World Cup: ಸೋಲರಿಯದ ಭಾರತದೆದುರು ಬಲಿಷ್ಠ ದಕ್ಷಿಣ ಆಫ್ರಿಕಾ
ಈಡನ್ ಗಾರ್ಡನ್ಸ್‌ನಲ್ಲಿಂದು ಬಿಗ್ ಗೇಮ್ ಅಗ್ರಸ್ಥಾನಕ್ಕೆ ಪೈಪೋಟಿ 8ನೇ ಜಯಕ್ಕೆ ಭಾರತ ಸ್ಕೆಚ್
Team Udayavani, Nov 4, 2023, 11:49 PM IST
ಕೋಲ್ಕತಾ: ಹದಿಮೂರನೇ ವಿಶ್ವಕಪ್‌ನಲ್ಲಿ ಸೋಲರಿಯದ ಸರದಾರನಾಗಿ ಮೆರೆಯುತ್ತಿರುವ ಭಾರತಕ್ಕೆ ರವಿವಾರ ಐತಿಹಾಸಿಕ “ಈಡನ್ ಗಾರ್ಡನ್ಸ್’ನಲ್ಲಿ ದೊಡ್ಡ ಸವಾಲೊಂದು ದಕ್ಷಿಣ ಆಫ್ರಿಕಾ ರೂಪದಲ್ಲಿ ಎದುರಾಗುವ ಸಾಧ್ಯತೆ ಇದೆ. ಇತ್ತಂಡಗಳ ಪಾಲಿಗೆ ಇದೊಂದು ಪ್ರತಿಷ್ಠೆಯ ಕದನವೂ ಹೌದು. ಭಾರತ ಸತತ 8ನೇ ಗೆಲುವಿನ ನಂಟನ್ನು ಮುಂದುವರಿಸುವ ಉಮೇದಿನಲ್ಲಿದ್ದರೆ, ಹರಿಣಗಳ ಪಡೆ ಆತಿಥೇಯರನ್ನು ಒಂದು ಕೈ ನೋಡಿಯೇ ಬಿಡುವ ಕಾತರದಲ್ಲಿದೆ. ಈ ಕಾರಣಕ್ಕೆ ನಂ. 1-2 ತಂಡಗಳ ನಡುವಿನ ಈ ಬಿಗ್ ಗೇಮ್ ಎಲ್ಲರ ಗಮನ ಸೆಳೆದಿದೆ.
ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಬಿದ್ದ ಸುದ್ದಿ ಅಧಿಕೃತಗೊಂಡದ್ದು ಭಾರತದ ಪಾಲಿಗೆ ತುಸು ಮಾನಸಿಕ ಹಿನ್ನಡೆ ಆಗಬಹುದಾದರೂ ಇದರಿಂದ ಹೊರಬರುವ ಸಾಮರ್ಥ್ಯವಂತೂ ಇದ್ದೇ ಇದೆ. ಅಂದು ಅಜೇಯ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸುವಾಗಲೂ ಭಾರತ ಪಾಂಡ್ಯ ಸೇವೆಯಿಂದ ವಂಚಿತವಾಗಿತ್ತು. ಆದರೂ ಗೆಲುವಿಗೇನೂ ಅಡ್ಡಿ ಆಗಿರಲಿಲ್ಲ. ಅನಂತರವೂ ರೋಹಿತ್ ಪಡೆಯ ಗೆಲುವಿನ ಓಟ ಮುಂದುವರಿಯಿತು. ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಶರಣಾದವು. ಇವೆರಡೂ ಭಾರೀ ಅಂತರದ ಗೆಲುವುಗಳಾಗಿದ್ದವು. ಆಂಗ್ಲರನ್ನು 100 ರನ್ನುಗಳಿಂದ, ಲಂಕೆಯನ್ನು 302 ರನ್ನುಗಳಿಂದ ಉರುಳಿಸಿದ ಹಿರಿಮೆ ಟೀಮ್ ಇಂಡಿಯಾದ್ದಾಗಿತ್ತು.
ಹೇಳಿ ಕೇಳಿ ಭಾರತ ಈ ಬಾರಿಯ ಫೇವರಿಟ್ ತಂಡವೆಂಬ ಗರಿಮೆ ಗಳಿಸಿದೆ. ಭಾರತವನ್ನು ಮಣಿಸುವವರು ಯಾರಿದ್ದಾರೆ, ಎಲ್ಲಿದ್ದಾರೆ ಎಂದು ಧೈರ್ಯದಿಂದ ಸವಾಲೆಸೆಯುವಂತಿದೆ ನಮ್ಮವರ ಆಟ. ಒಂದು ವೇಳೆ ಭಾರತ ತಂಡ ವಿಶ್ವಕಪ್ ಗೆಲ್ಲುವುದೇ ಆದರೆ ಅಜೇಯವಾಗಿ ಗೆಲ್ಲಲಿ ಎಂಬ ಹಾರೈಕೆಯೂ ಇಲ್ಲಿದೆ. ಆಗ ವೆಸ್ಟ್ ಇಂಡೀಸ್ (1975, 1979) ಮತ್ತು ಆಸ್ಟ್ರೇಲಿಯದ (2007) ಸಾಧನೆಯನ್ನು ರೋಹಿತ್ ಬಳಗ ಪುನರಾವರ್ತಿಸಿದಂತಾಗುತ್ತದೆ.
ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. 2011ರ ತವರಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಆಗಿ ಮೂಡಿಬಂದಿತ್ತು. ಅಂದು ಧೋನಿ ಪಡೆ ಅಜೇಯ ಓಟ ಬೆಳೆಸಿರಲಿಲ್ಲ. ಕಪ್ ಎತ್ತುವ ಹಾದಿಯಲ್ಲಿ ಏಕೈಕ ಪಂದ್ಯವನ್ನು ಕಳೆದುಕೊಂಡಿತ್ತು, ಆ ಸೋಲು ದಕ್ಷಿಣ ಆಫ್ರಿಕಾ ವಿರುದ್ಧ ಬಂದಿತ್ತು!
ಬಿಗ್ ಹಿಟ್ಟಿಂಗ್ ಬ್ಯಾಟರ್
ದಕ್ಷಿಣ ಆಫ್ರಿಕಾ ವಿಭಿನ್ನ ಮಾದರಿಯ ತಂಡ. ಈ ಬಾರಿಯಂತೂ ಅತ್ಯಂತ ಬಲಾಡ್ಯ ಪಡೆಯನ್ನು ಕಟ್ಟಿಕೊಂಡು ಬಂದಿದೆ. ಎಲ್ಲರೂ ಪವರ್ ಹಿಟ್ಟರ್. ಮೊದಲು ಬ್ಯಾಟಿಂಗ್ ನಡೆಸಿದರೆ ಸ್ಕೋರ್‌ಬೋರ್ಡ್ 350 ರನ್ ದಾಖಲಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಚೇಸಿಂಗ್‌ನಲ್ಲಿ ಬವುಮ ತಂಡ ಹಿಂದುಳಿದಿದೆ. ಇದಕ್ಕೆ ನೆದರ್ಲೆಂಡ್ಸ್ ಎದುರಿನ ಪಂದ್ಯವೇ ಸಾಕ್ಷಿ. ಬಳಿಕ ಪಾಕ್ ವಿರುದ್ಧ 271 ರನ್ ಬೆನ್ನಟ್ಟುವಾಗಲೂ ಪರದಾಡಿತ್ತು. ಕೇಶವ್ ಮಹಾರಾಜ್ ಕೊನೆಯಲ್ಲೊಂದು ಬೌಂಡರಿ ಬಾರಿಸಿ ಒಂದು ವಿಕೆಟ್ ಅಂತರದ ರೋಚಕ ಗೆಲುವು ತಂದಿತ್ತಿದ್ದರು.
ಬರ್ತ್‌ಡೇ ಬಾಯ್ ಕೊಹ್ಲಿ
ಟಾಸ್ ಗೆದ್ದರೆ ಭಾರತವೇ ಮೊದಲು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸುವುದು ಕ್ಷೇಮ ಎನಿಸುತ್ತದೆ. ರೋಹಿತ್, ಗಿಲ್, ಕೊಹ್ಲಿ, ಅಯ್ಯರ್, ರಾಹುಲ್, ಜಡೇಜ ಕ್ರೀಸ್ ಆಕ್ರಮಿಸಿಕೊಂಡರೆ ಇದು ಕಷ್ಟವೇನಲ್ಲ.
ಅಂದಹಾಗೆ ರವಿವಾರ ವಿರಾಟ್ ಕೊಹ್ಲಿ ಬರ್ತ್‌ಡೇ. ಅವರು ವಿಶ್ವದಾ ಖಲೆಯ 49ನೇ ಶತಕದ ಹೊಸ್ತಿಲಲ್ಲಿ ನಿಂತಿದ್ದಾರೆ. ಇದಕ್ಕೆ “ಈಡನ್’ ಬಾಗಿಲು ತೆರೆದೀತೇ ಎಂಬ ಕೌತುಕ ಎಲ್ಲರದೂ. ಆಸ್ಟ್ರೇಲಿಯ (85), ನ್ಯೂಜಿಲ್ಯಾಂಡ್ (95) ಮತ್ತು ಶ್ರೀಲಂಕಾ ವಿರುದ್ಧ (88) ಅವರಿಗೆ ಸೆಂಚುರಿ ತಪ್ಪಿತ್ತು. ಇದು ರೋಹಿತ್ ಶರ್ಮ ಅವರ ನೆಚ್ಚಿನ ಕ್ರೀಡಾಂಗಣವೂ ಹೌದು.
ದ. ಆಫ್ರಿಕಾಕ್ಕೆ ಬೇಕು ಬ್ರೇಕು
ಅಕಸ್ಮಾತ್ ದಕ್ಷಿಣ ಆಫ್ರಿಕಾಕ್ಕೆ ಫಸ್ಟ್ ಬ್ಯಾಟಿಂಗ್ ಅವಕಾಶ ಲಭಿಸಿದರೆ ಅವರನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಲೇಬೇಕು. ಅರ್ಥಾತ್, ಡಿ ಕಾಕ್, ಡುಸೆನ್, ಮಾರ್ಕ್‌ರಮ್, ಕ್ಲಾಸೆನ್ ಮೊದಲಾದವರಿಗೆ ದೊಡ್ಡ ಲಗಾಮು ತೊಡಿಸಬೇಕು. ಡಿ ಕಾಕ್ ಈ ಪಂದ್ಯಾವಳಿಯಲ್ಲಿ ಈಗಾಗಲೇ 4 ಶತಕ ಬಾರಿಸಿ ಅತ್ಯಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. 545 ರನ್ ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದೇ ಕೂಟದಲ್ಲಿ ವಿಶ್ವಕಪ್ ಇತಿಹಾಸದ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಕೂಡ ದಕ್ಷಿಣ ಆಫ್ರಿಕಾದ್ದಾಗಿದೆ (5ಕ್ಕೆ 428 ರನ್). ಇದೆಲ್ಲ ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆ.
ಎಲ್ಲದಕ್ಕೂ ಸೈ
ಭಾರತ ಚೇಸಿಂಗ್‌ನಲ್ಲಿ ಹಿಂದೆ ಬಿದ್ದಿಲ್ಲ. ಮೊದಲ 5 ಪಂದ್ಯಗಳನ್ನು ಚೇಸ್ ಮಾಡಿಯೇ ಗೆದ್ದಿತ್ತು. ಇಂಗ್ಲೆಂಡ್ ಮತ್ತು ಲಂಕಾ ವಿರುದ್ಧ ಘಾತಕ ಬೌಲಿಂಗ್ ನಡೆಸಿ ಜಯಭೇರಿ ಮೊಳಗಿಸಿತ್ತು. ಎಲ್ಲದಕ್ಕೂ ಸೈ ಎಂಬುದು ಭಾರತದ ಥಿಯರಿ.
ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನ ರಾಗುತ್ತಿದ್ದಾರೆ. 2 ಸಲ 5 ವಿಕೆಟ್ ಉರುಳಿಸಿದ್ದು, 3 ಪಂದ್ಯಗಳಿಂದ 14 ವಿಕೆಟ್ ಕೆಡವಿದ ಸಾಧನೆಗೈದಿದ್ದಾರೆ. ಬುಮ್ರಾ, ಸಿರಾಜ್ ಕೂಡ ಸಿಡಿಲಾಗಿ ಎರಗುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.