![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 4, 2023, 8:54 PM IST
ಗಂಗಾವತಿ: ಮಳೆ ಕೊರತೆಯಿಂದಾಗಿ ಈ ಬಾರಿ ತುಂಗಭದ್ರಾ ಡ್ಯಾಂ ಭರ್ತಿಯಾಗದೇ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಭತ್ತದ ಪೈರನ್ನು ಉಳಿಸಿಕೊಳ್ಳುವುದು ಸವಾಲಾಗುವ ಸಾಧ್ಯತೆ ಇದೆ. ಈ ಮಧ್ಯೆ ಸದ್ಯ ಡ್ಯಾಂನಲ್ಲಿರುವ ನೀರಿನ ಬಳಕೆ ಕುರಿತು ಚರ್ಚೆ ಮಾಡಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಅ. 5ರಂದು ಕರೆಯಲಾಗಿದ್ದು, ಈ ಸಭೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹತ್ವ ಎನ್ನಿಸಿದೆ.
ಈ ಬಾರಿ ಮುಂಗಾರು ಮಳೆ ತಡವಾಗಿ ಆರಂಭ ಮತ್ತು ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಸರಿಯಾದ ವೇಳೆಗೆ ಕಾಲುವೆಗೆ ಹರಿಸದೇ ಇದ್ದುದ್ದರಿಂದ ರೈತರು ಆಗಸ್ಟ್ ಕೊನೆ ವಾರದಿಂದ ಸೆಪ್ಟೆಂಬರ್ ಕೊನೆಯ ತನಕವೂ ಭತ್ತದ ನಾಟಿ ಕಾರ್ಯ ಮಾಡಿದ್ದಾರೆ. ಹೆಚ್ಚಾಗಿ ಸೋನಾ ಮಸೂರಿ ಭತ್ತವನ್ನು ರೈತರು ಬೆಳೆಯುವುದರಿಂದ ಈ ಬೆಳೆ ಕನಿಷ್ಟ 150 ದಿನಗಳಿಗೆ ಕಟಾವು ಮಾಡಲು ಬರುತ್ತದೆ. ಈ ಬಾರಿ ರಾಯಚೂರು ಭಾಗಕ್ಕೆ ನೀರು ತಲುಪಿಸುವ ಉದ್ದೇಶದಿಂದ ಎಡದಂಡೆ ಕಾಲುವೆ ಉಪಕಾಲುವೆಗೆ ತಡವಾಗಿ ನೀರನ್ನು ಎತ್ತಿದ್ದರಿಂದಲೂ ಭತ್ತದ ನಾಟಿ ಕಾರ್ಯ ವಿಳಂಬವಾಯಿತು. ಇವುಗಳ ಪರಿಣಾಮ ಪ್ರಸ್ತುತ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 3.25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಈ ಬೆಳೆ ರೈತರ ಕೈ ಸೇರಲು ಇನ್ನೂ 32 ಟಿಎಂಸಿ ಅಡಿ ನೀರು ಅಗತ್ಯವಾಗಿದೆ ಎನ್ನುವ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ತುಂಗಭದ್ರಾ ಡ್ಯಾಂನಲ್ಲಿ ಸಂಗ್ರಹವಾಗುವ ನೀರನ್ನು ಶೇ. 60:40 ಅನುಪಾತದಂತೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಹಂಚಿಕೊಳ್ಳಬೇಕಿದ್ದು, ಡ್ಯಾಂನಲ್ಲಿ ಸಂಗ್ರಹವಾಗುವ ಒಟ್ಟು ನೀರಿನ ಪ್ರಮಾಣವನ್ನು ಕೇಂದ್ರ ಸರಕಾರದ ಒಡೆತನದ ತುಂಗಭದ್ರಾ ಬೋರ್ಡ್ ಹಂಚಿಕೆ ಮಾಡುತ್ತದೆ. ಮೊದಲ ನೀರಾವರಿ ಸಲಹಾ ಸಮಿತಿ ಸಭೆ ನಡೆದ ಸಂದರ್ಭದಲ್ಲಿ 65 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಮಳೆಗಾಲ ಇರುವ ಕಾರಣ ಮುಂದಿನ ದಿನಗಳಲ್ಲಿ ಮಳೆಯಾಗಿ ನೀರು ಸಂಗ್ರಹವಾಗುವ ಭರವಸೆಯೊಂದಿಗೆ ಆಗಸ್ಟ್ ಕೊನೆಯ ವಾರ ಕಾಲುವೆಗಳಿಗೆ ನೀರು ಹರಿಸಲಾಯಿತು.
ಕಾಲುವೆಗೆ ನೀರು ಹರಿಸಿದರೂ ಡಿಸ್ಟಿಬ್ಯೂಟರಿಗಳನ್ನು ಮುಚ್ಚಿದ್ದರಿಂದ 20 ದಿನಗಳ ಕಾಲ ನೀರು ರಾಯಚೂರು ಭಾಗಕ್ಕೆ ಹರಿಯಿತು. ಇದರಿಂದ ರೊಚ್ಚಿಗೆದ್ದ ಮೇಲ್ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸೆಪ್ಟೆಂಬರ್ ಮೊದಲ ವಾರ ಎಲ್ಲಾ ಕೆಳಮಟ್ಟದ ಕಾಲುವೆಗಳಿಗೆ ನೀರು ಹರಿಸಿದರೂ ಮೇಲ್ಭಾಗದ ರೈತರು ಭತ್ತ ನಾಟಿ ಮಾಡಿಕೊಂಡರು ಡಿಸ್ಟಿಬ್ಯೂಟರಿ ಕೊನೆಯ ಭಾಗದ ರೈತರು ಸೆಪ್ಟೆಂಬರ್ ಕೊನೆ ವಾರದವರೆಗೂ ಭತ್ತ ನಾಟಿ ಮಾಡಿದ್ದು, ಈ ಬೆಳೆ ಕೈಗೆ ಬರಲು ಡಿಸೆಂಬರ್‌ವರೆಗೂ ನೀರಿನ ಅಗತ್ಯವಿದೆ.
ಈ ಮಧ್ಯೆ ತುಂಗಭದ್ರಾ ಡ್ಯಾಂ ಅವಲಂಭಿಸಿಕೊಂಡಿರುವ ಕಾರ್ಖಾನೆಗಳು, ಕುಡಿಯುವ ನೀರು ಯೋಜನೆಗಳು ಹೀಗೆ ಹತ್ತು ಹಲವಾರು ಉದ್ದೇಶಗಳಿಗೆ ನೀರನ್ನು ಉಳಿಸಿ ಬೆಳೆದು ನಿಂತ ಭತ್ತದ ಬೆಳೆಗೆ ನೀರು ಕೊಡುವುದು ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಮೇಲ್ಭಾಗದ ಭದ್ರಾ ಡ್ಯಾಂನಲ್ಲಿಯೂ ಈ ಬಾರಿ ನೀರಿನ ಕೊರತೆ ಇದೆ. ಆದ್ದರಿಂದ ಸರಕಾರ ಆನ್ ಆ್ಯಂಡ್ ಆಫ್ ಪದ್ಧತಿಯ ಮೊರೆ ಹೋಗುವ ಸಾಧ್ಯತೆ ಇದ್ದು, ಈ ಕಾರ್ಯಕ್ಕೆ ಎಡದಂಡೆ ಕಾಲುವೆ ನೀರನ್ನು ನಿರ್ವಹಣೆ ಮಾಡಲು ಸಿಬ್ಬಂದಿಯ ಕೊರತೆ ಇದೆ. ಈ ಎಲ್ಲಾ ಸವಾಲುಗಳನ್ನು ಬೆಂಗಳೂರಿನಲ್ಲಿ ನಡೆಯುವ ಐಸಿಸಿ ಸಭೆ ಎದುರಿಸಲು ಪರಿಹಾರ ಕಂಡುಕೊಳ್ಳುತ್ತದೆ ಎಂದು ಕಾಯ್ದು ನೋಡಬೇಕಿದೆ.
ಮಳೆಯ ಕೊರತೆ ಮತ್ತು ಡ್ಯಾಂನಲ್ಲಿ ಸಂಗ್ರಹವಾದ ನೀರಿನ ಸರಿಯಾದ ನಿರ್ವಹಣೆ ಇಲ್ಲದೇ ಮುಂಗಾರು ಭತ್ತದ ಬೆಳೆ ರೈತರ ಕೈ ಸೇರುವುದು ಅನುಮಾನವಾಗಿದೆ. ಮಳೆಗಾಲ ಆರಂಭವಾದ ತಕ್ಷಣ ಮತ್ತು ಡ್ಯಾಂನಲ್ಲಿ 25 ಟಿಎಂಸಿ ಅಡಿ ನೀರು ಸಂಗ್ರಹವಾದ ತಕ್ಷಣ ಕಾಲುವೆಗಳಿಗೆ ನೀರು ಹರಿಸಿದ್ದರೆ ಈಗಾಗಲೇ ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿರುತ್ತಿತ್ತು. ಸರಕಾರದ ಅವೈಜ್ಞಾನಿಕ ನಿರ್ಣಯದ ಪರಿಣಾಮ ಆಗಸ್ಟ್ ಕೊನೆ ವಾರ ಕಾಲುವೆಗೆ ನೀರು ಹರಿಸಿದರೂ ಇದೇ ಮೊದಲು ರಾಯಚೂರಿಗೆ ನೀರು ತಲುಪಿದ ನಂತರ ಡಿಸ್ಟಿಬ್ಯೂಟರಿಗಳಿಗೆ ನೀರು ಹರಿಸಿದ್ದು, ಭತ್ತದ ಬೆಳೆ ನಾಟಿ ಮಾಡಲು ವಿಳಂಭವಾಗಿದೆ. ಕಳೆದ ವಾರ ಸಹ ಕೊನೆಯ ಭಾಗದ ರೈತರು ಭತ್ತ ನಾಟಿ ಮಾಡಿದ್ದಾರೆ. ತಡವಾಗಿ ನಾಡಿ ಮಾಡಿದ ಭತ್ತದ ಬೆಳೆಗೆ ನೀರು ಸಿಗುವುದು ಅನುಮಾನವಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ರೈತರಿಗೆ ನೆರವಾಗುವ ನಿರ್ಣಯ ಕೈಗೊಳ್ಳಬೇಕು. ಅಕ್ಟೋಬರ್‌ನಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿದ್ದರೆ ಖಚಿತವಾಗಿ ರೈತರು ನಷ್ಟ ಅನುಭವಿಸಬೇಕಿದೆ. ಆದ್ದರಿಂದ ಸರಕಾರ ರೈತರಿಗೆ ನಷ್ಟ ಪರಿಹಾರ ಕೊಡಲು ಸಿದ್ಧತೆ ಮಾಡಿಕೊಳ್ಳಬೇಕು.
- ಟಿ.ಸತ್ಯನಾರಾಯಣ, ಗೂಗಿ ಬಂಡಿ ಸುಬ್ಬಾರಾವ್, ಖಾಜಾಸಾಬ ಹಾಗೂ ತಿಮ್ಮಣ್ಣ ಕನಕರೆಡ್ಡಿ ರೈತರುಗಳು.
-ಕೆ. ನಿಂಗಜ್ಜ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.