Isrel vs Hamas ಯುದ್ದೋನ್ಮಾದ ತಗ್ಗಿಸೀತೇ ಆ್ಯಂಟನಿ ಬ್ಲಿಂಕೆನ್ ರಾಜ ತಾಂತ್ರಿಕ ಪ್ರವಾಸ?
ಈ ವಾರ ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತಕ್ಕೆ ಬ್ಲಿಂಕೆನ್ ಭೇಟಿ ನೀಡಲಿದ್ದು...
Team Udayavani, Nov 7, 2023, 5:44 AM IST
ಹಮಾಸ್ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ಸೇನಾ ಪಡೆಗಳು ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿಗಳನ್ನು ಮುಂದುವರಿಸಿರುವಂತೆಯೇ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ರಾಜ ತಾಂತ್ರಿಕ ಪ್ರವಾಸಗಳಲ್ಲಿ ವ್ಯಸ್ತರಾಗಿದ್ದಾರೆ. ಸದ್ಯ ಯುದ್ಧ ಸಂಘರ್ಷ ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿರುವ ಬ್ಲಿಂಕೆನ್ ಅವರು, ಈ ವಾರದುದ್ದಕ್ಕೂ ವಿದೇಶಗಳಿಗೆ ಸರಣಿ ಪ್ರವಾಸ ಕೈಗೊಳ್ಳಲಿದ್ದು ಮಹತ್ವದ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲಿದ್ದಾರೆ. ಈ ವಾರ ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತಕ್ಕೆ ಬ್ಲಿಂಕೆನ್ ಭೇಟಿ ನೀಡಲಿದ್ದು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ತ್ವೇಷಮಯ ವಾತಾವರಣವನ್ನು ಒಂದಿಷ್ಟು ತಿಳಿಗೊಳಿಸಲು ಮುನ್ನುಡಿಯಾದೀತು ಎಂಬ ಆಶಯ ಜಾಗತಿಕ ಸಮುದಾಯದ್ದಾಗಿದೆ.
ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ದಾಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸಾವುನೋವು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕದನ ವಿರಾಮ ಅಥವಾ ಹಮಾಸ್ ಉಗ್ರರ ಅಡುತಾಣಗಳನ್ನು ಗುರಿ ಯಾಗಿಸಿ ಸೀಮಿತ ದಾಳಿಯ ತಂತ್ರಕ್ಕೆ ಶರಣಾಗುವಂತೆ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಸಮುದಾ ಯದಿಂದ ಒತ್ತಡಗಳು ಹೆಚ್ಚತೊಡಗಿವೆ. ಗಾಜಾಪಟ್ಟಿ ಯಲ್ಲಿ ನಾಗರಿಕರು ಹಸಿವಿನಿಂದ ಸಾವನ್ನಪ್ಪುತ್ತಿ ರುವುದು, ಅವರಿಗೆ ಸೂಕ್ತ ಆರೋಗ್ಯ ಸೇವೆಗಳೂ ಲಭಿ ಸದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ದಾಳಿ ಯನ್ನು ಸ್ಥಗಿತಗೊಳಿಸುವಂತೆ ಬೆಂಬಲಿತ ರಾಷ್ಟ್ರಗಳು ಕೂಡ ಈಗ ಇಸ್ರೇಲ್‌ಗೆ ಮನವಿ ಮಾಡಿಕೊಳ್ಳ ಲಾರಂಭಿಸಿವೆ. ಆದರೆ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ ತಿರುಗಿ ಬೀಳಲು ಷಡ್ಯಂತ್ರ ರೂಪಿಸಿದ್ದು ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಎರಗಲು ಸಜ್ಜಾ ಗಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಇಸ್ರೇಲ್ ಈ ಕ್ಷಣದಲ್ಲಿ ಯುದ್ಧದಿಂದ ಹಿಂದೆ ಸರಿ ಯುವ ಪ್ರಶ್ನೆಯೇ ಇಲ್ಲ ಎಂದು ಸಾರಿದೆ. ಇದರ ಹೊರತಾಗಿಯೂ ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಕನಿಷ್ಠ ತಾತ್ಕಾಲಿಕ ವಿರಾಮ ಹಾಕುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಸಂಘರ್ಷ ಆರಂಭವಾದಾಗಿ ನಿಂದಲೂ ಇಸ್ರೇಲ್ ಪರವಾಗಿ ನಿಂತಿರುವ ಅಮೆರಿಕ ಕೂಡ ಈಗ ಕದನ ವಿರಾಮದ ಬಗೆಗೆ ಒಲವು ವ್ಯಕ್ತ ಪಡಿಸತೊಡಗಿದೆ. ಇದೇ ಹಿನ್ನೆಲೆಯಲ್ಲಿ ಈಗ ಮಧ್ಯ ಪ್ರಾಚ್ಯ ರಾಷ್ಟ್ರಗಳ ಪ್ರವಾಸದಲ್ಲಿರುವ ಆ್ಯಂಟನಿ ಬ್ಲಿಂಕೆನ್ ಅಲ್ಲಿನ ಪರಿಸ್ಥಿತಿಯ ಅವಲೋಕನದ ಜತೆಜತೆಯಲ್ಲಿ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಹಾಕುವ ದಿಸೆಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರವಾಸ ಅಂತ್ಯಗೊಳ್ಳುತ್ತಿದ್ದಂತೆ ಬ್ಲಿಂಕೆನ್ ಅವರ ತ್ರಿವಳಿ ರಾಷ್ಟ್ರಗಳ ಪ್ರವಾಸ ಆರಂಭಗೊಳ್ಳಲಿದೆ.
ನ. 7 ಮತ್ತು 8ರಂದು ಜಪಾನ್ ರಾಜಧಾನಿ ಟೋಕಿ ಯೊದಲ್ಲಿ ನಡೆಯಲಿರುವ ಜಿ 7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿರುವ ಬ್ಲಿಂಕೆನ್ ಅವರು ಇಸ್ರೇಲ್-ಹಮಾಸ್ ಸಂಘರ್ಷ, ರಷ್ಯಾ- ಉಕ್ರೇನ್ ಕದನ ಮತ್ತು ಇಂಡೋ-ಫೆಸಿಫಿಕ್ ವಲಯ ದಲ್ಲಿನ ಚೀನದ ಆಕ್ರಮಣಕಾರಿ ನಿಲುವಿನ ಕುರಿತಂತೆ ಜಿ 7 ದೇಶಗಳ ತನ್ನ ಸಹವರ್ತಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ಇದರ ಜತೆಯಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಮತ್ತು ವಿದೇಶಾಂಗ ಸಚಿವ ಯೋಕೊ ಕಾಮಿಕಾವಾ ಅವ ರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ವೇಳೆ ಜಾಗ ತಿಕ ಪರಿಸ್ಥಿತಿಯ ಜತೆ ಯಲ್ಲಿ ಇಂಡೋ-ಫೆಸಿಫಿಕ್ ವಲ ಯದಲ್ಲಿ ದಕ್ಷಿಣ ಚೀನ ಸಮು ದ್ರದಲ್ಲಿ ಚೀನ ಪಾರಮ್ಯ ಮೆರೆಯಲು ನಡೆಸುತ್ತಿರುವ ಪ್ರಯತ್ನಗಳಿಗೆ ತಡೆ ಒಡ್ಡುವ ನಿಟ್ಟಿನಲ್ಲಿ ಅನು ಸರಿಸ ಬೇಕಾದ ಕಾರ್ಯತಂತ್ರಗಳ ಬಗೆಗೆ ಚರ್ಚೆ ನಡೆಸ ಲಿದ್ದಾರೆ. ಚೀನದ ನಡೆಯನ್ನು ಜಪಾನ್ ಕೂಡ ಖಂಡಿಸುತ್ತಲೇ ಬಂದಿರುವುದರಿಂದ ಈ ವಿಷಯದಲ್ಲಿ ಉಭಯ ರಾಷ್ಟ್ರಗಳು ತಳೆಯಲಿರುವ ನಿಲುವಿನ ಕುರಿ ತಂತೆ ಸಹಜವಾಗಿಯೇ ಕುತೂಹಲ ಮೂಡಿದೆ.
ಜಪಾನ್ ಪ್ರವಾಸ ಅಂತ್ಯಗೊಂಡ ಬಳಿಕ ಬ್ಲಿಂಕೆನ್ ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ಗೆ ಭೇಟಿ ನೀಡಲಿದ್ದು ಈ ವೇಳೆ ದಕ್ಷಿಣ ಕೊರಿಯಾ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರೊಂದಿಗೆ ಸಮಾಲೋಚನೆ ನಡೆಸಲಿರುವರು. ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಣ ದ್ವಿಪಕ್ಷೀಯ ಸಂಬಂಧ ಈ ವರ್ಷ ಏಳು ದಶಕಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಸಚಿವರ ಸಿಯೋಲ್ ಭೇಟಿಗೆ ಹೆಚ್ಚಿನ ಮಹತ್ವ ಲಭಿಸಿದೆ. ಮಧ್ಯ ಪ್ರಾಚ್ಯ ಸಂಘರ್ಷ ದಿಂದ ಜಾಗತಿಕ ಶಾಂತಿಗೆ ಎದುರಾಗಿರುವ ಆತಂಕ, ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿರುವುದು, ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಪರಮವೈರಿ ರಾಷ್ಟ್ರವಾಗಿರುವ ಉತ್ತರ ಕೊರಿಯಾ ನಿರಂತರವಾಗಿ ನಡೆಸುತ್ತಿರುವ ಕ್ಷಿಪಣಿ ಪರೀಕ್ಷೆಗಳು, ರಕ್ಷಣ ವಲಯದಲ್ಲಿ ಉತ್ತರ ಕೊರಿಯಾ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಸಹಕಾರ, ಇವುಗಳಿಂದ ಜಾಗತಿಕ ಭದ್ರತೆ ಮತ್ತು ಶಾಂತಿಗೆ ಎದುರಾಗಬಹುದಾದ ಅಪಾಯದ ಕುರಿ ತಂತೆ ಉಭಯ ರಾಷ್ಟ್ರಗಳ ನಾಯಕರು ವಿಚಾರ ವಿಮರ್ಶೆ ನಡೆಸಲಿರುವರು. ಜತೆಯಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಣ ಸಹಭಾಗಿತ್ವವನ್ನು ಇನ್ನಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ. ಇಲ್ಲೂ ಕೂಡ ಚೀನದ ವಿಸ್ತರಣವಾದದ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.
ನ. 10ರ ಶುಕ್ರವಾರದಂದು ಆ್ಯಂಟನಿ ಬ್ಲಿಂಕೆನ್ ಅವರು ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಅಮೆರಿಕದ ರಕ್ಷಣ ಸಚಿವ ಲಾಯ್ಡ ಆಸ್ಟಿನ್ ಕೂಡ ಬ್ಲಿಂಕೆನ್ ಜತೆ ಗೂಡಲಿದ್ದು ಈರ್ವರು ನಾಯಕರು ಭಾರತದ ತಮ್ಮ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಲಿರುವರು. ಇದು ಉಭಯ ದೇಶಗಳ ನಡುವೆ ನಡೆಯಲಿರುವ ಉನ್ನತ ಮಟ್ಟದ ವಾರ್ಷಿಕ ಮಾತುಕತೆಯಾಗಿರಲಿದ್ದು ಹಲವಾರು ಮಹತ್ವದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ. ಈ ಬಾರಿಯ ಮಾತುಕತೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ರಷ್ಯಾ-ಉಕ್ರೇನ್ ಸಮರದ ಕುರಿತಂತೆ ಉಭಯ ರಾಷ್ಟ್ರಗಳು ತಮ್ಮ ನಿಲುವಿನ ಬಗೆಗೆ ಪರಸ್ಪರ ಮನವರಿಕೆ ಮಾಡಿ ಕೊಡಲಿವೆ. ಈ ಎರಡೂ ಸಂಘ ರ್ಷಗಳ ವಿಚಾರದಲ್ಲಿ ಭಾರತ ಸಮಾನ ಅಂತರ ಕಾಯ್ದುಕೊಳ್ಳುವುದರ ಜತೆಯಲ್ಲಿ ಪರಸ್ಪರ ಮಾತು ಕತೆಯ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕೆಂದು ಯುದ್ಧದಲ್ಲಿ ನಿರತವಾಗಿರುವ ರಾಷ್ಟ್ರಗಳಿಗೆ ಕಿವಿಮಾತು ಹೇಳಿದೆ. ಅಷ್ಟು ಮಾತ್ರವಲ್ಲದೆ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ರಚ ನೆಯ ಪ್ರಸ್ತಾವಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಭಯೋತ್ಪಾದನೆಯ ದಮನಕ್ಕೆ ವಿಶ್ವ ರಾಷ್ಟ್ರಗಳು ಒಗ್ಗೂಡಬೇಕು ಎಂದು ಬಲ ವಾಗಿ ಪ್ರತಿಪಾದಿಸಿರುವ ಭಾರತ ಈ ಬಗ್ಗೆ ಮತ್ತೂಮ್ಮೆ ಅಮೆರಿಕದ ಗಮನ ಸೆಳೆಯುವ ಎಲ್ಲ ಸಾಧ್ಯತೆಗಳಿವೆ. ಶಾಂತಿ, ಆರ್ಥಿಕ ಸ್ಥಿರತೆ ಸಹಿತ ಜಾಗತಿಕ ಹಿತದೃಷ್ಟಿಯಿಂದ ಮಧ್ಯಪ್ರಾಚ್ಯ ಸಂಘರ್ಷ ಇನ್ನಷ್ಟು ವಿಸ್ತರಣೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆಯ ಬಗೆಗೆ ಉಭಯ ರಾಷ್ಟ್ರಗಳು ವಿಶ್ವ ಸಮುದಾಯಕ್ಕೆ ಅದರಲ್ಲೂ ಮುಖ್ಯ ವಾಗಿ ಅರಬ್ ದೇಶಗಳಿಗೆ ಕಿವಿಮಾತು ಹೇಳುವ ಸಾಧ್ಯತೆಗಳಿವೆ.
ರಷ್ಯಾ-ಉಕ್ರೇನ್ ಸಮರ 21 ತಿಂಗಳುಗಳು ಕಳೆ ದರೂ ಇನ್ನೂ ಮುಂದುವರಿದಿದ್ದು ಎರಡೂ ದೇಶಗಳ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ಹಮಾಸ್-ಇಸ್ರೇಲ್ ಕಾದಾಟ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ರಷ್ಯಾ-ಉಕ್ರೇನ್ ಸಮರ ಒಂದಿಷ್ಟು ಹಿನ್ನೆಲೆಗೆ ಸರಿದಿದೆ. ಇದೇ ವೇಳೆ ಉಕ್ರೇನ್, ರಷ್ಯಾ ದೊಂದಿಗಿನ ಸಂಘರ್ಷಕ್ಕೆ ಅಂತ್ಯಹಾಡಲು ಮುಂದಾ ಗಿವೆ ಎಂಬ ವದಂತಿಗಳು ಹರಡಲಾರಂಭಿಸಿವೆಯಾ ದರೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಇದನ್ನು ತಳ್ಳಿಹಾಕಿದ್ದಾರೆ. ಇಂತಹ ವದಂತಿಯನ್ನು ಹರಡುವ ಮೂಲಕ ರಷ್ಯಾ, ಉಕ್ರೇನಿಗರ ಸ್ಥೈರ್ಯ ವನ್ನು ಕುಂದಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದ ವರು ಆರೋಪಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಣ ಕದನ ಮತ್ತಷ್ಟು ಕಾಲ ಮುಂದು ವರಿಯುವ ಲಕ್ಷಣಗಳು ಕಾಣುತ್ತಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಈ ವಾರದುದ್ದಕ್ಕೂ ಮೂರು ದೇಶಗಳ ಪ್ರವಾಸ ಕೈಗೊಂಡು, ಬಿಡುವಿಲ್ಲದ ರಾಜತಾಂತ್ರಿಕ ಮಾತು ಕತೆಗಳಲ್ಲಿ ತೊಡಗಿ ಕೊಳ್ಳಲಿದ್ದು ಈ ವೇಳೆ ಕೆಲವೊಂದು ಮಹತ್ವದ ದ್ವಿಪ ಕ್ಷೀಯ ಒಪ್ಪಂದಗಳಿಗೆ ಅಂಕಿತ ಬೀಳುವ ಸಾಧ್ಯತೆಗಳಿವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಯುದೊœàನ್ಮಾದದಲ್ಲಿ ರುವ ರಾಷ್ಟ್ರಗಳಿಗೆ ಕಿವಿಮಾತು ಹೇಳುವ ಜತೆಯಲ್ಲಿ ಜಗತ್ತಿನ ಮೇಲೆ ಸವಾರಿ ಮಾಡಲೆತ್ನಿಸುತ್ತಿರುವ ಚೀನದ ಷಡ್ಯಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆಯುವ ಮೂಲಕ ಅದರ ವಿಸ್ತರಣವಾದ ಮತ್ತು ಆಕ್ರಮಣಕಾರಿ ನೀತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿನ ತನ್ನ ಪ್ರಯತ್ನಗಳನ್ನು ಅಮೆರಿಕ ಮುಂದುವರಿಸಲಿದೆ.
ಹರೀಶ್ ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.