World Cup; ವಾರ್ನರ್-ಮಾರ್ಷ್ ಶತಕಗಳ ಅಬ್ಬರ: ಪಾಕಿಸ್ಥಾನಕ್ಕೆ 2ನೇ ಸೋಲಿನ ಆಘಾತ
Team Udayavani, Oct 20, 2023, 10:49 PM IST
ಬೆಂಗಳೂರು: ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬೃಹತ್ ಮೊತ್ತದ ವಿಶ್ವಕಪ್ ಮೇಲಾಟದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ 62 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿ ಗೆಲುವಿನ ಟ್ರ್ಯಾಕ್ ಏರಿದೆ. ವಾರ್ನರ್-ಮಾರ್ಷ್ ಜೋಡಿಯ ಶತಕದಾಟ, ದ್ವಿಶತಕದ ಜತೆಯಾಟ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 9 ವಿಕೆಟಿಗೆ 367 ರನ್ ಪೇರಿಸಿ ಸವಾಲೊಡ್ಡಿದರೆ, ಪಾಕಿಸ್ಥಾನ 45.3 ಓವರ್‌ಗಳಲ್ಲಿ 305ಕ್ಕೆ ಆಲೌಟ್ ಆಯಿತು. ಇದು 4 ಪಂದ್ಯಗಳಲ್ಲಿ ಆಸ್ಟ್ರೇಲಿಯಕ್ಕೆ ಒಲಿದ 2ನೇ ಜಯ. ಪಾಕಿಸ್ಥಾನ 4 ಪಂದ್ಯಗಳಲ್ಲಿ 2ನೇ ಸೋಲನುಭವಿಸಿತು.
ಭಾರೀ ಸ್ಕೋರ್ ಎದುರಿಗಿದ್ದರೂ ಪಾಕಿಸ್ಥಾನ ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿತು. ಇಮಾಮ್ ಉಲ್ ಹಕ್-ಅಬ್ದುಲ್ಲ ಶಫೀಕ್ ಸೇರಿಕೊಂಡು ಮೊದಲ ವಿಕೆಟಿಗೆ 134 ರನ್ ಪೇರಿಸಿ ಹೋರಾಟದ ಸೂಚನೆಯಿತ್ತರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಆದರೆ ಬಾಬರ್ ಆಜಂ ಅವರಿಂದ ಕಪ್ತಾನನ ಆಟ ಹೊರಹೊಮ್ಮಲಿಲ್ಲ. ರಿಜ್ವಾನ್, ಶಕೀಲ್, ಇಫ್ತಿಕಾರ್ ಸಿಡಿದರೂ ಇನ್ನಿಂಗ್ಸ್ ವಿಸ್ತರಿಸಲು ವಿಫಲರಾದರು. ಆ್ಯಡಂ ಝಂಪ 4 ವಿಕೆಟ್ ಉರುಳಿಸಿ ಪಾಕ್ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ವಾರ್ನರ್-ಮಾರ್ಷ್ ಜೋಶ್
ಆಸ್ಟ್ರೇಲಿಯದ ಸರದಿಯನ್ನು 2 ವಿಭಾಗಗಳಾಗಿ ವಿಂಗಡಿಸಬಹುದು. 34ನೇ ಓವರ್ ತನಕ ಡೇವಿಡ್ ವಾರ್ನರ್-ಮಿಚೆಲ್ ಮಾರ್ಷ್ ಜೋಡಿಯ ಬ್ಯಾಟಿಂಗ್ ಅಬ್ಬರ. ಇಲ್ಲಿಂದ ಮುಂದೆ ಪಾಕಿಸ್ಥಾನಿ ಬೌಲರ್‌ಗಳ ತಿರುಗೇಟು. ಅರ್ಥಾತ್, ಆಸೀಸ್ ನೋಲಾಸ್ 259, ಬಳಿಕ 104 ರನ್ ಅಂತರದಲ್ಲಿ 9 ವಿಕೆಟ್ ಪತನ. ಆದರೆ ವಾರ್ನರ್-ಮಾರ್ಷ್ ಜೋಡಿ ಆಗಲೇ ಶತಕ ಬಾರಿಸಿ ರನ್ ಪರ್ವತ ಏರಿ ನಿಂತಿದ್ದರಿಂದ ಪಾಕ್ ಬೌಲರ್‌ಗಳ ಪ್ರಯತ್ನದಿಂದ ಯಾವ ಲಾಭವೂ ಆಗಲಿಲ್ಲ.
ವಾರ್ನರ್-ಮಾರ್ಷ್ ಮೊದಲ ವಿಕೆಟಿಗೆ 33.5 ಓವರ್‌ಗಳಲ್ಲಿ 259 ರನ್ ರಾಶಿ ಹಾಕಿದರು. ಇದೇ ಲಯದಲ್ಲಿ ಸಾಗಿದ್ದರೆ ಆಸೀಸ್ ಮೊತ್ತ 400ರ ಗಡಿ ದಾಟಬಹುದಿತ್ತು. ವಾರ್ನರ್ ಮೇಲೆ ದ್ವಿಶತಕದ ನಿರೀಕ್ಷೆಯೂ ಇತ್ತು. ಆದರೆ ಅನಂತರ ಪಾಕಿಸ್ಥಾನಿ ಬೌಲರ್, ಅದರಲ್ಲೂ ವೇಗಿ ಶಾಹೀನ್ ಶಾ ಅಫ್ರಿದಿ ಹಿಡಿತ ಸಾಧಿಸುವುರೊಂದಿಗೆ ಕಾಂಗರೂ ಮೊತ್ತ 367ಕ್ಕೆ ನಿಂತಿತು. ಪಾಕ್ 34ನೇ ಓವರ್‌ನಿಂದ ಆಸ್ಟ್ರೇಲಿಯದ 9 ವಿಕೆಟ್ ಉಡಾಯಿಸುವಲ್ಲಿ ಯಶಸ್ವಿಯಾಯಿತು. ಅಫ್ರಿದಿ 54ಕ್ಕೆ 5 ವಿಕೆಟ್ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರು.
ವಾರ್ನರ್-ಮಾರ್ಷ್ 203 ಎಸೆತಗಳ ಜತೆಯಾಟ ನಡೆಸಿದರು. ವಾರ್ನರ್ 21ನೇ, ಮಾರ್ಷ್ 2ನೇ ಶತಕ ಹೊಡೆದು “ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್ಭಟಿಸಿದರು. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಆಯಿತು. ವಾರ್ನರ್ 43ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 163 ರನ್ ಬಾರಿಸಿದರು. ಈ ಎಡಗೈ ಬ್ಯಾಟರ್‌ನ ಅಬ್ಬರದ ವೇಳೆ 14 ಬೌಂಡರಿ, 9 ಸಿಕ್ಸರ್ ಸಿಡಿಯಿತು. ಇದು ಅವರ 21ನೇ ಏಕದಿನ ಶತಕ. ಪಾಕಿಸ್ಥಾನ ವಿರುದ್ಧ ಸತತ ನಾಲ್ಕನೆಯದು!
ಮಿಚೆಲ್ ಮಾರ್ಷ್ 2ನೇ ಸೆಂಚುರಿಯೊಂದಿಗೆ ತಮ್ಮ ಬರ್ತ್‌ಡೇಯನ್ನು ಅದ್ಧೂರಿಯಾಗಿಯೇ ಆಚರಿಸಿದರು. ಇವರ ಗಳಿಕೆ 109 ಎಸೆತಗಳಿಂದ 121 ರನ್. ಸಿಡಿಸಿದ್ದು 10 ಬೌಂಡರಿ ಹಾಗೂ 9 ಸಿಕ್ಸರ್. ಈ ಆರಂಭಿಕರಿಬ್ಬರೇ ಸೇರಿಕೊಂಡು 18 ಸಿಕ್ಸರ್, 24 ಬೌಂಡರಿ ಬಾರಿಸಿ ವಿಜೃಂಭಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಆರಂಭಿಕರಿಬ್ಬರೂ ಶತಕ ದಾಖಲಿಸಿದ 4ನೇ ನಿದರ್ಶನ ಇದಾಗಿದೆ. ವಾರ್ನರ್-ಮಾರ್ಷ್ ಜೋಡಿಯ ಬ್ಯಾಟಿಂಗ್ ಅಬ್ಬರದ ವೇಳೆ ಹತ್ತಾರು ದಾಖಲೆಗಳು ನಿರ್ಮಾಣಗೊಂಡವು.
ಪಾಕಿಸ್ಥಾನ ಮೊದಲ ಯಶಸ್ಸಿಗೆ 34ನೇ ಓವರ್ ತನಕ ಕಾಯಬೇಕಾಯಿತು. ಎಡಗೈ ಪೇಸರ್ ಅಫ್ರಿದಿ ಈ ಓವರ್‌ನ ಸತತ ಎಸೆತಗಳಲ್ಲಿ ಮಾರ್ಷ್ ಮತ್ತು ಮ್ಯಾಕ್ಸ್‌ವೆಲ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ಥಾನವನ್ನು ಉಸಿರಾಡುವಂತೆ ಮಾಡಿದರು. ಆದರೆ ಶದಾಬ್ ಖಾನ್ ಬದಲು ಅವಕಾಶ ಪಡೆದು ಮೊದಲ ಪಂದ್ಯ ಆಡಲಿಳಿದ ಉಸಾಮ ಮಿರ್ ಅಷ್ಟೇ ದುಬಾರಿಯಾದರು. ಇವರ 9 ಓವರ್‌ಗಳಲ್ಲಿ 82 ರನ್ ಸೋರಿ ಹೋಯಿತು. ಅಷ್ಟೇ ಅಲ್ಲ, ಆರಂಭದಲ್ಲೇ ವಾರ್ನರ್ ಅವರ ಕ್ಯಾಚ್ ಬಿಡುವ ಮೂಲಕ ತಮ್ಮ ಏಕದಿನ ಪ್ರವೇಶವನ್ನು ಕಹಿಗೊಳಿಸಿದರು. ಆಗ ವಾರ್ನರ್ ಕೇವಲ 10 ರನ್ ಮಾಡಿದ್ದರು, ಆಸೀಸ್ ಮೊತ್ತ 22 ರನ್ ಆಗಿತ್ತು. ಅಫ್ರಿದಿಗೆ ವಿಕೆಟ್ ನಷ್ಟವಾಯಿತು. ವಾರ್ನರ್ ಈ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.