Crime News: ಕೇಸ್ ಹಿಂಪಡೆಯದಿದ್ದಕ್ಕೆ ಕಾರು ಹರಿಸಿ ಹತ್ಯೆ
Team Udayavani, Oct 21, 2023, 12:51 PM IST
ಬೆಂಗಳೂರು: ಕೇಸ್ ವಾಪಸ್ ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಕಾರು ಹರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫ್ರೆಜರ್‌ಟೌನ್ ನಿವಾಸಿ ಸೈಯ್ಯದ್ ಅಸ್ಗರ್ ಅಲಿಯಾಸ್ ಶೋಯೆಬ್ (36) ಕೊಲೆಯಾದವ.
ಸೈಯ್ಯದ್ ಮುಜಾಹಿದ್ (32) ಗಾಯಗೊಂಡವ. ಜೆ.ಸಿ.ನಗರದ ಅಮೀನ್, ನವಾಜ್ ಬಂಧಿತರು.
ಕೊಲೆಯಾಗಿರುವ ಸೈಯ್ಯದ್ ಅಸ್ಗರ್ ಗುಜರಿ ವ್ಯಾಪಾರ ಮಾಡುತ್ತಿದ್ದ. ಆತನ ಸ್ನೇಹಿತ ಮುಜಾಹಿದ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ. ಪರಿಚಿತನಾಗಿದ್ದ ಆರೋಪಿ ಅಮಿನ್‌ಗೆ 4 ಲಕ್ಷ ಮೌಲ್ಯದ 2 ಕಾರನ್ನು 8 ತಿಂಗಳ ಹಿಂದೆ ಮುಜಾಹಿದ್‌ನಿಂದ ಖರೀದಿಸಿದ್ದ. ಆದರೆ, ದುಡ್ಡು ಕೊಟ್ಟಿರಲಿಲ್ಲ. ಹಲವು ತಿಂಗಳಿಂದ ಕಾರಿನ ದುಡ್ಡು ಕೊಡುವಂತೆ ಮುಜಾಹಿದ್ ಕೇಳಿದ್ದಕ್ಕೆ ಅಮಿನ್ ಸಬೂಬು ನೀಡುತ್ತಾ ಬಂದಿದ್ದ. 20 ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಇಬ್ಬರಿಗೂ ರಾಜಿ ಸಂಧಾನ ನಡೆಸಲಾಗಿದ್ದು, ಕಾರಿನ ಹಣ ನೀಡುವುದಾಗಿ ಅಮಿನ್ ಒಪ್ಪಿಕೊಂಡಿದ್ದ.
ಈ ಹಿಂದೆ ಬಾಟಲಿಯಿಂದ ಹೊಡೆದಾಡುಕೊಂಡಿದ್ದಕ್ಕೆ ಕೇಸ್ ದಾಖಲಿಸಿದ್ದ ಖಾಕಿ:
ಬಿಯರ್ ಬಾಟಲಿಯಿಂದ ಹಲ್ಲೆ: ಅ.4ರಂದು ಎಸ್.ಕೆ.ಗಾರ್ಡನ್ ಬಳಿ ಮುಜಾಯಿದ್ ಹಾಗೂ ಅಸ್ಗರ್ ಹೋಗುತ್ತಿದ್ದಾಗ ಅಮೀನ್ ಹಾಗೂ ಆತನ ಸಹಚರರು ಇವರನ್ನು ತಡೆದು ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದರು. ಈ ಸಂಬಂಧ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಮುಜಾಯಿದ್ ದೂರು ನೀಡಿದ್ದ. ಪೊಲೀಸರು ಸಹ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಮುಜಾಹಿದ್‌ಗೆ ಈ ಪ್ರಕರಣ ಹಿಂಪಡೆಯಲು ಅಮಿನ್ ಒತ್ತಾಯಿಸಿದ್ದ. ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಆಸ್ಗರ್ ಹಾಗೂ ಮಜಾಯಿದ್‌ನನ್ನು ಫ್ರೆಜರ್‌ಟೌನ್ ಸಮೀಪದ ದೊಡ್ಡಿ ಸಿಗ್ನಲ್ ಬಳಿ ಬರುವಮತೆ ಅಮಿನ್ ಸೂಚಿಸಿದ್ದ.
ಕಾರು ಹರಿಸಿ ಕೊಲೆ: ಅ.19ರಂದು ತಡರಾತ್ರಿ 12.30ರಲ್ಲಿ ಆಸ್ಗರ್ ಹಾಗೂ ಮುಜಾಯಿದ್ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಅಮೀನ್ ಜೊತೆಗೆ ಸ್ಕಾರ್ಪಿಯೋ ವಾಹನದಲ್ಲಿ ನವಾಜ್ ಸೇರಿದಂತೆ ಇತರ ಸಹಚರರಿದ್ದರು. ಅಸ್ಗರ್‌ರ್‌ನನ್ನು ನೋಡುತ್ತಿದ್ದಂತೆ ಬಾರೋ ಇಲ್ಲಿ ಎಂದು ಅಮಿನ್ ಕರೆದಿದ್ದ. ಹಿಂಬದಿ ಕುಳಿತಿದ್ದ ಮುಜಾಯಿದ್ ಇನ್ನೇನು ದ್ವಿಚಕ್ರವಾಹನದಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಸ್ಕಾರ್ಪಿಯೋ ಕಾರನ್ನು ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಅಮೀನ್ ಗುದ್ದಿಸಿದ್ದ. ಇತ್ತ ಮುಜಾಯಿದ್ ಕಾರಿನ ಬ್ಯಾನೆಟ್ ಮೇಲೆ ಬಿದ್ದು, ಫುಟ್‌ಪಾತ್‌ಗೆ ಉರುಳಿದ್ದರು. ಆತಂಕಗೊಂಡ ಅಸ್ಗರ್ ಇವರಿಂದ ತಪ್ಪಿಸಿಕೊಂಡು ದ್ವಿಚಕ್ರವಾಹನದಲ್ಲಿ ಹೋಗಲು ಯತ್ನಿಸಿದಾಗ ಆತನನ್ನು ಹಿಂಬಾಲಿಸಿಕೊಂಡು ಹೋದ ಆರೋಪಿಗಳು ದ್ವಿಚಕ್ರವಾಹನಕ್ಕೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ರಸ್ತೆಗೆ ಬಿದ್ದ ಅಸ್ಗರ್ ಮೇಕೆ ಸ್ಕಾರ್ಪಿಯೋ ಕಾರು ಹತ್ತಿಸಿ ಆರೋಪಿಗಳು ಪರಾರಿಯಾಗಿದ್ದರು. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಅಸ್ಗರ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.