕೀರ್ತಿಲಕ್ಷ್ಮೀ, ಸೌಮ್ಯಲಕ್ಷ್ಮೀ, ವಿಜಯಲಕ್ಷ್ಮೀ ಎಂದು ಅಷ್ಟಲಕ್ಷ್ಮೀ ರೂಪಗಳು ಆಗಮಗಳಲ್ಲಿ ಪ್ರಸಿದ್ಧವಾಗಿವೆ.
ತುಳಸಿಕಟ್ಟೆಯಲ್ಲಿ, ಮನೆಯ ದ್ವಾರದಲ್ಲಿ, ಉಗ್ರಾಣದಲ್ಲಿ, ಜಲಾಶಯದಲ್ಲಿ ಇತ್ಯಾದಿ ಎಲ್ಲ ಕಡೆಗಳಲ್ಲಿ ಲಕ್ಷ್ಮೀಯ ಸಾನಿಧ್ಯ ಮನೆಯ ಸ್ತ್ರೀಯರ ನಿತ್ಯ ನೈಮಿತ್ತಿಕ ಆಚರಣೆ ಪೂಜೆಗಳಿಂದ ಉಂಟಾಗುತ್ತದೆ. ಹಾಗಾಗಿ ಮನೆಯ ಸ್ತ್ರೀಯರು ಗೃಹಲಕ್ಷ್ಮೀ ಎನಿಸಿಕೊಳ್ಳುತ್ತಾರೆ. ಮನೆ-ಮನಗಳ ಸಂಸ್ಕೃತಿ ಉಳಿಯಲು, ಬೆಳೆಯಲು ಕೂಡ ಸದಾಚಾರ ಸಂಪನ್ನೆಯಾದ ಗೃಹಲಕ್ಷ್ಮೀಯೇ ಕಾರಣ. ಗೃಹಲಕ್ಷ್ಮೀಯರು ಪರಿವಾರ ಸಮೇತರಾಗಿ ವರಮಹಾಲಕ್ಷ್ಮೀ ವೃತ ಮತ್ತು ಅದರ ಅಂಗವಾದ ಪೂಜಾದಿಗಳನ್ನು ನಡೆಸುವುದರಿಂದ, ಪಾಲ್ಗೊಳ್ಳುವುದರಿಂದ ಸೌಮಂಗಲ್ಯ, ಸೌಭಾಗ್ಯಗಳು ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತದೆ ಎಂದು ಭವಿಷ್ಯೋತ್ತರ ಪುರಾಣ ನಿರೂಪಿಸುತ್ತದೆ.
ತೀರ್ಥ ಸಂಗ್ರಹ, ಕಲಶ-ವಿಗ್ರಹಾದಿಗಳಲ್ಲಿ ಆವಾಹನೆ, ಹದಿನಾರು ಉಪಚಾರಗಳ ಪೂಜೆ, ಒಂಬತ್ತು ಅಥವಾ ಹನ್ನೆರಡು ಗ್ರಂಥಿಗಳುಳ್ಳ ನವದೋರ ಸ್ಥಾಪನೆ, ಪಾಯಸ, ಅಪೂಪಾದಿ ನೈವೇದ್ಯ, ಮಂಗಳಾರತಿಗಳು ಪೂಜೆಯ ಮುಖ್ಯ ಅಂಗಗಳು.
ವರಮಹಾಲಕ್ಷ್ಮೀಯ ದ್ವಾದಶನಾಮಗಳು: ಶ್ರೀದೇವಿ, ಅಮೃತೋದ್ಭವಾ, ಕಮಲಾ, ಚಂದ್ರಲೋಚನಾ, ವಿಷ್ಣುಪತ್ನಿ, ಶ್ರೀ ವೈಷ್ಣವೀ, ವರಾರೋಹ, ಹರಿವಲ್ಲಭಾ, ಶಾರ್ಗಿಣೀ, ದೇವದೇವಿಕಾ, ಮಹಾಲಕ್ಷ್ಮೀ ಮತ್ತು ಲೋಕಸುಂದರೀ.
ಪೂಜಾನಂತರ ದೇವಿಗೆ, ಮುತ್ತೈದೆಯರಿಗೆ ದೋರದಾನ, ವಾಯನದಾನ ಇತ್ಯಾದಿಗಳನ್ನು ನೀಡಿ ಪ್ರಸಾದ ರೂಪದಲ್ಲಿ ಲಕ್ಷ್ಮೀ ಸಾನಿಧ್ಯವಿರುವ ದಾರವನ್ನು ಪೂರ್ವಾಭಿಮುಖಗಳಾಗಿ ಪತಿಯಿಂದ ಕಟ್ಟಿಸಿಕೊಳ್ಳಬೇಕು. ಜೀರ್ಣದೋರವನ್ನು ವಿಸರ್ಜಿಸಿ ಪ್ರಸಾದ ದಾರವನ್ನು ಮುಂದಿನ ವರ್ಷದವರೆಗೆ ರಕ್ಷಿಸಿಕೊಳ್ಳಬೇಕು.
ಮುಖದಲ್ಲಿ ಭಾಗ್ಯಲಕ್ಷ್ಮೀ, ಕರದಲ್ಲಿ ಧಾನ್ಯಲಕ್ಷ್ಮೀ, ತೋಳಿನಲ್ಲಿ ವೀರಲಕ್ಷ್ಮೀ, ಹೃದಯದಲ್ಲಿ ಕಾರುಣ್ಯಲಕ್ಷ್ಮೀ, ಬುದ್ಧಿಯಲ್ಲಿ ಧೈರ್ಯಲಕ್ಷ್ಮೀ, ಗುಣದಲ್ಲಿ ಕೀರ್ತಿಲಕ್ಷ್ಮೀ, ಸರ್ವಾಂಗಗಳಲ್ಲಿ ಸೌಮ್ಯಲಕ್ಷ್ಮೀ ಸದಾಕಾಲ ನೆಲೆಯಾಗಿರಲಿ ಎಂದು ವರಮಹಾಲಕ್ಷ್ಮೀಯನ್ನು ಪ್ರಾರ್ಥಿಸೋಣ.
ವಿದ್ವಾನ್ ಕಲ್ಯ ಅಶೋಕ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.