Agriculture; ಕರಾವಳಿಯ ರೈತರ ಕೈ ಹಿಡಿದ ತಾಳೆ ಬೆಳೆ: ವಾರ್ಷಿಕ 2 ಸಾವಿರ ಟನ್ ಉತ್ಪಾದನೆ
Team Udayavani, Sep 12, 2023, 7:20 AM IST
ಉಡುಪಿ: ತಾಳೆ ಕೃಷಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ಸಿನತ್ತ ಸಾಗುತ್ತಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ವಾರ್ಷಿಕ 2 ಸಾವಿರ ಟನ್‌ಗೂ ಅಧಿಕ ತಾಳೆ ಹಣ್ಣು ಉತ್ಪಾದನೆಯಾಗುತ್ತಿದೆ.
1990-1992ರಲ್ಲಿ ನೆರೆಯ ಶಿವಮೊಗ್ಗ, ಭದ್ರಾವತಿ ಭಾಗದ ತುಂಗ-ಭದ್ರಾ ನದಿ ತಟದ ರೈತರು ಮೊದಲಿಗೆ ತಾಳೆ ಬೆಳೆ ಆರಂಭಿಸಿದರು. ಅನಂತರ ಕರಾವಳಿಯ ಕೆಲವು ರೈತರು ಸುಳ್ಯದ ತೊಡಿಕಾನ ವಸಂತ್ ಭಟ್ ನೇತೃತ್ವದಲ್ಲಿ ತಾಳೆ ಬೆಳೆಗೆ ಪ್ರೋತ್ಸಾಹ ಕೋರಿ ಸರಕಾರವನ್ನು ಆಗ್ರಹಿಸಿದ್ದರು. ಅದರಂತೆ ಸರಕಾರವು 2010-11ರಲ್ಲಿ ಕರಾವಳಿಯಲ್ಲೂ ತಾಳೆ ಬೆಳೆಯಲು ಹಸುರು ನಿಶಾನೆ ತೋರಿತ್ತು. ಪ್ರಸ್ತುತ ದ.ಕ.ದ 203.91 ಹೆಕ್ಟೇರ್, ಉಡುಪಿಯ 176.26 ಹೆಕ್ಟೇರ್‌ನಲ್ಲಿ ತಾಳೆ ಬೆಳೆಯಲಾಗುತ್ತಿದೆ. ಸುಳ್ಯ, ಕುಂದಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
ಕರಾವಳಿಯಲ್ಲಿ
ತಾಳೆಯ ಹಾದಿ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಡಿಕೆ, ರಬ್ಬರ್, ತೆಂಗು, ಬಾಳೆ, ಗೇರು ಪ್ರಮುಖ ತೋಟಗಾರಿಕೆ ಬೆಳೆ. ಇದರಿಂದ ಬೆಳೆಗಾರರು ವಿಮುಖರಾಗಿಲ್ಲ. ಜತೆಗೆ ಹಡಿಲು ಜಾಗದಲ್ಲಿ ತಾಳೆ ಕೃಷಿ ಮಾಡುತ್ತಿದ್ದಾರೆ. ಸುಳ್ಯ ತೊಡಿಕಾನದ ವಸಂತ ಭಟ್ 2010ರಲ್ಲಿ ಕರಾವಳಿಗೆ ತಾಳೆಯನ್ನು ಪರಿಚಯಿಸಿದವರು. ಮೊದಲ ಹಂತದಲ್ಲಿ 1 ಸಾವಿರ ಗಿಡಗಳನ್ನು ನೆಟ್ಟರು. ಉಡುಪಿ ಜಿಲ್ಲೆಯಲ್ಲಿ ಶಂಕರನಾರಾಯಣದ ವಸಂತ ಶೇಟ್ 2011ರಲ್ಲಿ ತಾಳೆ ಕೃಷಿಯನ್ನು ಮೊದಲು ಆರಂಭಿಸಿದರು. ಅನಂತರ ಐದೇ ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ 115 ಹೆಕ್ಟೇರ್, ಉಡುಪಿ ಜಿಲ್ಲೆಯ 40 ಹೆಕ್ಟೇರ್‌ಗಳಲ್ಲಿ ತಾಳೆ ಕೃಷಿ ವಿಸ್ತರಿಸಿತ್ತು.
ತ್ರಿಮುಖ ಒಪ್ಪಂದ
ಸರಕಾರ, ರೈತರು ಮತ್ತು ಕಂಪೆನಿ ಸಹಭಾಗಿತ್ವದಲ್ಲಿ ನಡೆಯುವ ತಾಳೆ ಕೃಷಿಯನ್ನು ತ್ರಿಮುಖ ಒಪ್ಪಂದದ ಯೋಜನೆ ಎನ್ನಲಾಗುತ್ತದೆ. ಸರಕಾರವು 300 ರೂ. ಮೌಲ್ಯದ ಗಿಡಗಳನ್ನು ಉಚಿತವಾಗಿ ನೀಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ದರ ನಿಗದಿಯಾಗುತ್ತದೆ. ಇಲ್ಲಿ ದಲ್ಲಾಳಿ, ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಈ ಬೆಳೆಗೆ ಕಾಡುಪ್ರಾಣಿ ಹಾಗೂ ಕೀಟದ ಬಾಧೆಯಿಲ್ಲ. ಸದ್ಯದ ಮಾರುಕಟ್ಟೆ ದರ ಕೆ.ಜಿ.ಗೆ 12.50 ರೂ. ಇದೆ. ಸರಕಾರದ ಬೆಂಬಲ ಬೆಲೆ 13.50 ರೂ. ನಿಗದಿಯಾಗಿದೆ. ಬೆಲೆ ಕಡಿಮೆಯಾದಲ್ಲಿ ಬೆಂಬಲ ಬೆಲೆಯಂತೆ ಬೆಳೆಗಾರರಿಗೆ ಹಣ ಪಾವತಿಯಾಗುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಮರವೊಂದರಲ್ಲಿ 150-250
ಕೆಜಿ ಫಸಲು
1 ಎಕ್ರೆಯಲ್ಲಿ 57 ಗಿಡ, ಹೆಕ್ಟೇರ್‌ಗೆ 143 ಗಿಡಗಳನ್ನು ನೆಡಬಹುದು. ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು. 36 ತಿಂಗಳಲ್ಲಿ ಫಸಲು ಆರಂಭವಾಗುತ್ತದೆ. 5ರಿಂದ 7 ವರ್ಷದ ಮರ ವಾರ್ಷಿಕ 100-150 ಕೆಜಿ ಹಣ್ಣು ನೀಡುತ್ತದೆ. 8ನೇ ವರ್ಷಕ್ಕೆ 250 ಕೆಜಿ ದೊರೆಯುತ್ತದೆ. 12 ವರ್ಷದ ಅನಂತರ ಮರ ಸದೃಢವಾದಂತೆ ಬೆಳೆ ಪ್ರಮಾಣ ಹೆಚ್ಚು. ಫಸಲು ಬಿಡುವ ಮೊದಲು ಅಂತರ್‌ಬೆಳೆಯಾಗಿ ಬಾಳೆ, ಅನಾನಸ್, ದ್ವಿದಳ ಧಾನ್ಯ ಬೆಳೆಯಬಹುದು.
ಫ್ಯಾಕ್ಟರಿ ನಿರ್ಮಾಣ ಯೋಜನೆ
ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ತಾಳೆ ಬೆಳೆಗಾರರು ಸೇರಿ ಶ್ರೀ ಭಾರತಿ ಎಣ್ಣೆ ತಾಳೆ ಸಹಕಾರ ಸಂಘ ರಚಿಸಿಕೊಂಡಿದ್ದಾರೆ. ಇದರಲ್ಲಿ 500 ಮಂದಿ ಸದಸ್ಯರಿದ್ದಾರೆ. ಮುಂದಿನ ವರ್ಷಗಳಲ್ಲಿ ತಾಳೆ ಎಣ್ಣೆ ಉತ್ಪಾದಿಸುವ ಫ್ಯಾಕ್ಟರಿ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಂಡಿದ್ದಾರೆ. ಇದಕ್ಕೆ ವರ್ಷಕ್ಕೆ 10 ಸಾವಿರ ಟನ್ ತಾಳೆ ಎಣ್ಣೆ ಅಗತ್ಯ. ಸದ್ಯಕ್ಕೆ 4 ಜಿಲ್ಲೆಗಳಿಂದ 4ರಿಂದ 5 ಸಾವಿರ ಟನ್ ಉತ್ಪಾದನೆಯಾಗುತ್ತಿದೆ. ಬೆಳೆ ಪ್ರಮಾಣ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಫ್ಯಾಕ್ಟರಿ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಶೇ. 90 ಸಬ್ಸಿಡಿ ಸರಕಾರ ನೀಡಲಿದೆ ಎಂದು ತಾಳೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಭಟ್ ತಿಳಿಸಿದ್ದಾರೆ.
ದ.ಕ., ಉಡುಪಿ ಜಿಲ್ಲೆಗಳಲ್ಲಿ ತಾಳೆ ಬೆಳೆ ಯಶಸ್ವಿಯಾಗುತ್ತಿದೆ. ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ. ಆರಂಭದಲ್ಲಿ 4 ವರ್ಷದ ನಿರ್ವಹಣೆಗೆ ಹಣವನ್ನು ನೀಡಲಾಗುತ್ತದೆ. ನೀರಾವರಿಗೆ ಸಬ್ಸಿಡಿ ಸೌಲಭ್ಯವೂ ಇದೆ. ಆಸಕ್ತ ರೈತರು ಇಲಾಖೆಗೆ ಅರ್ಜಿ ಸಲ್ಲಿಸಬಹುದು.
– ಎಚ್.ಆರ್. ನಾಯ್ಕ, ಭುವನೇಶ್ವರಿ,
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ದ.ಕ., ಉಡುಪಿ
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.