Body Health: ಸಿಹಿ, ಹುಳಿ, ಕಹಿ, ಉಪ್ಪು , ಉಮಾಮಿ: ಬಾಯಿ ರುಚಿ ದೇಹಾರೋಗ್ಯ ಸೂಚಕವೇ?
Team Udayavani, Oct 1, 2023, 9:48 AM IST
ಬಾಯಿಯ ಆರೋಗ್ಯವು ಒಟ್ಟಾರೆ ದೇಹಾರೋಗ್ಯ ಮತ್ತು ಸೌಖ್ಯದ ಸೂಚಕವೂ ಆಗಿದೆ. ನಮ್ಮ ಬಾಯಿಯು ತುಟಿಗಳು, ವಸಡು, ಲಾಲಾರಸ ಗ್ರಂಥಿಗಳು, ಮೃದು ಮತ್ತು ಗಟ್ಟಿ ಅಂಗುಳ (ಪಲೇಟ್) ಮತ್ತು ನಾಲಗೆಗಳನ್ನು ಒಳಗೊಂಡ ಮೌಖೀಕ ಕುಹರವೂ ಆಗಿದೆ. ರುಚಿ ಎಂದರೆ ಬಾಯಿಯ ಕುಹರದಲ್ಲಿ, ಅದರಲ್ಲೂ ನಾಲಗೆಯಲ್ಲಿ ಇರುವ ರಸಾಗ್ರಗಳು ಬಾಯಿಯಲ್ಲಿ ಹಾಕಿಕೊಂಡ ವಸ್ತುವಿಗೆ ರಾಸಾಯನಿಕವಾಗಿ ಪ್ರತಿಸ್ಪಂದಿಸಿದಾಗ ಉಂಟಾಗುವ ಅನುಭವವಾಗಿದೆ. ನಾಲಗೆಯ ಎದುರು ಭಾಗವು ಐದು ಪ್ರಾಥಮಿಕ ರುಚಿಗಳಾದ ಸಿಹಿ, ಉಪ್ಪು, ಕಹಿ, ಹುಳಿ ಮತ್ತು ಉಮಾಮಿ (ಮಾಂಸಹಾರದ ರುಚಿ)ಗಳನ್ನು ಗುರುತಿಸುವ ರಸಾಗ್ರಗಳನ್ನು ಹೊಂದಿದೆ. ರುಚಿಯ ಅನುಭವವು ನಮ್ಮ ದೇಹಾರೋಗ್ಯದ ಶಕ್ತಿಶಾಲಿ ಸೂಚಕವಾಗಿದೆ, ಇರಬಹುದಾದ ಅನಾರೋಗ್ಯದ ಬಗ್ಗೆ ಸೂಚನೆಯನ್ನು ಕೊಡಬಲ್ಲುದಾಗಿದೆ.
ಸಕ್ಕರೆ ಪದಾರ್ಥಗಳು ಶಕ್ತಿಯ ಪ್ರಧಾನ ಮೂಲಗಳಾಗಿರುವುದರಿಂದ ಸಿಹಿಯು ಆದ್ಯತೆಯ ರುಚಿಯಾಗಿದೆ. ಮಧುಮೇಹದಂತಹ ಅನಾರೋಗ್ಯಗಳಲ್ಲಿ ರಕ್ತದಲ್ಲಿ ಗ್ಲುಕೋಸ್ ಅಂಶದ ಹೆಚ್ಚಳ ಕಂಡುಬರುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್‌ಗೆ ಸಾಧ್ಯವಾಗದೆ ಇರುವುದೇ ಇದಕ್ಕೆ ಕಾರಣ. ಇದರಿಂದ ಬಾಯಿಯಲ್ಲಿ ಸಿಹಿಯ ಪರಿಮಳ ಮತ್ತು ರುಚಿ ಉಂಟಾಗುತ್ತದೆ. ಡಯಾಬಿಟಿಕ್ ಕೀಟೋಆಸಿಡೋಸಿಸ್ ಮಧುಮೇಹದ ಒಂದು ಸಂಕೀರ್ಣ ಸ್ವರೂಪವಾಗಿದೆ. ಇದರಲ್ಲಿ ದೇಹದಲ್ಲಿ ಕೀಟೋನ್ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಬಾಯಿಯಲ್ಲಿ ಸಿಹಿಯಾದ, ಹಣ್ಣಿನಂತಹ ಪರಿಮಳ ಮತ್ತು ರುಚಿ ಉಂಟಾಗುತ್ತದೆ. ಜ್ವರ, ಸಾಮಾನ್ಯ ಶೀತದಂತಹ ಸೋಂಕುಗಳು ಉಂಟಾದಾಗ ಜೊಲ್ಲಿನಲ್ಲಿ ಗ್ಲುಕೋಸ್ ಅಂಶ ಹೆಚ್ಚಳವಾಗುತ್ತದೆ, ಇದರಿಂದ ಬಾಯಿಯಲ್ಲಿ ಸಿಹಿ ರುಚಿ ಅನುಭವಕ್ಕೆ ಬರುತ್ತದೆ. ಗರ್ಭ ಧರಿಸಿದ ಆರಂಭದ ಅವಧಿಯಲ್ಲಿ ಸಿಹಿ ರುಚಿ ಅನುಭವಕ್ಕೆ ಬರುತ್ತದೆ; ಇದು ಮಹಿಳೆಯ ದೇಹದಲ್ಲಿ ಹಾರ್ಮೋನ್ ಮಟ್ಟ ಏರುಪೇರಾಗುವುದರ ಪರಿಣಾಮ.
ಕಹಿ
ಕಹಿ ರುಚಿಯ ಆಹಾರವಸ್ತುಗಳು ಜೀರ್ಣಕ್ಕೆ ಸಹಾಯ ಮಾಡುತ್ತವೆ, ಪೌಷ್ಟಿ ಕಾಂಶಗಳನ್ನು ದೇಹವು ಹೀರಿಕೊಳ್ಳಲು ನೆರ ವಾಗುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಯನ್ನು ಉತ್ತೇಜಿಸುತ್ತವೆ. ಸರಿಯಾಗಿ ಹಲ್ಲು ಜ್ಜದೆ, ಫ್ಲಾಸಿಂಗ್ ಮಾಡದೆ ಇರುವುದೇ ಮೊದಲಾದ ಬಾಯಿಯ ನೈರ್ಮಲ್ಯ ಅಭ್ಯಾಸ ಸರಿಯಾಗಿಲ್ಲದೆ ಇದ್ದರೆ ಹಲ್ಲುಗಳ ಸುತ್ತ ಪ್ಲೇಕ್ ಶೇಖರಗೊಂಡು ಜಿಂಜಿವೈಟಿಸ್ ಮತ್ತು ಪೆರಿಡಾಂಟಿಕ್ಸ್ ಸಮಸ್ಯೆಗಳು ಆರಂಭವಾಗುತ್ತವೆ.
ವಸಡುಗಳಲ್ಲಿ ರಕ್ತಸ್ರಾವ ಮತ್ತು ಊದಿಕೊಳ್ಳುವುದು, ಬಾಯಿಯಿಂದ ದುರ್ವಾಸನೆ ಬರುವುದು ಮತ್ತು ಕಹಿ ಅಥವಾ ಲೋಹದಂತಹ ರುಚಿ ಅನುಭವಕ್ಕೆ ಬರುವುದು ಇದರ ಲಕ್ಷಣಗಳು. ಬರ್ನಿಂಗ್ ಮೌತ್ ಸಿಂಡ್ರೋಮ್‌ನಲ್ಲಿ ಬಾಯಿಯಲ್ಲಿ ಉರಿಯ ಅನುಭವ ಉಂಟಾಗುತ್ತದೆ. ಇದರ ಜತೆಗೆ ಕೆಲವರಿಗೆ ಕಹಿ ಅಥವಾ ಕೊಳೆತ ರುಚಿ ಅನುಭವಕ್ಕೆ ಬರಬಹುದು. ಋತುಚಕ್ರ ಬಂಧವನ್ನು ಹೊಂದುತ್ತಿರುವ ಮಹಿಳೆಯರಲ್ಲಿ ಬಾಯಿಯಲ್ಲಿ ಕಹಿ ರುಚಿ ಅನುಭವಕ್ಕೆ ಬರಬಹುದು. ದೇಹದಲ್ಲಿ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗುವುದರಿಂದ ಹೀಗಾಗುತ್ತದೆ.
ಹೆಚ್ಚು ಒತ್ತಡ ಮತ್ತು ಆತಂಕಗಳಿಂದಾಗಿ ದೇಹವು ಒತ್ತಡಕ್ಕೆ ಪ್ರತಿಸ್ಪಂದಿಸುತ್ತದೆ. ಇದರಿಂದಾಗಿ ಬಾಯಿ ಒಣಗಬಹುದು, ಕಹಿ ರುಚಿ ಉಂಟಾಗಬಹುದು. ಬಾಯಿಯ ಅಂಗುಳದ ಸೋಂಕಿನಿಂದಾಗಿ ನಾಲಗೆ, ಬಾಯಿ ಅಥವಾ ಗಂಟಲಿನಲ್ಲಿ ಬಿಳಿಯ ಕಲೆಗಳು ಉಂಟಾಗುತ್ತವೆ. ಇದರಿಂದ ಕೂಡ ಕಹಿ ರುಚಿ ಅಥವಾ ಅಹಿತಕರ ರುಚಿ ಅನುಭವಕ್ಕೆ ಬರಬಹುದಾಗಿದ್ದು, ಸೋಂಕಿಗೆ ಚಿಕಿತ್ಸೆ ಒದಗಿಸುವ ತನಕ ಇರುತ್ತದೆ. ಕೆಲವು ವ್ಯಕ್ತಿಗಳಲ್ಲಿ ಕಿಮೊಥೆರಪಿ ಅಥವಾ ರೇಡಿಯೇಶನ್ ಚಿಕಿತ್ಸೆಗಳು ರಸಾಗ್ರಗಳಿಗೆ ತೊಂದರೆ ಉಂಟುಮಾಡಬಹುದಾಗಿದೆ. ಇದರಿಂದ ಕಹಿ ಅಥವಾ ಅಹಿತಕರ ರುಚಿ ಅನುಭವಕ್ಕೆ ಬರುತ್ತದೆ. ದೀರ್ಘಕಾಲೀನ ಮೂತ್ರಪಿಂಡ ರೋಗಿಗಳ ಜೊಲ್ಲಿನಲ್ಲಿ ಯೂರಿಕ್ ಆಮ್ಲದ ಅಂಶ, ಪೊಟ್ಯಾಸಿಯಂ ಮತ್ತು ಬೈಕಾಬೊìನೇಟ್ ಸಾಂದ್ರತೆ ಹೆಚ್ಚಿರುತ್ತದೆ, ಇದರಿಂದಾಗಿ ಅವರು ಕಹಿ ರುಚಿಗೆ ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ.
ಹುಳಿ
ಹುಳಿ ರುಚಿಯು ಪ್ರಧಾನವಾಗಿ ಜಲಜನಕದ ಅಯಾನ್‌ಗಳ ಗ್ರಹಿಕೆಯಿಂದ ಉಂಟಾಗುತ್ತದೆ. ಸಿಟ್ರಿಕ್ ಆಮ್ಲ, ಮ್ಯಾಲಿಕ್ ಆಮ್ಲ, ಲ್ಯಾಕ್ಟಿಕ್ ಆಮ್ಲ, ಅಸಿಟಿಕ್ ಆಮ್ಲ, ಹೈಡ್ರೊಕ್ಲೋರಿಕ್ ಆಮ್ಲಗಳಂತಹ ಅನೇಕ ಸಾವಯವ ಮತ್ತು ಖನಿಜೀಯ ಆಮ್ಲಗಳು ಹುಳಿ ರುಚಿಗೆ ಕಾರಣವಾಗುತ್ತವೆ.
ಗ್ಯಾಸ್ಟ್ರೊಫೇಜಿಯಲ್ ರಿಫ್ಲಕ್ಸ್ ಕಾಯಿಲೆಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಒಂದು ಅನಾರೋಗ್ಯ. ಅನ್ನನಾಳ ಮತ್ತು ಜಠರದ ಸ್ನಾಯುಗಳು ಸಮರ್ಪಕವಾಗಿ ತೆರೆದು-ಮುಚ್ಚಿಕೊಳ್ಳಲು ವಿಫಲವಾಗುವುದರಿಂದ ಈ ತೊಂದರೆ ಉಂಟಾಗುತ್ತದೆ. ಇದರಿಂದಾಗಿ ಜಠರದಲ್ಲಿರುವ ಅಂಶಗಳು ಆಗಾಗ ಗಂಟಲು ಮತ್ತು ಬಾಯಿಗೆ ಬರುತ್ತವೆ. ಸತತ ಎದೆಯುರಿ ಮತ್ತು ಜಠರದ ಆಮ್ಲೀಯ ಅಂಶಗಳು ಬಾಯಿಗೆ ಬರುವುದು ಇದರ ಪ್ರಮುಖ ಲಕ್ಷಣಗಳಾಗಿದ್ದು, ಬಾಯಿಯಲ್ಲಿ ಹುಳಿ ರುಚಿಯ ಅನುಭವಕ್ಕೆ ಕಾರಣವಾಗುತ್ತವೆ. ಕೆಲವು ಔಷಧಗಳನ್ನು ತೆಗೆದುಕೊಂಡಾಗ ಅವುಗಳು ದೇಹಕ್ಕೆ ಹೀರಿಕೆಯಾಗಿ ಆ ಬಳಿಕ ಜೊಲ್ಲಿಗೆ ಬಿಡುಗಡೆಗೊಳ್ಳುತ್ತವೆ. ಇದರಿಂದಾಗಿಯೂ ಬಾಯಿಯಲ್ಲಿ ಹುಳಿ ರುಚಿಯುಂಟಾಗುತ್ತದೆ. ಆ್ಯಂಟಿಬಯಾಟಿಕ್‌ಗಳು (ಉದಾಹರಣೆಗೆ, ಟೆಟ್ರಾಸೈಕ್ಲಿನ್ ಗಳು), ಗೌಟ್ ರೋಗದ ಔಷಧಗಳು (ಉದಾಹರಣೆಗೆ, ಅಲೊಪ್ಯುರಿನಾಲ್) ಮತ್ತು ಲಿಥಿಯಂ ಇಂತಹ ಔಷಧಗಳಿಗೆ ಕೆಲವು ಉದಾಹರಣೆಗಳು.
ಉಪ್ಪು
ಉಪ್ಪು ಒಂದು ಪ್ರಾಥಮಿಕ ರುಚಿಯಾಗಿದ್ದು, ಆಹಾರಕ್ಕೆ ಸ್ವಾದವನ್ನು ಒದಗಿಸಿಕೊಡುತ್ತದೆ. ಆದರೆ ಉಪ್ಪಿನ ಪ್ರಮಾಣ ಅತಿಯಾದರೆ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳಿಗೆ ಕಾರಣವಾಗಬಲ್ಲುದು. ನಿರ್ಜಲೀಕರಣ ಸ್ಥಿತಿ ಎಂದರೆ ದೇಹದ ನೀರಿನಂಶವು ಹೆಚ್ಚು ನಷ್ಟವಾಗುವುದು ಅಥವಾ ನೀರಿನಂಶದ ಕೊರತೆ ಉಂಟಾಗುವುದು. ಪ್ಲಾಸ್ಮಾದಲ್ಲಿ ಸೋಡಿಯಂ ಅಂಶ ಹೆಚ್ಚಳ ಮತ್ತು ಉಪ್ಪಿನ ರುಚಿ ಅನುಭವಕ್ಕೆ ಬರುವುದು ನಿರ್ಜಲೀಕರಣದ ಸಾಮಾನ್ಯ ಪರಿಣಾಮಗಳು. ಜೊರೆನ್ಸ್ ಸಿಂಡ್ರೋಮ್ ಎಂಬುದು ಜೊಲ್ಲಿನ ಗ್ರಂಥಿಗಳನ್ನು ಬಾಧಿಸುವ ಒಂದು ಆಟೊಇಮ್ಯೂನ್ (ರೋಗನಿರೋಧಕ ಶಕ್ತಿಯು ಪ್ರಮಾದವಶಾತ್ ದೇಹ ಅಂಗಾಂಗಗಳಿಗೆ ಕ್ಕೆ ಹಾನಿ ಉಂಟುಮಾಡುವುದು) ಪ್ರತಿಸ್ಪಂದನೆಯಾಗಿದೆ. ಇದರಿಂದಾಗಿ ಜೊಲ್ಲಿನ ರಿಸೆಪ್ಟರ್ ಗಳನ್ನು ನಿರ್ವಹಿಸುವಷ್ಟು ಜೊಲ್ಲು ಉತ್ಪಾದನೆಯಾಗುವುದಿಲ್ಲ. ಹೀಗಾಗಿ ಬಾಯಿ ಒಣಗುವಿಕೆ ಮತ್ತು ಉಪ್ಪಿನ ರುಚಿ ಉಂಟಾಗುತ್ತದೆ. ಝಿಂಕ್ ಅಂಶದ ಕೊರತೆಯಿಂದಾಗಿ ಹಸಿವು ನಷ್ಟ, ರೋಗನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ, ಗಾಯ ಗುಣವಾಗುವುದು ನಿಧಾನವಾಗುವುದು ಮತ್ತು ಉಪ್ಪಿನ ರುಚಿಯ ಅನುಭವದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೃದಯ ವೈಫಲ್ಯಕ್ಕೆ ತುತ್ತಾಗಿರುವ ರೋಗಿಗಳು ಸಾಮಾನ್ಯ ಆರೋಗ್ಯವಂತರಿಗಿಂತ ಉಪ್ಪನ್ನು ಹೆಚ್ಚು ಇಷ್ಟಪಡುವುದು ಕಂಡುಬಂದಿದೆ.
ಉಮಾಮಿ ರುಚಿ
ನಮ್ಮ ದೇಹಾರೋಗ್ಯಕ್ಕೆ ಪ್ರಮುಖವಾಗಿರುವ ಅಮೈನೊ ಆಮ್ಲಗಳು ಮತ್ತು ಪ್ರೊಟೀನ್ ಗಳನ್ನು ಗುರುತಿಸಲು ಸಹಾಯ ಮಾಡುವ ಉಮಾಮಿ ಪ್ರಾಮುಖ್ಯ ರುಚಿಗಳಲ್ಲಿ ಒಂದಾಗಿದೆ. ಇದು ಆಹಾರದ ಮಾಂಸಲ ಅಥವಾ ಖಾರ ರುಚಿಯಾಗಿದೆ. ಗ್ಲುಟಮೇಟ್, ಐನೊಸಿನೇಟ್ ಮತ್ತು ಗ್ವಾನಲೈಟ್ ಗಳಿಂದ ಈ ರುಚಿ ಉಂಟಾಗುತ್ತದೆ.
ರುಚಿ ಗ್ರಹಿಕೆಯಂತಹ ಬಾಯಿಯ ಚಟುವಟಿಕೆಗಳನ್ನು ಬಲವಾಗಿ ಪ್ರಭಾವಿಸುವ ಜೊಲ್ಲುರಸದ ಸ್ರಾವವನ್ನು ಉಮಾಮಿ ರುಚಿ ಪ್ರಚೋದಿಸುತ್ತದೆ. ಉಮಾಮಿ ರುಚಿ ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ ವಯೋವೃದ್ಧರಲ್ಲಿ ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಯಲ್ಲದೆ ತೂಕ ನಷ್ಟ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ರುಚಿ ಬದಲಾವಣೆಯ ಬಗ್ಗೆ ಗಮನ ಇರಲಿ
ಕಾಯಿಲೆಗಳಿಂದ ಉಂಟಾಗುವ ರುಚಿ ಬದಲಾವಣೆಗಳು, ರುಚಿ ಗ್ರಹಿಕೆ ಶಕ್ತಿಯಲ್ಲಿ ಆಗುವ ಪರಿವರ್ತನೆಗಳಿಂದ ಬಾಯಿಯ ನೈರ್ಮಲ್ಯವನ್ನು ಸರಿಯಾಗಿಟ್ಟುಕೊಳ್ಳುವ ಕ್ರಮಗಳು, ಧೂಮಪಾನ ನಿಲ್ಲಿಸುವುದು, ಸಕ್ಕರೆ ಮತ್ತು ಉಪ್ಪಿನ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವುದು, ದೇಹಾರೋಗ್ಯವನ್ನು ನಿಯಂತ್ರಿಸಿಕೊಳ್ಳುವುದು ಹಾಗೂ ಸಮತೋಲಿತ ಆಹಾರಶೈಲಿಯನ್ನು ಅನುಸರಿಸುವ ಮೂಲಕ ಪಾರಾಗಬಹುದು.
ನಮ್ಮ ದೈನಿಕ ಆಹಾರ ಸೇವನೆಯ ಸಂದರ್ಭದಲ್ಲಿ ನಾವು ಅನುಭವಿಸುವ ಈ ವಿವಿಧ ರುಚಿಗಳು ನಮ್ಮ ನಾಲಗೆ ಚಪಲವನ್ನು ಇಂಗಿಸುವುದು ಮಾತ್ರ ಅಲ್ಲ; ನಮ್ಮ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಗಮನಾರ್ಹ ಸೂಚನೆಗಳನ್ನು ಕೂಡ ಒದಗಿಸುತ್ತವೆ. ಆದ್ದರಿಂದಲೇ ನಮ್ಮ ರುಚಿ ಆದ್ಯತೆಗಳಲ್ಲಿ ಮತ್ತು ಆಹಾರ ಶೈಲಿಯನ್ನು ಬದಲಾವಣೆಗಳು ಉಂಟಾದರೆ ಆ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಯಾಕೆಂದರೆ ರುಚಿ ಆದ್ಯತೆ ಮತ್ತು ಆಹಾರ ಶೈಲಿಗಳು ನಮ್ಮ ದೇಹಾರೋಗ್ಯದಲ್ಲಿ ಸಂಭಾವ್ಯ ಅಸಮತೋಲನದ ಮುನ್ಸೂಚನೆಗಳೂ ಆಗಿರುತ್ತವೆ.
-ಡಾ| ಅಕ್ಷತಾ ಕಾಮತ್
ಕನ್ಸಲ್ಟಂಟ್ ಪೆರಿಯೋಡಾಂಟಿಸ್ಟ್
ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.