Girls: ಸಶಕ್ತ ಹೆಣ್ಣುಮಕ್ಕಳೇ ಸಮಸಮಾಜಕ್ಕೆ ಬುನಾದಿ
Team Udayavani, Oct 11, 2023, 12:23 AM IST
ಹೆಣ್ಣುಮಕ್ಕಳು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಅಭಿವ್ಯಕ್ತಪಡಿಸಲು ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರತೀವರ್ಷ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
1995 ರಲ್ಲಿ ಬೀಜಿಂಗ್‌ನಲ್ಲಿ ನಡೆದ ವಿಶ್ವ ಮಹಿಳಾ ಸಮ್ಮೇಳನದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಕುರಿತಂತೆ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು. ಇದು ಮಹಿಳೆಯರ ಹಕ್ಕುಗಳಿಗೆ ಮಾತ್ರವಲ್ಲದೇ, ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದೂರದೃಷ್ಟಿಯನ್ನು ಹೊಂದಿತ್ತು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅವರನ್ನು ಸಶಕ್ತೀಕರಣಗೊಳಿಸುವ ಅಗತ್ಯವನ್ನು ಮನಗಂಡ ವಿಶ್ವಸಂಸ್ಥೆ 2011ರ ಡಿಸೆಂಬರ್ 19ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು ಘೋಷಿಸುವ ನಿರ್ಣಯವನ್ನು ಕೈಗೊಂಡಿತು. ಅದರಂತೆ 2012ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಗಿತ್ತು.
ಪ್ರಾಚೀನ ಕಾಲದಲ್ಲಿ ಹೆಣ್ಣನ್ನು ಬಹಳ ಗೌರವ ದಿಂದ ಕಾಣಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ, ಪರಕೀಯರ ದಾಳಿ ಹಾಗೂ ಸಮಾಜದಲ್ಲಿನ ತಾರತಮ್ಯ, ಅಸಮಾನತೆಯ ಧೋರಣೆಗಳಿಂದಾಗಿ ಹೆಣ್ಣುಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗತೊಡಗಿತು. ಹೆಣ್ಣು ಮಗುವಿನ ಕುರಿತು ಜನರ ಆಲೋಚನೆ ಬದಲಾದ ಕಾರಣ ಬಾಲ್ಯವಿವಾಹ, ಸತಿ ಪದ್ಧತಿ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಸ್ತ್ರೀ ವಿರೋಧಿ ಪದ್ಧತಿ ಗಳು, ಆಚರಣೆಗಳು ಆರಂಭಗೊಂಡವು. ಇದರಿಂದಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ, ಕಾನೂನು ಹಕ್ಕುಗಳನ್ನು ನಿರಾಕರಿಸಲಾಯಿತು. ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳದಂತಹ ಕೃತ್ಯ ಗಳನ್ನು ತಡೆಗಟ್ಟಲು ಮತ್ತು ಹೆಣ್ಣುಮಕ್ಕಳ ಹಕ್ಕಿನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲ ಹೆಣ್ಣು ಮಕ್ಕಳಿಗೆ ಅವರ ಹಕ್ಕುಗಳನ್ನು ಒದಗಿಸಲು, ಅದರ ಕುರಿತು ಜನರಲ್ಲಿ ಅರಿವು ಮೂಡಿಸಲು ಹಲವಾರು ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಆಚರಣೆಯ ಮಹತ್ವ
ಒಂದು ಕಾಲದಲ್ಲಿ ಹೆಣ್ಣು ಮಗು ಹುಟ್ಟುವುದನ್ನೇ ಕೀಳಾಗಿ ನೋಡಲಾಗುತ್ತಿತ್ತು. ಆದರೆ ಇಂದು ವಾತಾವರಣ ಬದಲಾಗಿದೆ. ಅನೇಕ ಮಂದಿ ಹೆಣ್ಣು ಮಗು ಜನಿಸಲಿ ಎಂದು ಬಯಸುತ್ತಿದ್ದಾರೆ. ಹೆಣ್ಣು ಮಕ್ಕಳ ಸಾಧನೆ ಕಂಡು ಸಂತಸಪಡುತ್ತಿದ್ದಾರೆ. ಹಾಗೆಂದು ಹೆಣ್ಣುಮಕ್ಕಳ ಬಗೆಗಿನ ಸಮಾಜದ ಧೋರಣೆ ಸಂಪೂರ್ಣ ಬದಲಾಗಿದೆ ಎಂದಲ್ಲ. ಇನ್ನೂ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ದುಷ್ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇವೆಲ್ಲವುಗಳಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವ ಜತೆಯಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿಸಿ, ಸಶಕ್ತರನ್ನಾಗಿಸುವ ಮಹತ್ತರ ಆಶಯ, ಉದ್ದೇಶ ಈ ಆಚರಣೆಯ ಹಿಂದಿದೆ.
ಸಮಾಜದಲ್ಲಿ ಬೇರೂರಿರುವ ಗಂಡು-ಹೆಣ್ಣು ಎಂಬ ಲಿಂಗ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ವಿವಿಧ ದೇಶಗಳು ಈ ಹೆಣ್ಣುಮಕ್ಕಳ ದಿನವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸುತ್ತಿವೆ. ಈ ಮೂಲಕ ಸರಕಾರ ಮತ್ತು ಕಾನೂನಿನ ಮುಂದೆ ಪ್ರತೀ ನಾಗರಿಕ ಸರಿಸಮಾನ ಎಂಬುದನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ.
ಆಚರಣೆಯ ಉದ್ದೇಶಗಳು
ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಎಲ್ಲ ತೆರನಾದ ತಾರತಮ್ಯ ವನ್ನು ತೊಡೆದು ಹಾಕುವುದು.
ಹೆಣ್ಣು ಮಗುವಿಗೂ ಎಲ್ಲ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡುವುದು.
ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜದ ದೃಷ್ಟಿಕೋನ ಬದಲಿಸುವುದು.
ಜನರಲ್ಲಿ ಲಿಂಗಸಮಾನತೆಯ ಬಗ್ಗೆ ಜಾಗೃತಿ ಉಂಟು ಮಾಡುವುದು.
ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ.
ಬಾಲ್ಯ ವಿವಾಹಕ್ಕೆ ವಿಧಿಸಲಾಗಿರುವ ನಿಷೇಧದ ಕಟ್ಟುನಿಟ್ಟಿನ ಪಾಲನೆ
ಹೆಣ್ಣು ಮಕ್ಕಳ ಸುರಕ್ಷೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಪರಿಣಾಮಕಾರಿ ಕಾನೂನು ಕ್ರಮಗಳ ಅನುಷ್ಠಾನ
ಸ್ವಾವಲಂಬನೆಯತ್ತ ದಿಟ್ಟ ನಡೆ
ಇಂದು 1.1 ಬಿಲಿಯನ್‌ಗೂ ಹೆಚ್ಚು ಹುಡುಗಿಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ. ಪ್ರತೀ ದಿನ ತಮಗೆ ಎದುರಾಗುವ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ, ಬಾಲ್ಯ ವಿವಾಹ, ಶಿಕ್ಷಣ ಅಸಮಾನತೆ, ಹಿಂಸೆ, ಅನ್ಯಾಯ ಮತ್ತು ಅಸಮಾನತೆಯಂತಹ ಸಮಸ್ಯೆಗಳನ್ನು ಅವರೇ ನಿಭಾಯಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಹೆಣ್ಣುಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನದಲ್ಲೂ ಅಪಾರವಾದ ಸುಧಾರಣೆಗಳು ಇತ್ತೀಚಿನ ವರ್ಷಗಳಲ್ಲಿ ಕಾಣಲಾರಂಭಿಸಿವೆ. ಆದರೆ ಈ ಎಲ್ಲ ವಿಷಯಗಳಲ್ಲಿ ಸಾಗಬೇಕಾದ ಹಾದಿ ಬಹಳಷ್ಟು ದೂರ ಇದೆ.
ಈ ಬಾರಿಯ ಧ್ಯೇಯ
ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವನ್ನು ಪ್ರತ್ಯೇಕ ಧ್ಯೇಯದೊಂದಿಗೆ ಆಚರಿಸಿಕೊಂಡು ಬರಲಾಗಿದೆ. ಅದರಂತೆ ಈ ಬಾರಿ “ಡಿಜಿಟಲ್ ಜನರೇಶನ್, ನಮ್ಮ ಪೀಳಿಗೆ, ನಮ್ಮ ಸಮುದಾಯ, ನಮ್ಮ ಹಕ್ಕುಗಳು, ನಮ್ಮ ಭವಿಷ್ಯ’ ಎಂಬ ಧ್ಯೇಯದಡಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಹೆಣ್ಣು ಮಕ್ಕಳಿಗೂ ತಂತ್ರಜ್ಞಾನದ ಎಲ್ಲ ಅವಕಾಶಗಳು ಮುಕ್ತವಾಗಿ ಲಭಿಸುವಂತೆ ಮಾಡುವ ಗುರಿಯೊಂದಿಗೆ ಈ ಬಾರಿಯ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣಿನ ಸುರಕ್ಷೆ, ಶಿಕ್ಷಣ, ಸಮಾನತೆಯ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಪೂಜಾ ಆರ್. ಹೆಗಡೆ, ಮೇಲಿನಮಣ್ಣಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.