![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 23, 2023, 12:50 PM IST
ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆಯಿಂದಲೇ ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದೆ. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರು. ಬೆಳಿಗ್ಗೆ ತೆರೆದಿದ್ದ ಹೋಟೆಲ್ ಗಳು ಬಂದ್ ಕಾವೇರುತ್ತಿದ್ದಂತೆ ಬಾಗಿಲು ಮುಚ್ಚಿದವು.
ಚಲನಚಿತ್ರ ಮಂದಿರಗಳು ಬೆಳಗಿನ ಮತ್ತು ಮಧ್ಯಾಹ್ನದ ಚಿತ್ರ ಪ್ರದರ್ಶನವನ್ನು ರದ್ದು ಮಾಡಿದ್ದವು. ಸರ್ಕಾರಿ ಮತ್ತು ಖಾಸಗಿ ಬಸ್, ಟೆಂಪೋ ಸೇರಿ ಖಾಸಗಿ ವಾಹನ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಆಟೋ ಸಂಚಾರ ವಿರಳವಾಗಿದ್ದು, ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ತೆರೆದಿದ್ದ ಕಾಲೇಜುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ ಸಾರ್ವಜನಿಕರ ಓಡಾಟ ಕಡಿಮೆಯಾಗಿತ್ತು.
ಬೈಕ್ ಜಾಥಾ ಮೂಲಕ ಮಂಡ್ಯ ನಗರ ಸುತ್ತಿದ ಪ್ರತಿಭಟನಾಕಾರರು ಕೆಲವು ಪ್ರದೇಶಗಳಲ್ಲಿ ತೆರೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಪ್ರಮುಖ ಪ್ರದೇಶವಾದ ಪೇಟೆ ಬೀದಿ, ಬೆಂಗಳೂರು -ಮೈಸೂರು ಹೆದ್ದಾರಿ, ವಿ.ವಿ ರಸ್ತೆ, ಗುತ್ತಲು ರಸ್ತೆ, ಡಾ.ಬಿ. ಆರ್ ಅಂಬೇಡ್ಕರ್ ರಸ್ತೆ, ಆರ್.ಪಿ.ರಸ್ತೆ, ವಿನೋಬಾ ರಸ್ತೆ, ಕೆ.ಆರ್.ರಸ್ತೆ, ವಿವೇಕಾನಂದ ರಸ್ತೆ ಗಳಲ್ಲಿ ಬಂದ್ ವಾತಾವರಣ ಕಂಡು ಬಂದಿತು.
ಕೊನೆಯ ಶನಿವಾರ ನಿಮಿತ್ತ ಕೇಂದ್ರ, ರಾಜ್ಯ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಹೆಚ್ಚಿರುವ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಸಾರ್ವಜನಿಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೆ, ಪ್ರತಿಭಟನಾಕಾರರು ಸಹ ಅತ್ತ ಸುಳಿಯಲಿಲ್ಲ. ನ್ಯಾಯಾಲಯ ಎಂದಿನಂತೆ ಕಾರ್ಯ ಕಲಾಪ ಆರಂಭಿಸಿತ್ತಾದರೂ ವಕೀಲರು ಕಾರ್ಯಕಲಾಪ ಬಹಿಷ್ಕರಿಸಿದರು. ಕಾವೇರಿ ಹೋರಾಟದ ಮಂಡ್ಯ ಬಂದ್ ಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮಂಡ್ಯ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಾಗಿತ್ತು. ನಗರದ ಹೃದಯಭಾಗ ಜೆ.ಸಿ.ವೃತ್ತದ ನಾಲ್ಕು ರಸ್ತೆಗಳನ್ನು ಬಂದ್ ಮಾಡಿ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಪ್ರಮುಖ ಪ್ರಮುಖ ರಸ್ತೆ, ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವ ಮೂಲಕ ಕಟ್ಟೆಚ್ಚರ ವಹಿಸಲಾಗಿತ್ತು.
You seem to have an Ad Blocker on.
To continue reading, please turn it off or whitelist Udayavani.