Uv Fusion: ಅದಮ್ಯ ಬಯಕೆ, ಒಳಗಿನ ಸೆಳೆತ, ಕನಸು – ಭಾರತ ದರ್ಶನ
Team Udayavani, Oct 14, 2023, 7:00 AM IST
ಅನೇಕ ದಿನಗಳ ತೊಳಲಾಟ, ಒದ್ದಾಟ, ನನ್ನೊಳಗೊಂದು ಗುದ್ದಾಟ. ನಿರ್ಲಕ್ಷಿಸುತ್ತಿದ್ದೇನೆ; ಆದರೂ ಅದರಿಂದ ಪಾರಾಗಲು ಸಾಧ್ಯ ವಾಗುತ್ತಿಲ್ಲ. ಆರಂಭಿಸಿಬಿಡಲೇ? ಹೇಗೆ ಆರಂಭಿಸಲಿ ಎಂಬುದೇ ತಲೆಯನ್ನು ಕೊರೆಯುತ್ತಿದೆ. ಏನಿದು? ಹೀಗೇಕೆ ಬಾಧಿಸುತ್ತಿದೆ ಎಂಬುದಕ್ಕೆ ಉತ್ತರವಿಲ್ಲ. ನಿದ್ದೆಯಲ್ಲೂ, ಎಚ್ಚರದಲ್ಲೂ ಒಂದೇ ಪದ ಹೃದಯದ ಬಡಿತವಾದಂತೆ ಭಾಸವಾಗುತಿದೆ – “ಭಾರತ ದರ್ಶನ’!
ಸ್ವಾಮೀ ವಿವೇಕಾನಂದರು ಭಾರತವನ್ನು ಸುತ್ತಾಡಿದ ಬಳಿಕವೇ ಇಲ್ಲಿನ ಮಣ್ಣಿನ ಗುಣ ಅರಿತರು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಭಾರತದ ಬಗ್ಗೆ ಅನೇಕ ಜನ ಬರೆದಿಟ್ಟಿದ್ದಾರೆ, ಹಾಡು ರಚಿಸಿ ಹಾಡಿದ್ದಾರೆ, ವರ್ಣಿಸುತ್ತಾ ಕುಣಿದು ಕುಪ್ಪಳ್ಳಿಸಿದ್ದಾರೆ. ಅಷ್ಟೇ ಯಾಕೆ- ಬದಲಾದ ಕಾಲಘಟ್ಟದಲ್ಲಿ ಸಿನೆಮಾಗಳು, ಡಾಕ್ಯುಮೆಂಟರಿಗಳಿಗೂ ಬರವಿಲ್ಲ. ಆದರೆ ಸ್ವತಃ ನೋಡಿ ಅನುಭವಿಸುವುದರ ಮುಂದೆ ಇನ್ನೊಬ್ಬರ ಅನುಭವ ಸ್ವಲ್ಪ ಕಡಿಮೆಯೇ.
ಇದು ಈಗಿನ ಉತ್ಪ್ರೇಕ್ಷೆಯಂತೂ ಅಲ್ಲ. ಬುದ್ಧಿ ಬಂದ ಬಳಿಕದ ದಿನಗಳದ್ದು. ಅದೊಂದು ದಿನ ಹುಬ್ಬಳ್ಳಿಯ ಉಣಕಲ್ ರೈಲು ನಿಲ್ದಾಣದಲ್ಲಿ ರಾತ್ರಿ 9ರ ಸಮಯದಲ್ಲಿ ಶಿರಡಿ ನಗರದ ಸಾಯಿಬಾಬಾ ಮಂದಿರಕ್ಕೆ ಹೋಗಿ ಬರುತ್ತಿದ್ದೆ. ಆಗ ಶಾಲಾ ದಿನಗಳಲ್ಲಿ ಹೋದ ಪ್ರವಾಸಗಳು ಕಣ್ಮುಂದೆ ಬಂದವು. ಮನೆಯಿಂದ ಹೊರಗೆ ಇರುವ ಸ್ವಾತಂತ್ರ್ಯ ಎಂತಹದು ಎಂಬುದು ಅರ್ಥವಾಯಿತು. ವಾರಕ್ಕೊಮ್ಮೆ ಅಥವಾ ಇಡೀ ದಿನ ತಿರುಗಾಡುವುದು ರೂಢಿಯಾಯಿತು. ಆದರೆ ಹುಬ್ಬಳ್ಳಿಯಾಚೆ ಹೋಗಲು ಸಾಧ್ಯವಾಗಲಿಲ್ಲ.
ಮೊದಲ ಸಲ ಸ್ವಾಮೀ ವಿವೇಕಾನಂದರ ಪುಸ್ತಕವನ್ನು ಓದುವಾಗ ಅನಿಸಿದ್ದು ಭಾರತವನ್ನು ಪರಿವ್ರಾಜಕರಾಗಿ ತಿರುಗಾಡಿದ ಸ್ವಾಮೀಜಿ ಅದೆಷ್ಟೋ ವಿಷಯಗಳ ಕುರಿತು ಬದಲಾವಣೆ ಬಯಸಿದರು, ಅವರು ಬದಲಾದರು, ದೇಶವನ್ನು ಬದಲಾಯಿಸಲು ಬೇಕಾಗಿದ್ದ ಕಾರ್ಯತಂತ್ರಗಳನ್ನು ಆರಂಭಿಸಿದರು ಎಂಬುದು. ನನಗೆ ಭಾರತವನ್ನು ಬದಲಾಯಿಸಬೇಕೆಂಬ ದೊಡ್ಡ ಉದ್ದೇಶವೇನೂ ಇಲ್ಲ. ಆದರೆ ನಾನಾದರೂ ಸ್ವಲ್ಪ ಬದಲಾಗಬೇಕೆಂಬ ಸ್ವಾರ್ಥವಂತೂ ಇದೆ. ಎಂಜಿನಿಯರಿಂಗ್ ಮುಗಿದ ಮೇಲೆ ಓದಿದ ಪುಸ್ತಕಗಳು ಮೊದಲಿದ್ದ ಭಾರತ ದರ್ಶನ ತುಡಿತವನ್ನು ದ್ವಿಗುಣಗೊಳಿಸಿದವು. ಆ ಆಶಯದಿಂದ ದೂರ ಸರಿಯುವ ಅಥವಾ ಸರಿಸುವ ಯಾವುದೇ ಪುಸ್ತಕಗಳು ಇನ್ನೂ ಕೈ ಸಿಕ್ಕಿಲ್ಲ ಎಂಬುದೇ ಆಶ್ಚರ್ಯ.
ಪಾಶ್ಚಿಮಾತ್ಯ ಲೇಖಕ ಫಾಲ್ ಭಾÅಂಟನ್ ಬರೆದ “ನಿಗೂಢ ಭಾರತದಲ್ಲಿ ಹುಡಕಾಟ’ ಎಂಬ ಪುಸ್ತಕ ನನ್ನ ಭಾರತ ದರ್ಶನದ ಕನಸಿಗೆ ಒಂದು ಪ್ರಮುಖ ಕಾರಣ. ಅದರಲ್ಲಿ ಬರುವ ತಿರುವಣ್ಣಾಮಲೈಯ ಜಾಗದ ಒಬ್ಬ ಖಾಯಂ ಯಾತ್ರಿಕ ನಾನಾಗಿದ್ದೇನೆ. ಹಿಮಾಲಯದ ಗುರುವಿನ ಗರಡಿಯಲ್ಲಿ ಪಯಣ ನಿರಂತರ. ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಇವೆಲ್ಲ ಪುಸ್ತಕಗಳು ಹಿಮಾಲಯದ ಕುರಿತಾಗಿ ಅದಮ್ಯ ಕನಸುಗಳನ್ನು ನೀಡಿಬಿಟ್ಟವು. ಪುಸ್ತಕದ ಸಾಲುಗಳನ್ನು ಓದುತ್ತಿದ್ದಂತೆ ನನ್ನೊಳಗೆ ಕಲ್ಪನೆಯ ಚಿತ್ತಾರ ತಾನಾಗಿಯೇ ಮೂಡಿ ಬಿಡುತ್ತವೆ. ಕಾಶಿ ಅಥವಾ ವಾರಾಣಸಿಯ ನೂತನ ದೇವಸ್ಥಾನದ ಕಾರಿಡಾರ್ ಉದ್ಘಾಟನೆ ಆದಾಗ ಅಲ್ಲಿಗೆ ಹೋಗುವ ಬಯಕೆ ಇತ್ತೇ ಹೊರತು ಸೆಳೆತವಿರಲಿಲ್ಲ. ಆತ್ಮೀಯರೊಬ್ಬರು ಹೇಳಿದ ಅಲ್ಲಿನ ಅನುಭವ ಕೇಳಿದ ಮೇಲೆ ಒಂದರೆಡು ದಿನಗಳಲ್ಲಿ ಒಬ್ಬನೇ ಹೋಗಿ ಬಂದದ್ದೂ ಇದೆ.
ಓದು, ಮದುವೆ ಎನ್ನುವ ಪ್ರಕ್ರಿಯೆ ಬಿಟ್ಟು ಉಳಿದವರಿಗಿಂತ ನನ್ನದು ಭಿನ್ನ ಅನಿಸಿದರೂ ಸರಿ, ಒಂದು ಸಲ ಭಾರತ ದರ್ಶನ, ಆಮೇಲೆ ಉಳಿದ ವಿಚಾರಗಳು. ಯಾವುದೇ ರೀತಿಯ ಪ್ರಯಾಣವಾದರೂ ಸರಿ, ಇಲ್ಲದಿದ್ದರೂ ಪಾದಯಾತ್ರೆಗೆ ಯಾವ ಖರ್ಚು ಎಂಬ ವಿಚಾರ ಇತ್ತೀಚೆಗೆ ಸದ್ದಿಲ್ಲದೆ ತಲೆಯೊಳಗೆ ಸುಳಿದಾಡಿ ಮಾಯವಾಗುತಿದೆ.
ಇಷ್ಟೆಲ್ಲ ಬರೆದರೂ ಎದ್ದು ಹೋಗಿಬಿಡಬೇಕು ಎಂಬ ಗಟ್ಟಿ ಮನಸ್ಸು ಮೂಡುತ್ತಿಲ್ಲ ಕಾರಣ ಗೊತ್ತಿಲ್ಲ, ಉದಯವಾಣಿಯ ಯುವಿ ಫ್ಯೂಷನ್ ನೂರನೇ ಸಂಚಿಕೆಯಲ್ಲಿ ಇದನ್ನು ಬರೆಯುತ್ತಿರುವ ಕಾರಣ, ಮನಸ್ಸು ಮುಂದೆ ಹೋಗಲು ನಿರಾಕರಿಸಿದರೆ, ನೋಡಲ್ಲಿ ನಿನ್ನ ಪಯಣದ ಕನಸನ್ನು ಜನರಿಗೆ ತಿಳಿಸಿದ್ದೀಯಾ, ಈಗ ಹೋಗಲೇಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಬಳಸಿಕೊಳ್ಳಬಹುದೆಂದು ಮಾತ್ರ.
“ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು’ ಎಂಬ ಹಾಡು ಸದ್ಯಕ್ಕೆ ಮನಸ್ಸಿಗೆ ಸಮಾಧಾನ ನೀಡುತ್ತದೆ. ಭಾರತ ದರ್ಶನ ಕೇವಲ ನನ್ನೊಬ್ಬನ ಕನಸಲ್ಲ ಅನೇಕ ಜನರ ಕನಸು. ನಾನಿಲ್ಲಿ ಕೇವಲ ಪ್ರತಿನಿಧಿ ಅಷ್ಟೇ. ಅದೆಷ್ಟೋ ಜನರು ಕೇದಾರನಾಥ ನೋಡುವ ಬಯಕೆ ಇಟ್ಟುಕೊಂಡವರು. ಇನ್ನೇನೋ ಪ್ರವಾಸದ ಬಯಕೆ ಉಳ್ಳವರು ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಜಗತ್ತನ್ನೇ ತೋರಿಸುತ್ತೇನೆ ಎಂದು ಹೇಳಿದವರು ಇದ್ದಾರೆ. ನನ್ನಂಥವರು ತೋರಿಸುತ್ತೇನೆ ಎಂದು ಹೇಳುವರಲ್ಲ. ಜಗತ್ತು ಆಮೇಲೆ ಮೊದಲು ಭಾರತವನ್ನು ನಾನು ನೋಡುತ್ತೇನೆ ಎಂಬ ವರ್ಗಕ್ಕೆ ಸೇರಿದವರು.
ಭಾರತ ದರ್ಶನದಿಂದ ಏನು ಲಾಭ? ಲಾಭದ ಉದ್ದೇಶದಿಂದ ಮಾಡುವ ಯಾವುದೇ ಕಾರ್ಯ ಮನಸ್ಸಿಗೆ ಮುದ ನೀಡುವುದಿಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ. ಏನು ಲಾಭ ಅಂತ ಕೇಳಿದವರ ಪ್ರಶ್ನೆಗೆ ಏನಿಲ್ಲ, ನಿನ್ನಿಂದ ದೂರ ಅದು ಶಾಶ್ವತವಾಗಿ ಆದರೂ ಆಗಬಹುದು ಎಂಬ ಉತ್ತರ ನೀಡುವಷ್ಟು ಲಾಭದಾಯಕ ಇದು ಅಂದುಕೊಳ್ಳಬಹುದು.
ಭಾರತ ದರ್ಶನ ಎಂಬ ಬಯಕೆ ಅದು ಕೇವಲ ಪ್ರವಾಸವಷ್ಟೇ ಅಲ್ಲ, ಬದಲಾವಣೆ, ಸಂಸ್ಕೃತಿಗಳ, ನಿನ್ನೊಳಗೊಂದು ಅನುಸಂಧಾನ ಅಂದರೂ ತಪ್ಪಾಗಲಾರದು. ಕನಸು ನನಸಾಗಲಿ ಎಂಬ ಆಶಯ ಸದ್ಯಕ್ಕೆ ಅಲ್ಪವಿರಾಮ. ಧನ್ಯವಾದಗಳು.
-ಗಿರಿಧರ ಹಿರೇಮಠ,
ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.