ಆ ಕಿಂದರಿಜೋಗಿಯ ಹಿಂದೆ ಅವರು; ಇವನ ಹಿಂದೆ ನಾವು


Team Udayavani, Oct 14, 2023, 11:35 PM IST

rangoli powder

ಹಬ್ಬದ ಋತುಮಾನವಿದು. ಮಳೆ ಸುರಿದು, ಹಸುರು ಉಕ್ಕಿ ಹೆಸರಾಗಿ ಗದ್ದೆಗಳಲ್ಲಿ ತೆನೆ ತುಂಬುವ ಕಾಲ. ಮನೆಯಲ್ಲೂ ಸಂಭ್ರಮದ ಹೊತ್ತು. ನಾಗರಪಂಚಮಿಯಿಂದ ದೀಪಾವಳಿವರೆಗೂ ಒಂದಲ್ಲ ಒಂದು ಲೆಕ್ಕದಲ್ಲಿ ಹಬ್ಬದ ವಾತಾವರಣವೇ. ಮತ್ತೂ ಹಬ್ಬಗಳು ಮುಗಿಯುವುದಿಲ್ಲ. ಹಾಗೆ ನೋಡುವುದಾದರೆ ನಮ್ಮ ಹಿರಿಯರ ಜೋಳಿಗೆಗಳಲ್ಲಿ ಹಣ ತುಂಬಿರಲಿಲ್ಲ; ಬದಲಾಗಿ ಜೀವನೋತ್ಸಾಹ ತುಂಬುವ ಬಣ್ಣಗಳಿದ್ದವು.

ಕಿಂದರಿಜೋಗಿಯೊಬ್ಬ ಕೊಳಲನೂದುತ್ತಾ ಬಂದ. ಇಲಿಗಳೆಲ್ಲ ಅವನನ್ನು ಹಿಂಬಾಲಿಸಿದವು. ಜನರೂ ಈತ ಏನು ಮಾಡಿಯಾನು ಎಂದು ಹಿಂಬಾಲಿಸಿದರು. ಆತ ಎಲ್ಲರನ್ನೂ ನದಿಯೆಡೆಗೆ ಕೊಂಡೊಯ್ದ. ಅಚ್ಚರಿ ಎನಿಸಿತು ಪ್ರತಿಯೊಬ್ಬರಿಗೂ. ಮಾತ ನಾಡಲಿಲ್ಲ. ಹಾಗೆಯೇ ಆತ ನದಿಯ ನೀರಿನ ಮೇಲೆ ನಡೆಯತೊಡಗಿದ. ಜನರೆಲ್ಲ ನದಿ ಬದಿಯಲ್ಲೇ ನಿಂತು ವೀಕ್ಷಿಸತೊಡಗಿದರು. ಇಲಿಗಳೆಲ್ಲ ಜೋಗಿಯನ್ನು ಹಿಂಬಾಲಿಸಿದವು!

ಬದುಕಿಗೂ ಹಬ್ಬಗಳಿಗೂ ಸಂಬಂಧವಿದೆ. ಹಬ್ಬಗಳಿಗೂ ಬಣ್ಣಗಳಿಗೂ ಸಹ. ಬಣ್ಣಗಳಿಗೂ ಬ್ರ್ಯಾಂಡ್‌ಗಳಿಗೂ ಕಲ್ಪಿಸಿದ್ದೇವೆ. ಹಾಗಾಗಿಯೇ ಏನೋ? ಈಗ ನಮ್ಮ ಬದುಕುಗಳಿಗೆ ಬ್ರ್ಯಾಂಡ್‌ಗಳ ಬಣ್ಣ ಬಳಿದು­ಕೊಂಡಿದ್ದೇವೆ. ಬಣ್ಣಗಳೆಂದರೆ ಬ್ರ್ಯಾಂಡ್‌ಗಳೆಂಬ ಲೆಕ್ಕಾಚಾರದಲ್ಲಿದ್ದೇವೆ. ಇದಕ್ಕೇ ಹೇಳಿದ್ದು ಬದುಕು-ಬಣ್ಣ-ಬ್ರ್ಯಾಂಡ್‌ಗಳು.

ನಾವು ಚಿಕ್ಕವರು. ಹಬ್ಬಗಳೆಂದರೆ ಬೇರೇನೂ ತೋರುತ್ತಿರಲಿಲ್ಲ. ಮೂರೇನು? ವಾರದ ಮೊದಲೇ ಪೂರ್ವ ತಯಾರಿ. ಒಂದು ಪಾಯಸ, ಮತ್ತೂಂದು ಹೋಳಿಗೆ. ಜತೆಗೆ ಕಡುಬು ಮತ್ತೆರಡು. ಅಷ್ಟೇ. ಪ್ರತೀ ಹಬ್ಬಕ್ಕೂ ಮೆನು ಬದಲಾಗುತ್ತಿರಲಿಲ್ಲ, ಬೇಳೆಗಳು ಬದಲಾಗುತ್ತಿದ್ದವು, ಸಿಹಿಯಲ್ಲ. ಪ್ರತೀ ಹಬ್ಬಕ್ಕೂ ಸೂರ್ಯ ಹುಟ್ಟುವ ಮೊದಲೇ ಏಳುತ್ತಿದ್ದ ಅಮ್ಮ, ಬಳಿಕ ಅಕ್ಕಂದಿರು, ಅವರ ಹಿಂದೆ ಅಪ್ಪ ಮತ್ತು ಉಳಿದವರು. ಇದಾವುದೂ ಬದಲಾಗಲಿಲ್ಲ. ಪೂರ್ವ ತಯಾರಿ ಮಾತ್ರ ಪ್ರತೀ ಹಬ್ಬಕ್ಕೂ ಬೇರೆಯದ್ದೇ. ದಿರಿಸು ಖರೀದಿ ವರ್ಷಕ್ಕೊಮ್ಮೆ ನಡೆಯುವ ವ್ಯವಹಾರ. ನಮ್ಮ ಪಾಲಿನ ನಿಜವಾದ ಹಬ್ಬ. ಉಳಿದಂತೆ ಒಂದು ಚೆಂದದ ಊಟ, ಒಂದಿಷ್ಟು ಸಿಂಗಾರ, ಪೂಜೆ-ಪುನಸ್ಕಾರ. ಅಲ್ಲಿಗೆ ಹಬ್ಬ ಮುಗಿಯುತ್ತಿತ್ತು. ಆದರೆ ಮನಸ್ಸು ಪ್ರತೀ ಹಬ್ಬಕ್ಕೂ ಹಂಬಲಿಸುತ್ತಿತ್ತು. ಗಣೇಶನ ಹಬ್ಬಕ್ಕೆ ಮಧ್ಯಾಹ್ನ ಊಟ ಮುಗಿಸಿ ಕೇರಿಗೆ ಇಳಿದರೆ ಬರುವಾಗ ರಾತ್ರಿ ಎಂಟು. ಅಷ್ಟರೊಳಗೆ ಹತ್ತಾರು ಗಣಪತಿಯ ನಂಟು. ಪ್ರತೀ ಗಣಪನ ಬಣ್ಣ, ಸ್ವರೂಪ, ವಿಶೇಷ ಎಲ್ಲ ಚರ್ಚಿಸುವಷ್ಟರಲ್ಲಿ ಮತ್ತೆರಡು ಹಬ್ಬಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಅಲ್ಲಿಯವರೆಗೂ ಹಬ್ಬಗಳ ಬಣ್ಣ ಮಾಸುತ್ತಿರಲಿಲ್ಲ. ಒಂದು ಹೋಳಿಗೆಗೆ ಕೆಲವೊಮ್ಮೆ ಹತ್ತು ಕಿ.ಮೀ. ನಡೆದು ಹೋದದ್ದೂ ಇದೆ. ಹಬ್ಬವನ್ನು ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. ಇದು ಸುತರಾಂ ಇಷ್ಟದ ಮಾತೂ ಆಗಿರಲಿಲ್ಲ.

ಹಾಗೆ ನಮ್ಮ ಬದುಕಿನಲ್ಲಿ ಜೀವನೋತ್ಸಾಹದ ಬಣ್ಣಗಳನ್ನು ತುಂಬಿದ್ದು ಇವೇ ಹಬ್ಬಗಳು.

ಕಾಲಮಾನ ಬದಲಾಯಿತು. ಸೂರ್ಯ ಏಳುವ ದಿಕ್ಕು ಬದಲಾಗಲಿಲ್ಲ. ನಮ್ಮ ಊರುಗಳು ಬದಲಾದವು. ಅವುಗಳ ಬಣ್ಣಗಳೂ ಬದಲಾಗತೊಡಗಿದವು. ಊರಿನ ಯುವಜನರೆಲ್ಲ ನಗರಕ್ಕೆ ಹೊರಟರು. ಅದಕ್ಕೆ ಉದ್ಯೋಗದ ಹೆಸರು. ಪ್ರತೀ ಯುಗಾದಿಗೆ, ದೀಪಾವಳಿಗೆ ಬರಲು ಮರೆಯಲಿಲ್ಲ. ನವರಾತ್ರಿ, ವಿನಾಯಕ ಚತುರ್ಥಿ ಮತ್ತೂಂದಿಷ್ಟು ಹಬ್ಬಗಳು ಊರಿನಲ್ಲಿ ಉಳಿದವರಿಗೇ ಸೀಮಿತವಾಯಿತು. ಹಬ್ಬಗಳೂ ಸಡಗರದ ಬಣ್ಣ ಕಳೆದುಕೊಂಡವು. ಇರುವವರು ನಾವಿಬ್ಬರೇ, ಮಕ್ಕಳಿಲ್ಲದ ಸಂಭ್ರಮ ಎಂಥದ್ದೇ ಎಂದ ಅಪ್ಪ, ಸಣ್ಣದೊಂದು ಅಡುಗೆ ಮಾಡು ಸಾಕು ಎಂದು ಹಬ್ಬ ಮುಗಿಸಲು ಹೇಳಿದ. ಅಮ್ಮನೂ ಸರಿ ಎಂದು ತಲೆಯಾಡಿಸಿ, ಮುಂದಿನ ಹಬ್ಬ ಜೋರು ಮಾಡೋಣ ಎಂದು ಬಿಟ್ಟಳು. ಅಲ್ಲಿಗೆ ಆ ಹಬ್ಬಗಳು ಮುಗಿದವು. ಸುಗ್ಗಿ ಹಬ್ಬ, ಹಾಡುಗಳೂ ಬದಿಗೆ ಸರಿದವು. ಯುಗಾದಿಯ ಕಳೆ ಕುಂದಲಿಲ್ಲ, ದೀಪಾವಳಿಯ ಪಟಾಕಿಯ ಸದ್ದು ಅಡಗಲಿಲ್ಲ. ಈ ಹಬ್ಬಗಳ ಹಿಂದಿನ ದಿನ ನಗರಗಳಿಗೆ ನಗರಗಳೇ ಖಾಲಿಯಾದವು. ಅರೆ ವರ್ಷಕ್ಕೊಮ್ಮೆ ಕಳೆದುಕೊಳ್ಳುವ ಉತ್ಸಾಹವೆಲ್ಲ ಮರಳಿ ಪಡೆದು ಊರುಗಳು ಪುಟಿಯತೊಡಗಿದ್ದು ಈ ಎರಡು ದಿನಗಳಲ್ಲೇ. ಊರುಗಳು ನಳನಳಿಸುತ್ತವೆ. ರಸ್ತೆ ತುಂಬಾ ಜನರು ಕಾಣುತ್ತಾರೆ. ವಾಹನಗಳು ನಲಿಯತೊಡಗುತ್ತವೆ. ಎರಡು ದಿನ ಸಂಭ್ರಮಕ್ಕೆ ಕೊರತೆ ಇರದು. “ದೋ ದಿನ್‌ ಕಾ ಸುಲ್ತಾನ್‌’ ಆಗುತ್ತವೆ ಊರುಗಳು ಪ್ರತೀ ಬಾರಿ ಈ ಎರಡು ಹಬ್ಬಗಳಿಗೆ. ಹಬ್ಬಗಳ ಬಣ್ಣ ಬದಲಾದವು !

ಇದರ ಮಧ್ಯೆ ಸಣ್ಣದೊಂದು ಟಿಪ್ಪಣಿ. ಈ ಎಲ್ಲ ಹಬ್ಬಗಳ ಮಧ್ಯೆ ಊರ ಹಬ್ಬ ಎಂಬುದೊಂದಿದೆ. ಸದ್ಯಕ್ಕೆ ಅದರ ಬಣ್ಣ ಇನ್ನೂ ಮಾಸಿಲ್ಲ. ಊರಿನ ಮಂದಿಯೆಲ್ಲ ನಗರದಲ್ಲಿ ಡೇರೆ ಹಾಕಿ ಕುಳಿತರೂ ಈ ಒಂದು ದಿನಕ್ಕೆ ಮುಚ್ಚಿ ಓಡಿ ಬರುವುದಿದೆ. ಊರ ದೇವರನ್ನು ಹಬ್ಬದ ಹೆಸರಿನಲ್ಲಿ ತಲೆ ಮೇಲೆ ಹೊತ್ತು ಮೆರೆಸುವುದು ಇನ್ನೂ ನಿಂತಿಲ್ಲ. ಸಂಜೆಗೆ ಒಂದಿಷ್ಟು ತಿರುಗಾಟ, ಆಟ ಮರೆತಿಲ್ಲ. ಜಾತ್ರೆ, ಹಬ್ಬಗಳಿಗೂ ವಿಜೃಂಭಣೆಯ ಹೊಸ ಬಣ್ಣ ಬಂದಿರುವುದು ಸತ್ಯ. ಬೆಂಡು ಬತ್ತಾಸು ಜಾಗದಲ್ಲಿ ಅಮೆರಿಕನ್‌ ಸ್ವೀಟ್‌ ಕಾರ್ನ್, ಐಸ್‌ ಕ್ರೀಮ್‌ ಬಂದದ್ದೂ ಸುಳ್ಳಲ್ಲ. ಒಂದರ ಬಣ್ಣ ತಿಳಿ ಹಳದಿ. ಮತ್ತೂಂದರದ್ದು ಹಲವು. ಸರ್ಕಸ್‌ ಇದ್ದಲ್ಲಿಗೆ ಜಾಯಿಂಟ್‌ ವ್ಹೀಲ್‌ಗ‌ಳು ಅವತರಿಸಿದಾಗ ಪೇಟೆಯದ್ದು ನಿಯಾನ್‌ ದೀಪಗಳ ಬಣ್ಣ. ಪೇಟೆ ತಿರುಗಾಟ ಮುಗಿಸಿ ಮನೆ ಹಾದಿ ಹಿಡಿಯುವಾಗ ಹಾದಿಯ ಬಣ್ಣ ಕಪ್ಪು. ರಾಶಿ ಬೆಳಕಿನ ಮಧ್ಯೆ ಕರಗಿ ಹೋಗಿದ್ದವನಿಗೆ ಈ ಬಣ್ಣ ಹೆಚ್ಚು ಆಪ್ತ.

ಈಗ ಬದುಕು ಬದಲಾಗುತ್ತಿದೆ. ಬಣ್ಣಗಳು ಬದಲಾಗುತ್ತಿವೆ. ಹಬ್ಬಗಳು, ಸಂಭ್ರಮದ ವ್ಯಾಖ್ಯಾನ ಹಾಗೂ ಸಂಭ್ರಮಿಸುವ ಮಾದರಿ ಬದಲಾಗುತ್ತಿದೆ. ಇಂದಿನ ಮಾರುಕಟ್ಟೆ ಭಾಷೆಯಲ್ಲಿ ಹೇಳುವುದಾದರೆ ಎಲ್ಲವೂ “ಕಸ್ಟಮೈಸ್ಡ್’. ಪ್ರತಿಯೊಬ್ಬರ ಸಂಭ್ರಮಕ್ಕೂ ಬೇರೆಯದೇ ರೂಪ ಮತ್ತು ಬಣ್ಣಗಳಿವೆ. ಅವರ ಬಣ್ಣ ಇವರಿಗೆ ಹೊಂದದು. ಇವರ ರೂಪ ಅವರಿಗೆ ಒಪ್ಪುವುದು ತುಸು ಕಷ್ಟ. ಒಂದೊಂದಕ್ಕೂ ಹೆಸರಿಡುವುದೇ ಮಾರುಕಟ್ಟೆಗಳು. ಬ್ರ್ಯಾಂಡ್‌ಗಳ ಬಜಾರಿನಲ್ಲಿ ಹೋಳಿಗೂ ಹೊಸ ಬಣ್ಣ ಬಂದಿದೆ. ನವರಾತ್ರಿಯೂ ಹೊಸ ವರ್ಣ ಪಡೆದಿದೆ. ಅಷ್ಟೇ ಏಕೆ? ತಿಳಿ ಹಳದಿ (ಗೋಪಿ) ಬಣ್ಣದ ನಮ್ಮ ಮನೆಯೂ ಹಳೆಯ ಬಣ್ಣ ಬಿಸುಟಿ, ಗೋಡೆಗೊಂದು ವರ್ಣ ಬಳಿದುಕೊಂಡದ್ದೂ ಇದರ ದೆಸೆಯಿಂದಲೇ ತಾನೇ. ಈಗ ವರ್ಣಮಯ ಬದುಕು.
ಯುಗಾದಿ, ದೀಪಾವಳಿಗಿಂತ ಇತರ ಆಧುನಿಕ ಹಬ್ಬಗಳದ್ದೇ ಈಗ ಹೆಚ್ಚು ವೈಭವ. ಆಫ‌ರ್‌ಗಳು, ಉತ್ಸವಗಳು, ರಿಯಾಯಿತಿಗಳ ಮಧ್ಯೆ ಪಾಯಸ, ಹೋಳಿಗೆ ಬಣ್ಣಗಳು ತೋರದಾಗಿವೆ ಏನೋ? ಅಥವಾ ಸಿಹಿ ಕಡಿಮೆಯಾಗಿದೆಯೇನೋ? ಯಾವುದೂ ತಿಳಿಯುತ್ತಿಲ್ಲ.

ಆ ನದಿಯ ಮೇಲೆ ನಡೆದು ಹೋದ ಕಿಂದರಿಜೋಗಿ ಈಗ ಊರು ಗಳಿಗೆ ಬಂದಿದ್ದಾನೆ. ಅವನ ಹಿಂದೆ ನಾವು ಹೊರಟಿದ್ದೇವೆ. ನದಿಯ ಮೇಲೂ ಅವನನ್ನು ಇಲಿಗಳ ಹಾಗೆ ಹಿಂಬಾಲಿಸುತ್ತೇವೆಯೋ ಅಥವಾ ಆ ಹಳೆಯವರಂತೆ ದಡದಲ್ಲಿ ನಿಂತು ನೋಡುತ್ತೇವೆ ಯೋ? ಗೊತ್ತಿಲ್ಲ. ಇನ್ನೂ ಕಿಂದರಿಜೋಗಿಯ ಕೊಳಲು ನಿಂತಿಲ್ಲ.

ಬಹಳ ಖುಷಿಯ ಸಂಗತಿಯೆಂದರೆ ಬಾಗಿಲಿನ ಹೊಸ್ತಿಲಿಗೆ ಹೂವಿನ ಹಾರ ಹಾಕುವುದು ಮರೆತಿಲ್ಲ, ಮಾವಿನ ತೋರಣ ಕಟ್ಟುವುದು ಮರೆತಿದ್ದರೂ!.
ಹಬ್ಬಗಳು ಇರುವುದು ನಮ್ಮೊಳಗೆ ಬಣ್ಣಗಳನ್ನು ತುಂಬಲಿಕ್ಕೆ. ನಾವೂ ಹಬ್ಬಗಳು ಬಂತೆಂದರೆ ಸಂಭ್ರಮಿಸುತ್ತಿದ್ದುದು ಬಣ್ಣಗಳನ್ನು ತುಂಬಿ­ಕೊಳ್ಳಲಿಕ್ಕೆ. ಅದು ಜೀವನೋತ್ಸಾಹದ ಬಣ್ಣ.. ನೈಜ ಬದುಕಿನದ್ದೇ. ಈ ಬಣ್ಣ ಮಾತ್ರ ಗೋಸುಂಬೆಯ ರೀತಿ ಬಣ್ಣ ಬದಲಿಸುವುದಿಲ್ಲ; ಬದುಕನ್ನೇ ಬದಲಿಸುತ್ತದೆ. ಅದೇ ಸಂಸ್ಕೃತಿಯ ಬಣ್ಣ. ಇದಕ್ಕೆ ಬೇರೆ ಹೆಸರಿಲ್ಲ, ಬದುಕು ಎನ್ನುವುದು ಬಿಟ್ಟು.

ಅರವಿಂದ ನಾವಡ

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.