Caste Census: ಸಾಮಾಜಿಕ ನ್ಯಾಯದೊಂದಿಗೆ ಸಮಾಜ ಒಗ್ಗೂಡಿಸಬೇಕು


Team Udayavani, Oct 18, 2023, 12:41 AM IST

census

ಚುನಾವಣೆ ಸಮೀಪಿಸಿದಾಗಲೆಲ್ಲ ದೇಶದಲ್ಲಿ ಎಂದೋ ಸರಿದು ಹೋಗಿದ್ದ ಅನೇಕ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬರುತ್ತವೆ. ಇಂದಿನ ಜಾತಿಗಣಿತ ಲೆಕ್ಕಾಚಾರ ಸಹ ಇದರಿಂದ ಹೊರತಲ್ಲ. ಪ್ರತೀ ಜಾತಿಯವರ ಸಾಮಾಜಿಕ, ಆರ್ಥಿಕ, ಶಿಕ್ಷಣ ಸೇರಿದಂತೆ ವಿವಿಧ ಒಟ್ಟು ಬದುಕಿನ ಸ್ಥಿತಿ ಅರ್ಥ ಮಾಡಿಕೊಳ್ಳಲು ಹಾಗೂ ನಿಖರ ಅಂಕಿ-ಅಂಶಗಳ ದತ್ತಾಂಶ ಪಡೆಯುವ ಮೂಲಕ ಅವಕಾಶವಂಚಿತರಿಗೆ ಬದುಕು ಕಟ್ಟಿ ಕೊಡಲು ಅಗತ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಯೋಚನೆ ಇದ್ದರೆ ಯಾವ ಜನಗಣತಿಯೂ ತಪ್ಪಲ್ಲ.

ಜಾತಿಗಣತಿಯ ಹೆಸರಲ್ಲಿ ದೊಡ್ಡ ಮತ್ತು ಸಣ್ಣ ಜಾತಿಗಳನ್ನು ವಿಭಜಿಸಿ ಕೇವಲ ಅಂಕಿ-ಅಂಶಗಳನ್ನು ಪ್ರಕಟಿಸುವುದರಿಂದ ಜಾತಿ ಸಂಘಟನೆಗಳಿಗೆ ನಿಖರತೆ ಸಿಗಬಹುದೇ ಹೊರತು ಸಮಬಾಳು ಮತ್ತು ಸಮಪಾಲಿಗಾಗಿ ಪರಿತಪಿಸುವ ಸಣ್ಣ ಸಣ್ಣ ಸಮುದಾಯಗಳಿಗೆ ಸಿಗುವ ಸಹಾಯವೆಷ್ಟು ಎನ್ನುವುದು ಸಹಜ ಪ್ರಶ್ನೆ. ಅನೇಕ ಸಾರಿ ಜಾತಿ ಸಮೀಕ್ಷೆಯ ಮೂಲಕ ಬಡ ವರನ್ನು ಗುರುತಿಸಿ, ಅವರಿಗೆ ಆರ್ಥಿಕ, ಶೈಕ್ಷಣಿಕ, ಉದ್ಯೋಗದ ಮೀಸಲಾತಿ ನೀಡುವ ಬದಲು ಜಾತಿ ಲೆಕ್ಕಾಚಾರಗಳನ್ನು ಓಟಿನ ಬೇಟೆಗಾಗಿ ಬಳಸಿಕೊಂಡರೆ ಜಾತಿಗಣತಿ ಲಾಭ ರಾಜಕಾರಣಿಗಳಿಗಲ್ಲದೇ ಮತ್ಯಾರಿಗೆ ಸಿಗಲು ಸಾಧ್ಯ?

ರಾಜ್ಯದ ಕಟ್ಟಕಡೆಯ ಮನುಷ್ಯರ ಸಾಮಾಜಿಕ ಸ್ಥಿತಿಯ ಗಣತಿ ಮತ್ತು ಅವರ ವಿದ್ಯೆ, ವಸತಿ, ಆರೋಗ್ಯ, ಅಸಮಾನತೆಯಂತಹ   ವಿಚಾರಗಳಲ್ಲಿ   ಸಮಾಜ ಸುಧಾರಿಸುವ ಚಿಕಿತ್ಸಕ ಬುದ್ಧಿಯೊಡನೆ ದೃಢ ಹೆಜ್ಜೆ ಇರಿಸುವುದಾದರೆ ಜನಗಣತಿಯು ಸರ್ವಕಾಲಕ್ಕೂ ಸಮ್ಮತ. 2015ರಲ್ಲೂ ಸಿಎಂ ಆಗಿದ್ದ ಸಿದ್ಧರಾಮಯ್ಯನವರು ಜಾತಿ ಜನಗಣತಿಗೆ ನಿರ್ಧರಿಸಿದ್ದರು. ಖರ್ಚು ವೆಚ್ಚಕ್ಕಾಗಿ 165 ಕೋಟಿ ರೂ. ತೆಗೆದಿರಿಸಿದ್ದರು. ಇವರ ಅವಧಿಯಲ್ಲಿಯೇ ವರದಿ ಸಿದ್ಧವಾಗಿದ್ದರೂ ಇಂದಿನಂತೆ ಅಂದೂ ಬಲಾಡ್ಯರ ಅಡೆತಡೆಯಿಂದ ವರದಿ ಸಲ್ಲಿಕೆ, ಸ್ವೀಕಾರ ಆಗುವುದೇ ಇಲ್ಲ. ಅವರದೇ ಮಾರ್ಗದರ್ಶನದಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರದಲ್ಲೂ ವರದಿ ಸ್ವೀಕಾರದ ಸಿದ್ಧತೆಯಾಗಲೀ, ದೃಢತೆಯಾಗಲೀ ಕಾಣುತ್ತಿರಲಿಲ್ಲ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ   ಅಧಿಕಾರಕ್ಕೆ ಬಂದಾಗ ಅಧ್ಯಕ್ಷರಿಲ್ಲದೆ ತಟಸ್ಥವಾಗಿದ್ದ ಹಿಂದುಳಿದ ವರ್ಗಗಳ ಆಯೋಗಕ್ಕೆ ಅನುಭವಿ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆಯವರನ್ನು ನೇಮಕ ಮಾಡಿ ಸಿದ್ಧರಾಮಯ್ಯನವರಿಂದ ರಚನೆಯಾದ ಕಾಂತರಾಜು ವರದಿಯ ಬಗ್ಗೆ ಚರ್ಚೆ ಮಾಡಿದೆವು. ವಾಸ್ತವಿಕವಾಗಿ ವರದಿಯಲ್ಲಿ ಪದನಿಮಿತ್ತ ಕಾರ್ಯದರ್ಶಿಗಳ ಸಹಿಯೇ ಇಲ್ಲದಿರುವುದು ಖಚಿತವಾಗಿ, ಕಾಂತರಾಜ್‌ ವರದಿ ಮತ್ತೂಮ್ಮೆ ನೂತನ ಅಧ್ಯಕ್ಷರ ಸುಪರ್ದಿಯಲ್ಲಿ ಪರಿಶೀಲಿಸಿ, ಅನಂತರ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿತ್ತು.

ಆತಂಕಕ್ಕೆ ಕಾರಣವಾಗಿವೆ 468 ಹೆಚ್ಚುವರಿ ಜಾತಿ, ಉಪಜಾತಿಗಳು: ಗ್ರಾಮೀಣ ಭಾಗದ ಶೇ.99ರಷ್ಟು ಮತ್ತು ನಗರ ಪ್ರದೇಶದ ಶೇ. 90ರಷ್ಟು ಕುಟುಂಬಗಳನ್ನು ಅಧಿಕಾರಿಗಳು ಭೇಟಿ ಮಾಡಿ ವರದಿ ತಯಾರಿಸಿದ್ದಾರೆ. ಸ್ವಾಭಾವಿಕವಾಗಿಯೂ ರಾಜ್ಯದ ಮಟ್ಟಿಗೆ ಹಿಂದುಳಿದ ವರ್ಗದಲ್ಲಿ 208 ಮುಖ್ಯ ಜಾತಿಗಳನ್ನು ಗಮನಕ್ಕೆ ತೆಗೆದು ಕೊಂಡಾಗ ಗುರುತಿಸಬಹುದಾದ 675 ಉಪಜಾತಿಗಳೊಂದಿಗೆ ಒಟ್ಟು ಸುಮಾರು 883 ಜಾತಿ ಮತ್ತು ಉಪಜಾತಿಗಳನ್ನು ಗುರುತಿಸಬಹುದಾಗಿದೆ. ಜಾತಿ ಗಣತಿ ಮಾಡುವವರು ಒಟ್ಟಾರೆ ಜಾತಿ ಮತ್ತು ಉಪಜಾತಿ ಸೇರಿ 1351 ಅಥವಾ ಅದಕ್ಕೂ ಹೆಚ್ಚು ಎಂದು ವಿವರ ನೀಡುತ್ತಿದ್ದಾರೆ. ಈ ಹೆಚ್ಚುವರಿ 468 ಜಾತಿ ಎಲ್ಲಿಂದ ಬಂದವು? ಕ್ರಿಶ್ಚಿಯನ್‌ ಲಿಂಗಾಯತರು, ಕ್ರಿಶ್ಚಿಯನ್‌ ಒಕ್ಕಲಿಗರು, ಕ್ರಿಶ್ಚಿಯನ್‌ ಕುರುಬರು, ಕ್ರಿಶ್ಚಿಯನ್‌ ಈಡಿಗರು, ಕ್ರಿಶ್ಚಿಯನ್‌ ಬ್ರಾಹ್ಮಣರು, ಕ್ರಿಶ್ಚಿಯನ್‌ ದಲಿತರ ಸಹಿತ ಹಲವಾರು ಜಾತಿ, ಉಪಜಾತಿಗಳ ಪ್ರಸ್ತಾವವಿದೆ ಎಂಬ ವರದಿಗಳಿವೆ. ಜಾತಿ ಯಾವುದೇ ಇದ್ದರೂ ಧರ್ಮದಲ್ಲಿ ಹಿಂದೂಗಳು ಎಂದು ಭಾವಿಸುವವರಿಗೂ   ಹೊಸ   ಕ್ರಿಶ್ಚಿಯನ್‌ ಜಾತಿ 468 ಹೆಚ್ಚಾಗಿರುವುದು ಗಾಬರಿ ಹುಟ್ಟಿಸಿದೆ. ಧರ್ಮ ಬಿಟ್ಟು ಹೋದವರಿಗೂ ಹೊಸ ಹೆಸರು ಕೊಟ್ಟು ಮೂಲ ಹಿಂದುಳಿದವರಿಗೆ, ದಲಿತರಿಗೆ ಮೀಸಲಾತಿ ವಂಚಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಮತಾಂತರ ಗೊಂಡವರಿಗೂ ಸವಲತ್ತು ನೀಡುವಲ್ಲಿ ವಿಸ್ತರಿಸುವ ವಿಷಯ ವರದಿಯಲ್ಲಿ ಅಡಕವಾಗಿದೆ ಎಂಬ ಜಿಜ್ಞಾಸೆಯೂ ಇದೆ.

ದುರ್ಬಲರಿಗೆ ಬದುಕು ಕಟ್ಟಿಕೊಡುವ ಯೋಜನೆಗೆ ಅಡಿಪಾಯ: ಕಾಂತರಾಜ್‌ ವರದಿಯಲ್ಲಿ ಕೇವಲ ಜಾತಿ ಗಣತಿಯನ್ನೇ ಪ್ರಧಾನವಾಗಿಟ್ಟುಕೊಂಡು ರಾಜಕಾರಣದ ಓಲೈಕೆಯ ಲೆಕ್ಕಾಚಾರಕ್ಕಿಂತ ಕಡುಬಡವರನ್ನು ಗುರುತಿಸುವ ಮತ್ತು ಗುರುತಿಸಿದ ದುರ್ಬಲರಿಗೆ ಬದುಕು ಕಟ್ಟಿಕೊಡುವ ಯೋಜನೆಗೆ ಅಡಿಪಾಯ ಹಾಕಬೇಕಾಗಿದೆ. ಕುತೂಹಲವೆಂದರೆ, ಒಂದೆಡೆ ಕಾಂತರಾಜ್‌ ವರದಿಯ ಬಿಡುಗಡೆಯ ಬೇನೆಯನ್ನು ರಾಜ್ಯ ಕಾಂಗ್ರೆಸ್‌ ಸರಕಾರ ಅನುಭವಿಸುತ್ತಿದ್ದರೆ, ಮತ್ತೂಂದೆಡೆ ಬಲಾಡ್ಯರೆಂದು ಬಿಂಬಿಸಿಕೊಂಡ ಕೆಲವರಿಗೆ ತಣ್ಣನೆಯ ಒಡಲ ದುಗುಡ ಇದ್ದಂತಿದೆ. ನಿಖರವಾದ ಅಂಕಿ ಅಂಶಗಳಿಂದ ತಮ್ಮ ಪ್ರಾಶಸ್ತಕ್ಕೆ ಧಕ್ಕೆಯಾಗುವ ಕಾರಣಕ್ಕೆ ಜಾತಿಯ ಹೆಸರಲ್ಲೆ ಅವಕಾಶ ಬಾಚಿಕೊಳ್ಳುತ್ತಿರುವವರು ಗೊಂದಲಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಗೊಲ್ಲ, ಮಡಿವಾಳ, ಕ್ಷೌರಿಕ, ಕುಣುಬಿ, ಗೌಳಿ, ಹಡಪದ, ಹಾಲಕ್ಕಿ ಗೌಡರಂತಹ ಸಣ್ಣ ಸಣ್ಣ ಸಮುದಾಯಗಳಂತ ಶಕ್ತಿ ಸೌಧದತ್ತ ಹೆಜ್ಜೆ ಹಾಕಲಾಗದ ದುರ್ಬಲರಿಗೆ ಜಾತಿ ಗಣತಿ ಅಂಕೆ ಸಂಖ್ಯೆಗಳನ್ನು ನೀಡಬಹುದೇ ಹೊರತು ಶಿಳ್ಳೇ ಖ್ಯಾತರಂತಹ ಉಂಡುಡಲು ಇಲ್ಲದೆ, ಸ್ವಂತ ಮನೆ ಇಲ್ಲದೆ ಟೆಂಟ್‌ ಹೊತ್ತು ತಿರುಗುವ ಅಲೆಮಾರಿ ಜೀವನಕ್ಕೆ ಎಂತಹ ಶಕ್ತಿ ನೀಡುವುದು ಎಂಬ ಜಿಜ್ಞಾಸೆ ಹಾಗೇ ಉಳಿದುಬಿಡುತ್ತದೆ.

ಮಹಿಳಾ ಮೀಸಲಾತಿಯ ಉದ್ದೇಶ ಪ್ರಶ್ನಿಸುವ ಪ್ರಯತ್ನ:  ಭಾರತದ ಜನಗಣತಿಗೂ ಸುದೀರ್ಘ‌ ಇತಿಹಾಸವಿದೆ. ಬ್ರಿಟಿಷ್‌ ಸರಕಾರದ ಅವಧಿಯ 1881ರಲ್ಲಿ ಮೊದಲ ಬಾರಿ ಜಾತಿ ಜನಗಣತಿ ಮಾಡಿತ್ತು. ಅನಂತರ ಪ್ರತೀ ಹತ್ತು ವರ್ಷಕ್ಕೊಮ್ಮೆ ಪ್ರಜೆಗಳ ಬದುಕಿನ ಕುರಿತು ಜನಗಣತಿ ನಡೆಸುತ್ತಾ ಬರಲಾಗಿತ್ತು. ಸ್ಯಾತಂತ್ರಾéನಂತರವೂ ಈ ವ್ಯವಸ್ಥೆ ಮುಂದುವರಿದಿತ್ತು. 2011ರ ಅವಧಿಗೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಜಾತಿ ಜನಗಣತಿಗೆ ಆದೇಶಿಸಿದ್ದರು. 2013ರಲ್ಲಿ ಈ ವರದಿ ಪೂರ್ಣಗೊಂಡಿದ್ದರೂ, ಸಿಂಗ್‌ರ ನೇತೃತ್ವದ ಸರಕಾರ ವರದಿಯನ್ನು ಪ್ರಕಟಿಸಿಲ್ಲ. ಇದೀಗ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವಾಗ ಇಂಡಿಯಾ ಮೈತ್ರಿ ಕೂಟ ರಾಷ್ಟ್ರದಲ್ಲಿ ಜಾತಿ ಜನಗಣತಿಗೆ ಆಗ್ರಹಿಸುತ್ತಿರುವುದು ಕಂಡು ಬರುತ್ತಿದೆ. ಈ ಮಧ್ಯೆ ಮೋದಿ ಸರಕಾರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಶೇ. 33ರಷ್ಟು ಮಹಿಳಾ ಮೀಸಲಾತಿ ತರುವ ಕ್ರಾಂತಿಕಾರಿ ಕೆಲಸಕ್ಕೆ ಕೈಯಿಕ್ಕಿ ಮಸೂದೆ ಅಂಗೀಕರಿಸುವಾಗ ಕೆಲವರು ಮಹಿಳಾ ಮೀಸಲಾತಿಯಲ್ಲಿಯೂ ಹಿಂದುಳಿದ ವರ್ಗಗಳ ಒಳ ಮೀಸಲಾತಿಗೆ ಆಗ್ರಹಿಸುವ ನೆಪದಲ್ಲಿ ಮಹಿಳೆಯರ ಮೀಸ ಲಾತಿಯ ಉದ್ದೇಶವನ್ನೇ ಪ್ರಶ್ನಿಸುವ ಪ್ರಯತ್ನ ಮಾಡಿದ್ದರು.

ಸರಕಾರದ ಮುಂದೆ ಸವಾಲುಗಳ ಸರಮಾಲೆಯೇ ಇದೆ: ಒಟ್ಟಾರೆ ಜಾತಿಗಣತಿ ಇಷ್ಟೊಂದು ಮುನ್ನೆಲೆಗೆ ಬರುವ ಕಾರಣವೆಂದರೆ ಬಿಹಾರದಂತಹ ರಾಜ್ಯದಲ್ಲಿ ಜಾತಿ ಜನಗಣತಿ ಸ್ವೀಕರಿಸಿರುವುದು. ಕರ್ನಾಟಕದಲ್ಲೂ ಜಾತಿ ಜನಗಣತಿಯೊಂದಿಗೆ ಜನ ಸಾಮಾನ್ಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿಯೂ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಜಾತಿವಾರು ಪ್ರಾತಿನಿಧ್ಯದ ಬೇಡಿಕೆ ಬಂದಾಗ ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆ ಎಷ್ಟು? ಕಳೆದ 75 ವರ್ಷಗಳ ಅವಧಿಯಲ್ಲಿ ಆ ಜಾತಿಯಲ್ಲಿ ಉನ್ನತ ಶಿಕ್ಷಣ ಪಡೆದವರೆಷ್ಟು? ಶಿಕ್ಷಕರೆಷ್ಟು? ವೈದ್ಯರು, ಎಂಜಿನಿಯರ್‌, ಕೆ.ಎ.ಎಸ್‌., ಐ.ಎ.ಎಸ್‌.ಗಳೆಷ್ಟು? ಎಂಬುದು ಲೆಕ್ಕ ಸಿಕ್ಕಾಗ ಇತರ ಜಾತಿಗಳಲ್ಲೂ ಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಮತ್ತು ಸರಕಾರಿ ಉದ್ಯೋಗ ಸಿಕ್ಕಿರದಿದ್ದರೆ, ಎಲ್ಲ ಜಾತಿಗಳಲ್ಲೂ ಸಹಜ ಬೇಡಿಕೆ ಮತ್ತು ಆಗ್ರಹಗಳು ಸರಕಾರದ ಮುಂದೆ ಬರಲಿವೆ. ಇದರೊಂದಿಗೆ, ಈಗಾಗಲೇ ಸಾಕಷ್ಟು ಪ್ರಾತಿನಿಧ್ಯ ಪಡೆದಿರುವ ಜಾತಿಗಳಿಗೆ ತಮಗೆ ಅವಕಾಶ ಕೈ ತಪ್ಪುತ್ತದೆ ಎಂಬ ಆತಂಕವೂ ಕಾಡಬಹುದು. ಕೆಲವು ಸಮುದಾಯಗಳ ಆರ್ಥಿಕ, ಶೈಕ್ಷಣಿಕ ರಾಜಕೀಯ, ಮತ್ತು ಸರಕಾರಿ ಉದ್ಯೋಗದ ಪ್ರಾತಿನಿಧ್ಯವನ್ನು ಗಮನಿಸಿ ಆ ಸಮುದಾಯವನ್ನು ಮೀಸಲಾತಿಯಿಂದ ಹೊರಗಿಟ್ಟು ಕೇಂದ್ರ ಸರಕಾರ ರೂಪಿಸಿದ ಶೇ. 10ರಷ್ಟು ಮೀಸಲಾತಿಗೆ ಜೋಡಿಸಬೇಕೆಂಬ ವಾದವೂ ಪ್ರಬಲವಾಗ ಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ತಮ್ಮನ್ನು ಸೇರಿಸ ಬೇಕೆಂದು ಬಹು ಒತ್ತಡ ತಂದು ಕೇಂದ್ರಕ್ಕೆ ಶಿಫಾರಸು ಗೊಂಡವರು ರಾಜ್ಯದಲ್ಲಿ ಪಡೆದಿರುವ ಪ್ರಾತಿನಿಧ್ಯಗಳನ್ನು ಉಲ್ಲೇಖೀಸಿದಾಗ ಅಂತಹ ಸಮುದಾಯಗಳ  ಬೇಡಿಕೆಗೆ  ಸಹಜವಾದ ಕಡಿವಾಣ ಬೀಳಬಹುದು. ದೊಡ್ಡ ಸಂಖ್ಯೆಯ ಲ್ಲಿದ್ದಾರೆ ಎಂದು ಭಾವಿಸುವ ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳು, ಪರಿಶಿಷ್ಟ ಪಂಗಡದಲ್ಲಿ 51 ಉಪಜಾತಿಗಳನ್ನು ಗುರುತಿಸಿರುವುದರಿಂದ ಎರಡನೇ ದೊಡ್ಡ ಸಮುದಾಯದಲ್ಲಿ ಅಲ್ಪಸಂಖ್ಯಾಕರು ಬಂದರೆ ಮುಂದಿನ ದಿನಗಳಲ್ಲಿ ರಾಜ್ಯದ ಮಟ್ಟಿಗೆ ಅಲ್ಪಸಂಖ್ಯಾಕ ಹಣೆಪಟ್ಟಿ ಬದಲಾಗಿ ಬಹುಸಂಖ್ಯಾಕರೆಂದು ಗುರುತಿಸಿಕೊಳ್ಳುವ ಸಂಭವವನ್ನು ಅಲ್ಲಗಳೆಯುವಂತಿಲ್ಲ. ಪ್ರತೀ ದೊಡ್ಡ ಜಾತಿಯವರು ನಮ್ಮ ಸಂಖ್ಯೆ  60 ಲಕ್ಷ 70 ಲಕ್ಷ ಎನ್ನುವವರ ಜತೆ ಸ್ಪರ್ಧಿಸಲಾಗದೆ ಉಳಿದಿರುವ ಒಟ್ಟು ಜನಸಂಖ್ಯೆ 1,000 ಮೀರಿದ 100 ಕ್ಕೂ ಹೆಚ್ಚು ಜಾತಿಗಳು ನಮಗಾವಾಗ ಪ್ರಾತಿನಿಧ್ಯ ಎಂದು ಕೇಳುವ ಹಕ್ಕು, ಪ್ರಶ್ನೆ ಎದುರುಗಾವುದು ಸಹಜ.

ಕೋಟ ಶ್ರೀನಿವಾಸ ಪೂಜಾರಿ

(ಲೇಖಕರು:  ಮಾಜಿ ಸಚಿವರು,ಸಮಾಜ ಕಲ್ಯಾಣ ಇಲಾಖೆ)

ಮೊದಲು ಜಾತಿಗಣತಿ ಬಿಡುಗಡೆಯಾಗಲಿ

ಯಾವುದೇ ಜನಾಂಗಕ್ಕೆ ಮೀಸಲಾತಿಯನ್ನು ಕೊಡಲು ಜಾತಿಗಣತಿಯ ಅಗತ್ಯ ಅನಿವಾರ್ಯ ವಾಗಿ ಇದೆ. ಕರ್ನಾಟಕ ದಲ್ಲೂ ಈಗ ಜಾತಿ ಗಣತಿ ಕುರಿತು ಪ್ರಸ್ತಾವವಾಗು ತ್ತಿದೆ.  ಈಗಾಗಲೇ ಬಿಹಾರದಲ್ಲಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.  ಕರ್ನಾಟಕದಲ್ಲಿಯೂ ಬಿಡುಗಡೆ ಮಾಡಬೇಕು ಎಂಬುದು ನನ್ನ ಸ್ಪಷ್ಟ ನಿಲುವು.

ಕಾಂತರಾಜ್‌ ವರದಿಯ ಬಗ್ಗೆ ನನಗೂ ಅನು ಮಾನ ಇತ್ತು. ಸಿದ್ದರಾಮಯ್ಯನವರನ್ನು  ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಅಂದಮೇಲೆ ಸಿದ್ದರಾಮಯ್ಯನವರು ನೇಮಿಸಿದ್ದ ಕಾಂತರಾಜ್‌ ಕೂಡ ಒಕ್ಕಲಿಗರ ಹಿತಕ್ಕೆ ವಿರುದ್ಧವಾದ ವರದಿ ಎಂದು ಎಲ್ಲರೂ ಹೇಳುತಿದ್ದರು. ನಾನು ಅದನ್ನೆ ನಂಬಿಕೊಂಡಿದ್ದೆ. ಇತ್ತೀಚೆಗೆ ವಕೀಲ ಪ್ರೊ| ರವಿವರ್ಮ ಕುಮಾರ್‌ ಈ ಬಗ್ಗೆ  ನನ್ನ ಕಣ್ಣು ತೆರೆಸಿದರು. ಯಾವುದೇ ವರದಿಯನ್ನು ಮೊದಲು ಸ್ವೀಕರಿಸಿ, ಸಾರ್ವಜನಿಕರ ಗಮನಕ್ಕೆ ತಂದಾಗ ಅದರ ವಾಸ್ತವಾಂಶಗಳು ಎಲ್ಲರಿಗೂ ಗೊತ್ತಾಗುತ್ತದೆ.  ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರಕಾರಗಳು ಇದನ್ನು ಇಲ್ಲಿಯವರೆಗೆ ಅಂಗೀಕರಿಸಲಿಲ್ಲ. ಬಹಿರಂಗವಾಗಿ ಸಾರ್ವಜನಿಕ ಚರ್ಚೆಗೂ ಬಿಡಲಿಲ್ಲ.  ಅಂದಮೇಲೆ ಆ ವರದಿಯಲ್ಲಿ ಒಕ್ಕಲಿ ಗರ ಜನಸಂಖ್ಯೆಯನ್ನು ಕಡಿಮೆ ಮಾಡಿ ದ್ದಾರೆಂದು ಹೇಗೆ ಹೇಳಲು ಸಾಧ್ಯ. ಅಕಸ್ಮಾತ್‌ ಒಕ್ಕಲಿಗರ ಜನಸಂಖ್ಯೆ ಕಡಿಮೆಯಾಗಿದೆ ಎಂದು ಕಾಂತರಾಜ್‌ ವರದಿ ತಿಳಿಸಿದರೆ, ಅದಕ್ಕೆ ಪರ್ಯಾ ಯವಾಗಿ ಮತ್ತೂಂದು ಜನಸಂಖ್ಯಾಗಣತಿ ಆಯೋಗವನ್ನು ನೇಮಕ ಮಾಡಲು ನಾವು ಆಗ್ರಹಿಸಬಹುದು. ಸರಕಾರ ನಮ್ಮ ಮಾತನ್ನು ಕೇಳದಿದ್ದರೆ, ಒಕ್ಕಲಿಗ ಜನಾಂಗದ ಸಂಘ-ಸಂಸ್ಥೆ ಗಳು ಮಠ-ಮಂದಿರಗಳು ಇಂತಹ ಗಣತಿ ಯನ್ನು ಮಾಡಿಸಲು ಈಗಲೂ ಸಾಧ್ಯವಿದೆ.

ಒಕ್ಕಲಿಗರ ಮೀಸಲಾತಿ ಹೋರಾಟಕ್ಕೆ ಬಲುದೊಡ್ಡ ಇತಿಹಾಸ ಇದೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ವರದಿಯ ಪ್ರಕಾರ ಒಕ್ಕಲಿಗರಿಗೆ ಶೇ.11ರ ಮೀಸಲಾತಿ ನೀಡಲಾಗಿತ್ತು. ನಾನೇ ಸ್ವತಃ ಅದರ ಫ‌ಲಾನುಭವಿ. ನಮ್ಮ ಜನರಿಗೆ ಮೀಸಲಾತಿ ಎಂಬುದು ಕೇವಲ ದಲಿತರಿಗೆ ಬಾಬಾ ಸಾಹೇಬರು ಒದಗಿಸಿಕೊಟ್ಟ ಅವಕಾಶ ಎಂಬ ತಪ್ಪು ಕಲ್ಪನೆ ಇದೆ. ಬ್ರಾಹ್ಮಣರಂತಹ ಮೇಲ್ಜಾತಿಯ ಜನರನ್ನು ಹೊರತುಪಡಿಸಿ, ಉಳಿದ ಎಲ್ಲ ಒಬಿಸಿಗಳಿಗೆ ಮೀಸಲಾತಿ ಇರುವುದನ್ನು ಮರೆತುಬಿಟ್ಟಿದ್ದರು.

1992ರಲ್ಲಿ ಸರಕಾರ ಒಕ್ಕಲಿಗರನ್ನು ಮುಂದುವರಿದ ಜನಾಂಗ ಎಂದು ತೀರ್ಮಾನಿಸಿ ಮೀಸಲಾತಿಯನ್ನು ರದ್ದುಪಡಿಸಿತ್ತು. ಅದರ ವಿರುದ್ಧ ಒಕ್ಕಲಿಗ ಸಂಘದ ಗುತ್ತಲಗೌಡ ಮುಂತಾದವರು ಆಗಿನ ಆದಿಚುಂಚನಗಿರಿ ಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ,  ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚಲನಚಿತ್ರ ನಟ ಅಂಬರೀಶ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನ ಸಭೆ ನಡೆಯಿತು. ಅದಕ್ಕೆ ಬೆಚ್ಚಿದ ಸರಕಾರ ಒಕ್ಕಲಿಗರಿಗೆ ಶೇ.4ರ  ಮೀಸಲಾತಿ ಕೊಟ್ಟಿತು. ಅಷ್ಟಕ್ಕೆ ತೃಪ್ತರಾದ ನಮ್ಮ ಜನ ಹೋರಾಟವನ್ನು ಕೈಬಿಟ್ಟು ಸುಮ್ಮನಾದರು.

ಕರ್ನಾಟಕದಲ್ಲಿ ಮೀಸಲಾತಿಯ ಬೇಡಿಕೆಯನ್ನು ಮೊದಲು ಮುಂದಿಟ್ಟವರು ಒಕ್ಕಲಿಗ ಜನಾಂಗದ ಆ ಕಾಲದ ಮುಖಂಡ ಕೆ.ಎಚ್‌. ರಾಮಯ್ಯ. ಆಗಿನ ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ರಾಮಯ್ಯನವರ ಒತ್ತಡಕ್ಕೆ ಮಣಿದು ಮಿಲ್ಲರ್‌ ಸಮಿತಿ ನೇಮಿಸಿದರು. ಮಿಲ್ಲರ್‌ ಸಮಿತಿಗೆ ಬ್ರಿಟಿಷ್‌ ಅಧಿಕಾರಿಯೊಬ್ಬರು ಒಂದು ಸಲಹೆ ಕೊಡುತ್ತಾರೆ. “ಮೈಸೂರು ರಾಜ್ಯದಲ್ಲಿ ನೀವು ಯಾರಿಗೆ ಮೀಸಲಾತಿ ಕೊಡುತ್ತೀರೋ ಬಿಡುತ್ತೀರೋ, ಆದರೆ ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ಕೊಡಲೇಬೇಕು’ ಎಂದು ಆಗ್ರಹಿಸುತ್ತಾರೆ. ಅದಕ್ಕೆ ಅವರು ಕೊಟ್ಟ ಕಾರಣ- “ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ಕೊಟ್ಟರೆ, ಅವರು ಉಳಿದ ಎಲ್ಲ ತಳ ಸಮುದಾಯದ ಜಾತಿ ಜನಾಂಗಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಇತರ ಸಣ್ಣಪುಟ್ಟ ಸಮುದಾಯಗಳ ಅಭಿವೃದ್ಧಿಗೂ ನೆರವಾಗುತ್ತಾರೆ’ ಇದು ಒಕ್ಕಲಿಗ ಜನಾಂಗದ ಬಗ್ಗೆ ವಿದೇಶಿ ಅಧಿಕಾರಿಗೆ ಇದ್ದ ಒಂದು ಸದಾಭಿಪ್ರಾಯ.

ಮೊದಲಿಗೆ ಒಕ್ಕಲಿಗ ಜನಾಂಗದ ಮೀಸಲಾತಿ ಹೋರಾಟ ಪ್ರಾರಂಭವಾದದ್ದು 2020ರ ಸೆ.27 ರಂದು. ಆಡಿಟರ್‌ ನಾಗರಾಜ್‌ ಅವರ ವಿಶ್ವಮಾನವ ವಿದ್ಯಾ ಸಂಸ್ಥೆಯಲ್ಲಿ. ಸುಮಾರು 500ಕ್ಕೂ ಹೆಚ್ಚು ಜನ ಒಕ್ಕಲಿಗ ಬಂಧುಗಳು ಅಲ್ಲಿ ಸೇರಿದ್ದರು. ಆ ಸಭೆಯಲ್ಲಿ ಆಡಿಟರ್‌ ನಾಗರಾಜ್‌ರನ್ನು ಪ್ರಧಾನ ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು. ಒಕ್ಕಲಿಗ ಜನಾಂಗದ ವಿಶ್ರಾಂತ ಅಧಿಕಾರಿಗಳಾದ ವೈ.ಕೆ. ಪುಟ್ಟಸ್ವಾಮಿ ಗೌಡ, ಸಿ. ಚಿಕ್ಕಣ್ಣ, ಟಿ. ತಿಮ್ಮೇಗೌಡ, ಆರ್ಥಿಕತಜ್ಞ ಜಿ. ತಿಮ್ಮಯ್ಯ ಮುಂತಾದವರನ್ನು ಭೇಟಿ ಮಾಡಿ ಈ ವಿಷಯವನ್ನು ಅವರಿಗೆ ಮನದಟ್ಟು ಮಾಡಿ ಕೊಟ್ಟರು. ಅನಂತರ ಅವರೆಲ್ಲ ಸೇರಿ ಆದಿಚುಂಚನ ಗಿರಿಯ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ, ಮೀಸಲಾತಿ ಹೋರಾಟದ ಆಳ ಅಗಲಗಳನ್ನು ವಿವರಿಸಿದರು. ಸ್ವಾಮೀಜಿಗಳು ತಮ್ಮ ಮಠದಲ್ಲಿಯೇ ಹಲವು ಕ್ಷೇತ್ರದ ಗಣ್ಯರನ್ನು ಹಾಗೂ ಹೋರಾಟಗಾರರ ಸಭೆಯನ್ನು ಕರೆದು ಚರ್ಚಿಸಿ ಮೀಸಲಾತಿ ಹೋರಾಟಕ್ಕೆ ಹಸುರು ನಿಶಾನೆ ತೋರಿದರು.

ಮೈಸೂರು, ರಾಮನಗರ, ಕೋಲಾರ, ಚಿಕ್ಕ ಮಗಳೂರು, ಹಾಸನ ಮುಂತಾದ ಜಿಲ್ಲಾ ಕೇಂದ್ರ ಗಳಲ್ಲಿ ಜನಜಾಗೃತಿ ಸಭೆ ಹಾಗೂ ಪತ್ರಿಕಾಗೋಷ್ಠಿ ಗಳು ಜರಗಿದವು. ಈ ಹೋರಾಟ ಬೃಹತ್‌ ರೂಪು ಪಡೆಯುವ ಮುನ್ಸೂಚನೆಯನ್ನು ಮನಗಂಡ ಸರಕಾರ, ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನ ಕೈಗೊಂಡಿತು. ಶೇ.10 ಇದ್ದ ಕೋಟಾದಲ್ಲಿ ಒಕ್ಕಲಿಗರಿಗೆ ಶೇ.3  ಹಾಗೂ ಲಿಂಗಾಯತರಿಗೆ ಶೇ.4 ಕೊಡುವುದಾಗಿ ಭರವಸೆ ನೀಡಿತು. ಒಕ್ಕಲಿಗ ಮತ ಬ್ಯಾಂಕ್‌ನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಸರಕಾರ ಮೀಸಲಾತಿ ಕೊಡಲೇಬೇಕಾದ ಅನಿವಾರ್ಯ ಒತ್ತಡಕ್ಕೆ ಸಿಲುಕಿತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರಕಾರ, ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ತಲಾ ಶೇ.2 ಮೀಸಲಾತಿ ಕೊಡುವುದಾಗಿ ಘೋಷಣೆ ಮಾಡಿತು. ಅದೂ ಮುಸ್ಲಿಮ್‌ ಜನಾಂಗಕ್ಕೆ ಇದ್ದ ಶೇ.4 ಮೀಸಲಾತಿಯನ್ನು ರದ್ದುಪಡಿಸಿ, ನಮ್ಮ ಜನಾಂಗಕ್ಕೆ ನೀಡುವುದಾಗಿ ಘೋಷಿಸಿತು. ಇದು ದುರದೃಷ್ಟ. ಅನ್ಯಾಯದ ಪರಮಾವಧಿ. ಒಕ್ಕಲಿಗ ಜನಾಂಗದ ಔದಾರ್ಯಕ್ಕೆ ತದ್ವಿರುದ್ಧವಾಗಿ ತೆಗೆದುಕೊಂಡ ತಪ್ಪು ನಿರ್ಧಾರ. ಮುಸ್ಲಿಂ ಜನಾಂಗದ ಅನ್ನದ ತಟ್ಟೆಗೆ ಕೈ ಹಾಕುವ ಕೆಟ್ಟ ಸ್ವಭಾವ ಒಕ್ಕಲಿಗ ಜನಾಂಗಕ್ಕೆ ಇಲ್ಲ.

ಈಗಾಗಲೇ ಸುಪ್ರೀಂ ಕೋರ್ಟ್‌ ಸರಕಾರದ ಇಂತಹ ದುರುದ್ದೇಶಪೂರಿತ ಆದೇಶದ ವಿರುದ್ಧ ತಡೆಯಾಜ್ಞೆ ಕೊಟ್ಟಿದೆ. ಇದನ್ನು ಪ್ರಜ್ಞಾವಂತ ಒಕ್ಕಲಿಗ ಸಮೂಹ ಸ್ವಾಗತಿಸುತ್ತದೆ. ಒಕ್ಕಲಿಗರ ಮೀಸಲಾತಿ ಹೋರಾಟ ಕೇವಲ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಜನ ಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ನಿಗದಿಪಡಿಸಬೇಕು ಎಂಬುದು ನಮ್ಮ ಬೇಡಿಕೆ ಯಾಗಿದೆ. 25 ವರ್ಷಗಳ ಹಿಂದೆ ಶಾಸನ ಸಭೆ ಯಲ್ಲಿ ಪ್ರೊ| ನಂಜುಂಡಸ್ವಾಮಿ ಪ್ರಸ್ತಾವ ಮಾಡಿ ದಂತೆ ಹಾಗೂ ಕೆ.ಎಸ್‌. ಭಗವಾನ್‌ ಪತ್ರಿಕೆಗಳಲ್ಲಿ ಬರೆದ ಹಾಗೆ ಬ್ರಾಹ್ಮಣರು ಸೇರಿದಂತೆ ಯಾವ ಯಾವ ಜಾತಿಯ ಜನಸಂಖ್ಯೆ ಎಷ್ಟು ಪ್ರಮಾಣ ದಲ್ಲಿ ಇದೆಯೋ, ಅಷ್ಟೇ ಪ್ರಮಾಣದಲ್ಲಿ ಶೇಕಡಾವಾರು ಪ್ರಕಾರ ಮೀಸಲಾತಿಯನ್ನು ಹಂಚಬೇಕು ಎಂಬುದು ನಮ್ಮ ಬೇಡಿಕೆ. ಇದರಿಂದ ಸಣ್ಣ ಪುಟ್ಟ ಜಾತಿಜನಾಂಗದವರಿಗೂ ಅನುಕೂಲವಾಗುತ್ತದೆ ಎಂಬುದು ನಮ್ಮ ನಂಬಿಕೆ.

ಎಲ್‌.ಎನ್‌.ಮುಕುಂದರಾಜ್‌

(ಲೇಖಕರು: ನಿವೃತ್ತ ಪ್ರಾಂಶುಪಾಲರು.)

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.