ಶಿಕ್ಷಣದಲ್ಲಿ ಗುರು -ಶಿಷ್ಯ ಸಂಬಂಧ
Team Udayavani, Oct 12, 2023, 11:21 AM IST
ನಮ್ಮ ದೇಶದಲ್ಲಿ ಗುರುವಿಗೆ ವಿಶೇಷ ಸ್ಥಾನಮಾನ, ಗೌರವ ಹಿಂದಿನಿಂದಲೂ ಇದೆ. ಶಿಕ್ಷಕ ಉದ್ಯೋಗವು ಎಲ್ಲಕ್ಕಿಂತಲೂ ಮೇಲು ಎಂಬ ಭಾವನೆಯೂ ಇದೆ. ಯಾಕೆಂದರೆ ಶಿಕ್ಷಕರು ಮುಂದಿನ ಸಮಾಜವನ್ನು ರೂಪಿಸುವವರು, ಮಕ್ಕಳನ್ನು ತಿದ್ದಿ ತೀಡಿ ಅವರ ಭವಿಷ್ಯಕ್ಕೊಂದು ಸುಂದರ ರೂಪ ನೀಡುವವರು. ಗುರುವಿಗಾಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿ ಕೊಟ್ಟ ಏಕಲವ್ಯ, ಗುರುವಿನ ಗದ್ದೆಗೆ ನೀರು ಸೇರುವುದನ್ನು ತಡೆಯಲು ಅಡ್ಡಲಾಗಿ ಮಲಗಿದ ಉದ್ಧಾಲಕ ಮುಂತಾದ ಶಿಷ್ಯರು ನಮಗೆ ಪುರಾಣದಿಂದ ಕಾಣಸಿಗುತ್ತಾರೆ. ನಮ್ಮ ಸಂವಿಧಾನ ಕತೃì ಡಾ| ಭೀಮರಾವ್ ಅಂಬೇಡ್ಕರ್ ಹೆಸರಿನ ಜತೆಯಲ್ಲಿರುವ ಅಂಬೇಡ್ಕರ್ ಎಂಬ ಶಬ್ದ ಅವರ ಶಿಕ್ಷಕರ ಹೆಸರಿನ ಒಂದು ಭಾಗವಾಗಿದೆ. ಆದರೆ ಇಂದು ಎಲ್ಲವೂ ಬದಲಾಗಿದೆ. ಆ ಬದಲಾವಣೆ ಶಿಕ್ಷಣದಲ್ಲೂ ಕಂಡು ಬರುತ್ತದೆ. ಸಹಜವಾಗಿಯೇ ಗುರು-ಶಿಷ್ಯರ ಸಂಬಂಧದಲ್ಲೂ ಇದು ವ್ಯಕ್ತವಾಗುತ್ತಿರುವುದು ನಿರಾಕರಿಸಲಾಗದು.
ಇಂದು ಎಲ್ಲವೂ ಸೇವೆಯ ಬದಲಿಗೆ ಉದ್ಯೋಗವಾಗಿ ಬದಲಾದುದು ಹಾಗೂ ಯುವ ಸಮುದಾಯದಲ್ಲೂ ಹಿರಿಯರಿಗೆ ಗೌರವ ನೀಡುವುದರಲ್ಲಿ ಏನೋ ಲೋಪವಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಹಿಂದೆಲ್ಲ ಒಬ್ಬ ಶಿಕ್ಷಕ ಮನೆಯಿಂದ ಹೊರಗೆ ಬಂದರೆ ದಾರಿಯಲ್ಲಿ, ಪೇಟೆಯಲ್ಲಿ ಅವನಿಗೆ ಸಿಗುವಷ್ಟು ನಮಸ್ಕಾರದ ಗೌರವ ಬೇರೆ ಯಾರಿಗೂ ಸಿಗುತ್ತಿರಲಿಲ್ಲ. ಯಾಕೆಂದರೆ ದಾರಿಯುದ್ದಕ್ಕೂ, ಊರಿನೆಲ್ಲೆಡೆಯೂ ಆತನ ಶಿಷ್ಯವೃಂದವಿರುತ್ತಿತ್ತು. ಅವರೆಲ್ಲರೂ ತಮ್ಮ ಗುರುವನ್ನು ಗೌರವರಿಂದ ಕಾಣುತ್ತಿದ್ದರು. ಆದರೆ ಇಂದು ಕಂಡರೂ ಕಾಣದಂತೆ ಹೋಗುವ ಶಿಷ್ಯವೃಂದವೇ ಹೆಚ್ಚು.
ಗುರು – ಶಿಷ್ಯರ ನಡುವೆ ಈಗ ಸರಕಾರ ಹಾಗೂ ಕಾನೂನಿನ ಕಾರಣದಿಂದಲೂ ಒಂದು ಪರೋಕ್ಷ ಅಂತರ ಸೃಷ್ಟಿಯಾಗಿದೆ. ಕಲಿಕೆಯ ದೃಷ್ಟಿಯಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಏರುದನಿಯಲ್ಲಿ ಒಂದು ಮಾತು ಹೇಳುವ ಮೊದಲೂ ಸಾಕಷ್ಟು ಚಿಂತಿಸಬೇಕಾಗಿದೆ. ಹಿಂದೆಲ್ಲ ನಾಗರಬೆತ್ತದಿಂದ ಹೊಡೆಸಿಕೊಳ್ಳದ ವಿದ್ಯಾರ್ಥಿ ಇರಲೇ ಇಲ್ಲ. ಹಾಗೆ ಹೊಡೆಸಿಕೊಂಡರೂ ವಿದ್ಯಾರ್ಥಿಯು ಗುರುವಿನಲ್ಲಿ ದ್ವೇಷ, ಕೋಪ ಬೆಳೆಸಿಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿಯ ಹೆತ್ತವರು ಕೂಡ ತಮ್ಮ ಮಕ್ಕಳಿಗೆ ಗುರು ನಾಲ್ಕೇಟು ಬಿಗಿದರೆ ಅದನ್ನು ಪ್ರಶ್ನಿಸುತ್ತಿರಲಿಲ್ಲ. ಇಂದು ಕೂಡ ಎಷ್ಟೋ ಹೆತ್ತವರು, ನೀವು ಹೇಳಿದಂತೆ ಕೇಳದಿದ್ದರೆ ಸರಿಯಾಗಿ ನಾಲ್ಕು ಬಾರಿಸಿ ಎನ್ನುತ್ತಾರೆ. ಆದರೆ ಶಿಕ್ಷಕ ಮಾತ್ರ ಅಸಹಾಯಕ. ಅವನು ವಿದ್ಯಾರ್ಥಿಯಿಂದ ಅವಮಾನ ಎದುರಿಸಿದರೂ ನೋವು ನುಂಗಿಕೊಂಡು ಸುಮ್ಮನಿರಬೇಕಷ್ಟೆ. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯನ್ನು ತೊರೆದು ಹೋಗುವ ಹೊತ್ತಿನಲ್ಲಿ ಶಿಕ್ಷಕರ ಪಾದಕ್ಕೆ ನಮಿಸಿ ಆಶೀರ್ವಾದ ಬೇಡುವ ಶಿಷ್ಯರೂ ಇದ್ದಾರೆ.
ಅಂತರಕ್ಕೆ ಕಾರಣವೇನು?:
ಗುರು-ಶಿಷ್ಯರ ನಡುವಿನ ಮಧುರ ಸಂಬಂಧದಲ್ಲಿ ಲೋಪವಾಗಲು ಕಾರಣ ಹಲವು. ಹಿರಿಯರನ್ನು ಗೌರವಿಸುವ ಮನಃಸ್ಥಿತಿ ಇಲ್ಲದ ಮಕ್ಕಳು, ಅವರು ಬೆಳೆದಿರುವ ಮನೆ-ಕುಟುಂಬ ಪರಿಸರ, ಶಿಕ್ಷಕರ ಬಗ್ಗೆ ಯಾವ್ಯಾವುದೋ ಕಾರಣಕ್ಕೆ ತುತ್ಛ ಭಾವನೆ, ತಾವು ಅತೀ ಬುದ್ಧಿವಂತರು ಎಂಬ ಅಹಂಕಾರ, ಶ್ರೀಮಂತಿಕೆಯ ನೆರಳು, ನಾವು ನೀಡುವ ಶುಲ್ಕದಿಂದ ವೇತನ ಪಡೆದು ಕೊಳ್ಳುವವರು ಎಂಬ ಭಾವನೆ ಮುಂತಾದವು ಒಂದು ಕಡೆಯಾದರೆ, ಶಿಕ್ಷಕರು ಕೂಡ ಮಕ್ಕಳನ್ನು ಸಮಾನವಾಗಿ ಪರಿಗಣಿಸದೆ ಇರುವುದು, ಮಕ್ಕಳ ಅಂತಸ್ತು, ಬುದ್ಧಿಶಕ್ತಿ ಮುಂತಾದವುಗಳಿಗೆ ಹೊಂದಿಕೊಂಡು ಅವರ ಜತೆ ವ್ಯವ ಹರಿಸುವುದು ಇತ್ಯಾದಿಗಳೂ ಇವರ ನಡುವಿನ ಮಧುರ ಸಂಬಂಧಕ್ಕೆ ಚ್ಯುತಿ ತರುತ್ತವೆ. ಇವು ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ.
ಏನು ಮಾಡಬಹುದು?:
ಗುರು-ಶಿಷ್ಯರ ನಡುವೆ ಮಧುರ ಸಂಬಂಧ ಬೆಳೆಯಲು ಪರಸ್ಪರ ಗೌರವಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ವಿದ್ಯಾರ್ಥಿ ಯಾವುದೇ ಕುಟುಂಬದಿಂದಲೂ ಬಂದಿರಲಿ, ಎಷ್ಟೇ ಬುದ್ಧಿವಂತ ಅಥವಾ ದಡ್ಡನೂ ಆಗಿರಲಿ ಅವರನ್ನು ಸಮಾನವಾಗಿ ಕಾಣುವುದು ಶಿಕ್ಷಕರ ಕರ್ತವ್ಯ. ಮುಕ್ತ ಚರ್ಚೆ, ಗುಣಾತ್ಮಕ ವರ್ತನೆ, ಪರಸ್ಪರ ವಿಶ್ವಾಸ ಮುಂತಾದವು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಕರು ತಮ್ಮ ಬದುಕಿನ ಮಾರ್ಗದರ್ಶಕರು. ಅವರು ನಮ್ಮ ಹಿತೈಷಿಗಳೇ ಹೊರತು ಶತ್ರುಗಳಲ್ಲ ಎಂಬ ಭಾವನೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕಾಗಿದೆ. ಶಿಕ್ಷಕರು ಏನು ಹೇಳಿದರೂ ಅದರ ಹಿಂದೆ ನಮ್ಮ ಒಳಿತಿನ ಉದ್ದೇಶ ಅಡಗಿದೆ ಎಂಬುದನ್ನೂ ವಿದ್ಯಾರ್ಥಿಗಳು ತಿಳಿದಿರಬೇಕು. ಶಿಕ್ಷಕ ಅಥವಾ ಶಿಕ್ಷಕಿ ನಮ್ಮ ಮನೆಯ ಹಿರಿಯ ಸದಸ್ಯರಂತೆ. ಅವರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆಯಲ್ಲಿ ಅಂತಸ್ತು ಪ್ರದರ್ಶನ ಖಂಡಿತಾ ಸರಿಯಲ್ಲ. ಜತೆಗೆ ಶಿಕ್ಷಕರ ವಿರುದ್ಧ ಯಾವುದೇ ಕಾರಣಕ್ಕೂ ದ್ವೇಷ ಬೆಳೆಸಿಕೊಳ್ಳುವುದು ನಮಗೆ ನಾವೇ ಅಪಾಯವನ್ನು ಮೈಗೆಳೆದುಕೊಂಡಂತೆಯೇ.
ವಿಶಾಲ ಚಿಂತನೆ ಅಗತ್ಯ:
ಈಗೀಗ ಶಿಕ್ಷಕರ ವಿರುದ್ಧ ಸಣ್ಣಪುಟ್ಟ ಕಾರಣಗಳಿಗಾಗಿ ಅಪಾಯಕಾರಿ ದ್ವೇಷದ ಕ್ರಮಗಳನ್ನು ಕೆಲವು ವಿದ್ಯಾರ್ಥಿಗಳು ತೆಗೆದುಕೊಳ್ಳುತಿರುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಇದಕ್ಕೆ ಈಗಲೇ ನಿಯಂತ್ರಣ ಹಾಕುವ ಕೆಲಸ ಸಂಘಟಿತವಾಗಿ ಆಗಬೇಕಾಗಿದೆ. ಇಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು ಅವರಿಗೆ ವಾಸ್ತವ ಹಾಗೂ ನೈತಿಕತೆಯ ಪಾಠ ಅಗತ್ಯವಾಗಿದೆ. ಇವೆಲ್ಲವನ್ನೂ ಕಾನೂನು ವ್ಯಾಪ್ತಿಗೆ ಒಳಪಡಿಸುವ ಬದಲು ಹೆತ್ತವರು ಹಾಗೂ ಶಿಕ್ಷಕರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲೇ ಮಾಡಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳ ತಪ್ಪು ಕಲ್ಪನೆ, ಲೋಪವಿರುವ ಚಿಂತನೆಯನ್ನು ಸರಿಪಡಿಸುವುದೂ ಶಿಕ್ಷಣದ ಒಂದು ಭಾಗವಾಗಬೇಕಾಗಿದೆ. ನೈತಿಕ ಶಿಕ್ಷಣದ ಮೂಲಕ ಇಂಥ ಹುಳುಕುಗಳು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮಕ್ಕಳು ಎಷ್ಟೇ ಉನ್ನತ ಶಿಕ್ಷಣ ಪಡೆದುಕೊಂಡರೂ ಅವರಲ್ಲಿ ನೈತಿಕತೆಯು ಗಟ್ಟಿಯಾಗಿರದಿದ್ದರೆ ಅವರು ಮುಂದೊಂದು ದಿನ ಜೀವನದಲ್ಲಿ ಸೋಲುವುದು ಖಚಿತ. ನೈತಿಕತೆಯ ವಿಷಯದಲ್ಲಿ, ಗುರುಹಿರಿಯರನ್ನು ಮಕ್ಕಳು ಗೌರವಿಸುವ ವಿಷಯದಲ್ಲಿ ಮನೆಯಿಂದಲೇ ಆರಂಭದ ನೀತಿಪಾಠ ಅಗತ್ಯವಾಗಿದೆ.
-ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.