Depression: ಆರೋಗ್ಯದ ಮೇಲೆ ಖನ್ನತೆ ತೊಂದರೆಯ ಪರಿಣಾಮ
Team Udayavani, Oct 24, 2023, 3:30 PM IST
ನಮ್ಮ ದೈಹಿಕ ಆರೋಗ್ಯದ ಮೇಲೆ ಖನ್ನತೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮುನ್ನ “ದೇಹ ಮತ್ತು ಮನಸ್ಸಿನ ಸಂಬಂಧ’ದ ಪರಿಕಲ್ಪನೆಯನ್ನು ನಾವು ಅರ್ಥ ಮಾಡಿಕೊಳ್ಳುವುದು ಉತ್ತಮ. ಹಿಂದೆ, ಸರಿಸುಮಾರು 300 ವರ್ಷಗಳಷ್ಟು ಪ್ರಾಚೀನ ಕಾಲದಲ್ಲಿ “ಮನಸ್ಸು ಮತ್ತು ದೇಹ’ಗಳನ್ನು ಒಟ್ಟಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ 17ನೇ ಶತಮಾನದಲ್ಲಿ ಇವೆರಡನ್ನು ಪ್ರತ್ಯೇಕವಾಗಿ ಪರಿಗಣಿಸಿ, ಪ್ರತ್ಯೇಕವಾಗಿ ಚಿಕಿತ್ಸೆಗೆ ಒಳಪಡಿಸುವ ಪರಿಪಾಠ ಆರಂಭವಾಯಿತು. ಆದರೆ 20ನೇ ಶತಮಾನದಲ್ಲಿ ಯೋಚನಾಕ್ರಮ ಮತ್ತೆ ಬದಲಾಗಿ, ಮನಸ್ಸು ಮತ್ತು ದೇಹದ ಸಂಬಂಧಗಳ ಬಗ್ಗೆ ಅಪಾರ ಅಧ್ಯಯನಗಳು, ಶೋಧಗಳು ನಡೆದವು. ಆಲೋಚನೆಗಳು, ಭಾವನೆಗಳು ಮತ್ತು ವರ್ತನೆಗಳು ದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಸಮಗ್ರ ಚಿಕಿತ್ಸೆಯ ಪ್ರಾಮುಖ್ಯ ಭಾಗವಾಗಿವೆ.
ಅಂತರ್ ವ್ಯಕ್ತಿ ಸಮಸ್ಯೆಗಳು, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳು, ಶೈಕ್ಷಣಿಕ ಹೊರೆಗಳು, ಆರ್ಥಿಕ ಸಮಸ್ಯೆಗಳು, ಹಠಾತ್ ನಷ್ಟದಂತಹ ಬಾಹ್ಯ ಒತ್ತಡಕಾರಕಗಳಿಂದ ಅಥವಾ ಹಾರ್ಮೋನ್ ಸಮಸ್ಯೆಗಳು, ಅನಾರೋಗ್ಯ, ರೋಗಪ್ರತಿರೋಧಕ ಶಕ್ತಿಯ ಸಮಸ್ಯೆಗಳು, ಔಷಧಗಳ ಉಪಯೋಗದಂತಹ ಆಂತರಿಕ ಒತ್ತಡಕಾರಕಗಳಿಂದಾಗಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನಮ್ಮ ದೇಹವು ಎರಡು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ: ಅಡ್ರೆನಾಲಿನ್ ಮತ್ತು ಕಾರ್ಟಿಸೋಲ್. ಒತ್ತಡದಾಯಕ ಸನ್ನಿವೇಶದಿಂದ ಪಾರಾಗಲು “ಅಡ್ರೆನಾಲಿನ್ ರಶ್’ ಎಂದು ಕರೆಯಲ್ಪಡುವ ಕಿರು ಅವಧಿಯ ಪ್ರಚೋದನೆಯನ್ನು ಈ ಹಾರ್ಮೋನ್‌ಗಳು ಒದಗಿಸುತ್ತವೆ. ಆದರೆ ಒತ್ತಡವು ದೀರ್ಘಕಾಲಿಕವಾಗಿದ್ದರೆ ಅದರಿಂದ ಈ ಹಾರ್ಮೋನ್‌ಗಳು ದೀರ್ಘಕಾಲ ಬಿಡುಗಡೆಯಾಗುವುದು ಸಾಧ್ಯ. ಇದರಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗುವುದು, ಜೀರ್ಣಾಂಗ ಸಂಬಂಧಿ ಸಮಸ್ಯೆಗಳು, ನಿದ್ದೆಗೆ ತೊಂದರೆ ಮತ್ತು ನಿದ್ದೆಗೆ ಸಂಬಂಧಿಸಿದ ಅನೇಕ ತೊಂದರೆಗಳಂತಹ ದೈಹಿಕ ಪ್ರತಿಕೂಲ ಪರಿಣಾಮಗಳಿಗೆ ಇದು ಕಾರಣವಾಗುತ್ತದೆ.
ಖನ್ನತೆಯು ಒಂದು ಸಾಮಾನ್ಯ ಮತ್ತು ಗಂಭೀರವಾದ ಮಾನಸಿಕ ತೊಂದರೆ. ಇದರಿಂದ ವ್ಯಕ್ತಿಯಲ್ಲಿ ನಿರಾಶೆಯ ಮನೋಭಾವ ಉಂಟಾಗಿ ಪ್ರತಿಕೂಲ ಪರಿಣಾಮವೇರ್ಪಡುತ್ತದೆ. ಖನ್ನತೆ ಎಂದರೆ ಭಾವನಾತ್ಮಕ ತೊಂದರೆಯನ್ನು ಮಾತ್ರ ಉಂಟುಮಾಡುವ ಮೆದುಳಿನ ಸಮಸ್ಯೆಯಲ್ಲ; ಇದರಿಂದ ದಣಿವು ಕಾಡುವುದು, ಅವಿಶ್ರಾಂತ ಸ್ಥಿತಿ, ನಿದ್ರಾಹೀನತೆ, ಲೈಂಗಿಕ ಆಸಕ್ತಿಯ ಕೊರತೆ, ಹಸಿವಿಗೆ ಸಂಬಂಧಿಸಿದ ಸಮಸ್ಯೆಗಳು, ತೂಕದಲ್ಲಿ ಬದಲಾವಣೆ ಮತ್ತು ನಿದ್ದೆಗೆ ಸಂಬಂಧಿಸಿದ ತೊಂದರೆಗಳಾದ ನೋವುಗಳು ಮತ್ತು ಸಿಡಿತಗಳು, ಒತ್ತಡದಿಂದ ತಲೆನೋವು ಹಾಗೂ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ತೊಂದರೆಗಳಂತಹ ಸಂಕೀರ್ಣ ದೈಹಿಕ ಸಮಸ್ಯೆಗಳು ಕೂಡ ಉಂಟಾಗುತ್ತವೆ.
ಖನ್ನತೆ ಮತ್ತು ದೈಹಿಕ ಅನಾರೋಗ್ಯ
ಖನ್ನತೆ ಮತ್ತು ದೈಹಿಕ ಅನಾರೋಗ್ಯಗಳು ಒಂದು ವಿಷವರ್ತುಲ ಇದ್ದಂತೆ. ಖನ್ನತೆಯ ದೈಹಿಕ ಸಮಸ್ಯೆಗಳಿಂದಾಗಿ ರೋಗ ನಿರೋಧಕ ಶಕ್ತಿಯು ದುರ್ಬಲವಾಗುತ್ತದೆ; ಇದರಿಂದಾಗಿ ದೈಹಿಕ ಆರೋಗ್ಯ ಕೆಡುತ್ತದೆ. ದೀರ್ಘಕಾಲದಿಂದ ಕಾಡುವ ದೈಹಿಕ ಅನಾರೋಗ್ಯಗಳಿಂದ ಉಂಟಾಗುವ ದೈಹಿಕ ಬದಲಾವಣೆಗಳಿಂದಾಗಿ ಖನ್ನತೆಯ ಲಕ್ಷಣಗಳು ಇನ್ನಷ್ಟು ಉಲ್ಬಣಿಸುತ್ತವೆ.
ದೀರ್ಘಕಾಲೀನ ಅನಾರೋಗ್ಯಗಳು ಉಲ್ಬಣಿಸುವುದರ ಮೇಲೆ ಖನ್ನತೆಯ ಪರಿಣಾಮ
ಖನ್ನತೆಯಿಂದಾಗಿ ಒತ್ತಡದ ಹಾರ್ಮೋನ್ ಗಳ ಸ್ರಾವ ಹೆಚ್ಚುವುದರಿಂದ ದೇಹದ ಅಂಗಾಂಶ ದುರಸ್ತಿ-ಪುನರುಜ್ಜೀವನ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಖನ್ನತೆಯಿಂದಾಗಿ ವೈದ್ಯರ ಚಿಕಿತ್ಸೆಯ ಸಲಹೆ-ಸೂಚನೆಗಳನ್ನು ಪಾಲಿಸುವುದು, ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುವುದು ಅಸಾಧ್ಯವಾಗಬಹುದು. ಖನ್ನತೆಗೆ ಸಿಲುಕಿದ ವ್ಯಕ್ತಿಗಳಲ್ಲಿ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಕುಸಿಯಬಹುದಾಗಿದೆ.
ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಖನ್ನತೆಗೆ ಚಿಕಿತ್ಸೆ
ಮನಸ್ಸು ಮತ್ತು ದೇಹಗಳ ಸಂಬಂಧ ಪರಸ್ಪರ ಹಾಸುಹೊಕ್ಕಾಗಿದ್ದು, ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ದೈಹಿಕ ಮತ್ತು ಮಾನಸಿಕ ಆರೋಗ್ಯ – ಈ ಎರಡರ ಬಗ್ಗೆಯೂ ಚರ್ಚಿಸಬೇಕು. ನಿಮಗೆ ಉಂಟಾಗಿರುವ ಆರೋಗ್ಯ ಸಮಸ್ಯೆಗೆ ಖನ್ನತೆ ಕಾರಣವೇ ಅಥವಾ ಆರೋಗ್ಯ ಸಮಸ್ಯೆಯಿಂದಾಗಿ ಖನ್ನತೆ ಕಾಡುತ್ತಿದೆಯೇ ಅಥವಾ ಈ ಎರಡೂ ಜತೆಯಾಗಿ ಇವೆಯೇ ಎಂಬುದನ್ನು ವೈದ್ಯರು ನಿರ್ಧರಿಸಬಲ್ಲರು. ಇದರ ಜತೆಗೆ ಕೆಲವು ಔಷಧಗಳು ಖನ್ನತೆಯನ್ನು ಉಂಟು ಮಾಡಬಲ್ಲವಾದ್ದರಿಂದ ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಎಲ್ಲ ಔಷಧಗಳ ಬಗೆಗೂ ವೈದ್ಯರಿಗೆ ಮಾಹಿತಿ ನೀಡಬೇಕಾದದ್ದು ಅಗತ್ಯ.
ಖನ್ನತೆಯ ಲಕ್ಷಣಗಳನ್ನು ಸೂಕ್ತವಾಗಿ ನಿಭಾಯಿಸುವುದರಿಂದ ಮಧುಮೇಹಿಗಳಲ್ಲಿ ಗ್ಲುಕೋಸ್ ನಿಯಂತ್ರಣ ಉತ್ತಮ ಫಲಿತಾಂಶ ನೀಡುವುದನ್ನು ಹಾಗೂ ಕ್ಯಾನ್ಸರ್ ರೋಗಿಗಳಲ್ಲಿ ಜೀವನ ಗುಣಮಟ್ಟ ಉತ್ತಮಗೊಳ್ಳುವುದು ಕಂಡುಬಂದಿದೆ.
ಖನ್ನತೆಯ ಲಕ್ಷಣಗಳು ಅದೆಷ್ಟೇ ಸೂಕ್ಷ್ಮ ಪ್ರಮಾಣದಲ್ಲಿ ಕಂಡುಬಂದರೂ ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಮಾನಸಿಕ ಆರೋಗ್ಯ ತಜ್ಞರನ್ನು ಕೂಡ ಸೇರ್ಪಡೆ ಮಾಡಿಕೊಳ್ಳುವುದರಿಂದ ಸಮಗ್ರ ಆರೋಗ್ಯವನ್ನು ಮರಳಿ ಗಳಿಸಬಹುದಾಗಿದೆ.
ಖನ್ನತೆಗೆ ಸಂಬಂಧಿಸಿದ ಕೆಲವು ದೈಹಿಕ ತೊಂದರೆಗಳು ಹೀಗಿವೆ:
- ರೋಗ ನಿರೋಧಕ ಶಕ್ತಿ ಕುಂದುವುದು: ಖನ್ನತೆಯಿಂದಾಗಿ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ. ಇದರಿಂದ ರೋಗಿ ಸುಲಭವಾಗಿ ಸೋಂಕುಗಳಿಗೆ ತುತ್ತಾಗುತ್ತಾನೆ ಅಥವಾ ಅಂತರ್ಗತವಾಗಿರುವ ಅನಾರೋಗ್ಯಗಳಿಂದ ಗುಣ ಹೊಂದುವುದು ವಿಳಂಬವಾಗುತ್ತದೆ. ಖನ್ನತೆ ಮತ್ತು ವಿವಿಧ ಉರಿಯೂತಗಳಿಗೆ ಸಂಬಂಧ ಇರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇರಿಟೇಬಲ್ ಬವೆಲ್ ಸಿಂಡ್ರೋಮ್, ಆರ್ಥೈಟಿಸ್ ಅಥವಾ ಫೈಬ್ರೊಮಯಾಲ್ಜಿಯಾದಂತಹ ಅನಾರೋಗ್ಯಗಳಿಗೂ ಖನ್ನತೆಗೂ ಸಂಬಂಧ ಇದೆ ಎಂಬುದೇ ಇದರರ್ಥ.
- ಹೃದಯ-ರಕ್ತ ಪರಿಚಲನೆ ವ್ಯವಸ್ಥೆಯ ಮೇಲೆ ಪರಿಣಾಮ: ಖನ್ನತೆಯ ಸಂದರ್ಭದಲ್ಲಿ, ಒತ್ತಡದ ಹಾರ್ಮೋನ್‌ಗಳು ಹೆಚ್ಚು ಬಿಡುಗಡೆಗೊಳ್ಳುವುದರಿಂದಾಗಿ ಹೃದಯ ಬಡಿತದ ವೇಗ ಮತ್ತು ರಕ್ತದ ಒತ್ತಡ ಹೆಚ್ಚುತ್ತವೆ. ಇದರಿಂದಾಗಿ ರಕ್ತನಾಳಗಳಲ್ಲಿ ಅಡಚಣೆಗಳು ಉಂಟಾಗಿ ಹೃದಯದ ಸ್ನಾಯುಗಳು ಮತ್ತು ರಕ್ತನಾಳಗಳಿಗೆ ರಕ್ತದ ಹರಿವು ಕುಸಿಯಬಹುದು. ಕಾಲಕ್ರಮೇಣ ಇದರಿಂದಾಗಿ ಹೃದ್ರೋಗಗಳು, ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತ, ಲಕ್ವಾದಂತಹ ಹೃದಯ ಸಮಸ್ಯೆಗಳು ತಲೆದೋರಬಹುದು. ಇದಲ್ಲದೆ ಖನ್ನತೆಯಿಂದಾಗಿ ತಿನ್ನುಬಾಕತನ, ದೂಮಪಾನ, ದೈಹಿಕ ನಿಷ್ಕ್ರಿಯತೆಯಂತಹ ಸಮಸ್ಯೆಗಳೂ ಇದ್ದರೆ ಈ ಅಪಾಯಗಳು ಇನ್ನಷ್ಟು ಹೆಚ್ಚುತ್ತವೆ.
- ಕೇಂದ್ರೀಯ ನರ ವ್ಯವಸ್ಥೆಯ ಮೇಲೆ ಪರಿಣಾಮ: ಖನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಅಲ್ಝೀಮರ್ಸ್ ಡಿಮೆನ್ಶಿಯಾ, ಅಪಸ್ಮಾರ ಮತ್ತು ಮಲ್ಟಿಪಲ್ ಸೆಲೆರೋಸಿಸ್‌ನಂತಹ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು. ದೀರ್ಘಕಾಲೀನ ಏಕಾಗ್ರತೆಯ ಕೊರತೆ, ನಿದ್ದೆಯ ಸಮಸ್ಯೆಗಳು ಮತ್ತು ಒತ್ತಡದ ತಲೆನೋವಿನಿಂದಾಗಿ ಸ್ಮರಣೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗಬಲ್ಲವು. ಒತ್ತಡದ ಹಾರ್ಮೋನ್‌ಗಳ ಅಧಿಕ ಸ್ರಾವದಿಂದಾಗಿಯೂ ನರಶಾಸ್ತ್ರೀಯ ಸಮಸ್ಯೆಗಳು ತಲೆದೋರಬಲ್ಲವು.
- ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಖನ್ನತೆಗೂ ಹಸಿವಿನ ತೊಂದರೆಗಳು, ಹೊಟ್ಟೆ ತೊಳೆಸುವಿಕೆ, ವಾಂತಿ, ತೂಕ ನಷ್ಟ ಅಥವಾ ಒತ್ತಡದಿಂದಾಗಿ ತಿನ್ನುಬಾಕತನವುಂಟಾಗಿ ತೂಕ ಹೆಚ್ಚಳಕ್ಕೂ ಸಂಬಂಧವಿದೆ.
- ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳು: ಖನ್ನತೆಯಿಂದಾಗಿ ನಿಶ್ಶಕ್ತಿ, ಮನೋಲ್ಲಾಸದ ಕೊರತೆ, ಸ್ವಯಂಸ್ಫೂರ್ತಿಯ ಕೊರತೆ, ಕಳಪೆ ಆಹಾರ ಶೈಲಿಗಳು ಉಂಟಾಗಬಹುದಾಗಿದ್ದು, ಇದರಿಂದ ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದಯ-ರಕ್ತ ಪರಿಚಲನೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚುತ್ತದೆ.
ಡಾ| ಕೃತಿಶ್ರೀ ಸೋಮಣ್ಣ ಕನ್ಸಲ್ಟಂಟ್ ಸೈಕಿಯಾಟ್ರಿಸ್ಟ್ ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.