Sullia ಮಂಡೆಕೋಲು: ಕೃಷಿ ತೋಟಕ್ಕೆ ಲಗ್ಗೆ, ಹಾನಿ; ಮತ್ತೆ ಮುಂದುವರಿದ ಕಾಡಾನೆ ಹಾವಳಿ
Team Udayavani, Sep 10, 2023, 10:56 PM IST
ಸುಳ್ಯ: ಕರ್ನಾಟಕದ ಗಡಿ ಗ್ರಾಮ ಮಂಡೆಕೋಲು ಭಾಗದಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರಿದಿದ್ದು, ಕೃಷಿ ತೋಟಕ್ಕೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಕೃಷಿ ನಾಶಪಡಿಸುತ್ತಿದೆ.
ಮಂಡೆಕೋಲು ಗ್ರಾಮದ ಮಾರ್ಗ ಬಳಿಯ ಹಮೀದ್ ಮಾವಜಿ ಎಂಬವರ ತೋಟಕ್ಕೆ ರಾತ್ರಿ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಸುಮಾರು 20ಕ್ಕೂ ಅಧಿಕ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಬಾಳೆ ಗಿಡಗಳನ್ನು ಹಾನಿ ಮಾಡಿದೆ. ದೇವರಗುಂಡದ ಹಲವು ಕೃಷಿಕರ ತೋಟಗಳಿಗೆ ಕಾಡಾನೆ ನಿರಂತರ ಲಗ್ಗೆ ಇಟ್ಟು ಬಾಳೆ, ತೆಂಗು, ಅಡಿಕೆ ಕೃಷಿ ನಾಶಪಡಿಸುತ್ತಿವೆ.
ರಾತ್ರಿ ವೇಳೆ ತೋಟಕ್ಕೆ ಕಾಡಾನೆ ದಾಳಿ ಇಟ್ಟಿರುವ ವೇಳೆ ಅರಣ್ಯ ಇಲಾಖೆ ಯವರಿಗೆ ಮಾಹಿತಿ ನೀಡಿ ಎರಡೂ ದಿನವೂ ರಾತ್ರಿ ಬಂದು ಆನೆಗಳನ್ನು ಕಾಡಿಗೆ ಅಟ್ಟಲಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಹೊಳೆಯಿಂದ ಆಚೆ ಕೇನಾಜೆ ಕಾಡಿನಲ್ಲಿ ಬೀಡುಬಿಟ್ಟು ಸಂಜೆಯಾಗುತ್ತಲೇ ಹೊಳೆ ದಾಟಿ ತೋಟಕ್ಕೆ ದಾಂಗುಡಿಯಿಡುತ್ತಿವೆ ಎಂದು ಕೃಷಿಕರು ತಿಳಿಸಿದ್ದಾರೆ.
ಪಥ ಬದಲಿಸುವ ಕಾಡಾನೆ
ಮಂಡೆಕೋಲು, ಅಜ್ಜಾವರ ಗ್ರಾಮದಲ್ಲಿ ಕಾಡಾನೆಗಳು ಬರದಂತೆ ಆನೆ ಕಂದಕ, ಸೋಲಾರ್ ಬೇಲಿ, ನೇತಾಡುವ ಸೋಲಾರ್ ಬೇಲಿ ಅಳವಡಿಸಲಾಗಿದ್ದರೂ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಆನೆ ಹಾವಳಿ ನಿಯಂತ್ರಣಕ್ಕೆ ದೇವರಗುಂಡ ಭಾಗದಲ್ಲಿ ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಅಡ್ಡಲಾಗಿ ಒಂದಕ್ಕೊಂದು ಜೋಡಣೆ ಮಾಡಿ ಸಾಲಾಗಿ ಇರಿಸಲಾಗಿತ್ತು. ಇದರಿಂದ ಯಶಸ್ಸನ್ನೂ ಕಂಡರು. ಆ ನಂತರ ಆನೆಗಳು ಆ ದಾರಿ ಮೂಲಕ ಬಂದು ತೋಟಕ್ಕೆ ದಾಳಿ ಮಾಡಿರಲಿಲ್ಲ. ಇದೀಗ ಪಥ ಬದಲಿಸಿ ಬೇರೆ ದಾರಿಯಿಂದ ಸತತವಾಗಿ ಎರಡು ದಿನಗಳಿಂದ ದಾಳಿ ಮಾಡಲು ಪ್ರಾರಂಭಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಅಡಿಕೆ ತೋಟ ನಾಶ
ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಮಾರಂಗಾಯಿ ಎಂಬಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾತ್ರಿ ಶಿಬಾಜೆ ಪತ್ತಿಮಾರು ಸಮೀಪ ಕಾಡಾನೆಗಳು ದಾಳಿ ನಡೆಸಿದ ಪರಿಣಾಮ ಅಡಿಕೆ ಹಾಗೂ ತೆಂಗಿನ ಗಿಡಗಳು ನಾಶವಾಗಿವೆ.
ಚಾರ್ಮಾಡಿ ಸಮೀಪದ ಲೀಲಾವತಿ ಲೋಕಯ್ಯ ಗೌಡ ಎಂಬವರ ತೋಟಕ್ಕೆ ಶುಕ್ರವಾರ ತಡರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 125ಕ್ಕಿಂತ ಅಧಿಕ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದೆ.
ಆನೆಗಳ ಹಿಂಡು ತೋಟದ ಒಂದು ಭಾಗದಲ್ಲಿ ದಾಳಿ ಮಾಡಿದ್ದು, ಅಲ್ಲಿದ್ದ ಅಡಿಕೆ ತೋಟ ಸಂಪೂರ್ಣ ನೆಲಕ್ಕುರುಳಿದೆ. ಕಳೆದ ಮೂರು ವರ್ಷಗಳ ಹಿಂದೆ 240 ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದು ಅದರಲ್ಲಿ ಈಗ ಅರ್ಧಕ್ಕಿಂತ ಹೆಚ್ಚು ಗಿಡಗಳು ಆನೆ ದಾಳಿಗೆ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಶಿಬಾಜೆ ಗ್ರಾಮದ ಪತ್ತಿಮಾರು ರಾಘವೇಂದ್ರ ಅಭ್ಯಂಕರ್ ಅವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಫಸಲು ಬರುತ್ತಿದ್ದ 10ಕ್ಕೂ ಅಧಿಕ ತೆಂಗಿನ ಮರ, 40ಕ್ಕೂ ಅಧಿಕ ಅಡಿಕೆ ಮರ ಹಾಗೂ ಬಾಳೆಗಿಡಗಳು ನಾಶಗೊಂಡಿದೆ. ಒಂದು ವರ್ಷಗಳ ಹಿಂದೆ ಇದೇ ರೀತಿ ದಾಳಿ ಮಾಡಿ ಕೃಷಿ ನಾಶಮಾಡಿತ್ತು ಎಂದು ಮನೆ ಮಂದಿ ತಿಳಿಸಿದ್ದಾರೆ. ಶಿಬಾಜೆ ಸುತ್ತಮುತ್ತ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ಇಲ್ಲಿನ ಪತ್ರಿಕಾ ವಿತರಕರು ಮುಂಜಾನೆ ತೆರಳುತ್ತಿದ್ದಾಗ, ದಾರಿಯಲ್ಲೇ ಕಾಡಾನೆ ಪ್ರತ್ಯಕ್ಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.