Desi Swara: ಬೆರಗಿನ ಬಿಗ್ ಬೇಸಿನ್ ಪಾರ್ಕ್-ಬೆಂದು ಹೋದ ಕಾಡಿನ ಸ್ಫೂರ್ತಿಯ ಕತೆ…
ಬಿಗ್ ಬೇಸಿನ್ ಪಾರ್ಕ್ ಈಗ ಮತ್ತೆ ಪ್ರವಾಸಿಗರಿಗೆ ತನ್ನ ಬಾಗಿಲನ್ನು ನಿಧಾನವಾಗಿ ತೆರೆದಿದೆ
Team Udayavani, Sep 18, 2023, 11:15 AM IST
ಒಮ್ಮೆ ಸೋಲಿನ ಹೊಡೆತವನ್ನು ತಿಂದು ಮತ್ತೆ ಪುಟಿದೇಳುವ ಧೈರ್ಯವಿದೆಯಲ್ಲ ಅದು ಸಾಹಸವೇ. ಹಾಗೇಯೇ ಬಂದ ಕಷ್ಟಗಳೆಲ್ಲವನ್ನು ಎದುರಿಸಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವುದಕ್ಕು ಜೀವನದೆಡೆಗಿನ ಉತ್ಸಾಹವೇ ಸ್ಫೂರ್ತಿ. ಪ್ರಾಕೃತಿಕ ವಿಕೋಪಗಳಂತ ಭೂಕಂಪ, ಸುನಾಮಿಗಳನ್ನು ಎದುರಿಸಿದ ನಗರಗಳು, ಊರುಗಳು ಬದುಕನ್ನು ಮತ್ತೆ ರೂಪಿಸಿಕೊಂಡ ಕತೆಯನ್ನು ಕೇಳಿದರೆ ಮೈ ಜುಂ ಎನ್ನುತ್ತದೆ. ಈ ವಾರದ ಅಂಕಣದಲ್ಲಿಯೂ ಹೇಳ ಹೊರಟಿರುವುದು ಇಂತಹದ್ದೇ ಒಂದು ಘಟನೆಯನ್ನು. ಬೆಂಕಿಯ ಜ್ವಾಲೆಗೆ ಇಡೀ ಕಾಡಿಗೇ ಕಾಡೇ ಆಹುತಿಯಾಗಿ, ಇನ್ನು ಇಲ್ಲಿ ಕಾಣಸಿಗುವುದು ಬರೀ ಅವಶೇಷವಷ್ಟೇ ಎಂದು ಎಲ್ಲರೂ ಭಾವಿಸಿದ್ದಾಗ ಅಲ್ಲಿನ ಮರಗಳು ತಮ್ಮೊಳಗೆ ಭರವಸೆಯ ಹಸುರಿನ ಚಿಗುರನ್ನು ಹೊತ್ತು ನಿಂತಿದ್ದವು. ಇಂದು ಅರ್ಧದಷ್ಟು ಕಾಡು ಮತ್ತೆ ನಲಿಯುತ್ತಿದೆ. ಬದುಕಬೇಕೆಂಬ ಛಲಕ್ಕೆ ಇದಕ್ಕಿಂತ ಪ್ರೇರಣೆ ಬೇಕೆ ಹೇಳಿ……
“ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತವೆಯೇ’ ಎಂಬ ಮಾತೊಂದಿದೆ. ಮನುಷ್ಯನೇ ಹೇಳಿದ ಮಾತಿದು. ಅಂದರೆ ಈ ಭೂಮಿಯಲ್ಲಿ ಕಷ್ಟಗಳು ತನಗೊಬ್ಬನಿಗೆ ಮಾತ್ರ ಬರುತ್ತವೆ ಎಂದು ತನಗೆ ತಾನೇ ತಿಳಿದುಕೊಂಡು ಬಿಟ್ಟಿ¨ªಾನೆ. ಅದು ಸಮಾಧಾನ ಹಂಚಿಕೊಳ್ಳುವ ಮಾರ್ಗವೇ ಆಗಿದ್ದರೂ ನನಗೇ ಎಲ್ಲ ಕಷ್ಟಗಳು ಎಂದು ಅಂದುಕೊಳ್ಳುವುದಾಗಲೀ ಅಥವಾ ವೈಯ್ ಮೀ ಎಂದು ಪ್ರಶ್ನಿಸುವುದಾಗಲೀ ತಿಳುವಳಿಕೆಯ ಕೊರತೆಯಂತೆ ಕಾಣಿಸುತ್ತದೆ.
ಯಾಕೆಂದರೆ ಕಷ್ಟಗಳು ಮನುಷ್ಯನಿಗೆ ಮಾತ್ರವಲ್ಲ, ಎಲ್ಲ ಪ್ರಾಣಿ, ಪಕ್ಷಿ, ಕೀಟಗಳಿಗೂ ಬರುತ್ತವೆ. ಅಷ್ಟೇ ಯಾಕೆ ಮರಗಳಿಗೂ ಬರುತ್ತದೆ. ನೆಲದೊಳಗೆ ಬೇರೂರಿ ಎಂತಹ ಬಿರುಗಾಳಿ ಬಂದರೂ ಎದೆಗೊಟ್ಟು ನಿಲ್ಲುವ ಮರಗಳು ಸಿಡಿಲು ಬಡಿದು, ಸುಟ್ಟು ಬೂದಿಯಾಗುತ್ತವೆ. ಯಾರೋ ಬಂದು ಕತ್ತರಿಸಿದರೆ ಇಷ್ಟು ದಿನಗಳ ಅಸ್ತಿತ್ವವೇ ಇಲ್ಲದಂತೆ ಒಂದೇ ಪೆಟ್ಟಿಗೆ ನೆಲಕ್ಕುರುಳುತ್ತವೆ. ಶರತ್ಕಾಲದಲ್ಲಿ ಎಲೆಗಳನ್ನುದುರಿಸಿ ಬರಡಾಗುತ್ತವೆ. ಬಿಸಿಲಿನಲ್ಲಿ ನೀರಿಲ್ಲದೇ ಒಣಗಿ ಶುಷ್ಕವಾಗುತ್ತವೆ. ಹುಳ ತಿನ್ನತೊಡಗಿದರೆ ಒಳಗಿನಿಂದಲೇ ಶಿಥಿಲವಾಗುತ್ತ ದೈತ್ಯ ಮರವೂ ಪುಡಿಪುಡಿಯಾಗುತ್ತದೆ. ಹೀಗೆ ಪಟ್ಟಿ ಮಾಡುತ್ತ ಹೋದರೆ ಮರಗಳಿಗೆ ಬರುವ ಕಷ್ಟ ಒಂದೇ ಎರಡೇ! ಆದರೆ ಈಗ ನಾನು ಹೇಳಹೊರಟಿರುವುದು ಒಂದು ಅಥವಾ ಒಂದೆರಡು ಮರದ ಕತೆಯಲ್ಲ. ಒಂದು ದೊಡ್ಡ ಕಾಡು ಬೆಂಕಿಗೆ ಆಹುತಿಯಾಗಿ ಬೆಂದು ಹೋದ ಕತೆ.
ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿಯೇ ಅತ್ಯಂತ ಹಳೆಯದಾದ ಕಾಡು. 1902ರಲ್ಲಿ ಅಂದರೆ 122 ವರ್ಷಗಳ ಹಿಂದೆ ಬಿಗ್ ಬೇಸಿನ್ ರೆಡ್ ವುಡ್ಸ್ ಎಂಬ ಹೆಸರಿನಲ್ಲಿ ಸ್ಥಾಪಿತವಾದ ಈ ಕಾಡಿನಲ್ಲಿ ಸುಮಾರು 1000ದಿಂದ 1800 ವರ್ಷಗಳಷ್ಟು ಹಳೆಯದಾದ ಮರಗಳಿವೆ! ರೋಮನ್ ಸಾಮ್ರಾಜ್ಯಕ್ಕಿಂತಲೂ ಹೆಚ್ಚಿನ ಇತಿಹಾಸ ಈ ಮರಗಳಿಗಿದೆ ಎಂಬುದಂತೂ ಸತ್ಯ. ಅವೂ ಸಾಧಾರಣ ಮರಗಳಲ್ಲ! ಆಕಾಶಕ್ಕೆ ಮುತ್ತಿಡುವಂತಹ ಗಗನಚುಂಬಿ ಮರಗಳು. ಅದೆಷ್ಟು ಎತ್ತರವೆಂದರೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮೂರ್ತಿಯಷ್ಟು ಎತ್ತರವಿರುವ ಮರಗಳು. ಅಂಕಿ ಅಂಶಗಳ ಆಧಾರದಲ್ಲಿ ಹೇಳಬೇಕೆಂದರೆ ಈ ಮರಗಳ ಎತ್ತರ ಐವತ್ತು ಅಡಿಗಳಿಗಿಂತಲೂ ಹೆಚ್ಚಿದೆ. ಆರಂಭದಲ್ಲಿ 3,800 ಎಕ್ರೆಗಳ ವಿಸ್ತಾರದಲ್ಲಿದ್ದ ಈ ಕಾಡು ಈಗ ಸದ್ಯಕ್ಕೆ 18,000 ಎಕ್ರೆಗಳಷ್ಟು ವ್ಯಾಪ್ತಿಯಲ್ಲಿ ಆವರಿಸಿಕೊಂಡಿದೆ. ಒಂದು ಕಡೆಗೆ ಫೆಸಿಫಿಕ್ ಸಮುದ್ರ, ಇನ್ನೊಂದು ಕಡೆಗೆ ಸ್ಯಾಂಟಾ ಕ್ರೂಜ್ ಪರ್ವತಗಳ ಸಾಲನ್ನು ಹೊಂದಿರುವ ಈ ಕಾಡು ಯಾವ ದಿಕ್ಕಿನಿಂದಲೂ ನೋಡಿದರೂ ನಯನ ಮನೋಹರ.
ಹೀಗೆ ನೂರಾರು ವರ್ಷಗಳ ಬೆರಗನ್ನು, ಇತಿಹಾಸವನ್ನು, ಸಾವಿರಾರು ಜೀವಸಂಕುಲವನ್ನು ಹೊತ್ತು ತನ್ನೊಳಗೆ ಅದ್ಭುತವನ್ನೇ ಕಟ್ಟಿಕೊಂಡಿದ್ದ ಈ ಕಾಡು ಒಂದು ದಿನ ಬೆಂಕಿಯಲ್ಲಿ ಧಗಧಗ ಉರಿಯಿತೆಂದು ಹೇಳಿದರೆ ನಂಬಲಾಗುವುದಿಲ್ಲ. 2020ರಲ್ಲಿ ಗುಡುಗು, ಮಿಂಚು, ಸಿಡಿಲಿನಿಂದ ಬೆಂಕಿ ಹತ್ತಿಕೊಂಡು ಸ್ಯಾನ್ ಮೆತಿಯೋ ಮತ್ತು ಸ್ಯಾಂಟಾ ಕ್ರೂಜ್ ಜಿಲ್ಲೆಗಳು ಧಗಧಗ ಉರಿದವು. ಆ ಬೆಂಕಿಗೆ ಆಹುತಿಯಾಗಿದ್ದು ಬಿಗ್ ಬೇಸಿನ್ ಕಾಡು.
ಕಾಡಿನ ಹೃದಯ ಭಾಗಕ್ಕೆ ಬೆಂಕಿ ಹತ್ತಿ, ಅಗ್ನಿಶಾಮಕ ತಂಡಕ್ಕೆ ಅದನ್ನು ಹತೋಟಿಗೆ ತರುವುದು ಅಸಾಧ್ಯವಾಗಿ ಒಂದಾದ ಒಂದರಂತೆ ಮರಗಳು ಬೆಂಕಿಯ ಸ್ಪರ್ಶಕ್ಕೆ ಮುಳುವಾಗುತ್ತ ಸುಟ್ಟು ಬೂದಿಯಾದವು. ಶೇಕಡಾ 90ರಷ್ಟು ಭಾಗಕ್ಕೆ ಬೆಂಕಿ ಆವರಿಸಿಕೊಂಡು ಕಾಡು ತಿಂಗಳಾನುಗಟ್ಟಲೇ ಧಗ ಧಗ ಉರಿಯಿತು. ಸಾವಿರಾರು ವರ್ಷಗಳ ಆಯಸ್ಸನ್ನು ಹೊಂದಿದ ಮರಗಳು ಬೂದಿಯಾಗತೊಡಗಿದವು. ಆಕಾಶದತ್ತ ಮುಖ ಮಾಡಿ ಸೂರ್ಯನ ಕಿರಣವನ್ನು ಆಸ್ವಾದಿಸುತ್ತಿದ್ದ ದೈತ್ಯ ಮರಗಳು ನೆಲಕ್ಕೆ ದೊಪ್ಪನೆ ಉರುಳಿದವು. ನಿಸರ್ಗ ಪ್ರಿಯರಿಂದ, ಹೈಕ್ ಪ್ರೇಮಿಗಳಿಂದ ತುಂಬಿ ತುಳುಕುತ್ತಿದ್ದ ಈ ತಾಣ ಬಾಗಿಲು ಹಾಕಿಕೊಂಡು ತನ್ನೊಡಲನ್ನು ಸುಟ್ಟುಕೊಂಡಿತು.
ಬಾಲ್ಯದಿಂದಲೂ ಈ ಕಾಡನ್ನು ನೋಡುತ್ತ, ಅದರೊಳಗೆ ಹೈಕ್ ಹೋಗುತ್ತ, ಜಲಪಾತಗಳನ್ನು ಕಣ್ಣು ತುಂಬಿಸಿಕೊಂಡು ಬೆಳೆದಿದ್ದ ಅದೆಷ್ಟೋ ಜನ ಕಣ್ಣೀರು ಹಾಕಿದರು. ಬಿಗ್ ಬೇಸಿನ್ ಅಕ್ಕ ಪಕ್ಕದಲ್ಲಿಯೂ ಸಣ್ಣ ಪುಟ್ಟ ಕಾಡುಗಳಿವೆ. ಹುಚ್ಚೆದ್ದು ಕುಣಿಯುತ್ತಿದ್ದ ಬೆಂಕಿಯನ್ನು ನಂದಿಸುವುದು ದೂರದ ಮಾತು, ಅದು ಇನ್ನಷ್ಟು ಹಬ್ಬದಂತೆ ನಿಯಂತ್ರಿಸುವುದು ಬಹು ದೊಡ್ಡ ಸವಾಲಾಗಿತ್ತು. ಆ ಸಮಯದಲ್ಲಿ ಆಹುತಿಯಾಗಿದ್ದು ಇದೊಂದೇ ಕಾಡಲ್ಲ! ಸೇತುವೆಗಳು, ರಸ್ತೆಗಳು, ಪ್ರವಾಸಿ ಕೇಂದ್ರಗಳು ಹೀಗೆ ಬಹಳಷ್ಟು ಸಂಪತ್ತು ನಾಶವಾಗಿತ್ತು.
ಇಷ್ಟೆಲ್ಲ ಕೇಳಿದ ಮೇಲೆ ಮನಸ್ಸಿಗೆ ಬೇಸರವಾಗುವುದು ಸಹಜ. ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣಿತನಾಗಿರುವ ಮಾನವನಿಗೆ ಬಹು ಕಷ್ಟವಾದ (ಆದರೆ ಅಸಾಧ್ಯವಲ್ಲದ!) ಒಂದು ಕೆಲಸವೆಂದರೆ ನಿಸರ್ಗವನ್ನು ಮರುಸೃಷ್ಟಿಸುವುದು. ಒಂದು ಮರವನ್ನು ಕಡಿಯಲೇಬೇಕಾದಂತಹ ಪರಿಸ್ಥಿತಿ ಬಂದರೆ ಇನ್ನೆಲ್ಲೋ ಹತ್ತು ಸಸಿಗಳನ್ನು ನೆಡಬೇಕು. ಆಗ ಮಾತ್ರ ನಮಗೆ ಈ ನಿಸರ್ಗವೆಂಬ ಅಮೂಲ್ಯ ನಿಧಿಯನ್ನು ಕಾಪಾಡಿಕೊಂಡು ಹೋಗಲು ಸಾಧ್ಯ. ಹೀಗಿರುವಾಗ ಸಾವಿರಾರು ಎಕ್ರೆಗಟ್ಟಲೇ ಹರಡಿದ್ದ ಕಾಡು, ಲಕ್ಷಾಂತರ ಮರಗಳು ಸುಟ್ಟು ಬೂದಿಯಾದರೆ ಅವುಗಳನ್ನು ಮತ್ತೆ ಮೊದಲಿನ ರೂಪಕ್ಕೆ ಮರಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡರೆ ತಪ್ಪಾದೀತು. ತನ್ನ ಸುಟ್ಟ ಮೈಚರ್ಮವನ್ನು ಉದುರಿಸಿಕೊಂಡು ಹೊಸ ಚರ್ಮವನ್ನು ಹುಟ್ಟಿಸುವ ತಾಕತ್ತು ನಿಸರ್ಗಕ್ಕಿದೆ. ಮಾಯದ ಗಾಯದಿಂದ ಹೊರಬಂದು ಮತ್ತೆ ನಳನಳಿಸುವ ಚೈತನ್ಯವನ್ನು ತುಂಬಿಕೊಳ್ಳುವ ಆತ್ಮಸ್ಥೆçರ್ಯ ನಿಸರ್ಗಕ್ಕಿದೆ. ಸುಮಾರು ಮೂರು ವರ್ಷಗಳ ಕಾಲ ಮುಚ್ಚಿದ್ದ ಬಿಗ್ ಬೇಸಿನ್ ಪಾರ್ಕ್ ಈಗ ಮತ್ತೆ ಪ್ರವಾಸಿಗರಿಗೆ ತನ್ನ ಬಾಗಿಲನ್ನು ನಿಧಾನವಾಗಿ ತೆರೆದಿದೆ. ಮೊನ್ನೆ ಜುಲೈ 2023ರಿಂದ ನೋಂದಣಿ ಆಧಾರದ ಮೇಲೆ ದಿನಕ್ಕೆ ಇಂತಿಷ್ಟೇ ನೋಡುಗರಿಗೆ ತೆರೆದಿದೆ. ಒಳ ಹೋಗಿ ನೋಡಿದರೆ ಖಂಡಿತವಾಗಿಯೂ ಮೈ ನವಿರೇಳುತ್ತದೆ. ನೋವಿನಿಂದ ಹೊರ ಬರಲು ಯತ್ನಿಸುತ್ತಿರುವ ಈ ಕಾಡನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ.
ಹೌದು. ಬಿಗ್ ಬೇಸಿನ್ ಕಾಡು ಮತ್ತೆ ಚೇತರಿಸಿಕೊಳ್ಳುತ್ತಿದೆ. ಅಗ್ನಿಜ್ವಾಲೆಯಲ್ಲಿ ಸುಟ್ಟು ಬೂದಿಯಾದ ಮರಗಳೆದಷ್ಟೋ….ಆದರೆ ಅರೆಬೆಂದ ಮರಗಳಿವೆಯಲ್ಲ…ಅವುಗಳ ತುದಿಗೆ ಹಸುರು ಚಿಗುರು ಕಾಣಿಸುತ್ತಿದೆ. ಬಣ್ಣ ಕಳೆದುಕೊಂಡು ಕಪ್ಪಾಗಿ, ಬಿರುಕು ಬಿಟ್ಟ ಈ ಮರಗಳ ಮಧ್ಯದಿಂದ ಗಿಳಿ ಹಸುರು ಬಣ್ಣದ ಎಲೆಗಳು ಇಣುಕಿ ಹಾಕುತ್ತಿವೆ. ಈ ಮರಗಳು ಮತ್ತೆ ಮೊದಲಿನಂತಾಗಲು ಇನ್ನೂ ಬಹಳ ಸಮಯ ಬೇಕು. ನೂರು ವರ್ಷಗಳೇ ಆಗಬಹುದು. ಆದರೆ ಮತ್ತೆ ಹುಟ್ಟಬೇಕು, ಬದುಕಬೇಕು, ಗಾಳಿಗೆ ಜೀಕಬೇಕು ಎಂಬ ಚೈತನ್ಯ ಇದೆಯಲ್ಲ ಅದು ನಮಗೆ, ಮಾನವರಿಗೆ ಸ್ಫೂರ್ತಿಯಾಗಬೇಕು. ಮೊದಲು ಕಾಡಿನ ತುಂಬ ಒತ್ತಾಗಿ ಮರಗಳಿದ್ದರಿಂದ ಸೂರ್ಯನ ಕಿರಣಗಳು ಭೂಮಿಯನ್ನು ಅಷ್ಟಾಗಿ ತಲುಪುತ್ತಿರಲಿಲ್ಲ. ಆದರೆ ಈಗ ಇಡೀ ಕಾಡು ಸೂರ್ಯನಿಗಾಗಿ ಬಾಯಿ ತೆರೆದುಕೊಂಡು ನಿಂತಿದೆ. ಇದರ ಪರಿಣಾಮವಾಗಿ ಹೊಸ ಬಗೆಯ ಹುಲ್ಲು, ಸಸಿಗಳು ಇಲ್ಲಿನ ನೆಲದಿಂದ ಟಿಸಿಲೊಡೆಯುತ್ತಿವೆ. ಬಿದ್ದು ಹೋದ ಮರಗಳ ಬೊಡ್ಡೆಗಳ ಮೇಲೂ ಹಸುರು ಚಿಗುರೊಡೆಯುತ್ತಿದೆ.
ಸದ್ಯಕ್ಕೆ ಇಡೀ ಕಾಡಿನಲ್ಲಿ ಓಡಾಡಲಿಕ್ಕೆ ಆಸ್ಪದವಿಲ್ಲ. ಒಂದು ಸಣ್ಣ ಸುತ್ತಿಗೆ ಮಾತ್ರ ಅವಕಾಶ. ಕೆಲವು ಮರಗಳು ಹೊಟ್ಟೆ ಬಿರಿದುಕೊಂಡು ಬೆಂಕಿಗೆ ಪೊಳ್ಳಾಗಿ ನಿಂತಿರುವುದನ್ನು ನೋಡಿದರೆ ಆ ಸಮಯದಲ್ಲಿ ಅದೆಷ್ಟು ನೋವನ್ನು ಅನುಭವಿಸಿದವೋ ಎಂದು ನೆನೆದು ಸಂಕಟವಾಗುತ್ತದೆ. ಮುಟ್ಟಿದರೆ ಎಲ್ಲಿ ಬೂದಿಯಾಗಿ ಕೈಯ್ಯೊಡನೆ ನೆಲಕ್ಕೆ ಉದುರುವವೇನೋ ಎಂಬಂತೆ ಇದ್ದಲಿನ ಹಾಗಾಗಿವೆ ಕೆಲವು ಮರಗಳು. ಈ ಕಾಡನ್ನು ಮತ್ತೆ ಮೊದಲಿನ ಹಾಗೆ ಮಾಡುವಲ್ಲಿ ಸಾಕಷ್ಟು ಪರಿಶ್ರಮ ಮತ್ತು ಹಣದ ಆವಶ್ಯಕತೆಯಿದೆ. ಮನುಷ್ಯ ಅದೆಷ್ಟೇ ಪ್ರಯತ್ನಿಸಿದರೂ ಈ ಕಾಡನ್ನು ಮತ್ತೆ ಮೊದಲಿನ ಹಾಗೆ ಮಾಡಲಿಕ್ಕೆ ಸಾಧ್ಯವಿಲ್ಲ. ಆ ವೈಭವ ಇನ್ನು ಮೇಲೆ ಬರಿಯ ಕಲ್ಪನೆಯಷ್ಟೇ. ಆದರೆ ಮನಸ್ಸಿಟ್ಟು ಕೆಲಸ ಮಾಡಿದರೆ ಮೊದಲಿದ್ದ ಕಾಡಿನ ಅರ್ಧದಷ್ಟನ್ನಾದರೂ ಮತ್ತೆ ಬದುಕಿಸಬಹುದು.
ಯಾವುದು ಅಸಾಧ್ಯವಿಲ್ಲ ಎಂದು ಈ ಮರಗಳೇ ನಮಗೆ ಪಾಠ ಹೇಳಿ ಕೊಡುತ್ತಿರುವಾಗ ಅಸಾಧ್ಯ ಎಂದು ಕೈ ಕಟ್ಟಿ ಕೂರುವುದು ಹೇಗೆ? ದೈತ್ಯ ಮರಗಳು ಬೆಂಕಿಯಲ್ಲಿ ಉರಿದು ನೆಲಕ್ಕೆ ಉರುಳದೇ, ಸೋಲನ್ನೊಪ್ಪಿಕೊಳ್ಳದೇ ಅರ್ಧ ಬೆಂದಿದ್ದರೂ ತಲೆಯೆತ್ತಿ ನಿಂತಿವೆ. ಅಂತಹ ಮರಗಳೇ ಈಗ ಭರವಸೆಯನ್ನು ಮೂಡಿಸಿರುವುದು. ನೂರಾರು ವರ್ಷಗಳಾದರೂ ಪರವಾಗಿಲ್ಲ ಆದರೆ ಈ ಕಾಡಿನ ಜೀವ ಮತ್ತೆ ಮರಳಿ ಬರುತ್ತದೆ ಎಂದರೆ ಖುಷಿಯ ಸಂಗತಿಯೇ ಅಲ್ಲವೇ!
*ಸಂಜೋತಾ ಪುರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.