China ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ವೃದ್ಧಿಸಿಕೊಂಡ ಚೀನ
ಆರ್ಥಿಕ ಕಾರಿಡಾರ್: ನೆರೆ ದೇಶಗಳೊಂದಿಗೆ ಬಾಂಧವ್ಯ ವೃದ್ಧಿಯ ಕೊಂಡಿ
Team Udayavani, Oct 22, 2023, 5:50 AM IST
ದಕ್ಷಿಣ ಏಷ್ಯಾದ ದೇಶಗಳು ಪ್ರಾದೇಶಿಕ ಸಹಕಾರದೊಂದಿಗೆ ಮುನ್ನಡೆಯಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದರೂ ಅವು ಯಾವುವೂ ನಿರೀಕ್ಷಿತ ಫಲವನ್ನು ನೀಡಿಲ್ಲ. ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ 1985ರಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟ(ಸಾರ್ಕ್)ವನ್ನು ರಚಿಸಲಾಯಿತಾದರೂ 2014ರಿಂದೀಚೆಗೆ ಈ ಒಕ್ಕೂಟದ ಶೃಂಗಸಭೆಯೇ ನಡೆದಿಲ್ಲ. ಇನ್ನು 1997ರಲ್ಲಿ ಪಾಕಿಸ್ಥಾನವನ್ನು ಹೊರಗಿಟ್ಟು, ಮ್ಯಾನ್ಮಾರ್‌ನ್ನು ಸೇರ್ಪಡೆಗೊಳಿಸಿ ರಚಿಸಲಾದ ಬಹುವಲಯ ವೈಜ್ಞಾನಿಕ, ತಂತ್ರಜ್ಞಾನ, ಆರ್ಥಿಕ ಸಹಕಾರಕ್ಕಾಗಿನ ಬಂಗಾಲ ಕೊಲ್ಲಿ ಉಪಕ್ರಮ (ಬಿಮ್‌ಸ್ಟೆಕ್) ಕೂಡ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ವೈಫಲ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಚೀನ ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ದಶಕದ ಹಿಂದೆಯೇ ವಿನೂತನ ಕಾರ್ಯತಂತ್ರವೊಂದನ್ನು ರೂಪಿಸಿ, ಅನುಷ್ಠಾನಕ್ಕೆ ತಂದು ಬಹುತೇಕ ಯಶಸ್ಸು ಕಂಡಿದೆ.
ಚೀನದ ದೂರಗಾಮಿ ಚಿಂತನೆ
2012ರಲ್ಲಿ ಚೀನ ಕಮ್ಯೂನಿಸ್ಟ್ ಪಾರ್ಟಿಯ ನೇತೃತ್ವ ವಹಿಸಿಕೊಂಡ ಕ್ಸಿ ಜಿನ್‌ಪಿಂಗ್ ಅವರ ಸರಕಾರ, 2013ರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗಿನ ಪ್ರಾದೇಶಿಕ ಸಹಕಾರವನ್ನು ವೃದ್ಧಿಸುವ ಉದ್ದೇಶದೊಂದಿಗೆ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದಡಿ ಮೂರು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತಂದಿತು. ಅದರಂತೆ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್(ಸಿಪಿಇಸಿ), ಚೀನ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್(ಸಿಎಂಇಸಿ) ಮತ್ತು
ಬಾಂಗ್ಲಾದೇಶ-ಚೀನ-ಭಾರತ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್ (ಬಿಸಿಐಎಂಇಸಿ)ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. “ವಿಶ್ವದ ಕಾರ್ಖಾನೆ’ ಎಂದೇ ಖ್ಯಾತವಾಗಿರುವ ಚೀನ ಈ ಕಾರಿಡಾರ್‌ಗಳ ಮೂಲಕ ತನ್ನ ಕೈಗಾರಿಕ ಉತ್ಪಾದನೆ ಮತ್ತು ಪೂರೈಕೆ ಸರಪಳಿ ವ್ಯವಸ್ಥೆಯನ್ನು ಬಲಪಡಿಸಿಕೊಂಡಿತು. ಇದರಿಂದಾಗಿ ಚೀನ ಏಷ್ಯಾದ ಇತರ ರಾಷ್ಟ್ರಗಳಿಗೆ ಕೈಗಾರಿಕೋತ್ಪನ್ನಗಳ ಪ್ರಮುಖ ಪೂರೈಕೆದಾರ ರಾಷ್ಟ್ರವಾಯಿತು. ಚೀನದ ತಾಂತ್ರಿಕ ಸಾಮರ್ಥ್ಯದಿಂದಾಗಿ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುವಂತಾಯಿತು. ಇದರಿಂದಾಗಿ ದಕ್ಷಿಣ ಏಷ್ಯಾದ ದೇಶಗಳಾದ ಪಾಕಿಸ್ಥಾನ ಮತ್ತು ಮ್ಯಾನ್ಮಾರ್‌ಗಳೊಂದಿಗೆ ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಸಂಬಂಧ ವೃದ್ಧಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಭಾರತದೊಂದಿಗಿನ ಸಂಬಂಧ ಹಳಸಿರುವುರಿಂದ ಬಿಸಿಐಎಂಇಸಿ ನಿರ್ಮಾಣ ಯೋಜನೆ ಮಾತ್ರ ಇನ್ನೂ ಕುಂಟುತ್ತಾ ಸಾಗಿದೆ.
ಕೊಡು-ಕೊಳ್ಳುವಿಕೆ ಸಂಬಂಧ
ಪಾಕಿಸ್ಥಾನ ಮತ್ತು ಮ್ಯಾನ್ಮಾರ್‌ನೊಂದಿಗೆ ಸಂಪರ್ಕ ಬೆಸೆಯಲು ನಿರ್ಮಿಸಲಾಗಿರುವ ಆರ್ಥಿಕ ಕಾರಿಡಾರ್ ಕೇವಲ ಚೀನಕ್ಕೆ ಮಾತ್ರವಲ್ಲದೆ ಆ ದೇಶಗಳಿಗೂ ಬಹಳಷ್ಟು ಪ್ರಯೋಜನವಾಗಿದೆ. ಪಾಕಿಸ್ಥಾನ ಮತ್ತು ಮ್ಯಾನ್ಮಾರ್‌ಗಳಲ್ಲೂ ಚೀನ ಸಾರಿಗೆ, ಇಂಧನ, ಕೃಷಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿದ್ದು ಇದರ ಪ್ರಯೋಜನ ಈ ದೇಶಗಳಿಗೂ ಲಭಿಸಿದೆ. ತನ್ಮೂಲಕ ಪರಸ್ಪರ ನಂಬಿಕೆ, ಸಹಕಾರದೊಂದಿಗೆ ಈ ಮೂರೂ ರಾಷ್ಟ್ರಗಳು ಮುನ್ನಡೆಯುತ್ತಿವೆ.
ಸಿಪಿಇಸಿ
ಪಾಕಿಸ್ಥಾನದೊಂದಿಗಿನ ಕಾರಿಡಾರ್‌ಗೆ ಚೀನ ಆರಂಭದಲ್ಲಿ 46 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಲುದ್ದೇಶಿಸಿತ್ತಾದರೂ 2022ರ ವೇಳೆಗೆ ಇದು 65 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೇರಿದೆ. ಈ ಕಾರಿಡಾರ್‌ನಿಂದಾಗಿ ಪಾಕಿಸ್ಥಾನದ ಸಾರಿಗೆ ಜಾಲ ಮತ್ತಷ್ಟು ವಿಸ್ತರಿಸಲ್ಪಟ್ಟಿದೆ. ಹಲವಾರು ವಿದ್ಯುತ್ ಸ್ಥಾವರಗಳು, ವಿಶೇಷ ಆರ್ಥಿಕ ವಲಯಗಳು ನಿರ್ಮಾಣಗೊಂಡಿವೆ. 2015-2030ರ ವೇಳೆಗೆ 2.3ಮಿಲಿಯನ್ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು ಪಾಕಿಸ್ಥಾನದ ವಾರ್ಷಿಕ ಆರ್ಥಿಕ ಬೆಳವಣಿಗೆಗೆ ಕಾರಿಡಾರ್
ಶೇ. 2-2.5ನಷ್ಟು ಕೊಡುಗೆಯನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಿಡಾರ್ ಉಭಯ ದೇಶಗಳಿಗೂ ವರದಾನವಾಗಿ ಪರಿಣಮಿಸಿದ್ದು ಇದನ್ನು ಅಫ್ಘಾನಿಸ್ಥಾನಕ್ಕೆ ವಿಸ್ತರಿಸಲು ಎರಡೂ ದೇಶಗಳು ಚಿಂತನೆ ನಡೆಸಿವೆಯಾದರೂ ಬಲೂಚಿಸ್ಥಾನ ಪ್ರಾಂತದಲ್ಲಿ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಚೀನದ ಹಾದಿಯಲ್ಲಿ ವಿಶ್ವ ಸಮುದಾಯ
ಈ ಮೂರು ಆರ್ಥಿಕ ಕಾರಿಡಾರ್ ನಿರ್ಮಾಣ ಯೋಜನೆಗಳ ಮೂಲಕ ಚೀನ ಸರಕಾರ ಇತರ ದೇಶಗಳ ಸರಕಾರದೊಂದಿಗೆ ಸುಸ್ಥಿರ, ಹಸುರು ಮತ್ತು ಉತ್ತಮ ಗುಣಮಟ್ಟದ ಅಭಿವೃದ್ಧಿಯನ್ನು ಸಾಧಿಸಲು ಶ್ರಮಿಸಿದೆ. ಇದೇ ವೇಳೆ ಚೀನ ಕೇವಲ ದಕ್ಷಿಣ ಏಷ್ಯಾ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ತನ್ನ ಸಾಮರ್ಥ್ಯ ಮತ್ತು ಪ್ರಾಬಲ್ಯವನ್ನು ಹೆಚ್ಚಿಸಿ ಕೊಳ್ಳುವಲ್ಲಿ ಸಫಲವಾಗಿದೆ. ಇದೇ ಕಾರ್ಯತಂತ್ರವನ್ನು ಈಗ ವಿಶ್ವದ ಇತರ ರಾಷ್ಟ್ರಗಳೂ ಅನುಸರಿಸಲು ಮುಂದಾಗಿವೆ. ಚೀನದ ವಿಸ್ತರಣವಾದ, ಆಕ್ರಮಣಕಾರಿ ನಿಲುವು ಮತ್ತಿತರ ಷಡ್ಯಂತ್ರಗಳಿಂದ ಬೇಸತ್ತಿರುವ ಜಾಗತಿಕ ಸಮುದಾಯ ಚೀನಕ್ಕೆ ಸಡ್ಡು ಹೊಡೆಯಲು ಮುಂದಾಗಿವೆ. ಈ ದಿಸೆಯಲ್ಲಿ ಚೀನದ ಅಸ್ತ್ರವನ್ನೇ ಬಳಸಿಕೊಂಡು ವಿಶ್ವದ ವಿವಿಧ ದೇಶಗಳೊಂದಿಗೆ ಸಂಪರ್ಕವನ್ನು ಬೆಸೆಯುವ ನಿಟ್ಟಿನಲ್ಲಿ ಹೊಸ ಹೊಸ ಕಾರಿಡಾರ್‌ಗಳಿಗೆ ಹಸುರು ನಿಶಾನೆ ತೋರತೊಡಗಿವೆ. ಈ ಪೈಕಿ ಚೀನದ ನೆರೆಯ ದೇಶಗಳೂ ಸೇರಿದ್ದು ಆ ಮೂಲಕ ಚೀನದ ನಾಗಾಲೋಟಕ್ಕೆ ಕಡಿವಾಣ ಹಾಕಲು ತಮ್ಮದೇ ತಂತ್ರಗಾರಿಕೆ ರೂಪಿ ಸಿವೆ. ತಿಂಗಳ ಹಿಂದೆ ಹೊಸದಿಲ್ಲಿಯಲ್ಲಿ ನಡೆದ ಜಿ 20 ಶೃಂಗ ಸಭೆ ಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಸಂಪರ್ಕ ಬೆಸೆ ಯುವ ಐಎಂಇಸಿ ಕೂಡ ಒಂದಾಗಿದೆ. ಇದು ಕಾರ್ಯ ರೂಪಕ್ಕೆ ಬಂದದ್ದೇ ಆದಲ್ಲಿ ಚೀನಕ್ಕೆ ಭಾರೀ ಹೊಡೆತ ಬೀಳಲಿದೆ.
ಸಂದಿಗ್ಧ ಕಾಲಘಟ್ಟದಲ್ಲಿ ನೆರವಿಗೆ ಬಂದ ಕಾರಿಡಾರ್
ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ಚೀನ ಬಹುತೇಕ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಶೇ. 60ರಷ್ಟನ್ನು ಪರ್ಶಿಯನ್ ಕೊಲ್ಲಿ ಮತ್ತು ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಅಮೆರಿಕದೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿರುವುದು ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ಹೊರತಾಗಿಯೂ ಚೀನದ ತೈಲ ಆಮದು ಪ್ರಕ್ರಿಯೆಗೆ ಯಾವುದೇ ತೊಡಕಾಗಿಲ್ಲ. ಪಾಕಿಸ್ಥಾನ ಮತ್ತು ಮ್ಯಾನ್ಮಾರ್ ದೇಶಗಳೊಂದಿಗೆ ಸಂಪರ್ಕ ಬೆಸೆಯುವ ಆರ್ಥಿಕ ಕಾರಿಡಾರ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಸಾರಿಗೆ ಸಂಪರ್ಕ ಜಾಲದಿಂದಾಗಿ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಚೀನಕ್ಕೆ ಬಲುದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿಲ್ಲ.
ಸಿಎಂಇಸಿ
ಚೀನ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್ ನಿರ್ಮಾಣದಿಂದಲೂ ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ನಿಕಟಗೊಳಿಸಿದೆ. ಈ ಕಾರಿಡಾರ್‌ನ ಭಾಗವಾಗಿ ಉಭಯ ದೇಶಗಳ ನಡುವೆ ಎರಡು ತೈಲ ಮತ್ತು ಅನಿಲ ಪೈಪ್‌ಲೈನ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು ಇದು ಎರಡೂ ದೇಶಗಳಿಗೆ ಇಂಧನ ಮತ್ತು ತೈಲ ಸಾಗಣೆಗೆ ಬಹಳಷ್ಟು ಸುಲಭ ಮತ್ತು ಸನಿಹದ ಮಾರ್ಗವಾಗಿದೆ. ಸಹಜವಾಗಿಯೇ ಇದರಿಂದ ಉಭಯ ದೇಶಗಳ ನಡುವಣ ವ್ಯಾಪಾರ-ವ್ಯವಹಾರ ವೃದ್ಧಿಯಾಗಿದ್ದು ಆಂತರಿಕ ಸಂಘರ್ಷಕ್ಕೀಡಾಗಿದ್ದ ಮ್ಯಾನ್ಮಾರ್ ಈಗ ಚೇತರಿಕೆಯ ಹಾದಿ ಹಿಡಿಯಲು ಸಾಧ್ಯವಾಗಿದೆ. ಮ್ಯಾನ್ಮಾರ್‌ನಲ್ಲೂ ಚೀನ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಆದರೆ ಮ್ಯಾನ್ಮಾರ್‌ನಲ್ಲಿನ ಜನಾಂಗೀಯ ಸಂಘರ್ಷ, ಜನಾಂಗೀಯ ಮಿಲಿಟರಿ ಪಡೆಗಳ ಪ್ರಾಬಲ್ಯ ಮತ್ತಿತರ ವಿಷಯಗಳು ಈ ಕಾರಿಡಾರ್‌ನ ಭದ್ರತೆ ಮತ್ತು ಭವಿಷ್ಯದ ಬಗೆಗೆ ಅನಿಶ್ಚತತೆಯನ್ನು ಮೂಡಿಸಿದೆ. ಆದರೆ ಉಭಯ ಸರಕಾರಗಳೂ ಯೋಜನೆಯ ಪರವಾಗಿರುವುದರಿಂದ ಮತ್ತು ಇದು ಮ್ಯಾನ್ಮಾರ್‌ನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವುದರಿಂದ ಸದ್ಯಕ್ಕೆ ಸ್ಥಗಿತಗೊಂಡಿರುವ ಯೋಜನೆಯ ಕಾಮಗಾರಿಗಳು ಮತ್ತೆ ಆರಂಭಗೊಳ್ಳುವ ಆಶಾವಾದದಲ್ಲಿದೆ ಚೀನ.
ಬಿಸಿಐಎಂಇಸಿ
ಚೀನದ ಬಲು ಮಹತ್ವಾಕಾಂಕ್ಷೆಯ ಬಾಂಗ್ಲಾದೇಶ, ಚೀನ, ಭಾರತ ಮತ್ತು ಮ್ಯಾನ್ಮಾರ್ ನಡುವಣ ಕಾರಿಡಾರ್ ನಿರ್ಮಾಣ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿದೆ. ಸಾರಿಗೆ ಸಂಪರ್ಕ, ವ್ಯಾಪಾರ-ವ್ಯವಹಾರ ನಂಟು ವೃದ್ಧಿ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಉದ್ದೇಶಗಳೊಂದಿಗೆ ಈ ಕಾರಿಡಾರ್ ಅನ್ನು ನಿರ್ಮಿಸುವ ಇರಾದೆ ಚೀನದ್ದಾಗಿದೆ. ಆದರೆ ಗಡಿಯಲ್ಲಿ ಚೀನ ನಿರಂತರವಾಗಿ ತಗಾದೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈ ಯೋಜನೆ ದೇಶದ ಭದ್ರತೆಗೆ ಅಪಾಯಕಾರಿ ಎಂಬ ಕಾರಣಗಳನ್ನು ಮುಂದಿಟ್ಟು ಈ ಯೋಜನೆಗೆ ಭಾರತ ಪ್ರಬಲ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಕಾರಿಡಾರ್‌ನ ನಿರ್ಮಾಣ ಕಾಮಗಾರಿ ಕುಂಟುತ್ತಲೇ ಸಾಗಿದೆ.
ಜಾಗತಿಕ ಸಮುದಾಯಕ್ಕೆ ತ್ರಿವಳಿ ಸಂದೇಶ
ಚೀನದ ಈ ಅಭಿವೃದ್ಧಿ ಕಾರ್ಯತಂತ್ರ ಕೇವಲ ನೆರೆಯ ರಾಷ್ಟ್ರಗಳೊಂದಿಗಿನ ತನ್ನ ಬಾಂಧವ್ಯ ವೃದ್ಧಿಸುವುದಕ್ಕಷ್ಟೇ ಸೀಮಿತವಾಗಿರದೆ, ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಸಹಕಾರಿಯಾಗಿದೆ. ಚೀನದ ಈ ದೂರದೃಷ್ಟಿಯ ಈ ಮೂರು ಆರ್ಥಿಕ ಕಾರಿಡಾರ್ ಯೋಜನೆಗಳ ಸಾಧನೆ ಮತ್ತು ವೈಫಲ್ಯಗಳು ಇಡೀ ವಿಶ್ವಕ್ಕೆ ಮೂರು ಪ್ರಮುಖ ಸಂದೇಶಗಳನ್ನು ರವಾನಿಸಿವೆ.
ಮೊದಲನೆಯದಾಗಿ ಯಾವುದೇ ಆರ್ಥಿಕ ಸಹಕಾರ ಉಪಕ್ರಮವು ರಾಜಕೀಯವಾಗಿ ಪರಸ್ಪರ ನಂಬಿಕೆ ಮತ್ತು ಸಹಕಾರ ಭದ್ರತೆಯನ್ನು ಒಳಗೊಂಡಿರುವುದು ಬಲುಮುಖ್ಯವಾಗಿದೆ. ಎರಡನೆಯದಾಗಿ ಪ್ರತಿಯೊಂದೂ ಆರ್ಥಿಕ ಸಹಕಾರ ಯೋಜನೆಯು ಪರಸ್ಪರ ಪೂರಕ ಮತ್ತು ಉಭಯ ದೇಶಗಳಿಗೂ ಪ್ರಯೋಜನಕಾರಿಯಾಗಿರಬೇಕು. ಇನ್ನು ಕೊನೆಯದಾಗಿ ಯಾವುದೇ ಆರ್ಥಿಕ ಸಹಕಾರ ಯೋಜನೆಯು ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಸ್ಥಳೀಯ ಶಿಕ್ಷಣ, ಆರೋಗ್ಯ ಮತ್ತು ಜನರ ಜೀವನಮಟ್ಟ ಸುಧಾರಣೆಯ ನಿಟ್ಟಿನಲ್ಲಿ ತನ್ನ ಸಾರ್ವಜನಿಕ ಹೊಣೆಗಾರಿಕೆಗಳನ್ನು ನಿಭಾಯಿಸಬೇಕು. ಮೇಲ್ನೋಟದಲ್ಲಿ ಚೀನ ಅನುಷ್ಠಾನಗೊಳಿಸಿದ ಈ ಆರ್ಥಿಕ ಸಹಕಾರ ಯೋಜನೆಗಳಲ್ಲಿ ಈ ಮೂರೂ ಅಂಶಗಳಿಗೆ ಒತ್ತು ನೀಡಲಾಗಿದೆಯಾದರೂ ಇತರ ದೇಶಗಳಿಗಿಂತ ಚೀನವೇ ಈ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆದಿದ್ದರೆ ಇತರ ದೇಶಗಳು ಚೀನದ ಪ್ರಯೋಗಶಾಲೆಗಳಂತಾದುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.