Mysore: ಮೈನವಿರೇಳಿಸಿದ ಮೋಟರ್ ಸೈಕಲ್ ಸ್ಟಂಟ್ಸ್
Team Udayavani, Oct 25, 2023, 10:09 AM IST
ಮೈಸೂರು: ಎದೆ ಝಲ್ ಎನಿಸುವ ಮೋಟರ್ ಸೈಕಲ್ ಸ್ಟಂಟ್ಸ್ ದೃಶ್ಯ, ಮೈನವಿರೇಳಿಸಿದ ಟೆಂಟ್ ಪೆಗ್ಗಿಂಗ್, ಹುಬ್ಬೇರುವಂತೆ ಮಾಡಿದ ಪಂಜಿನ ಕವಾಯತಿನ ವಿವಿಧ ಆಕೃತಿ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸಿತು. ವಿಶ್ವ ವಿಖ್ಯಾತ ದಸರಾ ಉತ್ಸವದ ಜಂಬೂ ಸವಾರಿ ಮುಗಿಯುತ್ತಿದ್ದಂತೆ ಮಂಗಳವಾರ ಸಂಜೆ ಬನ್ನಿಮಂಟಪದಲ್ಲಿ ನಡೆದ ಪ್ರಾರಂಭವಾದ ಪಂಜಿನ ಕವಾಯತಿನಲ್ಲಿ ಒಬ್ಬರ ಮೇಲೊಬ್ಬರು ನಿಂತು ನಡೆಸಿದ ಬೈಕ್ ಸವಾರಿಗೆ ಪ್ರೇಕ್ಷಕರು, ಶಿಳ್ಳೆಯ ಜತೆಗೆ ಚಪ್ಪಾಳೆಗಳ ಸುರಿಮಳೆಗರೆದರು.
ಟೆಂಟ್ ಪೆಗ್ಗಿಂಗ್‌ನ ರೋಚಕತೆಯನ್ನು ತದೇಕಚಿತ್ತವಾಗಿ ನೋಡಿದರು. ಜತೆಗೆ ಡ್ರೋಣ್ ಲೈಟ್ ಶೋನ ದೃಶ್ಯ ವೈಭವದಲ್ಲಿ ಜನ ಸಾಗರ ಮಿಂದೆದ್ದಿತು. 5 ವರ್ಷಗಳ ಬಳಿಕ ದಸರೆ ಅಂಗವಾಗಿ ಕವಾಯತು ಮೈದಾನದಲ್ಲಿ ಮತ್ತೆ ಮೋಟರ್ ಸೈಕಲ್ ಸ್ಟಂಟ್ಸ್ ನೋಡುಗರನ್ನು ಆಕರ್ಷಿಸಿತು. ಮಿಲಿಟರಿ ಪೊಲೀಸ್ ಕೋನರ್ ಮೋಟಾರ್ ಸೈಕಲ್ ತಂಡ “ಶ್ವೇತಾಶ್ವ’ 25 ನಿಮಿಷ ನಡೆಸಿಕೊಟ್ಟ ಬೈಕ್ ಕಸರತ್ತು ನೋಡುಗರ ಎದೆ ಝಲ್ ಎನಿಸುವಂತಿತ್ತು. ಬೈಕಿನಲ್ಲಿ ನಾನಾ ಭಂಗಿಗಳಲ್ಲಿ ಕುಳಿತು, ನಿಂತು ಸಾಹಸ ಮೆರೆದ ಸೈನಿಕರು ವೀಕ್ಷಕರನ್ನು ರೋಮಾಂಚನಗೊಳಿಸಿದರು. ಕರ್ನಾಟಕದವರೆಯಾದ ಈರಪ್ಪ ಸೇರಿದಂತೆ ಮೂವರು ಬೈಕ್ ಮೂಲಕ ಬೆಂಕಿಯ ರಿಂಗ್‌ನಲ್ಲಿ ಹೋದ ದೃಶ್ಯ ಹಾಗೂ ಮಣಿಶೇಖರನ್ ಅವರು ಬೈಕ್ ಮೂಲಕ ಟ್ಯೂಬ್ ಲೈಟ್ ಗಳನ್ನು ಒಡೆದಿದ್ದು ಅಕ್ಷರಶಃ ರೋಮಾಂಚನ ಉಂಟು ಮಾಡಿತು. ಬೈಕಿನ ಮೇಲೆ ನಿಂತು, ವ್ಯಾಯಾಮ ಮಾಡುತ್ತ, ಏಣಿ ಏರುತ್ತ, ಒಂಟಿ ಕಾಲಿನಲ್ಲಿ ಬೈಕ್ ಮೆಲೆ ಕಸರತ್ತು ಪ್ರದರ್ಶಿಸಿದರು.
ಒಂದೇ ಬೈಕಿನಲ್ಲಿ 10 ಸೈನಿಕರಿಂದ ಕ್ರಿಸ್ಮಸ್ ಟ್ರೀ ಮಾದರಿ ರಚನೆ, 7 ಬೈಕುಗಳಲ್ಲಿ 25 ಯೋಧರ ಪಿರಮಿಡ್ ರಚನೆ, 9 ಸೈನಿಕರು ಒಂದೇ ಬೈಕಿನಲ್ಲಿ ಸುದರ್ಶನ ಚಕ್ರದಂತೆ ತಿರುಗುವ ಸಾಹಸ ಮಾಡಿದರು. ತಂಡದ ಎಲ್ಲಾ ಸದಸ್ಯರೂ ವಿವಿಧ ಕಸರತ್ತಿನ ಮೂಲಕ ಮಿಂಚಿನ ವೇಗದಲ್ಲಿ ಬೈಕ್ ಚಲಾಯಿಸಿ ಗಮನ ಸೆಳೆದರು. ಮುಖಾಮುಖೀ ಚಲನೆ, ವಿ ಆಕೃತಿ, ಲಾಂಗ್‌ಆನ್, ಸಿಂಗಲ್ ಕ್ರಾಸ್, ಸಿಕ್ಸ್ ಮನ್ ಬ್ಯಾಲೆನ್ಸ್, ಬ್ರಿಗ್ ವಾಲ್ ಜಂಪ್, ಡೈಮಂಡ್ ಕ್ರಾಸಿಂಗ್, ಕ್ರಿಸ್ ಕ್ರಾಸಿಂಗ್, ಜಂಪ್ ಕ್ರಾಸಿಂಗ್ ಪ್ರದರ್ಶಿಸಿ ಗಮನ ಸೆಳೆದರು.
ಮೈನವಿರೇಳಿಸಿದ ಟೆಂಟ್ ಪೆಗ್ಗಿಂಗ್: ಮೌಂಟೆಡ್ ಪೊಲೀಸರು 20 ನಿಮಿಷ ಪ್ರಸ್ತುತಪಡಿಸಿದ “ಟೆಂಟ್ ಪೆಗ್ಗಿಂಗ್’ ರೋಚಕ ಅನುಭವ ನೀಡಿತು. ಪೊಲೀಸರಾದ ಶರಣಪ್ಪ ಡಿ.ಸಾಸನೂರ, ಆನಂದ್ಸಿಂಗ್,ರುದ್ರಪ್ಪ, ಎಚ್.ಕೆ.ಸೋಮಣ್ಣ, ಮಹೇಶ್, ಸುರೇಶ್, ಸಂದೇಶ್, ಚಂದ್ರು, ಜಯ ಪ್ರಕಾಶ್ ಭೂಮಿಯಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗದ ಕುದುರೆ ಸವಾರಿ ಮೂಲಕವೇ ಈಟಿಯಿಂದ ಕಿತ್ತೂಯ್ದರು. ಆರು ಅಡಿ ಕುದುರೆಗಳ ಮೇಲೆ ಕುಳಿತು ಕೆಳಗೆ ನೆಟ್ಟಿದ್ದ ಉರಿಯುವ ಪಂಜುಗಳನ್ನು ಈಟಿಯಲ್ಲಿ ಕಿತ್ತುಕೊಂಡ ಜಾಣ್ಮೆ ನೋಡಿದ ಪ್ರೇಕ್ಷಕರು ರೋಮಾಂಚನಗೊಂಡರು. 9 ಪೊಲೀಸರು ಒಟ್ಟು ಮೂರು ರೀತಿಯ ಟೆಂಟ್ ಪೆಗ್ಗಿಂಗ್ ಪ್ರದರ್ಶಿಸಿ ಮೈನವಿರೇಳಿಸಿದರು.
ಗಮನ ಸೆಳೆದ ಡ್ರೋಣ್ ಲೈಟ್ ಶೋ: ಈ ವರ್ಷವೂ ಡ್ರೋಣ್ ಲೈಟ್ ಶೋ ಪಂಜಿನ ಕವಾ ಯತುವಿನ ಮೆರುಗು ಹೆಚ್ಚಿಸಿತು. ಸತತ 15 ನಿಮಿಷ ಡ್ರೋಣ್‌ಗಳ ಮಾಯಾಜಾಲದಲ್ಲಿ ಬಂಧಿಯಾಗಿ ವರ್ಣ ರಂಜಿತ ಚಿತ್ರಣವನ್ನು ಕಣ್ತುಂಬಿಕೊಂಡರು. ಬನ್ನಿಮಂಟಪದ ಮುಖ್ಯದ್ವಾರದ ಬಳಿಯಿಂದ ಒಮ್ಮೆಲೇ ಬೆಳ್ಳಕ್ಕಿಗಳ ರೀತಿ ಆಕಾಶದಲ್ಲಿ ಹಾರಲು ಶುರು ಮಾಡಿದ ನೂರಾರು ಡ್ರೋ ಣ್ ಪ್ರೇಕ್ಷಕರ ಚಿತ್ತವನ್ನು ತಮ್ಮತ್ತ ಸೆಳೆದವು. ಡ್ರೋಣ್‌ಗಳು ಕ್ಷಣಾರ್ಧದಲ್ಲಿಯೇ ಬಾನೆತ್ತರದಲ್ಲಿ ಹ್ಯಾಪಿ ದಸರಾ, ಕರ್ನಾಟಕ ಭೂಪಟ, ಮೈಸೂರು ಜಿಲ್ಲೆ ಭೂಪಟ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬಾರಿ ಆನೆ, ನಂದಿ ವಿಗ್ರಹ, ಸಿಯು ಇನ್ 2024, ಗಂಡಭೇರುಂಡ ಕಲಾಕೃತಿ ರಚಿಸಿದವು. ಬಾನೆತ್ತರದಲ್ಲಿನ ವರ್ಣರಂಜಿತ ದೃಶ್ಯವೈಭವ ಕಂಡ ಪ್ರೇಕ್ಷಕರು ಹೌಹಾರಿದರು.
ಗಮನ ಸೆಳೆದ ಪರೇಡ್: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಅಶ್ವಾರೋಹಿ ಪಡೆಯ ಎರಡು ದಳ, ಕೆಎಸ್‌ಆರ್‌ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಎನ್ಸಿಸಿಯ ಭೂದಳ, ನೌಕದಳ, ವಾಯುದಳ, ಸ್ಕೌಟ್ಸ್ ಮತ್ತು ಗೈಡ್ಸ್, ರೈಲ್ವೆ ರಕ್ಷಕ ದಳ, ಪೊಲೀಸ್ ಪಬ್ಲಿಕ್ ಸ್ಕೂಲ್, ಭಾರತ ಸೇವಾದಳ ಬಾಲಕ, ಬಾಲಕಿಯರು, ಪೊಲೀಸ್ ಬ್ಯಾಂಡ್ ಸೇರಿದಂತೆ 18 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮೂರು ಸುತ್ತು 27 ಕುಶಾಲತೋಪು ಸಿಡಿಸಲಾಯಿತು. ಸುಮಂತ್ ವಸಿಷ್ಠ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್ ಮತ್ತು ಶಾಸಕರು, ಅಧಿಕಾರಿಗಳು ಇದ್ದರು.
ಮನಸೂರೆಗೊಂಡ ಪಂಜಿನ ಕವಾಯತು: ಕರ್ನಾಟಕ ಪೊಲೀಸ್ ಇಲಾಖೆಯ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಜನ ಫಿದಾ ಆದರು. 300 ಪೊಲೀಸರು, 600 ಪಂಜು ಹಿಡಿದು ಮನಮೋಹಕ ದೃಶ್ಯಗಳು, ಅಕ್ಷರಾಕೃತಿ ರಚಿಸಿದರು. ಪೊಲೀಸ್ ಬ್ಯಾಂಡ್‌ನ ಹಿಮ್ಮೇಳದಲ್ಲಿ ವಿವಿಧ ದೈಹಿಕ ಕಸರತ್ತು ಮಾಡುತ್ತ ವಿವಿಧ ವಿನ್ಯಾಸದ ಆಕೃತಿ ಮೂಡಿಸಿದರು. ಕ್ರಾಸ್ ಕಟ್ ಮೂಲಕ ಬಣ್ಣ ಬಣ್ಣದ ರಂಗೋಲಿ ಮಾದರಿ ನಿರ್ಮಿಸಿ ಚಿತ್ತಾರ ಮೂಡಿಸಿದರು. ರಿಂಗ್ ರೋಟೇಷನ್, ಸುದರ್ಶನ ಚಕ್ರ, ಸ್ವಸ್ತಿಕ್ ಮಾದರಿ ನಿರ್ಮಿಸಿ ಗಮನ ಸೆಳೆದರು. ಈ ಮುನ್ನ ನಡೆದ ಡಿಎನ್‌ಎ ಎಂಟರ್ ಪ್ರೈಸಸ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಇಡೀ ದಸರಾ ವೈಭವಕ್ಕೆ ಮೆರುಗು ನೀಡಿದವು. ಆರಂಭದಲ್ಲಿ 300ಕ್ಕೂ ಹೆಚ್ಚು ಕಲಾವಿದರು 20 ನಿಮಿಷ ನಾನಾ ಗೀತೆಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.
“ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ’ ಗೀತೆಗೆ ನೃತ್ಯ ಮಾಡಿ ತಾಯಿ ಚಾಮುಂಡೇಶ್ವರಿ ನೆನೆದರು. “ಬಾರಿಸು ಕನ್ನಡ ಡಿಂಡಿಮವ’, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಕನ್ನಡ ಅಭಿಮಾನ ಸಾರಿದರು. ಡ್ಯಾನ್ಸ್ ವಿತ್ ಅಪ್ಪು’ ಗೀತೆಗೆ ಅವರ ಭಾವ ಚಿತ್ರ ಹಿಡಿದು ನೃತ್ಯ ಪ್ರದರ್ಶಿಸುವ ಮೂಲಕ ಪುನೀತ್ರಾಜ್ ಕುಮಾರ್ ನೆನೆದರು. ಶಂಕರ್‌ನಾಗ್ ಅವರ “ಸಂತೋಷಕ್ಕೆ ಈ ಹಾಡು ಸಂತೋಷಕ್ಕೆ’ ಹಾಡಿಗೆ, ಶಿವರಾಜ್ ಕುಮಾರ್ ಅವರ ಭಜರಂಗಿ’ ಗೀತೆಗೆ ಹಾಗೂ ದರ್ಶನ್ ಅವರ ಸಾರಥಿ’ ಸಿನಿಮಾದ ಗೀತೆಗೆ ನೃತ್ಯ ಮಾಡಿ ರಂಜಿಸಿದರು. ನೃತ್ಯದ ಮಧ್ಯ ಪ್ರದರ್ಶನಗೊಂಡ ಮಲ್ಲಕಂಬ ಆಕರ್ಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.