Glucometer ಬಳಸಿ ಮನೆಯಲ್ಲಿಯೇ ರಕ್ತದ ಗ್ಲುಕೋಸ್ ಮಾಪನ
Team Udayavani, Nov 5, 2023, 11:50 AM IST
ಪ್ರತೀ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಾರೆ. ಜೀವನಶೈಲಿಗೆ ಸಂಬಂಧಿಸಿದ ಈ ಕಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವ ಪ್ರಮುಖ ಅಭಿಯಾನ ಸ್ವರೂಪದ ದಿನಾಚರಣೆ ಇದು. ಈ ದಿನಾಚರಣೆಯ ಪ್ರಧಾನ ಧ್ಯೇಯವು ಮಧುಮೇಹದ ಬಗ್ಗೆ ಮಾಹಿತಿ, ಜ್ಞಾನ ವಿಸ್ತರಣೆಯತ್ತ ಕೇಂದ್ರೀಕರಿಸಿದೆ. ಇದರಲ್ಲಿ ಒಂದು ಮಧುಮೇಹದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು. ಈ ಹಿನ್ನೆಲೆಯಲ್ಲಿ ಗ್ಲುಕೊಮೀಟರನ್ನು ಸಮರ್ಪಕವಾಗಿ ಉಪಯೋಗಿಸುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪ್ರಕ್ರಿಯೆ
1. ಟೆಸ್ಟ್ ಸ್ಟ್ರಿಪ್ ಅಳವಡಿಕೆ: ಬಾಟಲಿಯಿಂದ ಟೆಸ್ಟ್ ಸ್ಟ್ರಿಪ್‌ನ್ನು ಹೊರತೆಗೆಯಿರಿ. ಇತರ ಟೆಸ್ಟ್ ಸ್ಟ್ರಿಪ್‌ಗಳಿಗೆ ತೇವಾಂಶ ಸೇರಿಕೊಳ್ಳುವುದನ್ನು ತಡೆಯಲು ಬಾಟಲಿಯನ್ನು ಕೂಡಲೇ ಮುಚ್ಚಳ ಮುಚ್ಚಿ. ಇನ್ನು ಟೆಸ್ಟ್ ಸ್ಟ್ರಿಪ್‌ನ್ನು ಅಳವಡಿಸಿ.
- ಕೋಡ್ ನಂಬರ್ ತಾಳೆ ನೋಡಿ: ಗ್ಲುಕೊಮೀಟರ್ ಸ್ವಯಂಚಾಲಿತವಾಗಿ ಆನ್ ಆಗಿ ಕೋಡ್ ನಂಬರ್ ಪ್ರದರ್ಶಿಸುತ್ತದೆ. ಗ್ಲುಕೊಮೀಟರ್ ನಲ್ಲಿ ಕಾಣಿಸುತ್ತಿರುವ ಕೋಡ್ ನಂಬರ್ ಮತ್ತು ಟೆಸ್ಟ್ ಸ್ಟ್ರಿಪ್ ವಯಲ್‌ನಲ್ಲಿ ಇರುವ ಕೋಡ್ ನಂಬರ್ ಒಂದೇ ಆಗಿದೆಯೇ ಎಂದು ಗಮನಿಸಿ. ಅವೆರಡೂ ತಾಳೆಯಾಗದೆ ಇದ್ದಲ್ಲಿ ಮೀಟರನ್ನು ಸರಿಯಾಗಿ ಕೋಡ್ ಮಾಡಿ. ಅಥವಾ ಕೆಲವು ಗ್ಲುಕೊಮೀಟರ್‌ಗಳಲ್ಲಿ ಟೆಸ್ಟ್ ಸ್ಟ್ರಿಪ್ ಅಳವಡಿಸಿದ ಬಳಿಕ ರಕ್ತದ ಸಂಕೇತ ಪ್ರದರ್ಶಿಸಲ್ಪಡುತ್ತದೆ.
- ರಕ್ತದ ಮಾದರಿ ಅಳವಡಿಸಿ: 3 ಸೆಕೆಂಡ್ ಗಳ ಕಾಲ ಕೋಡ್ ಪ್ರದರ್ಶನವಾದ ಬಳಿಕ ರಕ್ತದ ಸಂಕೇತ ಕಾಣಿಸುತ್ತದೆ. ರಕ್ತವನ್ನು ಪಡೆಯಲು ನಿರ್ಧಾರವಾದ ಸ್ಥಳದಲ್ಲಿ ಚುಚ್ಚಿ (ಮಧ್ಯ ಮತ್ತು ಉಂಗುರ ಬೆರಳು ಅತ್ಯುತ್ತಮ).
- ರಕ್ತದ ಬಿಂದು ಇರುವ ನಿಮ್ಮ ಬೆರಳಿನ ತುದಿಯನ್ನು ಗ್ಲುಕೊಮೀಟರ್ ಸ್ಟ್ರಿಪ್‌ಗೆ ಸ್ಪರ್ಶಿಸಿ.
- ಟೆಸ್ಟ್ ಸ್ಟ್ರಿಪ್‌ನ ಮಾಪನ ಭಾಗವು ಸ್ವಯಂಚಾಲಿತವಾಗಿ ನಿಮ್ಮ ಬೆರಳಿನಲ್ಲಿ ಇರುವ ರಕ್ತ ಬಿಂದುವನ್ನು ಹೀರಿಕೊಳ್ಳುತ್ತದೆ. ಗ್ಲುಕೋಮೀಟರ್‌ನ ಕನ್‌ಫರ್ಮೇಶನ್ ವಿಂಡೋ ಭರ್ತಿಯಾಗಿ “ಬೀಪ್’ ಸದ್ದು ಬರುವವರೆಗೂ ನಿಮ್ಮ ಬೆರಳು ಸ್ಥಿರವಾಗಿರಬೇಕು.
ಫಲಿತಾಂಶ
“ಬೀಪ್’ ಸದ್ದು ಬಂದ ಬಳಿಕ ಸ್ವಯಂ ಚಾಲಿತವಾಗಿ ರಕ್ತಪರೀಕ್ಷೆ ನಡೆಯುತ್ತದೆ, ಡಿಸ್‌ಪ್ಲೇಯಲ್ಲಿ 5ರಿಂದ 1ರ ವರೆಗೆ ಕೌಂಟ್ ಡೌನ್ ನಡೆಯುತ್ತದೆ. ಬಳಿಕ ಡೆಸಿಲೀಟರ್ ರಕ್ತದಲ್ಲಿ ಮಿಲಿಗ್ರಾಂ ಗ್ಲುಕೋಸ್ (ಎಂಜಿ/ ಡಿಎಲ್) ಮಾದರಿಯಲ್ಲಿ ಫಲಿತಾಂಶ ಕಂಡುಬರುತ್ತದೆ.
- ಪರೀಕ್ಷೆಗೊಳಪಟ್ಟ ಸ್ಟ್ರಿಪ್‌ನ್ನು ತೆಗೆದುಹಾಕಿ: ಗ್ಲುಕೊಮೀಟರ್‌ನಿಂದ ಟೆಸ್ಟ್ ಸ್ಟ್ರಿಪ್‌ನ್ನು ತೆಗೆಯಿರಿ. ಟೆಸ್ಟ್ ಸ್ಟ್ರಿಪ್ ತೆಗೆದು ಕೂಡಲೇ ಗ್ಲುಕೊಮೀಟರ್ “ಆಫ್’ ಆಗುತ್ತದೆ.
ನಾವು ಗಮನದಲ್ಲಿ ಇರಿಸಿಕೊಳ್ಳಬೇಕಾದ ವಿಚಾರಗಳು
ಮಿತಿಗಳು
ರಕ್ತನಾಳದಿಂದ ಪಡೆದ ತಾಜಾ ಪೂರ್ಣ ರಕ್ತವನ್ನು ಮಾತ್ರ ಪರೀಕ್ಷೆಗೆ ಉಪಯೋಗಿಸಬೇಕು. ಪ್ಲಾಸ್ಮಾ ಅಥವಾ ಸೀರಂ ಉಪಯೋಗಿಸಬಾರದು.
ಟೆಸ್ಟ್ ಸ್ಟ್ರಿಪ್‌ಗಳು ಒಂದು ಬಾರಿಯ ಬಳಕೆಗೆ ಮಾತ್ರ. ಮರುಬಳಕೆ ಮಾಡಬಾರದು.
ನಿರ್ಜಲೀಕರಣ ಸ್ಥಿತಿಯಿದ್ದರೆ ಪರೀಕ್ಷೆಯ ಫಲಿತಾಂಶ ಕಡಿಮೆ ಬರಬಹುದು. ನವಜಾತ ಶಿಶುಗಳಿಗೆ ಉಪಯೋಗಿಸಬಾರದು.
ಆಘಾತಕ್ಕೀಡಾದ ಸಂದರ್ಭದಲ್ಲಿ, ಹೈಪೊಟೆನ್ಸಿವ್ ವ್ಯಕ್ತಿಗಳಲ್ಲಿ, ಹೈಪರೊಸೊ¾ಲಾರ್ ಸ್ಥಿತಿಯಲ್ಲಿ, ಕೀಟೋಸಿಸ್ ಇದ್ದಾಗ ಅಥವಾ ಇಲ್ಲದೆ ಇದ್ದಾಗ ಫಲಿತಾಂಶಗಳು ಏರುಪೇರಾಗಬಹುದು.
ನಿಯಮಿತ ಅವಧಿಗಳಲ್ಲಿ ನಿಮ್ಮ ವೈದ್ಯರ ಸಲಹೆಯಂತೆ ಪ್ರಯೋಗಾಲಯಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
ಪರೀಕ್ಷಾ ಫಲಿತಾಂಶಗಳ ವ್ಯಾಖ್ಯಾನ
ರಕ್ತದಲ್ಲಿ ಸಹಜ ಗ್ಲುಕೋಸ್ ಮಟ್ಟ ಹೀಗಿರುತ್ತದೆ:
ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿ ಗ್ಲುಕೋಸ್ (8-10 ತಾಸು ಖಾಲಿಹೊಟ್ಟೆಯಲ್ಲಿದ್ದು): 70-100 ಎಂಜಿ/ ಡಿಎಲ್
ಆಹಾರ ತೆಗೆದುಕೊಂಡ ಬಳಿಕ ರಕ್ತದಲ್ಲಿ ಗ್ಲುಕೋಸ್ (ಆಹಾರ ಸೇವನೆಯ 2 ತಾಸು ಬಳಿಕ): 100-140 ಎಂಜಿ/ಡಿಎಲ್
ರ್‍ಯಾಂಡಮ್ ಆಗಿ ರಕ್ತದಲ್ಲಿ ಗ್ಲುಕೋಸ್ (ಯಾವುದೇ ಸಮಯದಲ್ಲಿ ಮತ್ತು ಆಹಾರ ಸೇವನೆಯನ್ನು ಗಣೆಗೆ ತೆಗೆದುಕೊಳ್ಳದೆ): 70-140 ಎಂಜಿ/ಡಿಎಲ್
ಗಮನಿಸಿ
ಗ್ಲುಕೊಮೀಟರನ್ನು ರಕ್ತದ ಗ್ಲುಕೋಸ್ ಮಟ್ಟ ಅಳೆಯಲು ಮಾತ್ರ ಉಪಯೋಗಿಸಬೇಕು ಮತ್ತು ರಕ್ತನಾಳದಿಂದ ಪಡೆದ ತಾಜಾ ರಕ್ತದ ಮಾದರಿಯ ಪರೀಕ್ಷೆಗಷ್ಟೇ ಬಳಸಬೇಕು.
ಮಧುಮೇಹ ಕಾಯಿಲೆ ಪತ್ತೆ ಅಥವಾ ನವಜಾತ ಶಿಶುಗಳ ರಕ್ತ ಪರೀಕ್ಷೆಗೆ ಉಪಯೋಗಿಸ ಬಾರದು.
ರಕ್ತದ ಗ್ಲುಕೋಸ್ ಮಟ್ಟ ಪರೀಕ್ಷೆಗಿಂತ ಹೊರತಾದ ಯಾವುದೇ ಪರೀಕ್ಷೆಗಳಿಗೆ ಗ್ಲುಕೊಮೀಟರ್ ಉಪಯೋಗಿಸಬಾರದು.
6 ತಿಂಗಳಿಗೆ ಒಮ್ಮೆ ಮನೆಯಲ್ಲಿ ಉಪಯೋಗಿಸುವ ಗ್ಲುಕೊಮೀಟರ್‌ನಿಂದ ಪಡೆದ ಫಲಿತಾಂಶ ಮತ್ತು ಆಸ್ಪತ್ರೆಗಳಲ್ಲಿ ಉಪಯೋಗಿಸುವ ಕ್ಯಾಲಿಬರೇಟೆಡ್ ಗ್ಲುಕೊಮೀಟರ್‌ನ ಫಲಿತಾಂಶಗಳನ್ನು ತಾಳೆ ನೋಡುವುದು ಉತ್ತಮ.
-ಮೊನಾಲಿಸಾ ಬಿಸ್ವಾಸ್,
ಪಿಎಚ್‌ಡಿ ಸ್ಕಾಲರ್, ಬಯೋಕೆಮೆಸ್ಟ್ರಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
-ಡಾ| ವಿಜೇತಾ ಶೆಣೈ ಬೆಳ್ಳೆ
ಅಸೋಸಿಯೇಟ್ ಪ್ರೊಫೆಸರ್, ಲ್ಯಾಬ್
ಇನ್ ಚಾರ್ಜ್, ಬಯೋಕೆಮೆಸ್ಟ್ರಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.