Karnataka: 100 ಗ್ರಾಮ ನ್ಯಾಯಾಲಯ ಸ್ಥಾಪನೆ
ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನ್ಯಾಯಾಲಯಗಳ ಮೇಲಿನ ಒತ್ತಡ ಇಳಿಕೆ ನಿರೀಕ್ಷೆ
Team Udayavani, Oct 19, 2023, 11:37 PM IST
ಬೆಂಗಳೂರು: ಗ್ರಾಮಗಳಲ್ಲಿನ ವ್ಯಾಜ್ಯಗಳನ್ನು ಸ್ಥಳೀಯವಾಗಿ ಪರಿಹರಿಸುವುದು ಹಾಗೂ ಸ್ಥಳೀಯವಾಗಿಯೇ ನ್ಯಾಯದಾನ ಸಿಗುವಂತಾಗಬೇಕೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ರಾಷ್ಟ್ರೀಯ ಕಾನೂನು ಆಯೋಗದ ಶಿಫಾರಸಿನ ಮೇರೆಗೆ ಗ್ರಾಮ ನ್ಯಾಯಾಲಯ ಸ್ಥಾಪಿಸಲು 2008-09ರಲ್ಲಿ ಕೇಂದ್ರ ಸರಕಾರ ಕಾನೂನು ಮಾಡಿತ್ತು. ಅದರಂತೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ಎರಡು ಗ್ರಾಮ ನ್ಯಾಯಾಲಯಗಳಿದ್ದವು. ಈಗ ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಸಂಪುಟ ಸಭೆ ತಾತ್ವಿಕ ಅನುಮೋದನೆ ಕೊಟ್ಟಿದೆ.
ನ್ಯಾಯಕ್ಕಾಗಿ ಪಟ್ಟಣಗಳಿಗೆ ಅಲೆಯಬಾರದು. ಸ್ಥಳೀಯವಾಗಿಯೇ ನ್ಯಾಯ ಸಿಗಬೇಕು. ಜನ ಪರ ಬದಲಾವಣೆ ಆಗಬೇಕೆಂಬ ಸಂವಿಧಾನದ ಆಶಯ ಸಾಕಾರಗೊಳಿಸುವತ್ತ ಹೆಜ್ಜೆ ಇಡಬೇಕು. ಇದಕ್ಕಾಗಿ ಪಂಚಾಯತ್ ಅಥವಾ ಕ್ಲಸ್ಟರ್ ಆಫ್ ಪಂಚಾಯತ್ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪನೆಯಾಗಬೇಕು. ಹೀಗಾಗಿ 25 ಕೋ. ರೂ. ವೆಚ್ಚದಲ್ಲಿ 100 ಗ್ರಾಮ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಗ್ರಾಮ ನ್ಯಾಯಾಲಯಗಳಿಗೆ ಹೈಕೋರ್ಟ್‌ನಿಂದ ನ್ಯಾಯಾಧೀಶರ ನೇಮಕವಾಗಲಿದ್ದು, ಮುಖ್ಯ ನ್ಯಾಯಮೂರ್ತಿಗಳೊಂದಿಗೂ ಮಾತುಕತೆ ನಡೆಸಲಾಗುವುದು. ಇದರಿಂದ ಹೈಕೋರ್ಟ್ ಸಹಿತ ವಿವಿಧ ನ್ಯಾಯಾಲಯಗಳ ಮೇಲಿರುವ ಒತ್ತಡವೂ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಳವೆ ಮೂಲಕ ಸಿಎನ್‌ಜಿ, ಪಿಎನ್‌ಜಿ ಸರಬರಾಜು
ಗೃಹಬಳಕೆ, ವಾಣಿಜ್ಯ, ಕೈಗಾರಿಕೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್‌ಜಿ) ಹಾಗೂ ವಾಹನಗಳಿಗೆ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಒದಗಿಸುವ ಕುರಿತಾದ ನಗರ ಅನಿಲ ವಿತರಣೆ ಜಾಲದ ಅಭಿವೃದ್ಧಿ ನೀತಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು, ಗ್ರಾಮಾಂತರ, ತುಮಕೂರು, ಧಾರವಾಡ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಉಡುಪಿ, ಬಳ್ಳಾರಿ, ಗದಗ, ಬೀದರ್, ದಕ್ಷಿಣ ಕನ್ನಡ, ರಾಮನಗರ, ಕೋಲಾರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕಲಬುರಗಿ, ವಿಜಯಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ನಗರಗಳಲ್ಲಿ ಅನಿಲ ವಿತರಣೆ ಸಂಸ್ಥೆಗಳ ನೇಮಕವಾದ ಬಳಿಕ ವಿತರಣೆ ಜಾಲದ ಅಭಿವೃದ್ಧಿ ಆಗಲಿದೆ. ಪ್ರತಿ ಕಿ.ಮೀ.ಗೆ 1 ಸಾವಿರ ರೂ. ಶುಲ್ಕವನ್ನು ಸಂಬಂಧಿಸಿದ ಸಂಸ್ಥೆ ಪಾವತಿಸಬೇಕಾಗುತ್ತದೆ.
110 ಮಲ ತ್ಯಾಜ್ಯ ಸಂಸ್ಕರಣೆ ಸ್ಥಾವರ ಸ್ಥಾಪನೆ
30 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎನ್‌ಜಿಟಿ ಪರಿಸರ ಪರಿಹಾರ ನಿಧಿಯಡಿ ಒಟ್ಟು 110 ಮಲ ತ್ಯಾಜ್ಯ ಸಂಸ್ಕರಣೆ ಸ್ಥಾವರ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಪ್ರಸ್ತುತ ದೇವನಹಳ್ಳಿ ಪುರಸಭೆಯಲ್ಲಿ ಒಂದು ಘಟಕ ಕೆಲಸ ಮಾಡುತ್ತಿದೆ. ಅದೇ ರೀತಿ 110 ನಗರ ಸ್ಥಳೀಯ ಸಂಸ್ಥೆಗಳಲ್ಲಿ 400.24 ಕೋಟಿ ರೂ. ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗುತ್ತದೆ. ಇನ್ನು ಸೆಪ್ಟಿಕ್ ಟ್ಯಾಂಕ್‌ಗಳಿಂದ ಎಫ್ಎಸ್‌ಟಿಪಿ ಘಟಕಗಳಿಗೆ ಮಲದ ಕೆಸರನ್ನು ಸಾಗಿಸುವ ಸಲುವಾಗಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ಮಿಷನ್ ಡೈರೆಕ್ಟರ್ ಮೂಲಕ 40.25 ಕೋಟಿ ರೂ. ವೆಚ್ಚದಲ್ಲಿ ಒಟ್ಟು 161 ಸೆಸ್‌ಪೂಲ್ ವಾಹನಗಳನ್ನು ಖರೀದಿಸಲೂ ಅನುಮೋದಿಸಿದೆ.
ಅಕ್ಕಿ ಬದಲು ರೊಕ್ಕವೇ ಗಟ್ಟಿ
ಜು.1ರಿಂದ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ಕೊಡಲು ಇನ್ನೂ ಕಾಲ ಕೂಡಿ ಬಂದಂತಿಲ್ಲ. ತಲಾ 10 ಕೆ.ಜಿ. ಆಹಾರಧಾನ್ಯ ಎಂದು ಘೋಷಿಸಿದ್ದ ಸರಕಾರಕ್ಕೆ ಹೆಚ್ಚುವರಿಯಾಗಿ ಬೇಕಿದ್ದ 2.30 ಲಕ್ಷ ಟನ್ ಅಕ್ಕಿ ಹೊಂದಿಸಲು ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳಲ್ಲೂ ಅಕ್ಕಿಯ ಬದಲು 170 ರೂ. ಪಾವತಿಸುವ ವ್ಯವಸ್ಥೆಯನ್ನೇ ಮುಂದುವರಿಸಿದೆ.
ಲಿಂಗತ್ವ ಅಲ್ಪಸಂಖ್ಯಾಕರಿಗೂ ಗೃಹಲಕ್ಷ್ಮಿ
ಮನೆಯೊಡತಿಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾಕರನ್ನು ಸೇರಿಸಬೇಕೆಂದು ಬೇಡಿಕೆ ಇತ್ತು. ಇದಕ್ಕೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಪ್ರಸ್ತುತ 1.14 ಕೋಟಿ ಮಹಿಳಾ ಫಲಾನುಭವಿಗಳಿಗೆ 2,280 ಕೋಟಿ ರೂ. ಖರ್ಚಾಗುತ್ತಿತ್ತು. ಇನ್ನೀಗ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ವುಳ್ಳ 854 ಲೈಂಗಿಕ ಅಲ್ಪಸಂಖ್ಯಾಕ ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೆ 2 ಸಾವಿರ ರೂ.ಗಳಂತೆ ವರ್ಷಕ್ಕೆ 2.04 ಕೋಟಿ ರೂ. ಹೆಚ್ಚುವರಿ ಖರ್ಚು ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.