Story: ಪುತ್ರಶೋಕದ ಸೇಡಿನ ಜ್ವಾಲಾಮುಖಿ


Team Udayavani, Nov 5, 2023, 5:15 PM IST

Story: ಪುತ್ರಶೋಕದ ಸೇಡಿನ ಜ್ವಾಲಾಮುಖಿ

ನಾನು ಜ್ವಾಲಾ. ನರ್ಮದಾ ನದಿತೀರದ ಮಾಹಿಷ್ಮತೀ ನಗರಿಯ ಅರಸು ನೀಲಧ್ವಜ. ಸುನಂದೆ ಮತ್ತು ನಾನು ನೀಲಧ್ವಜನ ಪತ್ನಿಯರು. ಸುನಂದೆಯ ಮಗ ಪ್ರವೀರ. ನನ್ನ ಮಗಳು ಸ್ವಾಹೆ. ಮಗಳನ್ನು ಅಗ್ನಿದೇವನಿಗೆ ಮದುವೆ ಮಾಡಿದ್ದೆವು.

ಅದೊಂದು ದಿನ ತನ್ನ ಹೆಂಡತಿಯಾದ ಮದನಮಂಜರಿಯೊಂದಿಗೆ ವನವಿಹಾರಕ್ಕೆ ಹೋಗಿದ್ದ ಪ್ರವೀರ ಅವಸರದಲ್ಲಿ ಹಿಂದಿರುಗಿ ಬಂದ. “ಪಿತಾಶ್ರೀ, ಇಂದು ನಮ್ಮ ವನದಲ್ಲಿ ಹಸ್ತಿನಾವತಿಯ ಪಾಂಡವರ ಅಶ್ವಮೇಧದ ಕುದುರೆಯನ್ನು ನೋಡಿದೆ. ಅದರ ಹಣೆಯಲ್ಲಿ “ಬಲವುಳ್ಳವರು ಕಟ್ಟಿ ಯುದ್ಧ ಮಾಡಿ. ಬಲವಿಲ್ಲದವರು ಕಪ್ಪ ಕಾಣಿಕೆಯನ್ನು ಕೊಟ್ಟು ಶರಣಾಗಿ’ ಎನ್ನುವ ಬರಹವಿತ್ತು. ಕುದುರೆಯ ಬೆಂಗಾವಲಿಗಾಗಿ ಅರ್ಜುನ ಬಂದಿರುವನೆಂಬ ವಿಷಯವೂ ತಿಳಿಯಿತು.

“ಎಳೆದು ತಂದು ಕಟ್ಟಿಬಿಡಲೇ?’ ಎಂಬಂತೆ ಒಮ್ಮೆ ಯೋಚಿಸಿದೆ. ಆದರೆ ನಿಮ್ಮೆಲ್ಲರ ಅಭಿಪ್ರಾಯ ತಿಳಿದು ಮುಂದುವರೆಯೋಣವೆಂದು ಹಿಂದಿರುಗಿ ಬಂದೆ. ನಿಮ್ಮ ಅಭಿಪ್ರಾಯವೇನು?’ ಎಂದ ಪ್ರವೀರ. “ಓಹ್‌ ಹೌದೇ? ಅದು ಪಾಂಡವರ ಅಶ್ವಮೇಧದ ಕುದುರೆಯೆಂದಾದ ಮೇಲೆ ಸಂಧಿ ಮಾಡಿಕೊಳ್ಳುವುದೇ ಒಳಿತು. ಪಾಂಡವರನ್ನು ಎದುರಿಸಿ, ಗೆಲ್ಲುವುದು ನಮ್ಮಿಂದ ಸಾಧ್ಯವಿಲ್ಲದ ಮಾತು. ಅದರಲ್ಲಿಯೂ ಕುದುರೆಯ ರಕ್ಷಣೆಗೆ ಬಂದವನು ಪರಮ ಸಾಹಸಿ ಅರ್ಜುನನೆಂದಾದ ಮೇಲೆ ಯುದ್ಧದಲ್ಲಿ ಸೋಲು ಖಚಿತ. ಗೌರವಯುತವಾಗಿ ಅವರನ್ನು ಅರಮನೆಗೆ ಕರೆದು ಕಪ್ಪ-ಕಾಣಿಕೆಗಳನ್ನು ಕೊಟ್ಟು ಕಳಿಸೋಣ. ಮುಂದಿನ ದಿನಗಳಲ್ಲಿ ನಾವು ಅವರ ಸಾಮಂತರಾಗಿ ಇರಬೇಕಾಗುತ್ತದೆ.

ಆದರೂ ಹಸ್ತಿನಾವತಿಯ ಚಕ್ರವರ್ತಿ ಯುಧಿಷ್ಠಿರನ ಬಗ್ಗೆ ಎಲ್ಲರಿಗೂ ಸದಭಿಪ್ರಾಯವಿದೆ. ಅನಿವಾರ್ಯವಾಗಿ ಏಕೆ ಕಷ್ಟಗಳನ್ನು ಆಹ್ವಾನಿಸಿಕೊಳ್ಳಬೇಕು? ಪ್ರವೀರ ನೀನು ಹಸ್ತಿನಾವತಿಗೆ ಕೊಡಬೇಕಿರುವ ಕಪ್ಪ-ಕಾಣಿಕೆಗಳನ್ನು ಸಿದ್ಧಪಡಿಸು. ಮಂತ್ರಿಗಳು ನಿನಗೆ ಸಹಕರಿಸುವರು. ಸ್ವತಃ ನಾನೇ ನಗರದ ಮುಖ್ಯದ್ವಾರದವರೆಗೆ ಹೋಗಿ ಅರ್ಜುನಾದಿಗಳನ್ನು ಕರೆತರುತ್ತೇನೆ’. ಸಂಭ್ರಮಿಸುತ್ತಾ ನೀಲಧ್ವಜ ಹೊರಟೇ ಬಿಟ್ಟರು! ಸಾಹಸ ಪ್ರವೃತ್ತಿಯ ನನಗೆ ಇದನ್ನು ಕೇಳಿ ಮೈಯುರಿಯಿತು. “ನೀವು ಕ್ಷತ್ರಿಯ ಗಂಡಸಾಗಿದ್ದರೆ ಅಶ್ವಮೇಧದ ಕುದುರೆ ಕಟ್ಟಿ, ಸೆಣೆಸಿ, ಅರ್ಜುನನನ್ನು ಗೆದ್ದು ತೋರಿಸಿ’ ಎಂದು ಸವಾಲೆಸೆದೆ. “ಅರ್ಜುನನಿಗೆ ಕೃಷ್ಣದೇವನ ಸಹಾಯವಿದೆ. ಕುರುಕ್ಷೇತ್ರದ ಯುದ್ಧದ ವಿಚಾರಗಳು ನಿನಗೂ ತಿಳಿದೆಯಲ್ಲವೇ?’ ಎಂದರು ನೀಲಧ್ವಜ.

“ಆದರೇನು? ನಮಗೂ ನಮ್ಮ ಅಳಿಯ ಅಗ್ನಿದೇವನ ಸಹಾಯವಿದೆ. ನೀವೂ ಕ್ಷತ್ರಿಯ ಕುಲದಲ್ಲಿ ಹುಟ್ಟಿದವರು ಎಂಬ ವಿಷಯ ನೆನಪಿರಲಿ. ಯುದ್ಧವನ್ನು ಮಾಡಿದ ನಂತರ ಸೋಲೋ, ಗೆಲುವೋ, ಸಂಧಿಯೋ ನಿರ್ಣಯವಾಗಬೇಕು. ಸೋತರೂ ಪ್ರಯತ್ನಿಸಿದ ಸಮಾಧಾನವಾದರೂ ದೊರೆಯುತ್ತದೆ. ಪ್ರಯತ್ನವನ್ನೇ ಮಾಡದಿದ್ದರೆ ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಳ್ಳುವಂತೆ. ಅದು ಹೇಡಿಗಳ ಲಕ್ಷಣ. ನನಗೆ ಅದು ಒಪ್ಪಿಗೆಯಿಲ್ಲ. ಮಾಹಿಷ್ಮತೀ ನಗರಿಯ ಅರಸು ಇಷ್ಟು ನಿರ್ವೀರ್ಯನೆಂದು ಗೊತ್ತಿದ್ದರೆ…’ ನಾನು ವಾಕ್ಯವನ್ನು ಅರ್ಧಕ್ಕೇ ನಿಲ್ಲಿಸಿದೆ. ನೀಲಧ್ವಜರಿಗೆ ನಾನು ಮಾಡಿದ ಅವಹೇಳನವನ್ನು ಸಹಿಸಲಾಗಲಿಲ್ಲ. ಪಾಂಡವರ ಅಶ್ವಮೇಧದ ಕುದುರೆಯನ್ನು ಕಟ್ಟಲಾಯಿತು. ನಾನು ಆಳಿಯನಾದ ಅಗ್ನಿ ಕರೆಯಿಸಿಕೊಂಡೆ.

ಆತ ನನ್ನ ಅಪೇಕ್ಷೆಯನ್ನು ಮನ್ನಿಸಿ ಬಂದು, ತನ್ನ ಪ್ರತಾಪವನ್ನು ತೋರಿಸಿದ. ಆದರೆ ಯುದ್ಧದಲ್ಲಿನ ಪರಿಣಾಮ ನನ್ನ ಅಪೇಕ್ಷೆಗಿಂತ ಬೇರೆಯೇ ಆಯಿತು! ಎದುರಾಳಿಯಾಗಿ ಬಂದ ಅರ್ಜುನ ಅಗ್ನಿಯನ್ನು ಕುರಿತು, “ನಿನ್ನ ಮಗಳಾದ ಪಾಂಚಾಲಿಯ ಗಂಡ ನಾನು. ಅದ್ದರಿಂದ ನಿನಗೆ ಅಳಿಯ. ಅಲ್ಲದೆ ನಿನಗೆ ಖಾಂಡವ ವನವನ್ನು ಸಮರ್ಪಿಸಿ, ನಿನ್ನನ್ನು ಮೆಚ್ಚಿಸಿದವ ನಾನು. ಇಂದು ನಿನ್ನತ್ತೆಯ ಸಂತೃಪ್ತಿಗೆ ಬೇಕಾಗಿ ನಮ್ಮ ಮೇಲೆ ನಿನ್ನ ಪ್ರತಾಪವನ್ನು ತೋರುವುದು ತರವಲ್ಲ. ಅನುಗ್ರಹಿಸು’ ಎಂದು ಬೇಡಿದ.

ಅಗ್ನಿ ಅರ್ಜುನನಿಗೆ ಒಲಿದುಬಿಟ್ಟ! ಯುದ್ಧವನ್ನು ಪ್ರಾರಂಭಿಸಿ ಆಗಿತ್ತು. ಅರ್ಧದಲ್ಲಿ ನಿಲ್ಲಿಸುವಂತಿರಲಿಲ್ಲ. ಸುನಂದೆಯ ಮಗ ಪ್ರವೀರ ತನ್ನ ಶಕ್ತಿ ಮೀರಿ ಹೋರಾಡಿ, ಯುದ್ಧದಲ್ಲಿ ಸಾವನ್ನಪ್ಪಿದ. ಪುತ್ರ ಶೋಕದಿಂದ ಸುನಂದೆ ಕಂಗೆಟ್ಟಳು. ನೀಲಧ್ವಜರೂ ಗಾಯಗೊಂಡು ಹಿಂದಿರುಗಿದರು. ಆಗಲೂ ನೀಲಧ್ವಜರಿಗೆ ಅರ್ಜುನನೊಂದಿಗೆ ಸಂಧಿಯದೇ ಕನಸು. ಮಗ ಪ್ರವೀರನನ್ನು ಕೊಂದ ಅರ್ಜುನನ ಮೇಲೆ ನನಗೆ ತೀವ್ರ ಅಸಮಾಧಾನವಾಗಿತ್ತು.

“ಮಗ ಪ್ರವೀರನನ್ನು ರಕ್ಷಿಸಲಂತೂ ಆಗಲಿಲ್ಲ. ಕಡೇಪಕ್ಷ ಮಗನನ್ನು ಕೊಂದ ಆ ಅರ್ಜುನನಿಗೆ ಸೋಲುಣ್ಣಿಸುವಲ್ಲಿಯೂ ನಿಮ್ಮ ಅಸಮರ್ಥತೆ ತೋರಿದಿರಲ್ಲ. ಛೀ! ಹೇಡಿಗಳು ನೀವು. ನಿಮ್ಮಿಂದ ಏನಾದೀತು? ನಾನೇ ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳುತ್ತೇನೆ’ ಬಿರುನುಡಿಗಳನ್ನು ನುಡಿದು ಅರಮನೆಯಿಂದ ಹೊರಟುಬಿಟ್ಟೆ. ಗಂಗಾನದಿ ಎದುರಾಯಿತು. ಗಂಗೆಯ ಬಗೆಗೆ ಕ್ರೋಧ ಉಕ್ಕಿತು. ಅಂಬಿಗರು ನನ್ನನ್ನು ಆಚೆಯ ದಡಕ್ಕೆ ಕರೆದೊಯ್ಯಲು ಸಿದ್ಧರಾದರು.

“ಗಂಗೆಯ ಒಂದು ಹನಿ ನೀರೂ ನನ್ನ ಮೈಗೆ ತಾಕದಂತೆ ಈ ನದಿಯನ್ನು ಉತ್ತರಿಸಬೇಕೆಂಬ ನನ್ನಿಚ್ಛೆ. ಆ ರೀತಿಯಲ್ಲಿ ಯಾರು ನನ್ನನ್ನು ಆಚೆಯ ತೀರಕ್ಕೆ ಕರೆದೊಯ್ಯಬಲ್ಲಿರಿ?’ ಎಂದೆ. ಅಂಬಿಗರು ಅಚ್ಚರಿಯಿಂದ ಪರಸ್ಪರ ಮುಖಮುಖ ನೋಡಿಕೊಂಡರು. ರಾಣಿಯಾದ ನನ್ನಿಂದ ತಮಗೆ ಇನ್ನು ಯಾವ ಶಿಕ್ಷೆ ಕಾದಿದೆಯೋ ಎನ್ನುವ ಭಯದಿಂದ ನಡುಗುತ್ತಾ ಕೈಮುಗಿದು ನಿಂತರು. ನನ್ನ ಕೋರಿಕೆಯನ್ನು ಪೂರೈಸಲು ಯಾರೂ ಮುಂದೆ ಬರಲಿಲ್ಲ. ನನ್ನ ಕೋರಿಕೆಯನ್ನು ಕೇಳಿ ಆಶ್ಚರ್ಯಗೊಂಡ ಗಂಗೆ ನನ್ನೆದುರು ಪ್ರತ್ಯಕ್ಷಳಾದಳು. “ಯಾಕೆ ಜ್ವಾಲೆ ಹಾಗೆನ್ನುವೆ? ಈ ಲೋಕದ ಜನರಿಗೆ ಗಂಗೆ ಎಂದರೆ ಎಷ್ಟೊಂದು ಭಕ್ತಿ ಭಾವವಿದೆ. ಎಲ್ಲರೂ ನನ್ನಲ್ಲಿ ಮಿಂದು ತಮ್ಮ ಪಾಪವನ್ನು ಕಳೆದುಕೊಳ್ಳಲು ಬಯಸುತ್ತಾರೆ.

ಆದರೆ ನೀನೇಕೆ ಹೀಗೆ ಹೇಳುತ್ತಿರುವೆ?’ ಎಂದಳು. “ಇದೇನಿದು ಗಂಗೆ? ಕುರುಕ್ಷೇತ್ರ ಯುದ್ಧದ ವಿಷಯಗಳನ್ನು ನೀನು ಪೂರ್ಣವಾಗಿ ಮರೆತೇ ಬಿಟ್ಟಿರುವೆ ಎಂದು ಕಾಣಿಸುತ್ತಿದೆ. ಶಿಖಂಡಿಯನ್ನು ಎದುರು ನಿಲ್ಲಿಸಿ ಮೋಸದಿಂದ ನಿನ್ನ ಮಗ ಭೀಷ್ಮನನ್ನು ಕೊಲ್ಲಿಸಿದ ಆ ಅರ್ಜುನನ ಮೇಲೆ ನಿನಗೆ ಸೇಡಿಲ್ಲವೇ? ಆ ಸೇಡು ತೀರಿಸಿಕೊಳ್ಳುವಲ್ಲಿ ನೀನು ಅಸಮರ್ಥಳಾಗಿರುವೆ. ಅರ್ಜುನನ ಮೇಲೆ ದ್ವೇಷ ತೀರಿಸಿಕೊಳ್ಳಲು ಹೊರಟಿರುವ ನನಗೆ ನಿನ್ನಂತಹ ಹೇಡಿಯ ಸ್ಪರ್ಶವೂ ನಿಷಿದ್ಧ. ನಿನಗೆ ನಿನ್ನ ಮಗನ ಮೇಲೆ ಅಭಿಮಾನ, ಪ್ರೀತಿ ಇದ್ದದ್ದೇ ಹೌದಾದರೆ, ಅರ್ಜುನನ ಮೇಲೆ ಸೇಡು ತೀರಿಸಿಕೊ, ನೋಡೋಣ…’ ಎಂದು ಸವಾಲು ಹಾಕಿದೆ.

ಗಂಗೆಗೆ ನನ್ನ ಮಾತಿನಲ್ಲಿ ಸತ್ಯ ಕಂಡಿತು. ಆಕೆಯೊಳಗಿನಿಂದ ದ್ವೇಷದ ಜ್ವಾಲೆ ಜ್ವಲಿಸಿತು. ಕ್ಷಣ ಮಾತ್ರವೂ ವಿಳಂಬಿಸದೆ, “ನನ್ನ ಮಗನನ್ನು ಮೋಸದಿಂದ ಕೊಂದ ಅರ್ಜುನನಿಗೆ ಅವನ ಮಗನಿಂದಲೇ ಮರಣ ಬರಲಿ’ ಎಂದು ಶಪಿಸಿಬಿಟ್ಟಳು! ಇದನ್ನೇ ತಾನೆ ನಾನು ಬಯಸಿದ್ದು? ಸ್ವಲ್ಪ ಸಮಾಧಾನವಾಯಿತಾದರೂ ಪ್ರವೀರನ ಮುಖ ಕಣ್ಮುಂದೆ ಬಂದು ದ್ವೇಷದ ಜ್ವಾಲೆ ಮತ್ತೆ ಪ್ರಜ್ವಲಿಸಿತು. ಪುತ್ರಶೋಕದ ಪ್ರತೀಕಾರಕ್ಕೆ ಮನಸ್ಸು ಹಾತೊರೆಯಿತು. ನೇರ ಯುದ್ಧದಲ್ಲಿ ನನಗೆ ಅರ್ಜುನ ನೊಡನೆ ಹೋರಾಡಿ ಗೆಲ್ಲಲು ಸಾಧ್ಯವಿಲ್ಲವೆಂಬುದು ಗೊತ್ತಿತ್ತು. ಪರ್ಯಾಯ ಮಾರ್ಗವೇನು ಎಂಬ ಬಗ್ಗೆ ಯೋಚಿಸಿದೆ. ನನ್ನ ಆದೇಶದಂತೆ ಚಿತೆ ಸಿದ್ಧವಾಯಿತು. “ಅರ್ಜುನನ ಮಗ ಬಬ್ರುವಾಹನನ ಬತ್ತಳಿಕೆಯಲ್ಲಿನ ಬಾಣವಾಗಿ ಸೇರಿ ಅರ್ಜುನನ ಪ್ರಾಣ ತೆಗೆಯುತ್ತೇನೆ’ – ಎಂದು ಪ್ರತಿಜ್ಞೆಗೈದೆ.

ಕ್ಷಣದಲ್ಲಿಯೇ ಅಗ್ನಿಪ್ರವೇಶವನ್ನು ಮಾಡಿದೆ. ನಾನೀಗ ಮಾನವ ರೂಪಿನ ಜ್ವಾಲೆಯಲ್ಲ. ಅರ್ಜುನನ ಮೇಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಬೇಕಾಗಿ ಬಬ್ರುವಾಹನನ ಬತ್ತಳಿಕೆಯನ್ನು ಸೇರಿಕೊಳ್ಳಲು ಹೊರಟಿರುವ ಬಾಣ. ಅಜ್ಞಾತವಾಗಿ ಅಲ್ಲಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ. ಸಕಾಲದಲ್ಲಿ ಬಬ್ರುವಾಹನ ಬಿಲ್ಲಿನಿಂದ ಚಿಮ್ಮಿ, ಆ ದುರುಳ ಅರ್ಜುನನ ಪ್ರಾಣ ತೆಗೆಯುತ್ತೇನೆ. ಆಗಲೇ ನನ್ನ ಹಾಗೂ ನನ್ನ ಮಗ ಪ್ರವೀರನ ಆತ್ಮಕ್ಕೆ ಶಾಂತಿ.

– ಸುರೇಖಾ ಭೀಮಗುಳಿ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.