Garden ಬೇಸಗೆಯ ಖುಷಿ ಹಸುರ ಬೆಳೆಯಲ್ಲಿ; ಇಂಗ್ಲೆಂಡಿನಲ್ಲೊಂದು ಕೈ ತೋಟವ ಮಾಡಿ….
Team Udayavani, Aug 27, 2023, 8:42 PM IST
ಪ್ರಪಂಚ ಪರ್ಯಟನೆ ಮಾಡಿದ ಯಾರನ್ನಾದರೂ “ಮಬ್ಬುಗತ್ತಲಿನ ಯಾವುದಾದರೂ ಪ್ರಸಿದ್ಧ ದೇಶವೊಂದನ್ನು ಹೆಸರಿಸಿ’ ಎಂದು ಕೇಳಿದರೆ, “ಇಂಗ್ಲೆಂಡ್’ ಎಂದು ಸುಲಭವಾಗಿ ಉತ್ತರಿಸುತ್ತಾರೆ. ಹಾಲಿವುಡ್‌ನ ಹಲವು ಸಿನೆಮಾಗಳಲ್ಲಿ ಇಲ್ಲಿನ ಮಬ್ಬು ಕವಿದ, ಆರೆ ಬೆಳಕಿನ ವಾತಾವರಣವನ್ನು ಗೇಲಿಮಾಡುವ ಸಂಭಾಷಣೆಗಳಿವೆ.
ಇಲ್ಲಿನ ಹವಾಮಾನ ಬಹಳ ಚಂಚಲ. ದಿನವೊಂದಕ್ಕೆ ಹತ್ತು ಬಾರಿ ಮನಸ್ಸು ಬದಲಾಯಿಸಿ, ಮಳೆ-ಗಾಳಿ-ಚಳಿ- ಬಿಸಿಲು-ಹಿಮ ಮತ್ತು ಇವುಗಳ ವಿವಿಧ ಸಂಯೋಜನೆಗಳಲ್ಲಿ ಕುಣಿಯುತ್ತ ರೂಪು ಬದಲಾಯಿಸಿ ಮೆರೆಯುತ್ತಿರುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಪ್ರಪಂಚದ ಹವಾಮಾನದಲ್ಲಿನ ಏರು-ಪೇರುಗಳು ಹೆಚ್ಚಾಗುತ್ತಿವೆ. ಅದೇ ರೀತಿ ಇಂಗ್ಲೆಂಡಿನಲ್ಲು ಹವಾಮಾನದಲ್ಲಿನ ವೈಪರೀತ್ಯಗಳು ಕೂಡ ಹೆಚ್ಚಾಗುತ್ತಿವೆ. ಕಳೆದ ವರ್ಷ ಬೇಸಗೆಯಲ್ಲಿ ವಿಪರೀತವಾದ ಉರಿ ಬಿಸಿಲು ಕಾಣಿಸಿಕೊಂಡಿತು. ನಾನಿರುವ ಲಿಂಕನ್ ಎನ್ನುವ ಪಟ್ಟಣದಲ್ಲಿ ಇಡೀ ದೇಶದಲ್ಲೇ ಅತ್ಯಧಿಕ ತಾಪಮಾನ ದಾಖಲಾಯಿತು. 41 ಡಿಗ್ರಿ ಬಿಸಿಲಾದ ಕಾರಣ ರಸ್ತೆಯ ಮೇಲಿನ ಟಾರು ಕರಗಿತು, ಕಬ್ಬಿಣ ಕಾದು ಕರಗಿದ ಕಾರಣ ರೈಲ್ವೇ ಕಂಬಿಯ ಕೀಲುಗಳು ಹಿಗ್ಗಿದವು. ಹಲವು ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಯಿತು. ಕೆಲವು ಕಡೆ ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಯಿತು.
ಇಂತಹ ಒಂದು ಪರಿಸ್ಥಿತಿಯನ್ನು ಎದುರಿಸುತ್ತೇವೆ ಎಂದು ಹಿಮಯುಗದಿಂದ ಹೊಮ್ಮಿರುವ ಈ ದೇಶದ ಯಾರೂ ಊಹಿಸಿರಲಾರರು. ಹಾಗಾಗಿ ಇಲ್ಲಿನ ಅಭಿಯಂತರುಗಳು ಇಂತಹ ತಾಪಮಾನಕ್ಕೆ ಹೊಂದುವಂತೆ ಕಟ್ಟಡಗಳನ್ನಾಗಲೀ ಅಥವಾ ಇತರೆ ಸೌಕರ್ಯಗಳನ್ನಾಗಲೀ ನಿರ್ಮಿಸಿಲ್ಲ. ಅವರ ಮೂಲ ಪ್ಲಾನಿಂಗ್‌ನಲ್ಲಿ ಮುಂದೆ ಬದಲಾಗಬಹುದಾದ ತಾಪಮಾನಕ್ಕೆ ಬೇಕಾದಷ್ಟು ಜಾಗ ಕಲ್ಪಿಸಿದ್ದರೂ, ಅವರ ಯೋಜನೆಗಳು ತಲೆಕೆಳಗಾಗುವಂತೆ ಹವಾಮಾನ ವೈಪರೀತ್ಯಗಳು ಪ್ರತೀವರ್ಷ ಹೆಚ್ಚುತ್ತಿವೆ. ಗ್ಲೋಬಲ್ ವಾರ್ಮಿಂಗ್ ಪರಿಣಾಮದ ಕಾರಣ ಋತುಗಳು ಅನಿಯಮಿತವಾಗಿ ವರ್ತಿಸುತ್ತಿವೆ.
ಇಂಗ್ಲೆಂಡ್‌ನ ಹವಾಮಾನ ಈ ವರ್ಷವೂ ಜನರಿಗೆ ಚಳ್ಳೆ ಹಣ್ಣು ತಿನ್ನಿಸಿತು. ಬರ್ಬರ ಚಳಿಗಾಲ ಮುಗಿಸಿ ಬೇಸಗೆಯ ಬಿಸಿಲಿಗಾಗಿ ಜನರು ತವಕದಿಂದ ಕಾಯುತ್ತಿರುವಾಗಲೇ, ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ನಾವು ನೋಡಿದ್ದು ಬರೇ ಮಳೆ ಮತ್ತು ಮೋಡಕವಿದ ವಾತಾವರಣ.
***
ಬೇಸಗೆಯ ಬೆಚ್ಚಗಿನ ಬಿಸಿಲಿಗಾಗಿ ಇಲ್ಲಿನ ಜನರು ಹಪಹಪಿಸುತ್ತಾರೆ. ಅಲ್ಪ-ಸ್ವಲ್ಪ ಬಿಸಿಲಿರುವ ಬೇಸಗೆಯ ತಿಂಗಳುಗಳಲ್ಲಿ ಮನೆಯ ಸುತ್ತಲಿನ ನೆಲದಲ್ಲಿ ತೋಟ ಮಾಡುವುದು ಇಲ್ಲಿನ ಜನರ ಒಂದು ಮುಖ್ಯ ಚಟುವಟಿಕೆ. ಪ್ರತೀ ಮನೆಯ ಮುಂದಿರುವ ಚಂದದ ಕೈ ತೋಟವನ್ನು ನೋಡುವುದು ಬಹಳ ಆನಂದದ ವಿಚಾರ. ಒಬ್ಬರ ಮೇಲೆ ಇನ್ನೊಬ್ಬರು ಪೈಪೋಟಿ ಮಾಡುತ್ತಿರುವಂತೆ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿಕೊಂಡಿರುತ್ತಾರೆ.
ಕೈ ತೋಟದ ಕೆಲಸದಲ್ಲಿ ಬೇಸಗೆಯ ಬಿಸಿಲು ಕಾಯಿಸುತ್ತ, ಹೂವು-ತರಕಾರಿಗಳನ್ನು ಬೆಳೆದು ಸಂತೋಷ ಪಡುವುದು ದೇಶದಾದ್ಯಂತ ನಡೆವ ಬೇಸಗೆಯ ಚಟುವಟಿಕೆ. ಇನ್ನು ಬಿಸಿಲ ದೇಶಗಳಿಂದ ಬಂದಿರುವ ನಾವೇನು ಕಡಿಮೆ? “ಊರಿಗೆ ಬಂದ ಮೇಲೆ ನೀರಿಗೆ ಬಾರದಿರಲು ಸಾಧ್ಯವೇ’ ಎನ್ನುವಂತೆ ಇಲ್ಲಿ ನೆಲೆಸಿರುವ ಭಾರತೀಯರಲ್ಲಿಯೂ ಗಾರ್ಡನಿಂಗ್ ಹವ್ಯಾಸ ತಾನಾಗಿ ಬೆಳೆದುಬಿಡುತ್ತದೆ.
ಸದಾ ವೈದ್ಯಕೀಯ ವೃತ್ತಿಯ ಜಂಜಡಗಳಲ್ಲೇ ಕಾಲ ಕಳೆಯುತ್ತಿದ್ದ ನಾವು ಲಾಕ್ ಡೌನ್‌ನ ಸಮಯದಲ್ಲಿ ಈ ಗಾರ್ಡನಿಂಗ್ ಎನ್ನುವ ಆಹ್ಲಾದಕರ ಚಟುವಟಿಕೆಯಲ್ಲಿ ಮನಸ್ಸನ್ನು ತೊಡಗಿಸಿಕೊಂಡುಬಿಟ್ಟೆವು.ಅದಕ್ಕಾಗಿ ಹಲವಾರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮನೆಯ ಸುತ್ತಲ ತೋಟಕ್ಕೆ ಹೊಸ ಮಣ್ಣು, ಗೊಬ್ಬರ ಹೊಡೆಸಿ, ಪಾತಿಗಳನ್ನು ನಿರ್ಮಿಸಿ ಫ್ಲವರ್ ಬೆಡ್ ಮಾಡಿಕೊಂಡೆವು. ಹೂ-ತರಕಾರಿಗಳ ಬೀಜಗಳನ್ನು ಕೊಂಡು ತಂದೆವು. ಭಾರತ, ಯೂರೋಪ್ ಮತ್ತು ಇಂಗ್ಲೆಂಡಿನ ಹಲವು ತಳಿಯ ಬೀಜ, ಗಡ್ಡೆ, ಗಿಡ ಮತ್ತು ಮರಗಳನ್ನು ನೆಟ್ಟೆವು. ಅನಂತರ “ಇಲಿಯನ್ನು ಓಡಿಸಲು ಬೆಕ್ಕನ್ನು ಕೊಂಡು ತಂದ ಸನ್ಯಾಸಿಯ ಕಥೆ’ಯೇ ನಮ್ಮದೂ ಆಯಿತು.
ಹುಲ್ಲು ಕತ್ತರಿಸಲು ಹಲವು ಮೆಷಿನು, ಸಾಧನಗಳು ಬಂದವು. ಪಾತಿಯ ಅರುಗನ್ನು ಕೆತ್ತಲು ಇನ್ನಷ್ಟು ಆಯುಧಗಳು, ಕತ್ತರಿಸಿದ್ದನ್ನು ಬಾಚಲು, ಗುಡಿಸಲು, ಎತ್ತಲು ಹಲವು ಸಲಕರಣೆಗಳನ್ನು ಕೊಂಡೆವು. ಗಾರ್ಡನ್ ವೇಸ್ಟ್ ಎತ್ತಲು ಕೌನ್ಸಿಲ್‌ನವರಿಗೆ ಹೆಚ್ಚಿನ ದುಡ್ಡು ಕೊಟ್ಟೆವು. ಗಿಡ ಮರಗಳಿಗೆ ಆಧಾರ ನೀಡಲು ಬೊಂಬಿನ ಕಟ್ಟಿಗೆಗಳು, ದಾರಗಳು, ಪಕ್ಷಿಗಳನ್ನು ದೂರವಿಡಲು ಪರದೆಗಳು, ಹಲವು ಬಗೆಯ ಕೀಟ ನಾಶಕಗಳನ್ನು ತಂದು ಬಳಸಲಾರಂಭಿಸಿದೆವು. ಇವನ್ನೆಲ್ಲ ಇಡಲು ಗಾರ್ಡನ್ ಶೆಡ್ ಕೂಡ ಬಂದು ಕಾಂಪೌಂಡಿನ ಮೂಲೆಯನ್ನು ಆಕ್ರಮಿಸಿಕೊಂಡಿತು. ಈ ಹಚ್ಚ ಹಸುರಿನ ನಡುವೆ ಕೂತು ನಗಲು ಬುದ್ಧನ ವಿಗ್ರಹ, ಅದರ ಮುಂದೆ ಆಡಲು ಅಳಿಲು, ಮೊಲಗಳು ಶಿಲೆಗಳು ಬಂದವು. ಉದ್ಯಾನವನವನ್ನೇ ನಿರ್ಮಿಸಿದ ಮೇಲೆ, ಅಲ್ಲಿಗೆ ಬರುವ ಅತಿಥಿಗಳನ್ನು ಸತ್ಕರಿಸುವುದು ಬೇಡವೇ?
ಹಕ್ಕಿಗಳಿಗಾಗಿ ಬರ್ಡ್ ಬಾತ್ ಬಂದಿತು, ಅವುಗಳು ಬಂದಾಗ ಕಾಳನ್ನು ತಿನ್ನಲು ಬರ್ಡ್ ಫೀಡರ್ ಇತ್ಯಾದಿಗಳು ನಮ್ಮ ಕೈತೋಟ ಸೇರಿದವು. ಚಿಟ್ಟೆ, ಜೇನ್ನೊಣಗಳು ಆಕರ್ಷಿತವಾಗಲಿ ಎಂದು ವೈವಿಧ್ಯಮಯ ಹೂಗಳ ಬೀಜಗಳನ್ನು ತಂದು ಚೆಲ್ಲಿದೆವು. ಆದರೆ ಕರೆಯದೇ ಬರುವ ಅಭ್ಯಾಗತರೂ ಇರುತ್ತಾರಲ್ಲ? ಅವರಿಗಾಗಿ ಕೀಟನಾಶಕ, ಫಂಗಸ್ ನಾಶಕ, ನುಸಿ ನಾಶಕಗಳನ್ನೂ ಕೊಂಡು ತಂದೆವು. ಅಲ್ಲಿಂದ ಮುಂದಕ್ಕೆ “ಸದಾಶಿವನಿಗೆ ಅದೇ ಧ್ಯಾನ’ ಎನ್ನುವಂತೆ ತೋಟದಲ್ಲಿ ಕೈಯಾಡಿಸಿಕೊಂಡಿರುವುದೇ ನಮ್ಮ ಎರಡನೇ ಮುಖ್ಯ ಕಸುಬಾಗಿ ಹೋಗಿದೆ.
ಇದುವರೆಗೆ ತಣ್ಣಗಿದ್ದ ಈ ವರ್ಷ, ನಾವು ಟೊಂಕ ಕಟ್ಟಿದಂತೆಲ್ಲ ಕಳೆಗಳು ಮರಳಿ ಮರಳಿ ಹುಟ್ಟುತ್ತ ನಮ್ಮ ಸಹನೆಯನ್ನು ಅಳೆದರೆ, ಪ್ರೀತಿಯಿಂದ ತಂದು ನೆಟ್ಟ ಗಿಡಗಳು ಸೊರಟಿ-ಮುರಟಿ ನಮ್ಮ ಆತಂಕವನ್ನು ಹೆಚ್ಚಿಸಿದವು. ಇನ್ನು ಬೀಜಗಳು, ಹುಟ್ಟಲೋ ಬೇಡವೋ ಎಂದು ಹೊರಗಿಣುಕುವ ವೇಳೆಗೆ ಇಲ್ಲಿನ ಹವಾಮಾನವೂ ಕೆಟ್ಟುಹೋಯಿತು.
“ನಮಗೆ ನಮ್ಮದೇ ಆದ ಮನಸ್ಸಿದೆ’ ಎನ್ನುವಂತೆ ಇಂಗ್ಲೆಂಡಿನ ಈ ವರ್ಷದ ಬೇಸಗೆಯ ಹವಾಮಾನ ಅತೀ ಮುನಿಸಿನಿಂದ ವರ್ತಿಸಿ “ಮೋಡಕವಿದ ವಾತಾವರಣ’ ಎನ್ನುವ ವಿವರಗಳಿಂದಲೇ ಹೆಚ್ಚು ವರ್ಣನೆಗೊಳಪಟ್ಟಿತು. ಈ ಕಾರಣ ಕೈ-ತೋಟದ ಕೆಲಸವೂ ಅರೆಬರೆ ನಡೆಯಿತು ಎನ್ನಬಹುದು.
ಶೀತದ ವಾತಾವರಣ, ಸತತ ಜಡಿಮಳೆ, ಕಣ್ಣಾ-ಮುಚ್ಚಾಲೆಯಾಡಿದ ಸೂರ್ಯನ ಕಾರಣ, ಈ ವರ್ಷ ಕೆಲವು ಹೂ -ಗಿಡಗಳು ಸಂಪೂರ್ಣ ಬೆಳೆಯದೇ ಹೋದವು. ಆದರೆ ತಮ್ಮ ಕೆಲಸವನ್ನು ಪೂರ್ಣಗೊಳಿಸಲು, ಅವಧಿಗಿಂತ ಮೊದಲೇ ಮರುಸಂತಾನೋತ್ಪತ್ತಿ ನಡೆಸಲು ಸೆಣಸಿ, ಹೀಚು ಹೂ-ಕಾಯಿಗಳಾದವು.
“ಛಲ ಬಿಡದ ತಿವಿಕ್ರಮರಂತೆ’ ನಾವೂ ಹೋರಾಡಿದೆವು. ಹಾಗೂ, ಹೀಗೂ ನಮ್ಮ ಕೈ ತೋಟದಲ್ಲಿ ಡ್ಯಾಫೋಡಿಲ್ಲುಗಳು, ಟ್ಯೂಲಿಪ್‌ಗ್ಳು, ಪಿಯೋನಿ, ಗ್ಲಾಡಿಯೋಲಸ್, ಗುಲಾಬಿಗಳು ನಗಲಾರಂಭಿಸಿದಾಗ ನಮ್ಮ ಮುಖದಲ್ಲೂ ಕಳೆ ( ಹೊಳೆಯುವ ಬೇರೆ ರೀತಿಯದ್ದು) ತುಂಬಿಕೊಂಡಿತು. ಸೂರ್ಯಕಾಂತಿಗಳು, ಡೇರೆಗಳು, ಸೇವಂತಿಗೆ, ಮಲ್ಲಿಗೆಗಳು ಅರಳಿದಾಗ ಭಾರತದ ನೆನಪುಗಳ ಸುರಿಮಳೆಯಾಯಿತು. ಮನಸ್ಸಿಗೆ ಹಿತವೆನಿಸಿತು.
ಹುಟ್ಟಿತು, ಬೆಳೆಯಿತು, ಮೊಗ್ಗು ಹಾಕಿತು, ಹೂ ಅರಳಿತು, ಕಾಯಾಯಿತು ಎಂದು ದಿನವೂ ಕಾದ ರನ್ನì ಬೀನ್ಸ್, ಫ್ರೆಂಚ್ ಬೀನ್ಸ್, ಈರುಳ್ಳಿ, ಆಲೂಗಡ್ಡೆ, ಬದನೇಕಾಯಿ, ಟೊಮೇಟೊ ( ರಫ್ತು ಮಾಡುವಷ್ಟಲ್ಲ) ಬಟಾಣಿಗಳು, ಪಾಲಕ್, ಮೆಂತ್ಯೆ ಇನ್ನಿತರ ತರಕಾರಿಗಳು, ಪುದಿನ, ಕೊತ್ತಂಬರಿ, ಸಬ್ಟಾಕ್ಷಿಗಳು ಹಸುರಾಗಿ ಎಲೆಯೊಡೆದಂತೆಲ್ಲ ನಮ್ಮ ಬಯಕೆಗಳೂ ತೃಪ್ತವಾದವು. ಪುಟ್ಟ ಮರಗಳಲ್ಲಿ ಸೇಬುಗಳು ಕೆಂಪಿಟ್ಟವು.
ಇಷ್ಟೆಲ್ಲ ಮಾಡಿ ಭಾರತಕ್ಕೆ ಫೋಟೋಗಳನ್ನು ಕಳಿಸಿದರೆ, ಅಯ್ಯೋ ಈಗ ಮೆಂತ್ಯೆ ಸೊಪ್ಪು ಕಂತೆಗೆ ಬರೇ ಹತ್ತು ರೂಪಾಯಿ ಅಂತಲೋ ಅಥವಾ ಹುರಳಿಕಾಯಿ ಒಂದಿಡೀ ತೂಕಕ್ಕೆ ನೂರು ರೂಪಾಯಿ ಅಂತಲೋ ಅಮ್ಮ ಹೇಳಿದಾಗ, ಪೌಂಡುಗಳಲ್ಲಿ ಖರ್ಚು ಮಾಡಿ ಕಾಯಿ-ಪಲ್ಲೆ ಬೆಳೆದ ನಮ್ಮ ಮುಖಗಳು ಕಪ್ಪಿಟ್ಟಿವೆ.
***
ಮನೆಯ ತೋಟದಲ್ಲಿ ಬೆಳೆದು ತಿನ್ನುವ ವಿಚಾರದಲ್ಲಿ ನಾವು ಗಣಿತವನ್ನು ತರುವಂತೆಯೇ ಇಲ್ಲ. ಇಲ್ಲಿನ ಚಂಚಲ ಹವಾಮಾನದಲ್ಲಿ ನಾವು ತೋಟಕ್ಕಾಗಿ ಖರ್ಚುಮಾಡಿ, ಮೈ ಬಗ್ಗಿಸಿ ದುಡಿದು ಮಾಸಿಕವಾಗಿ ಖುಷಿಯನ್ನು ಅನುಭವಿಸಿದಷ್ಟು, ಭೌತಿಕವಾಗಿ ಖುಷಿಪಡಲು ಕೆಲವು ಬಾರಿ ಸಾಧ್ಯವಾಗುವುದಿಲ್ಲ. ನಮ್ಮ ಬೆವರಿನ ಲೆಕ್ಕಕ್ಕೆ ತಕ್ಕನಾದ ಇಳುವರಿಯನ್ನು ಕಾಣುವುದು ನಮ್ಮ ಉದ್ದೇಶವೂ ಅಲ್ಲ. ತೋಟಮಾಡುವ ಕೆಲಸ ತರುವ ತೃಪ್ತಿ, ಗಿಡಗಳೊಡನೆ ಕಳೆಯುವ ಸಮಯ, ಬೆಳೆದ ಹೂಗಳನ್ನು ನೋಡುವ ಉಲ್ಲಾಸ, ನಮ್ಮದೇ ಬೆಳೆ ಎಂದು ತಿನ್ನುವ ಅಲ್ಪ-ಸ್ವಲ್ಪ ತರಕಾರಿಗಳು ಕೊಡುವ ಆನಂದಕ್ಕಾಗಿ ತೊಡಗಿಲೊಳ್ಳುತ್ತೇವಷ್ಟೆ. ಕೆಲವೊಂದು ವಿಧದ ಗಿಡಗಳನ್ನು ಬೆಳೆಸಲು ಅದಕ್ಕಾಗಿ ಗ್ರೀನ್ ಹೌಸ್, ಕನ್ಸರ್ವೇಟರಿ ಇತ್ಯಾದಿಗಳನ್ನು ಕಟ್ಟುವವರೂ ಇದ್ದಾರೆ.
ಇಲ್ಲಿಯ ಹವಾಮಾನಕ್ಕೆ ಒಗ್ಗಿರುವ ಕೆಲವೊಂದು ಹೂ-ಕಾಯಿ-ಪಲ್ಲೆಗಳು ಇಂತಹ ಚಂಚಲ ಹವಾಮಾನದಲ್ಲೂ ಬಹಳ ಚೆನ್ನಾಗಿ ಬೆಳೆಯುತ್ತವೆ. ಆದರೆ ಭಾರತದ ಮೂಲದ ನಮಗೆ ಭಾರತದಲ್ಲಿ ಬೆಳೆಯುವ ಹೂ-ತರಕಾರಿಗಳನ್ನು ಬೆಳೆಸುವ ಹಂಬಲವೇ ಜಾಸ್ತಿ. ಕುಂಡದಲ್ಲಾದರೂ ಸರಿ, ಎರಡೆಸಳು ಕರಿಬೇವು ಬೆಳೆದವರದ್ದೇ ಹೆಚ್ಚುಗಾರಿಕೆ. ಕಂದಮ್ಮನನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಿ, ಹೀಟಿಂಗ್ ಉರಿಸಿ, ಹಣ್ಣು ಬಿಡದ ಒಂದು ಬಾಳೆಯ ಕಂದನ್ನು ಕುಂಡವೊಂದರಲ್ಲಿ ಕಾಪಾಡಿಕೊಂಡವರದ್ದೇ ಪ್ರತಿಷ್ಠೆಯ ಮಾತು. ಇಂತವರು ಪ್ರವಾಸ ಹೋಗಬೇಕೆಂದರೆ ಅದನ್ನು ಸ್ನೇಹಿತರ ಮನೆಯಲ್ಲಿ ಬಿಟ್ಟು, ಬಾಳೆ ಕಂದನ್ನು (ಕಂದಮ್ಮನಂತೆ) ಜೋಪಾನವಾಗಿ ನೋಡಿಕೊಳ್ಳಲು ಹೇಳಿ ಹೋಗುವುದೂ ಉಂಟು!
ಹೀಗಿದ್ದೂ ಇಲ್ಲಿನ ಪ್ರತೀ ಮನೆಯಲ್ಲಿ ಈ ತೋಟಗಾರಿಕೆಯ ಹುಚ್ಚಿದೆ. ವರ್ಷದಲ್ಲಿ ಕೆಲವೇ ಕೆಲವು ತಿಂಗಳ ಕಾಲ ಮನಸ್ಸಿಲ್ಲದ ಅತಿಥಿಯಂತೆ ಆಗಮಿಸುವ ಬೇಸಗೆಯನ್ನೇ ರಮಿಸಿ, ಹಬ್ಬದಂತೆ ಆಚರಿಸಿ, ಒಂದಿಷ್ಟು ತೋಟ ಮಾಡಿ, ಇನ್ನುಳಿದ ಆರು ತಿಂಗಳ ಕಾಲ ಅದನ್ನೇ ಮಾತಾಡಿ ಸಮಯ ಕಳೆಯುತ್ತೇವೆ ಎಂದರೂ ತಪ್ಪಾಗಲಾರದು. ಇನ್ನು ಯಾವುದೋ ವರ್ಷದಲ್ಲಿ ಸುಗ್ಗಿಯಾದ ಬೆಳೆಗಳ ಬಗ್ಗೆ ಮಾತಾಡುತ್ತ ಇಡೀ ಜೀವನವನ್ನೇ ಕಳೆಯುವವರಿ¨ªಾರೆ. ಬೇಸಗೆ ಬಂತೆಂದರೆ, ಕೈ ತೋಟದ ಫೋಟೋಗಳದ್ದೇ ಭರಾಟೆ.ಇಂತಿರ್ಪ ನಮ್ಮ ತೋಟಗಾರಿಕೆಯ ಹವ್ಯಾಸ ಅಥವಾ ಬೇಸಗೆ ಚಟುವಟಿಕೆ, ಪ್ರತಿವರ್ಷವೂ ಭಿನ್ನ ಅನುಭವವಾಗುತ್ತದೆ.
-ಡಾ| ಪ್ರೇಮಲತಾ ಬಿ.,
ಲಿಂಕನ್, ಯುಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.