Puttur: ದರೋಡೆಕೋರರ ಪತ್ತೆಗೆ ಪ್ರತ್ಯೇಕ ತಂಡ ರಚನೆ
- ಕೇರಳ ಸಹಿತ ವಿವಿಧ ಭಾಗಗಳಲ್ಲಿ ತನಿಖೆ ಆರಂಭ
Team Udayavani, Sep 8, 2023, 9:42 PM IST
ಪುತ್ತೂರು: ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆಯ ಗುರುಪ್ರಸಾದ್ ರೈ ಅವರ ಮನೆಗೆ ಬುಧವಾರ ತಡರಾತ್ರಿ ದರೋಡೆಕೋರರು ನುಗ್ಗಿ ಮನೆಮಂದಿಯನ್ನು ಕಟ್ಟಿ ಹಾಕಿ 15 ಪವನ್ ಚಿನ್ನಾಭರಣ ಹಾಗೂ 40 ಸಾವಿರ ರೂ. ನಗದು ದೋಚಿದ ಘಟನೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿ ಪತ್ತೆ ಕಾರ್ಯ ಆರಂಭಿಸಿದೆ.
ಕೇರಳಕ್ಕೆ ತಂಡ?
ದರೋಡೆ ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಲಾಗಿದ್ದು ಒಂದು ತಂಡ ಕೇರಳ ಕೇಂದ್ರಿಕೃತವಾಗಿ ತನಿಖೆ ನಡೆಸುತ್ತಿದೆ. ಗುರುಪ್ರಸಾದ್ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೂರು ದಿನಗಳ ಹಿಂದೆ ರಜೆ ಹಾಕಿ ಊರಿಗೆ ತೆರಳಿದ್ದು, ಹೀಗಾಗಿ ಆ ಮೂಲ ಆಧರಿಸಿ ಮೊದಲ ತನಿಖೆ ನಡೆಯುತ್ತಿದೆ. ಗುರುಪ್ರಸಾದ್ ಅವರ ಮನೆ ಪರಿಸರವ°ನು ಸೂಕ್ಷ್ಮವಾಗಿ ಬಲ್ಲವರೇ ಈ ಕೃತ್ಯದ ಹಿಂದೆ ಇರುವುದು ಖಚಿತವಾಗಿರುವುದರಿಂದ ಸ್ಥಳೀಯವಾಗಿಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ದರೋಡೆಯ ಹಿಂದೇ ಬೇರೆ ಏನಾದರೂ ಕೈವಾಡ ಇದೆಯೇ ಎನ್ನುವ ಬಗ್ಗೆ ತಂಡ ತನಿಖೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಅನುಮಾನ ಮೂಡಿಸಿದ ವಿಚಿತ್ರ ವರ್ತನೆ
ದರೋಡೆಕೋರರು ಮನೆಮಂದಿಯ ಜತೆಗೆ ವರ್ತಿಸಿದ ರೀತಿ ಹಲವು ಅನುಮಾನಗಳಿಗೆ ಬೊಟ್ಟು ಮಾಡಿದೆ. ಕಪಾಟಿನ ಕೀ ಇರುವ ಜಾಗದ ಖಚಿತ ಮಾಹಿತಿ ದರೋಡೆಕೋರರ ಬಳಿ ಇದ್ದದ್ದು ಅಚ್ಚರಿ ಮೂಡಿಸಿದೆ. ಹಾಗಾಗಿ ಗುರುಪ್ರಸಾದ್ ಅವರ ಚಲನವಲನ, ಮನೆಯೊಳಗಿನ ಪರಿಸರವನ್ನು ಬಲ್ಲವರೇ ಈ ಕೃತ್ಯದಲ್ಲಿ ಇರುವುದು ಖಾತರಿಯೆನಿಸಿದೆ. ಪೊಲೀಸರು ಕೂಡ ಈ ದಿಕ್ಕಿನಲ್ಲಿಯೇ ತನಿಖೆ ಮುಂದುವರಿಸಿದ್ದಾರೆ.
ಶೀಘ್ರ ಪತ್ತೆಗೆ ಶಾಸಕರ ಸೂಚನೆ
ದರೋಡೆ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದ್ದಾರೆ. ಒಂಟಿ ಮನೆ ಇರುವ ಕಡೆಗಳಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದರೋಡೆಕೋರರನ್ನು ಪತ್ತೆ ಮಾಡುವ ಮೂಲಕ ಇಲಾಖೆ ಬಗ್ಗೆ ಜನರಿಗೆ ವಿಶ್ವಾಸ ಮತ್ತು ಧೈರ್ಯ ತುಂಬುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಪಶ್ಚಿಮ ವಲಯ ಐಜಿಪಿ ಅವರ ಗಮನಕ್ಕೆ ಶಾಸಕರು ತಂದಿದ್ದಾರೆ. ಪ್ರಕರಣ ನಡೆದ ಮನೆಗೆ ಮಾಜಿ ಶಾಸಕರಾದ ಶಕುಂತಲಾ ಟಿ. ಶೆಟ್ಟಿ, ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.