Mangaluru ಡೆಂಗ್ಯೂ ಪ್ರಕರಣ; ನಗರ ಭಾಗವೇ ಹಾಟ್‌ಸ್ಪಾಟ್!
Team Udayavani, Oct 20, 2023, 11:44 PM IST
ಮಂಗಳೂರು: ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಡೆಂಗ್ಯೂ ಪ್ರಕರಣ ಮತ್ತಷ್ಟು ಏರಿಕೆಯಾಗುವ ಲಕ್ಷಣವಿದೆ. ಹಾಸ್ಟೆಲ್‌ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಗರದ ಭಾಗ ಡೆಂಗ್ಯೂ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.
ದ.ಕ. ಜಿಲ್ಲೆಯ 325 ಪ್ರಕರಣಗಳಲ್ಲಿ 230 ಮಂಗಳೂರು ಪಾಲಿಕೆ ವ್ಯಾಪ್ತಿಯದ್ದು. ಜಪ್ಪು, ಬಂದರು, ಎಕ್ಕೂರು, ಕಸಬ ಬೆಂಗ್ರೆ, ಲೇಡಿಹಿಲ್ ಪ್ರದೇಶದಲ್ಲೇ ಅಧಿಕ. ಉಡುಪಿ ಜಿಲ್ಲೆಯ ಒಟ್ಟು 610 ಪ್ರಕರಣಗಳಲ್ಲಿ 449 ಕೂಡ ಉಡುಪಿ ತಾಲೂಕು ವ್ಯಾಪ್ತಿಯದ್ದೇ.
ಹಾಸ್ಟೆಲ್‌ಗಳಲ್ಲೂ ಪ್ರಕರಣ
ಕೆಲವು ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ 10ಕ್ಕೂ ಹೆಚ್ಚಿನ ಹಾಸ್ಟೆಲ್‌ಗಳಲ್ಲಿ ಸರಾಸರಿ 3ರಿಂದ 4 ಮಂದಿಯಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗಿತ್ತು. ಕೆಲವೊಂದು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಶಂಕಿತ ಪ್ರಕರಣ ಪತ್ತೆಯಾಗಿತ್ತು. ಆರೋಗ್ಯ, ಶಿಕ್ಷಣ, ವಾಣಿಜ್ಯ-ವ್ಯಾಪಾರ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಯ ಅನೇಕ ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಅಲ್ಲದೆ ಕೇರಳ ಗಡಿ ಭಾಗವೂ ಇರುವ ಕಾರಣ ಉಭಯ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಸರಣ ಹೆಚ್ಚಾಗುತ್ತಿದೆ.
ಲಾರ್ವಾ ಸರ್ವೇ
ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕೆಲಸ ನಡೆಯುತ್ತಿದೆ. ಜತೆಗೆ ಲಾರ್ವಾ ಸರ್ವೇ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಎಂಪಿಡಬ್ಲ್ಯೂ ಕಾರ್ಯಕರ್ತರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮನೆಗಳಿಗೆ ತೆರಳಿ ಜ್ವರ ಪತ್ತೆ ತಪಾಸಣೆ ನಡೆಸುತ್ತಿದ್ದಾರೆ. ಸೊಳ್ಳೆ ಉತ್ಪಾದನ ತಾಣಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ.
ಡೆಂಗ್ಯೂಗೆ ಕಾರಣವಾಗುವ ಈಡಿಸ್ ಸೊಳ್ಳೆ ಕಚ್ಚುವುದು ಹಗಲು ಹೊತ್ತಲ್ಲಿ. ಅದು ಕೂಡ ಸ್ವಚ್ಛ ನೀರಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ಸೊಳ್ಳೆಯ ಉತ್ಪತ್ತಿಯನ್ನು ಮನೆಯಿಂದಲೇ ತಡೆಯಬೇಕು. ಆಗ ಮಾತ್ರ ನಿಯಂತ್ರಣ ಸಾಧ್ಯ. ಡೆಂಗ್ಯೂ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಹಲವು ಅಭಿಯಾನಗಳನ್ನು ನಡೆಸುತ್ತಿದೆ. ಫಾಗಿಂಗ್ ಕೆಲಸವೂ ನಿರಂತರವಾಗಿ ಸಾಗಿದೆ. ಆರೋಗ್ಯ ಇಲಾಖೆ ನಡೆಸುವ ಸರ್ವೇ ವೇಳೆ, ಡೆಂಗ್ಯೂ ನಿಯಂತ್ರಣದ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು.
– ಡಾ| ತಿಮ್ಮಯ್ಯ, ಡಾ| ನಾಗಭೂಷಣ ಉಡುಪ,
ದ.ಕ., ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.