S.T Somashekhar: ಸಮಸ್ಯೆ ಇರುವುದೂ ಸತ್ಯ, ಅಸಮಾಧಾನವೂ ನಿಜ
"ಉದಯವಾಣಿ" ಯೊಂದಿಗೆ ಮನಬಿಚ್ಚಿ ಮಾತನಾಡಿರುವ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್
Team Udayavani, Aug 30, 2023, 1:01 AM IST
ರಾಜ್ಯ ರಾಜಕೀಯದ ಹೊಯ್ದಾಟದಲ್ಲಿ “ಹಸ್ತಾಂತರ’ ಭಾರೀ ಸದ್ದು ಮಾಡುತ್ತಲೇ ಇದೆ. ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಟಾರ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಬಹಿರಂಗ ಚರ್ಚೆಗಳೂ ನಡೆಯುತ್ತಿವೆ. ಇನ್ನೇನು ಪಕ್ಷ ಬಿಟ್ಟೇ ಬಿಡುತ್ತಾರೆ, ಅನ್ಯ ಪಕ್ಷದ ಪಾಲಾಗುತ್ತಾರೆ ಎಂಬಂತೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಬಗ್ಗೆ “ಉದಯವಾಣಿ’ ಪತ್ರಿಕೆಯೊಂದಿಗೆ ಮನಬಿಚ್ಚಿ ಮಾತನಾಡಿರುವ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರು, ಪಕ್ಷದೊಳಗೆ ಸಮಸ್ಯೆಗಳಿರುವುದು ನಿಜ. ನನಗೆ ಅಸಮಾಧಾನಗಳಿರುವುದೂ ಸತ್ಯ. ಪರಿಸ್ಥಿತಿ ತಿಳಿಯಾಗಬೇಕೆಂಬುದಷ್ಟೇ ನನ್ನ ಆಶಯ. ಪಕ್ಷ ಬಿಡುವುದಾಗಲೀ, ಕಾಂಗ್ರೆಸ್ ಸೇರುವುದಾಗಲೀ ನನ್ನ ಉದ್ದೇಶವಲ್ಲ. ಸ್ಥಳೀಯವಾಗಿ ನನ್ನ ವಿರುದ್ಧ ಇರುವವರನ್ನೂ ನಮ್ಮ ಸಮ್ಮುಖದಲ್ಲಿಯೇ ಕರೆದು ಕೂರಿಸಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವುದು ಸೂಕ್ತ. ಉಳಿದದ್ದು ಪಕ್ಷದ ನಾಯಕರಿಗೆ ಬಿಟ್ಟದ್ದು ಎಂಬುದನ್ನು ಸ್ಪಷ್ಟನುಡಿಗಳಲ್ಲಿ ಹೇಳಿದ್ದಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಮೊದಲಿಗೆ ತಾವು ಕಾಂಗ್ರೆಸ್ ತೊರೆದದ್ದು ಏಕೆ?
ನಾವು 78 ಶಾಸಕರಿದ್ದೆವು.ವಿಪಕ್ಷದ ಸ್ಥಾನದಲ್ಲಿ ಕೂರಬೇಕಿತ್ತು. ಹೀಗಾಗಿ 37 ಸ್ಥಾನವಿದ್ದ ಜೆಡಿಎಸ್‌ಗೆ ಸಹಕಾರ ಕೊಟ್ಟು ಸರಕಾರ ರಚಿಸಿದೆವು. ಹತ್ತು-ಹದಿನೈದು ದಿನ 78 ಶಾಸಕರನ್ನು ಕಾಪಾಡಿಕೊಂಡು ಸರಕಾರಕ್ಕೆ ಸಂಫೂರ್ಣ ಸಹಕಾರ ಕೊಟ್ಟಿದ್ದೆವು. ಅದನ್ನು ಅವರೂ ಉಳಿಸಿಕೊಳ್ಳಲಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಸ್ವಲ್ಪ ಅಸಮಾಧಾನಗಳಿತ್ತು. ಕಾಂಗ್ರೆಸ್ ಸಚಿವರೆಲ್ಲರೂ ಅಸಮಾಧಾನ ತೋಡಿಕೊಂಡಿದ್ದೆವು. ಒಬ್ಬೊಬ್ಬರದ್ದು ಒಂದೊಂದು ಕಾರಣಗಳಿದ್ದವು. ಅದನ್ನು ಸರಿಪಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಹಾಗಾಗಿ ಕಾಂಗ್ರೆಸ್ ಬಿಡುವ ಅನಿವಾರ್ಯತೆ ಸೃಷ್ಟಿಯಾಯಿತು.
ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಸಮ್ಮಿಶ್ರ ಸರಕಾರದಲ್ಲಿ ಎರಡೂ ಕಡೆಯಿಂದ ತಪ್ಪುಗಳಾಗಿದ್ದವು. ರಾಜೀನಾಮೆ ಕೊಟ್ಟು ಹೊರಬಂದಿದ್ದೆವು. ರಾಜಕೀಯವಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುವುದಾಗಿ ಬಿಜೆಪಿ ಸೇರಿದೆ. ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್ ಪರ ಕೆಲಸ ಮಾಡಿದ್ದೆ. ಬಿಜೆಪಿಗೆ ಬಂದಾಗ ಅದಕ್ಕೆ ತಕ್ಕಂತೆ ಕೆಲಸ ಮಾಡುವುದು ಸಹಜ. ಕಾಂಗ್ರೆಸ್‌ನಲ್ಲಿದ್ದಾಗ ನನ್ನೊಂದಿಗೆ ಇದ್ದ ಶೇ.90 ರಷ್ಟು ಬೆಂಬಲಿಗರು ಬಿಜೆಪಿ ಸೇರಿದೆವು. ಬಳಿಕ ಸಿಎಂ ಆದ ಯಡಿಯೂರಪ್ಪ ಅವರು ನನಗೆ ಸಚಿವನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಈ ವೇಳೆ ಸರಕಾರ ಹಾಗೂ ಪಕ್ಷದ ಎಲ್ಲ ಕೆಲಸಗಳನ್ನೂ ಪ್ರಾಮಾಣಿಕವಾಗಿ ಮಾಡಿದ್ದೇನೆ.
ಈಗ ಬಿಜೆಪಿ ಬಿಡುವ, ಕಾಂಗ್ರೆಸ್ ಸೇರುವ ವದಂತಿಗಳೇಕೆ?
ಆರಂಭದಿಂದಲೂ ಸ್ಥಳೀಯವಾಗಿ ಮೂಲ-ವಲಸಿಗ ಎಂಬ ಭೇದ ಭಾವ ಇರಲಿಲ್ಲ. ನಾನು ಸಚಿವನಾಗಿದ್ದ ಮೂರುವರೆ ವರ್ಷ ಅವರೂ ಸಹಕರಿಸಿದ್ದರು, ನಾವೂ ಸಹಕರಿಸಿದ್ದೆವು. ಕಳೆದ ವಿಧಾನಸಭೆ ಚುನಾವಣೆ ವೇಳೆ ಮೂಲ-ವಲಸಿಗ ಎಂಬ ಭೇದ ಶುರುವಾಯಿತು. ನನ್ನ ವಿರುದ್ಧ ಸಾಕಷ್ಟು ಅಪಪ್ರಚಾರ ಶುರುವಾಯಿತು. ಯಾವುದನ್ನೂ ನಂಬಿರಲಿಲ್ಲ. ಚುನಾವಣೆ ಹತ್ತಿರ ಬಂದಾಗ ಹರಿದಾಡಿದ ಆಡಿಯೋ, ವೀಡಿಯೋಗಳು ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ಸ್ಪಷ್ಟಪಡಿಸಿದ್ದವು. ಜೆಡಿಎಸ್‌ನಿಂದ ಹಣ ಪಡೆದು, ಹಂಚಿಕೆ ಮಾಡಿ ನನ್ನ ವಿರುದ್ಧ ಕೆಲಸ ಮಾಡುತ್ತಿರುವುದು ಗೊತ್ತಾಯಿತು. ಎಲ್ಲರ ಗಮನಕ್ಕೂ ತಂದಿದ್ದೆ. ಕರೆಯಿಸಿ ಮಾತನಾಡಿದ ಅನಂತರ ಕಿರುಕುಳ ಹೆಚ್ಚಾಯಿತು. ಅವರನ್ನು ಬಿಟಾಕಿ ಕೆಲಸ ಮಾಡಿ ಎಂದರು. ಕಷ್ಟಪಟ್ಟು ಚುನಾವಣೆಯಲ್ಲಿ ಗೆದ್ದೆ.
ಅನಂತರ ಎಲ್ಲವನ್ನೂ ಬಿಟಾಕಿ ಪಕ್ಷದ ಸಂಘಟನೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ಮೇಲ್ಮನೆ ಚುನಾವಣೆಗಳು ಬಂದಾಗ ಪಕ್ಷದ ಪರವಾಗಿಯೇ ಕೆಲಸ ಮಾಡಿದೆ. ಇಂದಿಗೂ ಮಾಡುತ್ತಿದ್ದೇನೆ. ಆದರೆ ಕುರುಬ ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದು ನನ್ನ ಕ್ಷೇತ್ರದಲ್ಲಿ ನಡೆದಾಗ ಸಿಎಂ ಸಿದ್ದರಾಮಯ್ಯ ಬಂದಿದ್ದರು. ಅವರೊಂದಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾಡಿದ್ದಕ್ಕೆ ಮತ್ತೆ ಅಪಪ್ರಚಾರ ಶುರುವಾಯಿತು. ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಂದಾಗ ಅನುದಾನಕ್ಕೆ ಬೇಡಿಕೆ ಇಟ್ಟೆ. ಡಿಸಿಎಂ ಶಿವಕುಮಾರ್ ಅವರನ್ನೂ ಭೇಟಿ ಮಾಡಿದ್ದೆ. ಇದನ್ನೇ ಇಟ್ಟುಕೊಂಡು ಪಕ್ಷ ಬಿಡುತ್ತೇನೆ, ಕಾಂಗ್ರೆಸ್ ಸೇರುತ್ತೇನೆ ಎಂದು ಬಿಂಬಿಸಲಾಗುತ್ತಿದೆ. ಬೆಂಗಳೂರಿನ ಎಲ್ಲ 27 ಕ್ಷೇತ್ರದ ಶಾಸಕರಿಗೂ ಅನುದಾನ ನಿಂತಿತ್ತು. ನಾನು ಕೇಳಿದೆ, ಉಳಿದವರು ಕೇಳಿಲಿಲ್ಲ. ಅಭಿವೃದ್ಧಿಗೆ ಹಣ ಕೊಡದಿದ್ದರೂ ಪರವಾಗಿಲ್ಲ ಕುಡಿಯುವ ನೀರಿಗೆ ಕೊಡಿ ಎಂದಿದ್ದೆ. 7.50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅಷ್ಟಕ್ಕೇ ಇಷ್ಟೆಲ್ಲ ಆಗಿದೆ.
ನಿಮ್ಮ ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರಲ್ಲಾ? ಏನಿದರ ಮರ್ಮ?
ಈಗ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಪಕ್ಷ ಕೊಟ್ಟ ಕೆಲಸವನ್ನು ನಾನು-ನನ್ನ ಬೆಂಬಲಿಗರು ಪ್ರಾಮಾಣಿಕವಾಗಿ ಮಾಡಿದ್ದೇವೆ. ಸ್ಥಳೀಯವಾಗಿ ಮೂಲ-ವಲಸಿಗ ಎಂಬ ಭೇದ ಶುರುವಾದಾಗಿನಿಂದ ನನ್ನ ವಿರುದ್ಧವೇ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಬೆಂಬಲಿಗರು ಅಧೈರ್ಯರಾಗಿದ್ದಾರೆ. ಮುಂಬರುವ ಪಾಲಿಕೆ, ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ಆಕಾಂಕ್ಷಿ ಇಟ್ಟುಕೊಂಡಿರುವವರು ರಾಜಕೀಯ ಭವಿಷ್ಯ ನೋಡಿಕೊಳ್ಳುತ್ತೇವೆ ಎಂದಾಗ ತಡೆಯಲಿಲ್ಲ. ಈಗ ಇರುವವರಿಗೆ ಟಿಕೆಟ್ ಕೊಡಿಸುವುದು ನನ್ನ ಜವಾಬ್ದಾರಿ ಎಂದಿದ್ದೇನೆ. ಅದನ್ನು ಮಾಡುತ್ತೇನೆ.
ಕಾಂಗ್ರೆಸ್‌ನಿಂದ ನಿಮಗೆ ಆಹ್ವಾನ ಸಿಕ್ಕಿದೆಯೇ?
ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಬಿಡುವುದಿದ್ದರೆ ಚುನಾವಣೆ ವೇಳೆಯೇ ಬಿಟ್ಟಿರುತ್ತಿದ್ದೆ. ಎಲ್ಲವನ್ನೂ ಎದುರಿಸಿ ಗೆದ್ದಿದ್ದೇನೆ. ಈಗೇಕೆ ಬಿಡಲಿ? ಕಾಂಗ್ರೆಸ್ ನನ್ನನ್ನು ಕರೆದಿಲ್ಲ. ಬರುತ್ತೇನೆಂದು ನಾನೂ ಅವರ್ಯಾರಿಗೂ ಹೇಳಿಲ್ಲ. 135 ಸ್ಥಾನಗಳಿಸಿ ಸರಕಾರ ರಚಿಸಿರುವ ಅವರಿಗೆ ನಮ್ಮ ಉಪಯೋಗ ಏನಿದೆ? ಯಾರೋ ಸೋತವರು ಒಂದಿಷ್ಟು ಮಂದಿ ಹೋಗಬಹುದೇ ಹೊರತು, ಗೆದ್ದವರು ಹೋಗುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಅಲ್ಲಿ ಶಾಸಕರಾಗಿರುವ ಬದಲು, ಇಲ್ಲೇ ಶಾಸಕನಾಗಿರುತ್ತೇನೆ.
ಪಿಎಂ ಬಂದಾಗ ಕಾಣಿಸಿಕೊಳ್ಳದವರು ಗೃಹಲಕ್ಷ್ಮೀ ಯಶಸ್ಸಿಗೆ ಶ್ರಮಿಸುತ್ತಿರುವುದು ಅನುಮಾನ ಹುಟ್ಟಿಸುವುದಿಲ್ಲವೇ?
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪಿಎಂ ಬರುತ್ತಾರೆಂಬುದಕ್ಕೆ ಪೂರ್ವಭಾವಿಯಾಗಿ ನಡೆದ ಪಕ್ಷದ ಸಭೆಗೆ ನನಗೆ ಆಹ್ವಾನಿವಿರಲಿಲ್ಲ. ವಾರ್ಡ್ ಅಧ್ಯಕ್ಷರು ಎರಡು ಬಸ್ ಕೇಳಿದ್ದರು. ವ್ಯವಸ್ಥೆ ಮಾಡಿದ್ದೆ. ಕ್ಷೇತ್ರದಲ್ಲಿ 5.5 ಲಕ್ಷ ಜನಸಂಖ್ಯೆ ಇದೆ. 84 ಸಾವಿರ ಬಿಪಿಎಲ್ ಕಾರ್ಡ್‌ದಾರರು, 8-9 ಸಾವಿರ ಎಪಿಎಲ್ ಕಾರ್ಡ್‌ದಾರರು ಇದ್ದಾರೆ. ಗೃಹಲಕ್ಷ್ಮೀಗೆ 24 ಸಾವಿರ ಮಂದಿಯದ್ದು ಮಾತ್ರ ನೋಂದಣಿ ಆಗಿತ್ತು. ನಾನು ಸಭೆ ಮಾಡಿದ್ದರಿಂದ ಎಲ್ಲರದ್ದೂ ನೋಂದಣಿ ಆಗಿ ಆರಂಭದಲ್ಲಿ 40 ಸಾವಿರ ಇದ್ದ ಫಲಾನುಭವಿಗಳ ಸಂಖ್ಯೆ ಈಗ 1.92 ಲಕ್ಷ ಜನರಿಗೆ ಉಪಯೋಗ ಆಗಲಿದೆ. ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆಯೇ ಹೊರತು, ಬೇರಾವ ಉದ್ದೇಶದಿಂದಲೂ ಅಲ್ಲ. ನಾನು ಸಹಕಾರ ಸಚಿವನಿದ್ದಾಗ ಕಾಂಗ್ರೆಸ್ ಶಾಸಕರು, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಹೋಗಿದ್ದೇನೆ. ರೈತರಿಗೆ ಶೂನ್ಯಬಡ್ಡಿದರದಲ್ಲಿ ತಲಾ 3 ಲಕ್ಷ ರೂ.ವರೆಗೆ ಸಾಲ ಕೊಡಲು 24 ಸಾವಿರ ಕೋಟಿ ರೂ. ಇಟ್ಟಿದ್ದೆವು. ಎಲ್ಲರಿಗೂ ಸಾಲ ಸೌಲಭ್ಯ ಸಿಗುವಂತೆ ಮಾಡಿ ಎಂದು ಮನವಿ ಮಾಡಿದ್ದೆ. ಸರಕಾರಿ ಕಾರ್ಯಕ್ರಮಗಳನ್ನು ಪಕ್ಷಕ್ಕೆ ಸೀಮಿತ ಮಾಡಲಾಗುತ್ತದೆಯೇ?
ಈಗ ಬಿಜೆಪಿಯಿಂದ ನೀವೇನು ನಿರೀಕ್ಷಿಸುತ್ತಿರುವಿರಿ?
ಯಡಿಯೂರಪ್ಪ ಅವರು ಸಿಎಂ ಇದ್ದಾಗ ಬಂದವನು ನಾನು. ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವಾಗಲೂ ನಿಮ್ಮ ರಕ್ಷಣೆ ನನ್ನ ಹೊಣೆ. ನಿಮಗೆ ಟಿಕೆಟ್ ಕೊಡಿಸುವುದು ನನ್ನ ಜವಾಬ್ದಾರಿ ಎಂದಿದ್ದರು. ಅದರಂತೆ ಅವರು ನಡೆದುಕೊಂಡರು. ಈಗಲೂ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ. ಅವರೂ ಸೇರಿದಂತೆ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಮುಕ್ತವಾಗಿ ಮಾತನಾಡಿದ್ದೇನೆ. ನೂರಾರು ಮಂದಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಯಾರೋ ಇಬ್ಬರನ್ನು ಉಚ್ಚಾಟಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅದು ನನ್ನ ಬೇಡಿಕೆ ಆಗಿರಲೂ ಇಲ್ಲ. ಮೂಲ-ವಲಸಿಗರನ್ನು ಕರೆದು ಪರಿಸ್ಥಿತಿ ತಿಳಿಗೊಳಿಸಿ ಎಂಬುದಷ್ಟೇ ನನ್ನ ನಿರೀಕ್ಷೆ. ಹೋದರೆ ಹೋಗಲಿ ಎನ್ನುವಂತೆ ಕೆಲವರು ಮಾತನಾಡುತ್ತಿರುವುದು ಬೇಸರ ತರಿಸಿದೆ. ಪಕ್ಷಕ್ಕೆ ಹೊಸ ಅಧ್ಯಕ್ಷರಾಗುತ್ತಾರೆ. ವಿಪಕ್ಷ ನಾಯಕರ ಆಯ್ಕೆ ಆಗುತ್ತದೆ. ತಿಳಿಯಾದ ವಾತಾವರಣ ಆಗಬಹುದು ಎಂಬ ನಿರೀಕ್ಷೆ ಇದೆ. ಯಾವುದೇ ತೀರ್ಮಾನ ಮಾಡದೆ ಕಾಯುತ್ತಿದ್ದೇನೆ.
ಶೇಷಾದ್ರಿ ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.