Story: ತೆರೆಯದ ಕಿಟಕಿಯ ಹಿಂದಿನ ಕಥೆ
Team Udayavani, Sep 17, 2023, 1:00 PM IST
ಸ್ವಂತ ಮನೆ ಖರೀದಿಸಿದ್ದಾಯ್ತು. ದಾಖಲೆಗಳಲ್ಲಿ ತಾತ್ಕಾಲಿಕ ವಿಳಾಸ ಎಂದು ಇದ್ದುದನ್ನು ಸ್ವಂತ ವಿಳಾಸ ಎಂದು ಬದಲಾಯಿಸುವಾಗ ಉಕ್ಕುವ ಖುಷಿ ಬೇರೆ. ಹಿಂದಿದ್ದ ಓಣಿ ಜನಗಳ ಪರಿಚಯ, ಒಡನಾಟ ದೂರಾದ ಬೇಗುದಿ ಮನೆಯವಳಿಗೆ. ಹೊಸ ಮನೆಗೆ ಬಂದಾಗಿನಿಂದ ದಿನ ಬೆಳಗಾದರೆ ಎದ್ದು ಬಂದು ಟೆರೇಸಿಸಲ್ಲಿ ನಿಂತು ಸುತ್ತ ನೋಡುತ್ತೇನೆ. ದೂರದಲ್ಲಿ ತಲೆ ಎತ್ತುತ್ತಿರುವ ಮನೆಗಳ ಕಟ್ಟಡ, ಎದುರಿಗಿದ್ದ ಖಾಲಿ ಸೈಟುಗಳನ್ನು ನೋಡಿ ಅವುಗಳ ಬೆಲೆ ವಿಚಾರಿಸುವವರ ಸಾಲು ಕಾಣಿಸುತ್ತಿತ್ತು.
ಆ ಸೈಟುಗಳ ಹಿಂದೊಂದು ಮನೆಯಿದೆ. ಆ ಮನೆಯ ಕಿಟಕಿಗಳು ಸದಾ ಮುಚ್ಚಿದ ಸ್ಥಿತಿಯಲ್ಲೇ ಇರುತ್ತವೆ. ಆ ಮನೆಯಲ್ಲಿ ಯಾರೂ ಇಲ್ಲವಾ? ಇದ್ದಾರೆ. ದಾರಿ ಹಾಯುವಾಗೊಮ್ಮೆ ಕಣ್ಣಾಡಿಸುತ್ತೇನೆ. ಮನೆ ಮುಂದೆ ಯಾವಾಗಲೋ ಬಂದು ನಿಲ್ಲುವ ಎರಡು ಬೈಕುಗಳು. ಅಪರೂಪಕ್ಕೆ ಮನೆ ಮುಂದೆ ತುಳಸಿ ಗಿಡಕ್ಕೆ ಫ್ರೆಶ್ ಆದ ಹೂವುಗಳ ಮುಡಿಸಿರುತ್ತಾರೆ. ಅಂದರೆ ಆ ಮನೆಯಲ್ಲಿ ಹೆಂಗಸರಿದ್ದಾರೆ. ಮನೆಯಿಂದ ಆಗಾಗ ಹೊರಬೀಳುವ ಗಿಡ್ಡಕ್ಕಿರುವ ಗಡ್ಡ ಬಿಟ್ಟ ಹುಡುಗ ಮತ್ತು ಐವತ್ತು ದಾಟಿದ ವಯಸ್ಕ ಕಾಣಿಸುತ್ತಾರೆ.
ಸುತ್ತ ಇರುವ ಮನೆಗಳಲ್ಲಿ ಮುದುಕಿಯೊಬ್ಬರು ಸೊಸೆಯಂದರಿಗೆ ಬೈಯುವ ತಾರಾಮಾರಾ ಬೈಗುಳ ಧ್ವನಿ ಬಿಟ್ಟರೆ, ಹಿಂದಿನ ಸಾಲಲ್ಲಿರುವ ಮನೆಯೊಂದರಿಂದ ಎಣ್ಣೆ ಏಟಲ್ಲಿ ಗಲಾಟೆ ಮಾಡುವ ಸದ್ದು. ಉಳಿದಂತೆ ಶ್ರಾವಣದ ಪೂಜೆಗೆ, ಗಣೇಶನ ವೀಕ್ಷಣೆಗೆ, ದೀಪಾವಳಿಯ ಬೆರಗು ತುಂಬಿಕೊಂಡು ಓಡಾಡುವ ಗೃಹಿಣಿಯರು. ವಾಕಿಂಗಿಗೆ ಬರುವ ಯಜಮಾನರೊಬ್ಬರ “ನಮಸ್ಕಾರ…’ ಸಿಗುತ್ತದೆ.
ಇದ್ಯಾವುದೂ ಅಲ್ಲ, ನನಗೆ ಆ ಖಾಲಿ ಸೈಟಿನ ಹಿಂದಿನ ಮನೆಯ ತೆರೆಯದ ಕಿಟಕಿಗಳೇ ಹೆಚ್ಚು ಕುತೂಹಲ ಹುಟ್ಟಿಸುತ್ತವೆ. ಗಾಳಿ ಬೆಳಕಿಗೆಂದಾದರೂ ಆಗಾಗ ತೆರೆಯಬೇಕಲ್ಲವಾ? ಇಲ್ಲ, ತೆರೆದದ್ದು ನೋಡೇ ಇಲ್ಲ. ಹೆಂಡತಿಗೆ ಇದನ್ನೇ ಹೇಳಬೇಕು ಅನ್ನುವಷ್ಟರಲ್ಲಿ ಆಕೆಯೇ ಬಾಯಿ ತೆರೆದಳು. ಓಹೋ, ಇದು ನಾನೊಬ್ಬನೇ ಗಮನಿಸಿದ್ದಲ್ಲ ಅಂದಾಯಿತು. ಆಗಾಗ ಖಾಲಿ ಸೈಟಿನ ಪಕ್ಕದಲ್ಲಿರುವ ಮನೆಗಳ ಓರಗಿತ್ತಿಯರ ಜಗಳ ಕೇಳುತ್ತಿರುತ್ತದೆ. ಅದೊಮ್ಮೆ ಗಂಡನ ಉಗ್ರಾವತಾರ ಕಂಡು ಹೆದರಿದ ಒಂದು ಮನೆಯ ಗೃಹಿಣಿ ನಮ್ಮ ಮನೆ ಗೇಟು ತೆರೆದು- “ಅಣಾ, ನನ್ ಗಂಡ ಸಾಯಿಸ್ತಾನಣಾ, ಏನಾರ ಮಾಡಿ ಕಾಪಾಡಿ…’ ಎಂದು ಅಳುತ್ತಾ ನಿಂತ ದಿನ ಮಾತ್ರ ಗಾಬರಿ ಬಿದ್ದಿದ್ದೆ. ಆ ಗಲಾಟೆಯ ದಿನವೂ ಖಾಲಿ ಸೈಟಿನ ಹಿಂದಿನ ಮನೆಯ ಕಿಟಕಿಗಳು ತೆರೆಯಲಿಲ್ಲ.
ಅದೊಂದು ಬೆಳಿಗ್ಗೆ ಹಬ್ಬವೋ ಏನೋ, ಗೃಹಿಣಿಯರು ಸಡಗರದಿಂದ ಮನೆ ಶುದ್ಧಗೊಳಿಸಲು, ಅಂಗಳ, ಎದುರಿನ ಸಣ್ಣ ಕಟ್ಟೆ ತೊಳೆಯಲು ಆರಂಭಿಸಿದ್ದರು. ಆ ಮನೆಯ ಕಿಟಕಿಗಳು ಸ್ವಲ್ಪ ತೆರೆದಿದ್ದು ಕಾಣಿಸಿತು. ಅಂದಿನಿಂದ ದಿನವೂ ಬೆಳಿಗ್ಗೆ ಗೃಹಿಣಿಯರು ದೈನಂದಿನ ಕೆಲಸಗಳಿಗೆ ಓಡಾಡುವ ಸಮಯದಲ್ಲೇ ಆ ಕಿಟಕಿಗಳು ತೆರೆಯಲಾರಂಭಿಸಿದ್ದವು.
ಆದರೆ, ಈಗ ಒಂದು ದಿಗಿಲೆಂದರೆ ಆ ಕಿಟಕಿಯಿಂದ ಎರಡು ಕೈಗಳು ಚಾಚಿ ಹೊರಬರುತ್ತವೆ. ಗೃಹಿಣಿಯರು ಮನೆ ಹೊರಗೆ ಬಂದಾಗ ಅವರತ್ತ ಆ ಕೈಗಳು ಸನ್ನೆ ಮಾಡಿ ಬಾ ಎಂದು ಕರೆಯುತ್ತವೆ. ಆಗಲೂ ಗೃಹಿಣಿಯರು ನೋಡಿಯೂ ನೋಡದಂತೆ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಕಿಟಕಿಯಿಂದ ಹೊರಚಾಚಿದ ಕೈಗಳು “ಬಾ…’ ಎನ್ನುವ ಹಾಗೂ ಆಂಗಿಕ ಸನ್ನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯ್ತು.
ಆಗ ಆ ಕಿಟಕಿಗಳತ್ತ ಆ ಪಕ್ಕದ ಮನೆಗಳ ಗಂಡಸರ ಗಮನವೂ ಬಿತ್ತು. ಜೊತೆಗೆ ಲುಂಗಿ ಮೇಲಕ್ಕಟ್ಟಿ,”ಇವ್ನೌನ್, ಯಾವನ್ಲೇ ಅವ್ನು, ಇವತ್ತಿದೆ ಆ ಮಗನಿಗೆ…’ ಎಂದು ಸಿಟ್ಟಿನಿಂದಲೇ ಆ ಮನೆಯತ್ತ ಹೊರಟು ನಿಂತವು. ಮೊದಲು ಆ ಗೃಹಿಣಿಯ ಪತಿ, ನಂತರ ನಾನು ಮನೆಗೆ ನುಗ್ಗಿದ್ದಾಯ್ತು. ಮನೆ ಒಳಗೆ ಹೊಸ್ತಿಲು ದಾಟುತ್ತಿದ್ದಂತೆ ಒಂಥರಾ ವಾಸನೆ. ಎಷ್ಟೋ ದಿನಗಳಿಂದ ಶುಚಿಯಾಗಿಟ್ಟುಕೊಳ್ಳದ ವಾತಾವರಣ. ಒಳಹೋಗಿ ಆ ವಯಸ್ಸಾದ ಮುದುಕನನ್ನು ಗದರಿಸುತ್ತಾ, “ಏನ್ರಿ ಇದು ಅಸಹ್ಯ..’ ಅನ್ನುವುದರಲ್ಲೇ ದಪ್ಪಗಾಜಿನ ಚಾಳೀಸು ಏರಿಸುತ್ತಾ ಆ ಹುಡುಗನೂ ಬಂದು “ಸರ್, ಅದು, ಆ ಥರಾ ಏನಿಲ್ಲ, ಒಂದು ನಿಮಿಷ ನಾವ್ ಹೇಳ್ಳೋದನ್ನ ಕೇಳಿ…’ ಎಂದು ಗೋಗರೆದರೂ ನಾವು ಕೇಳುವ ಸ್ಥಿತಿಯಲ್ಲೇ ಇಲ್ಲ. ಮೊದಲು ಆ ಕಿಟಕಿಯಿರುವ ರೂಮಿನಲ್ಲಿ ಯಾರಿದ್ದಾರೆ, ಅವರನ್ನು ವಿಚಾರಿಸಿಕೊಳ್ಳಬೇಕಿತ್ತು.
“ಯಾರದು ಕಿಟಕಿಯಿಂದ ಹೆಂಗಸರಿಗೆ ಸನ್ನೆ ಮಾಡೋದು? ಕರೀರಿ ಅವ್ನ, ಇಲ್ಲಾಂದ್ರೆ ನಾವೇ ರೂಮಿಂದ ಎಳೆದು ತರುತ್ತೇವೆ’ ಎಂದು ರೂಮು ಹೊಕ್ಕರೆ- ಅಬ್ಟಾ… ಮತ್ತೂಂಥರಾ ವಾಸನೆ! ಆ ಮನೆಯಲ್ಲಿ ವರ್ಷಗಳಿಂದ ಹಾಸಿಗೆಗಳನ್ನು ತೊಳೆದಿಲ್ಲ. ಆ ಮಂಚದ ಮೇಲೆ ಎದ್ದು ಕೂತು ಓಡಾಡಿ, ವರ್ಷಗಳೇ ಕಳೆದಿರಬಹುದಾದ ಐವತ್ತರ ಆಸುಪಾಸಿನ ಒಂದು ಹೆಣ್ಣು ಮಗಳ ದೇಹ ಆ ಮಂಚದ ಮೇಲಿತ್ತು. ಸನ್ನೆ ಮಾಡಿದ ಕೈಗಳ ಹುಡುಕಿ ಬಂದ ನಮಗೆ ಇದೆಂಥಾ ಸ್ಥಿತಿ ಅನ್ನಿಸಿಬಿಡ್ತು
ಆಗಲೇ ಇನ್ನೊಂದು ಬಾಗಿಲಿಂದ, “ನಾನಲ್ಲ, ನಾನಲ್ಲ…’ ಅನ್ನುತ್ತಾ 20-25 ರ ವಯಸ್ಸಿನ ಹುಡುಗನೊಬ್ಬ ಗಾಬರಿಯಿಂದ ಹೊರಗೆ ಓಡಿದ. ಏನಾಗ್ತಿದೆ ಇಲ್ಲಿ. ಆ ಕಿಟಕಿಯ ರೂಮಿನಲ್ಲಿ ಎದ್ದು ಓಡಾಡಲಾಗದ ಹೆಣ್ಣುಮಗಳಿದ್ದಾಳೆ. ಈ ಕಡೆ “ನಾನಲ್ಲ’ ಅನ್ನುತ್ತಾ ಓಡಿದ ಹುಡುಗನ್ಯಾರು? ನಾನವನನ್ನು ಹಿಂಬಾಲಿಸಿ ಓಡಿದರೆ, ಒಂದಷ್ಟು ದೂರ ಓಡಿ ಒಂದು ಮನೆಯ ಗೇಟು ತೆರೆದು, ಮನೆ ಬಾಗಿಲನ್ನೂ ತೆರೆದು ಅ ಮನೆಯ ಒಡತಿ ಬೆನ್ನಿಗೆ ಅವಿತು, “ಆಂಟಿ.. ಆಂಟಿ…, ಇವ್ರು ನನ್ನ ಹೊಡಿತಾರೆ. ಬ್ಯಾಡಂತೇಳ ಆಂಟಿ’ ಅನ್ನುತ್ತಾ ಎರಡೂ ಕೈಗಳನ್ನು ತೆಲೆ ಮೇಲೆ ಹೊತ್ತು ಗಡಗಡ ನಡುಗುತ್ತಿದ್ದ.
ಕೈ ಎತ್ತಿ ಹೊಡೆಯಲು ಹೊರಟವನು ಸ್ಥಬ್ಧನಾಗಿ ನಿಂತುಬಿಟ್ಟೆ. ಆ ಹುಡುಗ ಸಹಜವಾಗಿಲ್ಲ. ಅವನು ಮಾನಸಿಕ ಅಸ್ವಸ್ಥ. ಮಾತಾಡಿದ್ದನ್ನೇ ಮಾತಾಡುತ್ತಾನೆ. ಗಾಬರಿ ಬಿದ್ದಿದ್ದಾನೆ. “ಛೇ, ಎಂಥ ತಪ್ಪು ಮಾಡಿಬಿಡುತ್ತಿದ್ದೆ..’ ವಾಪಸ್ ಬಂದಾಗ ಆ ಕಿಟಕಿ ಮನೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ ಆ ಹಿರಿಯ ಮತ್ತು ಗಡ್ಡಧಾರಿ ಹುಡುಗ ಕಂಡರು. ಅನಾರೋಗ್ಯದ ತಾಯಿ ಮತ್ತು ಅಸ್ವಸ್ಥ ಮಗನ ಬಗ್ಗೆ ನೋಡಿಯೂ ಇನ್ನೇನು ಜಗಳ ಮಾಡುವುದು? ಏನು ಹೇಳಬೇಕೋ ತಿಳಿಯದೆ ಐದು ನಿಮಿಷದ ನಂತರ ಅವರಲ್ಲಿ ಕ್ಷಮೆ ಕೇಳಿ ಬಂದುಬಿಟ್ಟೆ.
ಅದಾಗಿ ಎರಡು ಮೂರು ತಿಂಗಳಲ್ಲೇ ಮಾನಸಿಕ ಅಸ್ವಸ್ಥ ಹುಡುಗ ತೀರಿಹೋದನೆಂದೂ, ವೃದ್ಧ ತಂದೆ ಮತ್ತು ಅವರ ಮಗ ಕ್ರಿಯಾಕರ್ಮಾದಿಗಳನ್ನು ಮುಗಿಸಿದರೆಂದು ತಿಳಿದು ಕಸಿವಿಸಿಯಾಯ್ತು. ಈಗ ನಾವು ಆ ಕಿಟಕಿಯತ್ತ ನೋಡುತ್ತಿಲ್ಲ.
-ಅಮರದೀಪ್ ಪಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.