Bigg Boss: ಅಕ್ಕಿ ಹೇಳಿದ ಬಿಗ್‌ಬಾಸ್ ಕಥೆ!
Team Udayavani, Nov 5, 2023, 11:57 AM IST
23 ವರ್ಷಗಳ ಪತ್ರಿಕೋದ್ಯಮ ಪಯಣದಲ್ಲಿ ಸಾಕಷ್ಟು ಏರುಪೇರು, ಏಳು-ಬೀಳುಗಳನ್ನು ನೋಡಿದ್ದೇನೆ. ಆದರೆ ಬಿಗ್‌ಬಾಸ್ ಥರದ ಪೇರನ್ನ, ಬೀಳನ್ನು ಎಂದೂ ನೋಡಿರಲಿಲ್ಲ. ಆ ಮಟ್ಟಿಗೆ ನನಗೆಬಿಗ್‌ಬಾಸ್ ಕಾಡಿದೆ. ಯಾಕೆ ಹೀಗೆ? ಯಾವ ಥರ ಕಾಡಾಟ? ಮಾನಸಿಕವೇ.., ದೈಹಿಕವೇ.., ಈ ಎರಡರ ಮಿಶ್ರಣವೇ? ಈ ಎಲ್ಲದರ ಬಗ್ಗೆ ಕೊಂಚ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ನಾನು ಬಿಗ್‌ಬಾಸ್ ಮನೆಯಲ್ಲಿ ಕಳೆದದ್ದು ಸರಿಯಾಗಿ 15 ದಿವಸ. ಆದರೆ 15 ಯುಗಗಳು ಕಳೆದಂತೆ ಭಾಸವಾಗುವಷ್ಟು ಭಾರ ಮತ್ತು ಜಗತ್ತೆಲ್ಲವೂ ದೂರ, ಬಲು ದೂರ. ಆದರೆ ನಾವೋ ಎಲ್ಲರಿಗೂ ಹತ್ತಿರ. ಇದೇ ಬಿಗ್‌ಬಾಸ್‌ನ ರಹಸ್ಯ ಮತ್ತು ಶಕ್ತಿ. ಮೊದಲಿಗೆ ಈ ದೂರ ಎಂಬ ಪರಿಕಲ್ಪನೆಯನ್ನೇ ನೋಡೋಣ.
ಯಾರೋ ಒಬ್ಬರು ಪರಿಚಯಸ್ಥರು, ಯಾವುದೋ ಗೊತ್ತಿರದ ಊರಿಗೋ ಅಥವಾ ದೇಶಕ್ಕೋ ಹೋಗಿ, ಅವರನ್ನು ಭೇಟಿಯಾಗಿ ದಶಕಗಳೇ ಕಳೆದಿರುತ್ತವೆ. ಮತ್ತೆ ಅವರನ್ನು ಭೇಟಿಯಾಗುವ ಯಾವ ಅಂದಾಜಾಗಲಿ, ಕೆಲಸವಾಗಲಿ ಇರುವುದಿಲ್ಲ. ಆದರೂ ಅವರು ಹೋಗಿಬಿಟ್ರಾ ಅನ್ನೋ ಸುದ್ದಿ ಕೇಳಿದಾಗ ಮನಸ್ಸು ಭಾರವಾಗುತ್ತದೆ. ಯಾಕೆಂದರೇ ಅವರನ್ನು ಭೇಟಿಯಾಗೋ ಯಾವ ಪ್ಲಾನು ಇರದೇ ಇದ್ದರೂ, ಮುಂದೆಂದೊ ಒಂದು ದಿನ ಭೇಟಿಯಾಗುವ ನಮಗೆ ಗೊತ್ತೇ ಇಲ್ಲದ ಆಸೆ ಇರುತ್ತದೆ. ಇದು ಸಾಧ್ಯವೇ ಇಲ್ಲ, ಎಂದಾಕ್ಷಣ ಮನಸ್ಸು ತಲ್ಲಣಗೊಳ್ಳುತ್ತದೆ.
ಬಿಗ್‌ಬಾಸ್ ಮನೆಯಲ್ಲಿದ್ದಾಗ ಇದೇ ಆಗುತ್ತದೆ. ನಮ್ಮವರ್ಯಾರು ಭೇಟಿಯಾಗುವುದೇ ಇಲ್ಲವೇನೋ ಎನ್ನುವಷ್ಟು ಮನಸ್ಸು ವಿಹ್ವಲಗೊಳ್ಳುತ್ತದೆ. ಕಾರಣ ಸಂಪೂರ್ಣ disconnection ನಾವು ಯಾವ ಕಾಲ, ದೇಶದ ಬಗ್ಗೆ ಮಾತಾಡುತ್ತಿವೋ ಅದು ಇಲ್ಲವೇ ಇಲ್ಲ. ಫೋನಂತೂ ಇಲ್ಲವೇ ಇಲ್ಲ, ಟಿವಿ ಇಲ್ಲ, ಪೇಪರು-ಪುಸ್ತಕ ಎಂಥದ್ದೂ ಇಲ್ಲ. ಟೈಮಿಲ್ಲ, ಸೂರ್ಯನನ್ನು ನೋಡಿ ಟೈಮ್ ತಿಳಿದುಕೊಳ್ಳಬೇಕು. ರಾತ್ರಿ ಹೊತ್ತು ಪ್ರಕಾಶಮಾನ ಬೆಳಕಿನಿಂದ ನಕ್ಷತ್ರಗಳಿರಲೀ, ಆಕಾಶವೂ ಕಾಣುತ್ತಿರಲಿಲ್ಲ. ಈ ಮಧ್ಯೆ ಬಿಗ್‌ಬಾಸ್ ಎಂಬ ಧ್ವನಿ, ಕೇವಲ ಧ್ವನಿ ನಮ್ಮ ಇಡೀ ಲೈಫನ್ನು ಡಿಕ್ಟೇಟ್ ಮಾಡುತಿತ್ತು. ಸ್ವಾತಂತ್ರ್ಯೋತ್ತರಪೀಳಿಗೆಯ ನಮಗೂ ಸ್ವಾತಂತ್ರ್ಯ ಇಲ್ಲದಿರೋ ಸ್ಥಿತಿ ಎಂದರೇನು ಅರ್ಥವಾಗಿತ್ತು. ನನಗಂತೂ ಅರ್ಥವಾಗಿತ್ತು.
ಈ ಸ್ವಾತಂತ್ರ್ಯರಹಿತ ಸ್ಥಿತಿಗೆ ಇನ್ನೊಂದು ಮುಖ್ಯ ಕಾರಣ 24 ಗಂಟೆಯೂ ನಿಮ್ಮನ್ನು ನೋಡುವ, ಕಾಡುವ ಕ್ಯಾಮೆರಗಳು. ಸ್ವಲ್ಪ ಏರು ಪೇರಾದರೇ ಗೌರೀಶ್ ನಿಮ್ಮ ಮೈಕ್‌ನ್ನು ಸರಿಯಾಗಿ ಧರಿಸಿಕೊಳ್ಳಿ ಎಂಬ ಗಟ್ಟಿ ಅಧಿಕಾರಯುತ ಧ್ವನಿ,. ಇದೆಲ್ಲವೂ ನಿಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಆದರೆ ಎಷ್ಟೊತ್ತು ತಾನೆ ತುದಿಗಾಲಲ್ಲಿ ನಿಲ್ಲೋಕೆ ಸಾಧ್ಯ? ಜಾರಿ ಬಿದ್ದೇ ಬೀಳುತ್ತಿರಿ.
ಹಾಗೆಬಿದ್ದಾಗಲೇ ಬಿಗ್‌ಬಾಸ್‌ಗೆ ಕಾಂಟೆಂಟ್ ಸಿಗೋದು. ಅಂದ್ರೆ ನೀವು ಕ್ಯಾಮೆರಾ ಮರೆತು ಅಲ್ಲಿರೋ ಹುಡುಗಿ ಅಥವಾ ಹುಡುಗನನ್ನು ಪ್ರೇಮಿಸುವುದು ಅಥವಾ ಯಾರೊಂದಿಗೋ ಜಗಳ ಆಡುವುದು ಅಥವಾ ಎಮೋಷನಲಿ ಬ್ರೇಕ್ ಆಗಿ ಧಾರಾಕಾರವಾಗಿ ಕಣ್ಣೀರು ಸುರಿಸುವುದು. ಇದೆಲ್ಲವೂ ಬಿಗ್‌ಬಾಸ್‌ಗೆ ಪ್ರೋಮೋ ಕಾಂಟೆಂಟ್…ಒಟ್ಟಿನಲ್ಲಿ ನೀವು ನೀವಾಗಿರೋದಿಲ್ಲ…ಇದೇ ನನಗೆ ಕಷ್ಟ ಆಗಿದ್ದು.
ಬಿಗ್‌ಬಾಸ್‌ನಲ್ಲಿ ನಾನು ಕಲಿತುಕೊಂಡ ಮತ್ತೂಂದು ಅತಿದೊಡ್ಡ ಪಾಠವೆಂದರೇ, ಜೀವನದಲ್ಲಿ ಬೆಲೆ ತೆರದೇ ನಮಗೇನೂ ದಕ್ಕುವುದಿಲ್ಲ. ಬಿಗ್‌ಬಾಸ್‌ನಲ್ಲಿ ರೇಶನ್ ಸಿಗಬೇಕೆಂದರೂ ನೀವು ಆಟ ಗೆಲ್ಲಲೇ ಬೇಕು. ಊಟ ಬೇಕೆಂದರೂ ಟಾಸ್ಕ್ ಮಾಡಲೇಬೇಕು.
ಇನ್ನು ನಮ್ಮ ಆತುರಗೇಡಿತನದಿಂದ ಕಾಫಿ ಕಳೆದುಕೊಂಡದ್ದು ನೆನಪಾಗಿ ಈಗಲೂ ಹೊಟ್ಟೆ ಉರಿಯುತ್ತದೆ. ಇದು ಬಿಗ್‌ಬಾಸ್‌ನ ಶಕ್ತಿ. ಪ್ರತಿಯೊಂದೂ ಅಮೂಲ್ಯ ಎಂದೆನಿಸತೊಡಗುತ್ತದೆ. ಪ್ರತಿಯೊಂದು ದೇವ ದುರ್ಲಭ ಎಂದೆನಿಸತೊಡಗುತ್ತದೆ. ಸಂಕಟ ಬಂದಾಗ ವೆಂಕಟರಮಣ ಇಂಥ ಸಂದರ್ಭದಲ್ಲಿಯೇ ಹುಟ್ಟಾ ನಾಸ್ತಿಕನಾದ ನನಗೂ ಆ ಸಂಕಟ ಮೋಚನನ ಮೊರೆ ಹೋಗಿದ್ದು – ದೇವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ- ನಾನು ಮೇಲೆ ಹೇಳಿದ ಹಾಗೆ ಎರಡನೇ ದಿನ ಮಾತ್ರ ಸಂಭ್ರಮ, ಸಂತೋಷ, ಅದಾದ ಮೇಲೆ ಸಂಕಟ, ಬರೀ ಸಂಕಟ. ನನಗೆ ಹೀಗೆ ಆಗಿದ್ದಕ್ಕೆ ಕಾರಣ ಏನಂದರೇ, ನನಗೆ ಎಲ್ಲ ಸಿಲ್ಲಿ ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಬೇಕು ಎನ್ನಿಸೋದಿಲ್ಲ. ಆದರೆ ಬಿಗ್‌ಬಾಸ್ ಮನೆಯಲ್ಲಿ ಸಿಲ್ಲಿ ಎಂಬುದು ಯಾವುದಿಲ್ಲ. ಎಲ್ಲವೂ ಭಾರಿ ಇಂಪಾರ್ಟಂಟೆ.
ಪ್ರತಾಪ್ ಮಧ್ಯ ರಾತ್ರಿಯಲ್ಲಿ ಭಾಗ್ಯಶ್ರೀ ಅವರಿಗೆ ರೊಟ್ಟಿ ಬಳಿದು ಕೊಟ್ಟದ್ದ ಸರಿಯೋ ತಪ್ಪು ನಾನು 2 ನಿಮಿಷದಲ್ಲಿ ನಿರ್ಧಾರ ಮಾಡಬಲ್ಲೇ ಆದರೆ ಬಿಗ್‌ಬಾಸ್‌ನಲ್ಲಿ ಅದು 36 ಗಂಟೆಗಳ ಕಾಲ ಚರ್ಚೆಯಾಗುತ್ತದೆ. ಇಲ್ಲಿಂದ ನನಗೆ ಸಣ್ಣಗೆ ರೇಜಿಗೆ ಹುಟ್ಟಲು ಶುರುವಾಗಿ, ಸಂಗೀತಾಗೆ ಸಗಣಿ ಸ್ನಾನ ಮಾಡಿ ಮುಗಿಸುವಷ್ಟರಲ್ಲಿ ನನಗೆ ಇಲ್ಲಿಂದ ಕಳಚ್ಕೋಬೇಕು ಅನ್ನೋ ನಿರ್ಧಾರ ಗಟ್ಟಿಯಾಗತೊಡಗಿತು. ಅದೆಲ್ಲವೂ ಒಂದು ಆಟ, ಆಟದ ನಿಯಮಗಳೇ ಹಾಗೆ ಅನ್ನೋದು ಸರಿಯೇ.., ಆದರೆ ಎಲ್ಲ ಆಟಗಳು ಎಲ್ಲರಿಗೂ ಅಲ್ಲವಲ್ಲ ಎಂಬಲ್ಲಿಗೆ….! ಅದ್ಯಾವತ್ತೋ ಮೇಲುಕೋಟೆಗೆ ಹೋಗೋದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯುತಿತ್ತು.
ನನ್ನ ಮನಸ್ಸಿನತೊಳಲಾಟದಲ್ಲಿ ದೇವರೇ ಇಲ್ಲಿಂದ ಮುಕ್ತಿ ಕೊಡಿಸು, ಮೇಲುಕೋಟೆಗೆ ಬರ್ತಿನಿ ಅಂತ ನನಗೆ ಗೊತ್ತಿಲ್ಲದೇ ಹರಕೆ ಹೊತ್ತು ಬಿಟ್ಟಿದ್ದೆ!
ಪೂರ್ವ ನಿಯೋಜಿತವೇ?:
ಈ ಜಗಳ. ಪ್ರೇಮ, ಇವೆಲ್ಲವೂ ಮುಂಚೆನೇ ಫಿಕ್ಸ್ ಮಾಡಿ ಮಾಡಿಸಲಾಗುತ್ತಾ… ಹೇಗೆ? ಬಿಗ್‌ಬಾಸ್ ಪೂರ್ವ ನಿಯೋಜಿತವೇ? ಇದಕ್ಕೆ ನನ್ನ ಉತ್ತರ, ನೋ..! ಆದರೆ ಇಲ್ಲಿ ಒಂದೆರಡು ಸೂಕ್ಷ್ಮಗಳಿವೆ. ಅವುಗಳಲ್ಲಿ ಮುಖ್ಯವಾಗಿ ದಿನದ 24 ಗಂಟೆಯೂ ಮನೆಯ ಬೇರೆ ಬೇರೆ ಕಡೆ, ಬೇರೆಬೇರೆ ಘಟನೆಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ಒಂದೆಡೆ ಒಂದಿಬ್ಬರು ಮಹಿಳೆಯರು ಅಡುಗೆ ಮನೆಯಲ್ಲಿ ಗಾಸಿಪ್ ಮಾಡ್ತಾ ಇರ್ತಾರೆ, ಅದೇ ವೇಳೆ ಒಂದು ಯುವ ಜೋಡಿ ತನ್ನ ಪ್ರೇಮ ನಿವೇದಿಸುವ ಚಟುವಟಿಕೆಯೂ ಮಾಡುತ್ತಿದೆ.
ಇದೇ ಸಂದರ್ಭದಲ್ಲಿ ಮತ್ತೂಬ್ಬ ತನ್ನ ಕಾಮಿಡಿ ಪ್ರದರ್ಶನ ಮಾಡ್ತಾ ಇರ್ತಾರೆ. ಇವುಗಳಲ್ಲಿ ಯಾವುದನ್ನು ಬಿಗ್‌ಬಾಸ್ ತೋರಿಸ್ತಾನೆ? ಯಾವುದೋ ತನ್ನ ಕಥೆಯ ಪರಿಧಿಯಲ್ಲಿ ಬರುತ್ತದೋ ಅದನ್ನು ತೋರಿಸಲಾಗುತ್ತದೆ. ಅಂದರೇ ಮನೆಯಲ್ಲಿ ಏನೇ ಆದರೂ, ಯಾರು ಏನೇ ಮಾಡಿದರೂ, ಅದನ್ನು ತೋರಿಸಬೇಕೋ ಬೇಡವೋ ಅನ್ನೋದು ಬಿಗ್‌ಬಾಸ್ ನಿರ್ಧಾರ.ಇಲ್ಲಿ ನಮ್ಮದೇ ಕಥೆಯನ್ನು ಬಿಗ್‌ಬಾಸ್ ತನ್ನ ಅನುಕೂಲ ಅಥವಾ ಜನರ ಆಸಕ್ತಿಗೆ ತಕ್ಕಂತೆ ಬದಲಾಯಿಸುತ್ತಾ ಹೋಗುತ್ತಾನೆ…! ಹೀಗೆ ಬಿಗ್‌ಬಾಸ್ ಸಂಪೂರ್ಣ ಸ್ಕ್ರಿಪ್ಟೆಡ್ ಅಲ್ಲದೇ ಹೋದರೂ ಜನ ಏನನ್ನು ನೋಡಲು ಬಯಸುತ್ತಾರೆ ಅಥವಾ ಏನನ್ನು ತೋರಿಸಬೇಕು ಅಥವಾ ಹೇಗೆ ತೋರಿಸಬೇಕು ಎನ್ನುವುದು ಬಿಗ್‌ಬಾಸ್‌ನ ನಿರ್ಧಾರ. ಹೀಗಾಗಿ ಎಲಿಮಿನೇಟ್ ಆಗಿ ಹೊರ ಬಂದಾಗ ಸ್ಪರ್ಧಿಗಳಿಗೆ ಮೊದಲು ಆಗುವುದು ಆಶrರ್ಯ, ಆಘಾತ.
ಒಟ್ಟಿನಲ್ಲಿ ನಾವು ಅಂದುಕೊಂಡಷ್ಟು ಸುಲಭ ಅಲ್ಲ ಈ ಬಿಗ್‌ಬಾಸ್.., ಆದರೆ ಜೀವನದಲ್ಲಿ ಒಂದಲ್ಲ ಒಂದು ದಿನ ಬಿಗ್‌ಬಾಸ್ ಮನೆಗೆ ಹೋಗಬೇಕು ಅಂತ ಬಿಗ್‌ಬಾಸ್ ನೋಡುವ ಪ್ರತಿಯೊಬ್ಬರಿಗೂ ಅನ್ನಿಸಿರುತ್ತದೆ. ಆದರೆ ಈ ಭಾಗ್ಯ ಸಿಗುವುದು ಕೆಲವೊಬ್ಬರಿಗೆ ಮಾತ್ರ, ನನಗೆ ಈ ಅವಕಾಶ ಸಿಕ್ಕಿರುವ ಬಗ್ಗೆ ನನಗೆ ಖುಷಿಯೇ ಇದೆ. ಆದರೆ ಅಲ್ಲಿಂದ ಸಾಧ್ಯವಾದಷುc ಬೇಗ ಬಂದಿರೋ ಬಗ್ಗೆ ಇನ್ನೂ ಹೆಚ್ಚಿನ ಖುಷಿ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.