Health: ಉಗ್ಗುವಿಕೆಯನ್ನು ಗುಣಪಡಿಸಬಹುದೇ?
22 ಅಕ್ಟೋಬರ್: ಅಂತಾರಾಷ್ಟ್ರೀಯ ಉಗ್ಗುವಿಕೆ ಅರಿವು ದಿನ
Team Udayavani, Oct 22, 2023, 2:55 PM IST
ವ್ಯಕ್ತಿಯೊಬ್ಬ ಮಾತನಾಡುವ ವೇಳೆ ಉಗ್ಗುವುದನ್ನು ಕೇಳಿದಾಗ ಮೊದಲಿಗೆ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ, ನಗು ಬರುತ್ತದೆ ಅಥವಾ ಆ ವ್ಯಕ್ತಿಯ ಬಗ್ಗೆ ಕರುಣೆ ಮೂಡುತ್ತದೆ. ಮಕ್ಕಳು ಹೀಗೆ ಉಗ್ಗುತ್ತಿದ್ದರೆ ಅವರಾಡಿದ ವಾಕ್ಯವನ್ನು ನಾವೇ ಪೂರ್ತಿಗೊಳಿಸುತ್ತೇವೆ ಅಥವಾ ಮಾತನಾಡಲು ಕಷ್ಟವಾಗುತ್ತಿದ್ದರೆ ಮಾತನಾಡಬೇಡಿ ಎಂದು ಹೇಳುತ್ತೇವೆ. ಅಂತರ್ಗತ ವೈಕಲ್ಯವಾಗಿರುವ ಉಗ್ಗುವಿಕೆಯ ಬಗ್ಗೆ ಅರಿವಿಲ್ಲದ ಅಥವಾ ಜ್ಞಾನ ಇಲ್ಲದ ಸಾಮಾನ್ಯ ಜನರ ಮನೋಸ್ಥಿತಿ ಇದು. ಅಂತರ್ಗತ ವೈಕಲ್ಯ ಎಂದರೆ ಮೇಲ್ನೋಟಕ್ಕೆ ಕಾಣದ, ಆದರೆ ವ್ಯಕ್ತಿಯ ಜೀವನ ಗುಣಮಟ್ಟದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಬಲ್ಲ ತೊಂದರೆ. ಉಗ್ಗುವಿಕೆಯ ತೊಂದರೆಯಲ್ಲಿ ವ್ಯಕ್ತಿಗೆ ತಾನು ಏನನ್ನು ಹೇಳಲು ಬಯಸುತ್ತಿದ್ದೇನೆ ಎಂಬುದು ಸ್ಪಷ್ಟವಾಗಿ ಗೊತ್ತಿರುತ್ತದೆಯಾದರೂ ಸರಿಯಾದ ಸಮಯದಲ್ಲಿ ಅಡೆತಡೆ ಇಲ್ಲದೆ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಈ ತೊಂದರೆ ಮಕ್ಕಳಲ್ಲೂ ವಯಸ್ಕರಲ್ಲಿಯೂ ಕಾಣಿಸಿಕೊಳ್ಳಬಹುದಾಗಿದೆ. ಇದು ಬಾಲಕಿಯರಿಗಿಂತ ಬಾಲಕರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಉಗ್ಗುವಿಕೆ ಉಂಟಾಗುವುದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವಂಶವಾಹಿ ಕಾರಣದಿಂದಾಗಿ ಇದು ತಲೆದೋರುತ್ತದೆ ಎಂಬುದಾಗಿ ಕೆಲವು ಅಧ್ಯಯನಗಳು ಹೇಳಿದರೆ, ಇದು ನರಶಾಸ್ತ್ರೀಯ ತೊಂದರೆ ಎಂದು ಇನ್ನು ಕೆಲವು ಅಧ್ಯಯನಗಳು ಪ್ರತಿಪಾದಿಸುತ್ತವೆ; ಆದರೆ ಖಚಿತವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಉಗ್ಗುವಿಕೆಯು ವ್ಯಕ್ತಿಯ ಮೇಲೆ ಮಾನಸಿಕವಾಗಿ ಪರಿಣಾಮ ಬೀರಬಹುದಾಗಿದೆ ಮಾತ್ರವಲ್ಲದೆ ಅವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗುವ ಮೂಲಕ ಒಟ್ಟಾರೆಯಾಗಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದಾಗಿದೆ. ಶಾಲಾ ದಿನಗಳಲ್ಲಿ ಈ ತೊಂದರೆಯ ಪರಿಣಾಮ ಇನ್ನಷ್ಟು ಕೆಟ್ಟದಾಗಿರುತ್ತದೆ.
ಆತ ಅಥವಾ ಆಕೆಗೆ ಉತ್ತಮ ವಿಷಯ ಜ್ಞಾನ ಇದ್ದರೂ ತರಗತಿಯಲ್ಲಿ ಅಥವಾ ಗೆಳೆಯ ಗೆಳತಿಯರ ಜತೆಗೆ ಸರಾಗವಾಗಿ ಮಾತುಕತೆ ನಡೆಸಲು ಕಷ್ಟವಾಗುತ್ತದೆ, ಪರೀಕ್ಷೆಗಳಲ್ಲಿ ಸಮಸ್ಯೆ ಎದುರಿಸುತ್ತಾರೆ. ಹೊಸ ಗೆಳೆಯ-ಗೆಳತಿಯರನ್ನು ಮಾಡಿಕೊಳ್ಳುವುದು ಕಷ್ಟವಾಗುತ್ತದೆ, ಸಾಮಾಜಿಕ ಗುಂಪುಗಳಲ್ಲಿ ಸೇರಿಕೊಳ್ಳಲು ಹಿನ್ನಡೆ ಅನುಭವಿಸುತ್ತಾರೆ. ಇದೇ ಉಗ್ಗುವಿಕೆಯ ತೊಂದರೆಯು ಕಾಲೇಜು ಮಕ್ಕಳಿಗೂ ಸಮಸ್ಯೆ ಉಂಟುಮಾಡುತ್ತದೆ. ಕಾಲೇಜು ಜೀವನದ ಬಳಿಕ ಉದ್ಯೋಗ ಹುಡುಕುವ ಸಂದರ್ಭದಲ್ಲಿಯೂ ಇದೇ ಉಗ್ಗುವಿಕೆಯ ತೊಂದರೆಯು ಸಮಸ್ಯೆ ಸೃಷ್ಟಿಸುತ್ತದೆ. ಕ್ಯಾಂಪಸ್ ಸಂದರ್ಶನದ ವೇಳೆ ಅಥವಾ ಆಯ್ಕೆ ಸಂದರ್ಶನದ ವೇಳೆ ಅಭ್ಯರ್ಥಿಯು ಮಾತಿನ ತೊಂದರೆಯಿಂದಾಗಿ ಕಡಿಮೆ ಸಾಮರ್ಥ್ಯವುಳ್ಳವನು /ಳು ಎಂದು ಉದ್ಯೋಗದಾತರು ಭಾವಿಸಬಹುದು. ಉಗ್ಗುವಿಕೆಯ ತೊಂದರೆಯಿಂದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕುಂದುಂಟಾಗುತ್ತದೆ. ಉಗ್ಗುವಿಕೆಗೆ ಬುದ್ಧಿಮತ್ತೆಯ ಕೊರತೆ, ಸಾಮರ್ಥ್ಯದ ಕೊರತೆ ಅಥವಾ ಕೌಶಲಗಳ ಕೊರತೆ ಎಂದಿಗೂ ಕಾರಣವಲ್ಲ. ಉಗ್ಗುವಿಕೆಯ ಸಮಸ್ಯೆಯನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಿದರೆ ಈ ತೊಂದರೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಯಾರಿಗಾದರೂ ಉಗ್ಗುವಿಕೆಯ ಸಮಸ್ಯೆ ಇದ್ದರೆ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಅಥವಾ ಸ್ಪೀಚ್ ಪೆಥಾಲಜಿಸ್ಟ್ ಅವರನ್ನು ಸಂಪರ್ಕಿಸಬೇಕು. ಉಗ್ಗುವಿಕೆ ತೊಂದರೆಯ ಗಂಭೀರತೆ ಮತ್ತು ಸ್ವಭಾವವನ್ನು ಆಧರಿಸಿ ಇದನ್ನು ನಿಭಾಯಿಸುವ ವಿವಿಧ ತಂತ್ರಗಳನ್ನು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಕಲಿಸಿಕೊಡುತ್ತಾರೆ. ಯಾರಿಗಾದರೂ ಉಗ್ಗುವಿಕೆಯ ತೊಂದರೆ ಇದ್ದರೆ ಆದಷ್ಟು ಬೇಗನೆ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟರನ್ನು ಸಂಪರ್ಕಿಸಬೇಕು. ಏಕೆಂದರೆ ಬೇಗನೆ ನಿರ್ವಹಣೆಗೆ ಒಳಪಡಿಸುವುದರಿಂದ ಈ ತೊಂದರೆಯ ತೀವ್ರತೆ ಕಡಿಮೆಯಾಗುತ್ತದೆಯಲ್ಲದೆ ಅದರಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳು ಕಡಿಮೆಯಾಗುತ್ತವೆ. ಪ್ರತೀ ವರ್ಷ ಅಕ್ಟೋಬರ್ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆ ಅರಿವು ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಉಗ್ಗುವಿಕೆ ದಿನಾಚರಣೆಯ ಘೋಷವಾಕ್ಯವು, “ಒಂದು ಅಳತೆಯು ಎಲ್ಲರಿಗೂ ಹೊಂದುವುದಿಲ್ಲ’ ಎಂಬುದಾಗಿದೆ.
ಒಂದು ಪರಿಹಾರ ಅಥವಾ ಒಂದು ವಿಧವಾದ ಚಿಕಿತ್ಸಾತ್ಮಕ ವಿಧಾನವನ್ನು ಉಗ್ಗುವಿಕೆಯ ತೊಂದರೆ ಹೊಂದಿರುವ ಎಲ್ಲರಿಗೂ ಅನ್ವಯಿಸಲಾಗದು; ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ರೀತಿಯ ಅಗತ್ಯಗಳನ್ನು ಹೊಂದಿರುವುದರಿಂದ ಈ ತೊಂದರೆಯ ನಿರ್ವಹಣ ಕ್ರಮವು ಆಯಾ ವ್ಯಕ್ತಿಯ ಅಗತ್ಯಗಳನ್ನು ಆಧರಿಸಿ ರೂಪುಗೊಳ್ಳಬೇಕಾಗಿರುತ್ತದೆ ಎಂಬುದೇ ಈ ಘೋಷವಾಕ್ಯದ ಅರ್ಥವಾಗಿದೆ. ಹೀಗಾಗಿ ಉಗ್ಗುವಿಕೆಯ ತೊಂದರೆ ಹೊಂದಿರುವ ವ್ಯಕ್ತಿಯ ವ್ಯಕ್ತಿನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ಚಿಕಿತ್ಸಾ ವಿಧಾನವನ್ನು ರೂಪಿಸಿದರೆ ತೊಂದರೆಯನ್ನು ಪರಿಹರಿಸಿ ಅವರ ಒಟ್ಟಾರೆ ಜೀವನ ಮಟ್ಟವನ್ನು ಉತ್ತಮಗೊಳಿಸಲು ಸಾಧ್ಯ. ಐಶ್ವರ್ಯಾ ಲಿಜ್ ವರ್ಗೀಸ್ ಅಸಿಸ್ಟೆಂಟ್ ಪ್ರೊಫೆಸರ್, ಸೆಲೆಕ್ಷನ್ ಗ್ರೇಡ್ ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ ಕೆಎಂಸಿ, ಮಂಗಳೂರು ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.