Narayan Guru: ಇಂದು ನಾರಾಯಣ ಗುರು ಜನ್ಮದಿನ- ವಿಶ್ವದ ಸಂತ ಸತ್ವ ಬ್ರಹ್ಮಶ್ರೀ ನಾರಾಯಣ ಗುರು
Team Udayavani, Aug 31, 2023, 12:28 AM IST
ಮಧ್ಯರಾತ್ರಿಯ ಕತ್ತಲೆಯಲ್ಲಿ ಎದ್ದು ಹೋದ ಸಿದ್ದಾರ್ಥ ಬುದ್ಧನಾಗಿ, ಪ್ರಬುದ್ಧನಾಗಿ ದ್ವೇಷದಿಂದ ದ್ವೇಷವನ್ನು ಗೆಲ್ಲಲು ಅಸಾಧ್ಯ, ಪ್ರೀತಿಯಿಂದ ದ್ವೇಷವನ್ನು ಗೆಲ್ಲ ಬಹುದು, ತನ್ನನ್ನು ತಾನು ಗೆದ್ದ ಬಳಿಕ ಲೋಕವನ್ನು ಗೆಲ್ಲಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಕಂಡುಕೊಂಡಂತೆ ನಾರಾಯಣ ಗುರುಗಳು ವ್ಯಕ್ತಿ ತನ್ನನ್ನು ತಾನು ತಿದ್ದಿಕೊಂಡು ಲೋಕವನ್ನು ತಿದ್ದಬೇಕು ಎಂದರು. ದಾಸರು ಹೇಳಿದಂತೆ “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಮನವ ಸಂತೈಸಿಕೊಳ್ಳಿ’ ಎನ್ನುವ ರೀತಿಯಲ್ಲಿ ತಮ್ಮ ಚಿಂತನೆಗಳ ಮೂಲಕ ಜನರ ಮನಃಪರಿವರ್ತನೆಯನ್ನು ಮಾಡಿದರು. ಜಾತಿ, ಮತ, ಪ್ರದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ ವಿಶಾಲತೆಗೆ ತನ್ನನ್ನು ಒಡ್ಡಿಕೊಂಡ ಗುರುಗಳು, ಸಾಧನೆ ವರ್ಚಸ್ಸು ಮತ್ತು ಕೆಲಸಗಳ ಮೂಲಕ ಗುರುವಾಗಿ ಬೆಳೆದು ನಿಂತರು. ಹೀಗೆ ಮೌನಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ ಯನ್ನು ಮಾಡಿದ ಪರಿವರ್ತನಾ ಶಿಲ್ಪಿ ಬ್ರಹ್ಮಶ್ರೀ ನಾರಾಯಣ ಗುರುಗಳು.
ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಅಪ್ಪಟ ಸಮಾಜವಾದಿ. ಭಾರತೀಯ ಸಮನ್ವಯ ಧಾರ್ಮಿಕ ಪರಂಪರೆಯಲ್ಲಿ ಅಪರೂಪವಾಗಿ ಕಂಡುಬರುವ ಸಿದ್ಧಾಂತವಾದಿ. ಅವರ ಧಾರ್ಮಿಕ ಸಿದ್ಧಾಂತಗಳು ವಾದಕ್ಕಾಗಿ ಮಾತ್ರವಲ್ಲ ವಾದಿಸಿ ಗೆಲ್ಲಲು ಅಲ್ಲ, ಅದು ಸರ್ವರ ಜೀವನದ ಧರ್ಮವಾಗಬೇಕು ಎಂದು ತಾನು ಕಂಡ ಸತ್ಯವನ್ನು ಆಚರಿಸಿ ತೋರಿಸಿದವರು ನಾರಾಯಣ ಗುರುಗಳು. ಮನುಷ್ಯತ್ವದ ಅನಾವರಣವೇ ಧರ್ಮದ ಗುರಿ ಎಂದವರು. ಹೃದಯ ದೌರ್ಬಲ್ಯವನ್ನು ತೊರೆದು ಆತ್ಮವಿಶ್ವಾಸವನ್ನು ಗಳಿಸಿ, ವ್ಯಕ್ತಿತ್ವವನ್ನು ಪಕ್ವವಾಗಿಸಬೇಕು. ವಿದ್ಯೆ, ವಿನಯ, ಶ್ರದ್ಧೆ, ಉದ್ಯೋಗ, ಸಂಸ್ಕೃತಿ, ಸಮಾನ ಭಾವ, ಸಂಘರ್ಷರಹಿತ ಕ್ರಾಂತಿ ಇವು ನಾರಾಯಣ ಗುರುಗಳ ಜೀವನ ಧರ್ಮವಾಗಿತ್ತು.
19ನೇ ಶತಮಾನದ ಸಂದರ್ಭದಲ್ಲಿ ಭಾರತ ಹಲವಾರು ಸಂತ ಸತ್ವಗಳನ್ನು ಕಂಡಿದೆ, ಉಂಡಿದೆ. ಎಷ್ಟೋ ಸಮಾಜ ಸುಧಾರಕರು ಬಂದು ಹೋಗಿ¨ªಾರೆ, ತಮ್ಮ ಚಿಂತನೆಗಳನ್ನು ಅರ್ಪಿಸಿ¨ªಾರೆ. ಆದರೆ ನೀರಿನಲ್ಲಿ ಇಳಿದು ಚಳಿಯನ್ನು ಅನುಭವಿಸಿದಂತೆ ಪ್ರಾಯೋಗಿಕ ನೆಲೆಯಲ್ಲಿ ಹೋರಾಟದ ಮೂಲಕ ಸಮಾಜ ಸುಧಾರಣೆಯನ್ನು ಮಾಡಿದ ಗುರು ಎಂದರೆ ಅದು ನಾರಾಯಣ ಗುರುಗಳು ಮಾತ್ರ.
ಶೂದ್ರ ಶಿವನ ಅನಾವರಣ ಶಿಲ್ಪಿ: ಧರ್ಮ ಎನ್ನುವುದು ಅಧರ್ಮದೊಳಗಿನ ಬೀಜ ಎಂಬಂತಿದ್ದ ಆ ಕಾಲದಲ್ಲಿ ತಾನು ಹುಟ್ಟಿದ ಸಮಾಜದಲ್ಲಿ ಇದ್ದ ಮೇಲು ಕೀಳು, ಮೌಡ್ಯ, ಅಂಧಾನುಕರಣೆ, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ ಇವುಗಳನ್ನು ಕಂಡು ದೇವರು, ಧರ್ಮದಿಂದ ವಂಚಿತರಾದ ದೀನದಲಿತರಿಗೆ, ಸಾಮಾಜಿಕವಾಗಿ ಹಿಂದು ಳಿದವರಿಗೆ, ನಿಮಗೂ ಒಂದು ದೇವರು ಬೇಕು, ದೇವಸ್ಥಾನ ಬೇಕು, ನಿಮಗೂ ಮನುಷ್ಯರಂತೆ ಬದುಕುವ ಹಕ್ಕು ಈ ಭೂಮಿಯಲ್ಲಿದೆ ಎನ್ನುವುದನ್ನು ತೋರಿಸಿಕೊಟ್ಟು ಅರವಿ ಪುರದಲ್ಲಿ ಶೂದ್ರ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಕ್ರಾಂತಿಗೆ ನಾಂದಿಯನ್ನು ಹಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕನಸುಗಾರ: ಇಂದು ನಾವು ಕಾಣುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಮೌಲ್ಯವನ್ನು ಶತಮಾನಗಳ ಹಿಂದೆಯೇ ಕಂಡುಕೊಂಡು ಸಮಾಜಕ್ಕೆ ಕೊಟ್ಟವರು ನಾರಾಯಣ ಗುರುಗಳು. ಅವರು ಅನುಸರಿಸಿದ್ದ ತ್ರಿಭಾಷಾ ನೀತಿಯೇ ಇದಕ್ಕೆ ಉತ್ತಮ ನಿದರ್ಶನ. ಸಂಸ್ಕಾರದ ಪಕ್ವತೆಗೆ ಮಾತೃಭಾಷೆ, ಧಾರ್ಮಿಕ ವಿಧಿಗಳ ಅಧ್ಯಯನಕ್ಕೆ ಸಂಸ್ಕೃತ ಭಾಷೆ, ಬದುಕು ಕಟ್ಟಿಕೊಳ್ಳಲು ಉದ್ಯೋಗದ ನಿಮಿತ್ತ ಮತ್ತು ಜಗತ್ತನ್ನು ತೆರೆದುಕೊಳ್ಳಲು ಆಂಗ್ಲ ಭಾಷೆಯ ಅಗತ್ಯವಿದೆ ಎಂದು ಅರಿತು ಸಂಸ್ಕೃತ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದವರು. ನಿರಂತರ ಬದಲಾಗುತ್ತಿರುವ ಪರಿಸರ ಮತ್ತು ಪರಿಸ್ಥಿತಿಗೆ ಸಮಾಜ ತನ್ನನ್ನು ಒಡ್ಡಿಕೊಂಡು, ತಿದ್ದಿಕೊಂಡು ಪ್ರಗತಿಪರ ಉನ್ನತಿಯನ್ನು ಸಾಧಿಸಲು ಆಧುನಿಕ ಶಿಕ್ಷಣದ ಅಗತ್ಯವಿದೆ, ಕೆಳ ವರ್ಗದವರು ಶಿಕ್ಷಣದಿಂದ ವಂಚಿತರಾಗುವುದೇ ಅವರ ದುರಂತಕ್ಕೆ ಮತ್ತು ಅಸ್ವಸ್ಥ ಸ್ಥಿತಿಗೆ ಕಾರಣ. ಪ್ರತಿಯೊಬ್ಬ ಪುರುಷ ಮತ್ತು ಸ್ತ್ರೀಗೆ ಸಮಾನ ಶಿಕ್ಷಣ ದೊರೆಯಬೇಕು ಎಂದು ಪಣತೊಟ್ಟವರು.
ಶಿಕ್ಷಣ ಕ್ರಾಂತಿ: ಶಿಕ್ಷಣ ಕ್ರಾಂತಿಯ ಮೂಲಕ ಶೂದ್ರಾತಿ ಶೂದ್ರರಲ್ಲಿ ಅಕ್ಷರ ಪ್ರೀತಿಯನ್ನು ಹುಟ್ಟಿಸಿದುದು ನಾರಾಯಣ ಗುರುಗಳ ಮಹಾಪವಾಡ. ಕಲಿಯಿರಿ ಮತ್ತು ಕಲಿಸಿರಿ, ಬೆಳೆಯಿರಿ ಮತ್ತು ಬೆಳೆಸಿರಿ, ಯೋಚಿಸಿರಿ ಮತ್ತು ಯೋಜಿಸಿರಿ, ಚೈತನ್ಯಪೂರ್ಣರಾಗಿ ಒಗ್ಗಟ್ಟಿನಿಂದ ಕರ್ತವ್ಯ ಪ್ರಜ್ಞೆಯಿಂದ ಜಾಗೃತರಾಗಿ ಸಮಾಜದಲ್ಲಿ ಸಮಾನತೆಯನ್ನು ಪಡೆಯುವ ಏಕೈಕ ಸಾಧನ ಶಿಕ್ಷಣ ಎನ್ನುತ್ತಾ ವೃತ್ತಿ ಶಿಕ್ಷಣಕ್ಕೆ, ವಯಸ್ಕರ ಶಿಕ್ಷಣಕ್ಕೆ, ರಾತ್ರಿ ಶಾಲೆಗೆ ಪ್ರಾಧಾನ್ಯವನ್ನು ನೀಡಿ ಕಾರ್ಯರೂಪಕ್ಕೆ ತಂದರು.
ದಕ್ಷಿಣ ಭಾರತದಲ್ಲಿ ವಯಸ್ಕರ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಮೊದಲಿಗರು ನಾರಾಯಣ ಗುರುಗಳು. ಶಿಕ್ಷಣ ಅಮೂಲ್ಯವಾದುದು, ಅದನ್ನು ಪಡೆಯಲು ವಯಸ್ಸಿನ ಮಿತಿ ಇರಬಾರದು. ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಸಿಗಬೇಕು ಎನ್ನುತ್ತಾ ಶಿವಗಿರಿಯಲ್ಲಿ ವಯಸ್ಕರ ಶಾಲೆಯನ್ನು ತೆರೆದರು. ರಾತ್ರಿ ಶಾಲೆಯನ್ನು ಆರಂಭಿಸಿದರು. ಸಿಲೋನಿನಲ್ಲಿ ತನ್ನ ಶಿಷ್ಯ ಸತ್ಯವೃತ್ತ ಸ್ವಾಮಿಗಳ ಮೂಲಕ 42ಕ್ಕೂ ಹೆಚ್ಚು ರಾತ್ರಿ ಶಾಲೆ ಮತ್ತು ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸಿ ಪ್ರತೀ ದೇವಸ್ಥಾನದ ಬದಿಯಲ್ಲಿ ಶಾಲೆಗಳನ್ನು ತೆರೆಯಲು ಮೊದಲ ಆದ್ಯತೆಯನ್ನು ನೀಡಿದರು.
ಮತಾಂತರಕ್ಕೆ ಕಡಿವಾಣ: ಹಿಂದೂ ಧರ್ಮದ ಕಠಿನ ನೀತಿಯಿಂದ, ಮೇಲ್ವರ್ಗದ ಶೋಷಣೆಯಿಂದ ನೊಂದು ಮನುಷ್ಯರಂತೆ ಬದುಕಲಾಗದೆ ಹಸಿವೆಯಿಂದ ಕಂಗಾಲಾದ ಅಸ್ಪೃಶ್ಯ ವರ್ಗ ಇತರ ಧರ್ಮಗಳ ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಿರುವಂತಹ ಆ ಸಂದರ್ಭದಲ್ಲಿ ಧಾರ್ಮಿಕ ಕ್ರಾಂತಿಯ ಮೂಲಕ ಸಾಮಾಜಿಕ ಸಮಾನತೆಯನ್ನು ಕೊಟ್ಟು ಮನುಷ್ಯರಂತೆ ಬಾಳುವ ಆತ್ಮವಿಶ್ವಾಸವನ್ನು ಮೂಡಿಸಿ ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲಬೇಕು.
ಚಳವಳಿಗಳ ಹರಿಕಾರ: ನಾರಾಯಣ ಗುರುಗಳು ಕೇವಲ ಸಂತರು ಮಾತ್ರವಲ್ಲ ಅವರೊಬ್ಬ ಹೋರಾಟಗಾರ ಅವಮಾನದ ಬೆಂಕಿಯಲ್ಲಿ ಬೆಂದು ಸ್ವಾಭಿಮಾನದ ಕಹಳೆ ಯನ್ನು ಊದಿದ ಮೌನ ಕ್ರಾಂತಿಕಾರ. ವೈಕಂ ಚಳವಳಿ, ದೇವಸ್ಥಾನಗಳ ಸ್ಥಾಪನೆ, ವೈದಿಕ ವಿಧಿ ವಿಧಾನಗಳ ಕಲಿಕೆ, ಪೂಜೆಯ ಅಧಿಕಾರ ಇವುಗಳನ್ನೆಲ್ಲ ಮೇಲ್ವರ್ಗದ ವಿರೋಧ ಗಳ ನಡುವೆಯೇ ಅವರ್ಣೀಯರಿಗೆ ನೀಡಿದವರು. ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್‌ರಂತಹ ಮೇಧಾವಿಗಳು, ಮಹಾತ್ಮರೇ ಬೆರಗಾಗುವಂತಹ ಅಸಾಮಾನ್ಯ ಸಾಧನೆಯನ್ನು ಸಾಧಿಸಿದವರು ನಾರಾಯಣ ಗುರುಗಳು. ಇಂದು ಭಾರತದ ಸಂವಿಧಾನದಲ್ಲಿ ಹಿಂದುಳಿ ದವರಿಗೆ, ದಲಿತರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕಿದ್ದರೆ ಅದು ನಾರಾಯಣ ಗುರುಗಳ ತಣ್ತೀ-ಚಿಂತನೆಗಳ ಪ್ರಭಾವ ಎನ್ನುವುದು ಸಾರ್ವಕಾಲಿಕ ಸತ್ಯ. ನದಿಯ ಕಲ್ಲನ್ನು ಶಿವಲಿಂಗ ವಾಗಿಸಿದ ನಾರಾಯಣ ಗುರುಗಳು ಅರವಿಪುರ ದಲ್ಲಿ 1888ರ ಶಿವರಾತ್ರಿಯ ದಿನ ಕಣ್ಣೀರಿನ ಅಭಿಷೇಕದ ಮೂಲಕ ಕಲ್ಲಿನಲ್ಲಿ ದೇವರನ್ನು ತೋರಿಸಿಕೊಟ್ಟವರು. ಈ ಜಗತ್ತಿನಲ್ಲಿ ಕಣ್ಣೀರಿಗೆ ಮತ್ತು ಬೆವರಿಗೆ ಇರುವ ಶಕ್ತಿ ಯಾವ ಅಮೃತಕ್ಕೂ ಇಲ್ಲ ಎನ್ನುವುದನ್ನು ನಾವು ನಾರಾಯಣ ಗುರುಗಳ ಜೀವನ ದರ್ಶನದಿಂದ ಕಂಡುಕೊಳ್ಳಬೇಕು.
ವಿಶ್ವಧರ್ಮದ ತಿರುಳು: ನಾರಾಯಣ ಗುರುಗಳ ಚಿಂತನೆ ಮತ್ತು ಬೋಧನೆಗಳಲ್ಲಿ ವಿಶ್ವದ ಸರ್ವ ಧರ್ಮಗಳ ತಿರುಳು ಅಡಕವಾಗಿದೆ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂದ ಎಲ್ಲ ಭಾರತದ ಸಂತಸತ್ವಗಳು ಗುರುಗಳ ಚಿಂತನೆಯ ಒಳಗಿದೆ. ಅವರು ತಮ್ಮ ಬದುಕಿನ ನಡೆಯ ಮೂಲಕ ಪರಿವರ್ತನೆಗೆ ಸಮಾಜವನ್ನು ಅಣಿಗೊಳಿಸಿದರು.
ತೊಟ್ಟಿಲ ಮದುವೆ, ಬಾಲ್ಯ ವಿವಾಹ, ಬಹುಪತ್ನಿತ್ವ, ವರದಕ್ಷಿಣೆ, ದುಂದು ವೆಚ್ಚದ ಮದುವೆಗಳು ನೈತಿಕ ಮತ್ತು ಆರ್ಥಿಕ ದಿವಾಳಿತನಕ್ಕೆ ಕಾರಣ ಶಿಶುಗಳು, ಮಕ್ಕಳು, ಭವಿಷ್ಯದ ಸಮಾಜ. ಆದ್ದರಿಂದ ಶಿಶುಗಳ ಆರೈಕೆಯನ್ನು ಮಾಡಬೇಕು. ಮದ್ಯವ್ಯಸನದಿಂದ ಸಮಾಜ ಮುಕ್ತವಾಗಬೇಕು, ಸರಳ ವಿವಾಹವನ್ನು ಅನುಸರಿಸಬೇಕು ಎನ್ನುತ್ತ ಮೂಢನಂಬಿಕೆಯನ್ನು, ಧಾರ್ಮಿಕ ಅಂಧಾನುಕರಣೆಯನ್ನು ವಿರೋಧಿಸಿದರು.
ತನ್ನ ಬದುಕಿನ ಕೊನೆಯಲ್ಲಿ ದೇವಸ್ಥಾನದಲ್ಲಿ ಕನ್ನಡಿ ಯನ್ನು ಪ್ರತಿಷ್ಠಾಪಿಸುವ ಮೂಲಕ “ನಿಮ್ಮನ್ನು ನೀವು ತಿದ್ದಿಕೊಳ್ಳಿ, ಮಂದಿರಗಳು ಸಾಕು ಶಿಕ್ಷಣ ಸಂಸ್ಥೆಗಳು ಬೇಕು’ ಎಂದ ಅವರ ನುಡಿಗಳು ಇಂದು ಪ್ರಸ್ತುತ ಸಮಾಜಕ್ಕೆ ಆದರ್ಶ ವಾಗಬೇಕು. ಅವರ ಉಪದೇಶಗಳು, ಸಂದೇಶ ಗಳು, ಚಿಂತನೆಗಳು ನಮಗೆ ದಾರಿದೀಪವಾಗ ಬೇಕು. ಗುರುಗಳ ಜನ್ಮದಿನಾಚರಣೆ ಕೇವಲ ಭಜನೆ ಆಗಬಾರದು. ಅವರ ಜೀವನ ದರ್ಶನದ ಆಚರಣೆಯಾಗಬೇಕು.
ಡಾ| ಗಣೇಶ್ ಅಮೀನ್ ಸಂಕಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.