ನೋಡಬನ್ನಿ ಕರುನಾಡಿನ ಪ್ರವಾಸಿತಾಣಗಳ ಸೊಗಸು: ಪೌರಾಣಿಕ ಹಿನ್ನೆಲೆಯ ಕಡಲ ಕಿನಾರೆ ಸೋಮೇಶ್ವರ
ಸುಂದರ ಪ್ರದೇಶ ಸಸಿಹಿತ್ಲು, "ಸರ್ಫಿಂಗ್' ಕಾರಣದಿಂದ ಜನಪ್ರಿಯಗೊಂಡಿತ್ತು
Team Udayavani, Sep 27, 2023, 1:20 PM IST
ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ಹಿನ್ನೆಲೆಯಲ್ಲಿ ಉದಯವಾಣಿ ಪತ್ರಿಕೆಯು ಅತ್ಯಂತ ಅಪರೂಪದ, ಜನರ ಕಣ್ಣಿಗೆ ಹೆಚ್ಚು ಕಾಣದ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದೆ. ನೀವಿರುವ ಸ್ಥಳಗಳಿಗೆ ಹೊರತಾಗಿ, ದೂರದ ಅಥವಾ ಬೇರೊಂದು ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯ ಮಾಡಿ ಕೊಡಲಾಗುತ್ತದೆ.
ಪೌರಾಣಿಕ ಹಿನ್ನೆಲೆಯ ಕಡಲ ಕಿನಾರೆ ಸೋಮೇಶ್ವರ
ಮಂಗಳೂರು ತಾಲೂಕಿನ ಸರಹದ್ದಿನ ಅಳಿವೆ ಬಾಗಿಲಿನಿಂದ ಕೇರಳ -ತಲಪಾಡಿ ಗಡಿಭಾಗವಾದವರೆಗಿನ ಸುಂದರ ಕಡಲ ಕಿನಾರೆಗಳಲ್ಲಿಯೇ ಅತ್ಯಂತ ಆಕರ್ಷಕ ಮತ್ತು ಹೆಚ್ಚು ವಿಸ್ತಾರವನ್ನು ಹೊಂದಿರುವ ಸೋಮೇಶ್ವರ ಕಡಲತಡಿ ಧಾರ್ಮಿಕ ಮತ್ತು
ಐತಿಹಾಸಿಕವಾಗಿಯೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಕಡಲ ಕಿನಾರೆಯಲ್ಲಿರುವ ರುದ್ರ ಪಾದೆ ಮತ್ತು ಇತರ ಬಂಡೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿದಾಗ ಚಿಮ್ಮುವ ಬೆಳ್ನೊರೆಗಳ ದೃಶ್ಯವಂತೂ ಮನಮೋಹಕ. ಪ್ರವಾಸಿಗರು ಸಮುದ್ರಕ್ಕೆ ಇಳಿಯುವಾಗ ಜಾಗರೂಕತೆ ವಹಿಸುವುದು ಅಗತ್ಯ.
ದಾರಿ: ಮಂಗಳೂರಿನಿಂದ ರಾ. ಹೆ. 66ರ ತೊಕ್ಕೊಟ್ಟು ಜಂಕ್ಷನ್‌ನಿಂದ ಬಲಭಾಗದ ರಸ್ತೆಯಾಗಿ ಉಳ್ಳಾಲ ಅಬ್ಬಕ್ಕ ಸರ್ಕಲ್‌ನಂದ ಎಡಭಾಗಕ್ಕೆ ಸಂಚರಿಸುವ ಮೂಲಕ ಒಂಬತ್ತುಕೆರೆಯಾಗಿ ಸೋಮೇಶ್ವರ ಕಡಲ ಕಿನಾರೆ ತಲುಪಬಹುದು. ಒಂಬತ್ತುಕೆರೆಯ ಮೂಡಾ ಸೈಟ್ ಮಾರ್ಗವಾಗಿಯೂ ತೆರಳಬಹುದು. ಉಳ್ಳಾಲ ಮಾರ್ಗವಾಗಿ ಬಸ್ ಸೌಲಭ್ಯವೂ ಇದೆ. ಕೋಟೆ ಕಾರಿನಿಂದ ಉಳ್ಳಾಲ ರೈಲ್ವೇ ಸ್ಟೇಶನ್‌ಮಾರ್ಗವಾಗಿಯೂ ಹೋಗಬಹುದು.
ಸನಿಹದ ಪ್ರೇಕ್ಷಣೀಯ ಸ್ಥಳಗಳು: ಉಚ್ಚಿಲ ಬೀಚ್, ಮೊಗವೀರಪಟ್ಣ ಬೀಚ್, ಸಮ್ಮರ್ ಸ್ಯಾಂಡ್, ಉಳ್ಳಾಲ ದರ್ಗಾ, ಒಂಬತ್ತುಕೆರೆ, ಉಳ್ಳಾಲ ದರ್ಗಾ, ಕೋಟೆಪುರ ಬಳಿಯ ಅಳಿವೆ ಬಾಗಿಲು
ಸಸಿಹಿತ್ಲು:ಹೆದ್ದೆರೆಗಳ ನಡುವೆ ಸರ್ಫಿಂಗ್ ಸಾಹಸ
ರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯುವ ಸಸಿಹಿತ್ಲು ಕಡಲ ತೀರ “ಸರ್ಫಿಂಗ್’ ತಾಣವಾಗಿಯೇ ಗುರುತಿಸಿಕೊಂಡಿದೆ. ಮೂಲ್ಕಿ ತಾಲೂಕಿನ ಸಸಿಹಿತ್ಲು ಕಡಲ ತೀರ ಪ್ರವಾಸಿಗರ ಮನಮೋಹಕ ಪ್ರದೇಶ. ನದಿ-ಸಮುದ್ರ ಸೇರುವ ಸುಂದರ ಪ್ರದೇಶ ಸಸಿಹಿತ್ಲು, “ಸರ್ಫಿಂಗ್’ ಕಾರಣದಿಂದ ಜನಪ್ರಿಯಗೊಂಡಿತ್ತು. ಇದೀಗ ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲು
ಸರಕಾರ ನಿರ್ಧರಿಸಿದೆ. ಮಳೆಗಾಲ ಹೊರತುಪಡಿಸಿ ಇತರ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಮಧ್ಯಾಹದ ಬಳಿಕ ಭೇಟಿ ನೀಡಿದರೆ ಸಂಜೆಯ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸಬಹುದು. ಸಮುದ್ರಕ್ಕೆ ಇಳಿಯುವಾಗ ಜಾಗ್ರತೆ ವಹಿಸುವುದು ಅತ್ಯಗತ್ಯ.
ದಾರಿ: ಮಂಗಳೂರಿನಿಂದ ಸುಮಾರು 22 ಕಿ.ಮೀ. ದೂರದಲ್ಲಿರುವ ಸಸಿಹಿತ್ಲು ಕಡಲ ತೀರಕ್ಕೆ “2 ಎ’ ನಂಬರ್‌ನ ಖಾಸಗಿ ಬಸ್ ಇದೆ. ದ್ವಿಚಕ್ರ-ಕಾರು ಸಹಿತ ಇತರ ವಾಹನಗಳ ಮೂಲಕವೂ ತಲುಪಬಹುದು.
ಸನಿಹದ ಪ್ರೇಕ್ಷಣೀಯ ಸ್ಥಳಗಳು: ಪಡು ಪಣಂಬೂರು ಜೈನ ಬಸದಿ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ, ಮೂಲ್ಕಿ ಪಡುಪಣಂಬೂರು ಅರಮನೆ, ಸುರತ್ಕಲ್, ಪಣಂಬೂರು ಬೀಚ್.
ಸೌಂದರ್ಯದ ಪ್ರವಾಸಿ ತಾಣ ಬಬ್ಬುಕುದ್ರು
ಕುಂದಾಪುರ ನಗರಕ್ಕೆ ಸಮೀಪದಲ್ಲಿ ಇರುವ, ಅರಬಿ ಸಮುದ್ರದ ಹೊಳೆಯುವ ಹಿನ್ನೀರಿನಿಂದ ಆವೃತವಾಗಿರುವ ಬಬ್ಬು ಕುದ್ರು ಸೌಂದರ್ಯದ ಪ್ರವಾಸಿ ತಾಣ. ಪೇಟೆಯಿಂದ ಕಡಿಮೆ ಅಂತರದಲ್ಲಿ ಇರುವ ಬಬ್ಬು ಕುದ್ರು ಸಣ್ಣ, ಜನವಸತಿ ಇಲ್ಲದ ದ್ವೀಪ. ಸುತ್ತೆಲ್ಲ ನೀರು.ದ್ವೀಪದ ಒಳಗೆ ಹಚ್ಚ ಹಸುರು. ಈ ದ್ವೀಪವು ಅರಬಿ ಸಮುದ್ರದ ಮರಳು ಸವೆತದ ಪರಿಣಾಮದಿಂದ ಸೃಷ್ಟಿಯಾಗಿದೆ. ದ್ವೀಪವು ಚಿಕ್ಕದಾಗಿದ್ದರೂ, ವೈವಿಧ್ಯತೆಯನ್ನು ಹೊಂದಿದೆ. ನಿತ್ಯಹರಿದ್ವರ್ಣ ಮರಗಳ ಕಾರಣದಿಂದ ವಿಶಾಲ ಜಾಗವೂ ಇರುವುದರಿಂದ ಮನಸ್ಸಿನ ವಿಶ್ರಾಂತಿಗೆ ಪ್ರಶಸ್ತ ಸ್ಥಳವಾಗಿದೆ.
ಸೌಲಭ್ಯ: ಯಾವುದೇ ಅಂಗಡಿ, ಇತರ ಸೌಲಭ್ಯಗಳಿಲ್ಲ. ಹೋಗುವಾಗಲೇ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು.
ದಾರಿ: ಮಿನಿ ವಿಧಾನಸೌಧದ ಬಳಿ ನದಿ ತೀರದಲ್ಲಿ ಬಾಡಿಗೆಗೆ ಸಣ್ಣ ಮರದ ದೋಣಿಗಳಿದ್ದು ಅವುಗಳ ಮೂಲಕ 20 ನಿಮಿಷಗಳ ಪ್ರಯಾಣದಲ್ಲಿ ದ್ವೀಪ ಪ್ರವೇಶಿಸಬಹುದು. ಸಾಮಾನ್ಯವಾಗಿ ಒಬ್ಬರಿಗೆ 150 ರೂ. ದರ ವಿಧಿಸಲಾಗುತ್ತದೆ.
ಸನಿಹದ ಪ್ರವಾಸಿ ತಾಣಗಳು: ಸುತ್ತಮುತ್ತಲಿನ ಇನ್ನಷ್ಟು ಕುದ್ರುಗಳನ್ನು ನೋಡಬಹುದು
ಶಕ್ತಿ ಸ್ವರೂಪ ಶ್ರೀಸೂಗೂರೇಶ್ವರ ಸ್ವಾಮಿ
ರಾಯಚೂರು ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣಗಳಲ್ಲಿ ತಾಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನ ಬಹಳ ಪ್ರಭಾವಶಾಲಿ. ಇಲ್ಲಿ ನಡೆಯುವ ಜೋಡು ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ. ಜಂಗಮರೂಪಿ ಶ್ರೀ ಸೂಗೂರೇಶ್ವರ ಸ್ವಾಮಿ ನೆಲೆನಿಂತು ಅನೇಕ ಪವಾಡಗೈದು ಚರಿತ್ರೆ ಈ ಸ್ಥಳದ್ದಾಗಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ,
ಮಹಾರಾಷ್ಟ್ರಗಳಿಂದಲೂ ಅಸಂಖ್ಯೆ ಭಕ್ತರು ಈ ದೇವಸ್ಥಾನಕ್ಕೆ ನಡೆದುಕೊಳ್ಳುವುದು ವಿಶೇಷ. ಅಮಾವಾಸ್ಯೆ, ಶ್ರಾವಣ, ಶಿವರಾತ್ರಿ, ಕಾರ್ತಿಕ ಮಾಸ, ಹಬ್ಬ ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ದಾರಿ: ರಾಯಚೂರಿನಿಂದ 18 ಕಿಮೀ ದೂರದಲ್ಲಿದ್ದು, ಬಸ್ ಸೌಲಭ್ಯವಿದೆ. ಆರ್‌ಟಿಪಿಎಸ್ ಇರುವುದು ಕೂಡ ಇದರ ಪಕ್ಕದಲ್ಲೇ. ದೇವಸ್ಥಾನಕ್ಕೆ ಹೋಗುವವರು ಸ್ಥಾವರಗಳನ್ನು ನೋಡಬಹುದು.
ಸನಿಹದ ತಾಣಗಳು: ಪಂಚಮುಖಿ ಗಾಣಧಾಲ ಕ್ಷೇತ್ರ, ಸಿಂಧನೂರು ತಾಲೂಕಿನ ಸೋಮಲಾಪುರದ ಸಿದ್ಧಪರ್ವತದಲ್ಲಿರುವ ಅಂಬಾಮಠ. ಆರ್‌ಟಿಪಿಎಸ್ ಸ್ಥಾವರಗಳು.
ಏಕಶಿಲೆಯಲ್ಲಿದೆ ಶಿವ-ಶಿವೆಯರ ಸಾನಿಧ್ಯ
ಸಮುದ್ರಮಟ್ಟದಿಂದ 1,200 ಅಡಿ ಎತ್ತರದಲ್ಲಿರುವ ಕಾರಿಂಜ ಕ್ಷೇತ್ರದಲ್ಲಿ 800 ಅಡಿಗಳ ಎತ್ತರದ ಏಕ ಶಿಲೆಯ ತುತ್ತತುದಿಯಲ್ಲಿ ಅತ್ಯಂತ ಪ್ರಾಚೀನ ಶಿವಾಲಯವಿದೆ. ಈ ಕ್ಷೇತ್ರವು ಕೊಡ್ಯಮಲೆ ಅರಣ್ಯ ಪ್ರದೇಶದಿಂದ ಸುತ್ತುವರಿದಿದ್ದು, ಸುತ್ತಲೂ ಬೃಹದಾಕಾರದ ಕಲ್ಲುಬಂಡೆಗಳು ಇಲ್ಲಿನ ವಿಶೇಷತೆಯಾಗಿದ್ದು, ಚಾರಣಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ಈ ದೇವಸ್ಥಾನದಲ್ಲಿ, ಶ್ರೀ ಪರಮೇಶ್ವರ ದೇವರು, ಶ್ರೀ ಪಾರ್ವತಿ ದೇವರ ಸಹಿತ ಪರಿವಾರ ದೈವ-ದೇವರ ಸಾನಿಧ್ಯ ಕ್ಷೇತ್ರದಲ್ಲಿದೆ. ಇದೊಂದು ಪ್ರವಾಸಿತಾಣವಾದರೂ, ಧಾರ್ಮಿಕ ಚೌಕಟ್ಟಿನಲ್ಲೇ ಈ ಕ್ಷೇತ್ರಕ್ಕೆ ಭೇಟಿ ನೀಡಬೇಕಿದೆ. ಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೆ ವರ್ಷದ ಎಲ್ಲ ದಿನವೂ ಅವಕಾಶವಿದ್ದು, ಮಳೆಗಾಲದಲ್ಲಿ ಬಂಡೆಕಲ್ಲುಗಳಲ್ಲಿ ಸಾಗುವ ವೇಳೆ ಎಚ್ಚರಿಕೆ ವಹಿಸಬೇಕಿದೆ.
ದಾರಿ: ಕಕ್ಯಪದವಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರಿಂಜ ಮೂಲಕವೇ ಸಾಗುತ್ತವೆ. ಧರ್ಮಸ್ಥಳ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಸಿದರೆ ವಗ್ಗ-ಕಾರಿಂಜ ಕ್ರಾಸ್‌ನಲ್ಲಿ ಇಳಿದು, ಆಟೋ ಮೂಲಕ ಕಾರಿಂಜಕ್ಕೆ ತೆರಳಬಹುದು.
ಸನಿಹದ ಪ್ರಮುಖ ತಾಣಗಳು: ನರಹರಿ ಪರ್ವತ, ಪೊಳಲಿ ದೇವಸ್ಥಾನ, ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ನೇತ್ರಾವತಿ ಕಿನಾರೆಯಲ್ಲಿರುವ ನಂದಾವರ ದೇವಸ್ಥಾನ
ನಯನ ಮನೋಹರ ಮಲ್ಪೆ- ಪಡುಕರೆ ಬೀಚ್
ಮಲ್ಪೆ ಪಡುಕರೆ ಬೀಚ್‌ನ ಒಂದು ಬದಿಯಲ್ಲಿ ಸಮುದ್ರ ಇನ್ನೊಂದು ಬದಿಯಲ್ಲಿ ನದಿ ಉದ್ದಕ್ಕೆ ಚಾಚಿಕೊಂಡಿದೆ. ಇಲ್ಲಿನ ಬೀಚ್ ಪ್ರಶಾಂತ ಹಾಗೂ ನಯನ ಮನೋಹರವಾಗಿದ್ದು ವಿಹಾರಕ್ಕೆ ಹೇಳಿ ಮಾಡಿಸಿದಂತಹ ತಾಣವಾಗಿದೆ. ಪಡುಕರೆ ಬೀಚ್ ಕಡಲತೀರದಲ್ಲಿ ಬೆಳಗ್ಗಿನ 9 ಗಂಟೆಯವರೆಗೆ ಅಲ್ಲಲ್ಲಿ ಕೈರಂಪಣಿ ಮೀನುಗಾರಿಕೆ, ಮುಸ್ಸಂಜೆಯ ಹೊತ್ತು ಸೂರ್ಯಾಸ್ತದ ಸೊಬಗನ್ನು ನೋಡ ಬಯಸುವ ಕಡಲ ಪ್ರೇಮಿಗಳಿಗೆ ಈ ಜಾಗ ಉತ್ತಮ ಆಯ್ಕೆ. ಮಾತ್ರವಲ್ಲದೆ ಬಂದರಿನಲ್ಲಿ ಲಂಗರು ಹಾಕಿದ ಬೋಟುಗಳು, ಮೀನುಗಾರಿಕೆಗೆ ತೆರಳಿದ ಬೋಟುಗಳು ಅಳಿವೆ ಬಾಗಿಲಿನ ಮೂಲಕ ಒಳ ಬರುತ್ತಿರುವ ದೃಶ್ಯವನ್ನು ಸವಿಯಬಹುದಾಗಿದೆ. ವರ್ಷದ ಎಲ್ಲ ದಿನದಲ್ಲೂ ಇಲ್ಲಿಗೆ ತೆರಳಬಹುದು. ಸುಮಾರು 300ಮೀ. ಇಂಟರ್‌ಲಾಕ್ ರಸ್ತೆ, ಶೌಚಾಲಯ ಬಿಟ್ಟರೆ ಇಲ್ಲಿ ಮತ್ತಾವುದೇ ಮೂಲ ಸೌಕರ್ಯಗಳಿಲ್ಲ.
ದಾರಿ: ಉಡುಪಿಯಿಂದ 7-8 ಕಿ.ಮೀ. ದೂರವಿದ್ದು ಸೇತುವೆವರೆಗೆ 2 ಸರಕಾರಿ ಬಸ್‌ನ ಸೇವೆ ಇದೆ. ಕಾರು, ಆಟೋ ಮೂಲಕವೂ ಪಡುಕರೆ ಬೀಚ್ ತಲುಪಬಹುದು.
ಸನಿಹದ ಆಕರ್ಷಣೀಯ ತಾಣಗಳು: ಮಲ್ಪೆ ಸೀವಾಕ್ ವೇ, ಸೀವಾಕ್ ಉದ್ಯಾನವನ, ಮಲ್ಪೆ ಬೀಚ್, ಸೈಂಟ್‌ಮೇರಿಸ್ ಐಲ್ಯಾಂಡ್, ಆಸರೆ ಬೀಚ್, ಕೆಮ್ಮಣ್ಣು ಬಳಿಯ ಕುದ್ರುಗಳು.
ಸಹಸ್ರ ಲಿಂಗಗಳ ಸಂಗಮ
ಶಾಲ್ಮಲಾ ನದಿಯೊಳಗೆ ಇರುವ ಊರು ಸಹಸ್ರಲಿಂಗ. ಶಿರಸಿಯಿಂದ ಅನತಿ ದೂರದ ಹುಳಗೋಳ ಬಳಿ ಇದೆ. ಸಹಸ್ರಾರು ಲಿಂಗಗಳು ಇರುವದರಿಂದ ಸಹಸ್ರಲಿಂಗ ಎಂಬ ಅನ್ವರ್ಥ ನಾಮ. ವಚನ ಸಾಹಿತ್ಯ ಕಾಲವಾದ 12ನೇ ಶತಮಾನದಲ್ಲಿ ಈ ಸಹಸ್ರಲಿಂಗಗಳು ಕೆತ್ತಲ್ಪಟ್ಟವು. ಶಿವರಾತ್ರಿ, ಸಂಕ್ರಾಂತಿಗೆ ಭಕ್ತರ ದಂಡು ಆಗಮಿಸುತ್ತದೆ. ಭೇಟಿಗೆ ಅಕ್ಟೋಬರ್ ದಿಂದ ಜೂನ್ ಸಕಾಲ.
ದಾರಿ: ಶಿರಸಿಯಿಂದ 14 ಕಿಮಿ ದೂರದಲ್ಲಿದೆ. ಬಸ್ ಸೌಲಭ್ಯ ಹಾಗೂ ಸ್ಥಳೀಯ ಟ್ಯಾಕ್ಸಿ ಸೌಲಭ್ಯ ಇದೆ. ಸ್ವಂತ ವಾಹನ ಇದ್ದರೆ ಪ್ರಕೃತಿ ಸೊಬಗು ಸವಿಯಬಹುದು.
ಸನಿಹದ ತಾಣಗಳು: ಸೋಂದಾ. ಸ್ವರ್ಣವಲ್ಲೀ, ವಾದಿರಾಜ, ಜೈನ ಮಠಗಳು.
ರಾಕ್ ಗಾರ್ಡನ್
ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಶಿಗ್ಗಾವಿಯ ತಾಲೂಕು ಗೊಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ವೈವಿಧ್ಯಮಯ ಹಾಗೂ ಅನನ್ಯ ಕಲಾಪೋಷಣಾ ಕೇಂದ್ರವಾಗಿದ್ದು, ತನ್ನೊಳಗೆ ಮಾನವ ನಿರ್ಮಿತ ಸುಂದರ ಕಲೆಗಳನ್ನು ಒಳಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದ ಹಿಂದಿನ ಗ್ರಾಮ ಸಾಮ್ರಾಜ್ಯ ಬಿಂಬಿಸುವ ಕಲಾಕೃತಿಗಳು ಈ ಪ್ರವಾಸಿ ತಾಣದ ಕೇಂದ್ರ ಬಿಂದುವಾಗಿವೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕ ವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಗ್ರಿಗಳು, ಮನೆಗಳ ಮಾದರಿಗಳು, ಇತ್ಯಾದಿ ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ. ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ಉತ್ಸವ ರಾಕ್ ಗಾರ್ಡನ್ ಹೆಸರಿಸಲ್ಪಟ್ಟಿದೆ. ಜೋಳದ ರೊಟ್ಟಿ, ಚಪಾತಿ, ಮೂರು ತರದ ಪಲ್ಯೆಗಳು, ಜುಣುಕದ ವಡೆ, ಬಿರಂಜಿ ರೈಸ್, ಶೇಂಗಾ ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿಯಬಹುದಾಗಿದೆ. ಪ್ರವಾಸಿಗರು ಈ ತಾಣಕ್ಕೆ ಬೆಳಗಿನ ಸಮಯಕ್ಕೆ ಭೇಟಿ ನೀಡಿದರೆ ಉತ್ತಮ. ಅದರಲ್ಲಿಯೂ ಅಕ್ಟೋಬರ್‌ನಿಂದ ಮೇ ತಿಂಗಳ ಸಂದರ್ಭದಲ್ಲಿ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವುದು ಸೂಕ್ತವಾಗಿದೆ.
ದಾರಿ: ಹುಬ್ಬಳ್ಳಿಯಿಂದ 30 ಶಿಗ್ಗಾಂವಿಯಿಂದ 10 ಕಿಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಬಸ್ ಸಂಪರ್ಕ ಹೇರಳವಾಗಿದೆ.
ಸನಿಹದ ತಾಣಗಳು: ಬಾಡದ ಕನಕರ ಅರಮನೆ, ಗಾಯಿತ್ರಿ ತಪೋಭೂಮಿ, ಜೈನ ಬಸದಿ, ಶರೀಫಗಿರಿ,ಸವಣೂರಿನ ವಿಷ್ಣುತೀರ್ಥ,ಕಾಗಿನೆಲೆ.
ಮಾಚಿ ದೇವರ ಜನ್ಮಸ್ಥಳ ದರ್ಶನ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರು ಪರಿಸರದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೆ ಅರಸ ಅಳಿಯ ರಾಮರಾಯನ ಸಮಾಧಿ ಸ್ಥಳ. ವಿಜಯನಗರ ಸಾಮ್ರಾಟರು-ವಿಜಯಪುರ ಶಾಹಿ ಅರಸರ ಕಾಳಗಕ್ಕೆ ಸಾಕ್ಷಿಯಾಗಿದ್ದ ತಾಳಿಕೋಟೆ, ಕೃಷ್ಣಾ ನದಿ ತೀರದಲ್ಲಿರುವ ಬಸವೇಶ್ವರ ಧರ್ಮಪತ್ನಿ ಶರಣೆ ನೀಲಮ್ಮಳ ಸಮಾಧಿ ಸ್ಮಾರಕ, ವೀರಶರಣ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರಹಿಪ್ಪರಗಿಯ ದೇವಾಲಯ ಸೇರಿದಂತೆ ಜಿಲ್ಲೆಯಲ್ಲಿ ಇನ್ನೂ ಹಲವು ತಾಣಗಳಿವೆ. ಇದಲ್ಲದೇ ಈಚೆಗೆ ಜಿಲ್ಲೆಯಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಅಕ್ವಡಕ್ಟ್, ವೈಡಕ್ಟ್ ಯೋಜನೆಗಳ ನಿರ್ಮಿತಿಗಳು ಅಧ್ಯಯನ ಯೋಗ್ಯ ಸ್ಥಳಗಳಾಗಿವೆ.
ದಾರಿ: ಮುದ್ದೇಬಿಹಾಳ ತಾಲೂಕು ಕೇಂದ್ರದಿಂದ ಸುಮಾರು 20 ಕಿಮೀ ದೂರವಿದೆ. ಬಸ್ ಹಾಗೂ ಟ್ಯಾಕ್ಸಿ ಸೌಲಭ್ಯ ಇದೆ. ಸ್ವಂತ ವಾಹನವಿದ್ದರೆ ಸುತ್ತಲಿನ ವಿವಿಧ ಪ್ರೇಕ್ಷಣೀಯ ಸ್ಥಳನ್ನೂ ನೋಡಬಹುದು.
ಸನಿಹದ ತಾಣಗಳು: ಬಸವನಬಾಗೇವಾಡಿಯಲ್ಲಿರುವ ಮೂಲ ನಂದೀಶ್ವರ ದೇವಸ್ಥಾನ, ಸಾಮಾಜಿಕ ಕ್ರಾಂತಿವೀರ ಬಸವೇಶ್ವರ ಜನ್ಮಸ್ಥಳ ಸ್ಮಾರಕ, ಇಂಗಳೇಶ್ವರದಲ್ಲಿರುವ ನವ ನಿರ್ಮಾಣದ ವಚನ ಶಿಲಾಮಂಟಪವಿದೆ.
ಸಂತೆಬೆನ್ನೂರಿನ ಸೌಂದರ್ಯದ ಖಣಿ ಪುಷ್ಕರಣಿ
ಐತಿಹಾಸಿಕ ಹಾಗೂ ಪ್ರಾಕೃತಿಕ ಸೊಬಗನ್ನು ಮೇಳೈಸಿಕೊಂಡು ಜನ ಮನ ಸೆಳೆಯುವ ವಿಶಿಷ್ಟ ಪ್ರವಾಸಿ ತಾಣವೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿದೆ. ಇಲ್ಲಿನ ರಾಮತೀರ್ಥ ಪುಷ್ಕರಣಿ ತನ್ನ ವೈಶಾಲ್ಯತೆ, ವಿನ್ಯಾಸ ಮತ್ತು ಮಧ್ಯದಲ್ಲಿರುವ ಕಾರಂಜಿ ಮಂಟಪಗಳ ಸೌಂದರ್ಯದಿಂದ ಲೋಕ ವಿಖ್ಯಾತವಾಗಿದೆ. ಸಂತೆಬೆನ್ನೂರು ಪಾಳೆಗಾರರಿಂದ ರಚಿತವಾದ 26 ಶಾಸನಗಳಿಂದ ಅಂದಿನ ಇತಿಹಾಸ ತಿಳಿದುಕೊಳ್ಳಬಹುದಾಗಿದ್ದು ಸುಂದರ ಪುಷ್ಕರಣಿ 235 ಅಡಿ ಉದ್ದ ಹಾಗೂ 245 ಅಡಿ ಅಗಲವಿದ್ದು, 30 ಅಡಿ ಆಳವಾಗಿದೆ. ಇದಕ್ಕೆ ಸ್ಥಳೀಯರು “ಹೊಂಡ’ ಎಂದೇ ಎನ್ನುತ್ತಾರೆ. ಸುತ್ತ ಮೂರು ಅಡಿ
ಅಗಲದ ಪೌಳಿಗೋಡೆ ಇದೆ. ವಿಶಾಲವಾಗಿರುವ ಈ ಹೊಂಡಕ್ಕೆ ನಾಲ್ಕೂ ಕಡೆ ಸೋಪಾನಗಳಿವೆ. ಈ ಹೊಂಡದ ಎಂಟು ದಿಕ್ಕುಗಳಲ್ಲಿ ಒಂದೊಂದು ಮಿನಾರ್‌ಗಳಿವೆ. ಇವುಗಳಲ್ಲಿ ಆರು ಮಾತ್ರ ವಿವಿಧ ಸಂರಕ್ಷಣಾ ಸ್ಥಿತಿಯಲ್ಲಿವೆ. ಇಲ್ಲಿ ನಿರ್ಮಿಸಲಾಗಿರುವ ಚೌಕಾಕಾರದ ಮಂಟಪ ನಯನ ಮನೋಹರವಾಗಿದೆ.
ದಾರಿ: ದಾವಣಗೆರೆಯಿಂದ 36 ಕಿಮೀ ಮತ್ತು ಚನ್ನಗಿರಿಯಿಂದ 23 ಕಿಮೀ ದೂರದಲ್ಲಿದೆ. ನೇರ ಬಸ್ ಸಂಪರ್ಕವಿದೆ. ಉಳಿದುಕೊಳ್ಳಲು ಸುತ್ತಮುತ್ತ ಹೋಟೆಲ್‌ಗಳಿವೆ.
ಸನಿಹದ ತಾಣಗಳು: 64 ಕಿಮೀ ವಿಸ್ತಾರ ಹೊಂದಿರುವ ಶಾಂತಿ ಸಾಗರ ಕೆರೆ ಇದೆ. ದಕ್ಷಿಣ ಏಷಿಯಾದಲ್ಲೇ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.