Road Mishap: 3 ವರ್ಷದಲ್ಲಿ 840 ಮಂದಿ ರಸ್ತೆ ಅಪಘಾತಕ್ಕೆ ಬಲಿ!
Team Udayavani, Nov 11, 2023, 10:34 AM IST
ಇತ್ತೀಚೆಗೆ ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಸರಣಿ ವಾಹನ ಸವಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿವೆ. 3 ವರ್ಷದಲ್ಲಿ ಸಾವಿರಾರು ಅಪಘಾತಗಳು ಸಂಭವಿಸಿ ನೂರಾರು ಮಂದಿ ಅಸುನೀಗಿದರೆ ಸಾಕಷ್ಟು ಮಂದಿ ಕೈ, ಕಾಲು ಊನಗೊಂಡ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದರೆ ಮತ್ತೆ ಕೆಲವರು ಮಾರಣಾಂತಿಕವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಜಿಲ್ಲೆಯಲ್ಲಿ 3 ವರ್ಷದಲ್ಲಿ ಸಂಭವಿಸಿದ ಅಪಘಾತಗಳು ಎಷ್ಟು? ಅಪಘಾತಗಳಿಗೆ ಮುಖ್ಯ ಕಾರಣ ಏನು ? ಅಪಘಾತಗಳ ತಡೆಗೆ ಸಲಹೆಗಳೇನು ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಲೇ ಇದ್ದು ಅಮಾಯಕರು ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ 3 ವರ್ಷದಲ್ಲಿ ಜಿಲ್ಲೆಯಲ್ಲಿ ಬರೊಬ್ಬರಿ 840 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಹೌದು, ಜಿಲ್ಲೆಯ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಳವಳ ಉಂಟು ಮಾಡಿದ್ದು, ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ಹೆಚ್ಚು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವುದು ಅಂಕಿ, ಅಂಶಗಳಿಂದ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ 26 ರಂದು ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ 3, ನೆರೆಯ ಆಂಧ್ರಪ್ರದೇಶದ 10 ಮಂದಿ ಸೇರಿ ಒಟ್ಟು 13 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ ಆಗಿರುವ ರಸ್ತೆ ಅಪಘಾತಗಳ ಮಾಹಿತಿ ಕ್ರೊಢೀಕರಿಸಿದಾಗ 3 ವರ್ಷದಲ್ಲಿ 2,188 ರಸ್ತೆ ಅಪಘಾತಗಳು ಜಿಲ್ಲಾದ್ಯಂತ ಸಂಭವಿಸಿದ್ದರೆ. ಆ ಪೈಕಿ 840 ಮಂದಿ ವಾಹನ ಸವಾರರು ಹಾಗೂ ಪ್ರಯಾಣಿಕರು ತಮ್ಮ ಅಮೂಲ್ಯವಾದ ಜೀವ ಕಳೆದುಕೊಂಡಿದ್ದಾರೆ.
ಜಿಲ್ಲೆಯು ಆಂಧ್ರದ ಗಡಿಯಲ್ಲಿದ್ದು 2 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು ನಾಲ್ಕೈದು ರಾಜ್ಯ ಹೆದ್ದಾರಿಗಳನ್ನು ಹೊಂದಿದೆ. ಆದರೆ, ಬೆಂಗಳೂರು ಹಾಗೂ ಹೈದ್ರಾಬಾದ್ ನಡುವೆ ಸಂಪರ್ಕ ಕಲ್ಪಿಸುವ 44 ರಾಷ್ಟ್ರೀಯ ಹೆದ್ದಾರಿ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗಿದೆ. ನಿತ್ಯ ಸಾವಿರಾರು ವಾಹನಗಳ ಅದರಲ್ಲೂ ಸರಕು ಸಾಗಾಣಿಕೆಯ ವಾಹನಗಳು ಹೆಚ್ಚಿದ್ದು ನಿತ್ಯ ಒಂದಲ್ಲ ಒಂದು ಕಡೆ ಹೆದ್ದಾರಿಯಲ್ಲಿ ವಾಹನಗಳ ನಡುವೆ ಅಪಘಾತಗಳು ಸಂಭವಿಸುತ್ತಲೇ ಇವೆ. ಇನ್ನೂ ಶಿರಾ, ಮುಳಬಾಗಿಲು ನಡುವೆ ಸಂಪರ್ಕ ಕಲ್ಪಿಸುವ 264ರ ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಗೌರಿಬಿದನೂರು ಮೂಲಕ ಹಾದು ಹೋಗಿದೆ.
ವರ್ಷದಿಂದ ವರ್ಷಕ್ಕೆ ಅಪಘಾತಗಳ ಹೆಚ್ಚು: ಕಳವಳಕಾರಿ ಸಂಗತಿಯೆಂದರೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಮೃತರ ಸಂಖ್ಯೆ ಹಾಗೂ ಗಾಯಗಳು ಸಂಖ್ಯೆ ಹೆಚ್ಚುತ್ತಲೇ ಇರುವುದು ಕಳೆದ 3 ವರ್ಷದಲ್ಲಿ ಜಿಲ್ಲೆಯಲ್ಲಿ ಆಗಿರುವ ರಸ್ತೆ ಅಪಘಾತಗಳನ್ನು ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಜಿಲ್ಲೆಯಲ್ಲಿ 2021ರಲ್ಲಿ ಒಟ್ಟು 279 ಮಂದಿ ಅಪಘಾತಕ್ಕೆ ಬಲಿಯಾದರೆ 2022 ರಲ್ಲಿ ಮೃತರ ಸಂಖ್ಯೆ 282ಕ್ಕೆ ಏರಿದೆ. 2023ರಲ್ಲಿ ಅಕ್ಟೋಬರ್ ಅಂತ್ಯಕ್ಕೆ ಬರೋಬ್ಬರಿ 279 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಉದಯವಾಣಿಗೆ ಸಿಕ್ಕಿರುವ ಜಿಲ್ಲೆಯ ರಸ್ತೆ ಅಪಘಾಗಳ ಅಂಕಿ, ಅಂಶಗಳಿಂದ ದೃಢಪಟ್ಟಿದೆ.
ಜಿಲ್ಲೆ ರಾಜಧಾನಿಗೆ ಸನಿಹ: ಚಿಕ್ಕಬಳ್ಳಾಪುರ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಅತ್ಯಂಹ ಸನಿಹದಲ್ಲಿದೆ. ಹೈದ್ರಾಬಾದ್ ಕೂಡ ಜಿಲ್ಲೆಗೆ 500 ಕಿ.ಮೀ ಅಂತರದಲ್ಲಿದೆ. ಜಿಲ್ಲೆಯು ರೇಷ್ಮೆ ಕೃಷಿ, ತೋಟಗಾರಿಕೆಗೆ ಪ್ರಸಿದ್ದಿಯಾಗಿದ್ದು, ಐತಿಹಾಸಿಕ ಬಡವರ ಊಟಿಯೆಂದು ಪ್ರಸಿದ್ಧಿ ಪಡೆದಿರುವ ನಂದಿಬೆಟ್ಟ, ಇತ್ತೀಚೆಗೆ ಸ್ಥಾಪನೆ ಆಗಿರುವ ಈಶಾ ಕೇಂದ್ರದಿಂದಾಗಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಅಂತೂ ಬೆಂಗಳೂರು ದಟ್ಟಣೆ ಮೀರಿ ಜಿಲ್ಲೆಯಲ್ಲಿ ವಾಹನಗಳ ಟ್ರಾಫಿಕ್ ಉಂಟು ಮಾಡುತ್ತಿದೆ. ಐಟಿ, ಬಿಟಿ ಉದ್ಯೋಗಿಗಳು ಬಹುತೇಕ ಶನಿವಾರ, ಭಾನುವಾರ ಜಿಲ್ಲೆಗೆ ಪ್ರವಾಸ ಬರುತ್ತಿರುವುದರಿಂದ ವಾಹನದಟ್ಟಣೆ ಹೆಚ್ಚಾಗಿದ್ದು, ಇದರ ಪರಿಣಾಮ ಕೂಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎನ್ನಬಹುದು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಇತ್ತೀಚಿನ ದಿನಗಳಲ್ಲಿ ವಾಹನ ಸವಾರರನ್ನು ಮಾತ್ರವಲ್ಲದೇ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ಹಾಗೆ ಸಂಭವಿಸುವ ಮೂಲಕ ಜಿಲ್ಲೆಯ ಜನರಲ್ಲಿ ತೀವ್ರ ತಲ್ಲಣಕ್ಕೆ ಕಾರಣವಾಗಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರಿಗೆ ಅಧಿಕಾರಿಗಳು, ಎಚ್ಚೆತ್ತಿಕೊಂಡು ವಾಹನ ಸವಾರರಲ್ಲಿ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ವಾಹನ ಸವಾರರು ಕೂಡ ಅತಿವೇಗ, ಅವಸರದಿಂದ ವಾಹನಗಳ ಚಾಲನೆ ಮಾಡದೇ ಸಮಾಧಾನದಿಂದ ನಿಧಾನವಾಗಿ ತಮ್ಮ ವಾಹನಗಳನ್ನು ಚಾಲನೆ ಮಾಡುವ ಮೂಲಕ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಮುಂದಾಗಲಿ ಎನ್ನುವುದ ನಮ್ಮೆಲ್ಲರ ಒತ್ತಾಸೆ ಆಗಿದೆ.
ಜಿಲ್ಲೆಗೆ ಕನಸಾಗಿಯೆ ಉಳಿದ ಟ್ರಕ್ ಟರ್ಮಿನಲ್ ನಿರ್ಮಾಣ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನ ಬೆಳೆಗಾದರೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತೇವೆ. ವಾಹನ ಸವಾರರಿಂದ ಕೂಡ ಸರ್ಕಾರಗಳ ಬೊಕ್ಕಸಕ್ಕೆ ವಾರ್ಷಿಕ ಕೊಟ್ಯಾಂತರ ರೂ. ಟೋಲ್ ವಸೂಲಿ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇನ್ನೂ ಟ್ರಕ್ ಟರ್ಮಿನಲ್ ನಿರ್ಮಾಣದ ಕನಸು ಈಡೇರಿಲ್ಲ. ಬೆಂಗಳೂರು-ಹೈದ್ರಾಬಾದ್ ನಡುವೆ ಗೂಡ್ಸ್ ವಾಹನಗಳು ಅದರಲ್ಲೂ ಸಿಮೆಂಟ್ ಬಲ್ಕರ್ ಲಾರಿಗಳು ಅತ್ಯಧಿಕವಾಗಿ ಸಂಚರಿಸುತ್ತೇವೆ. ಆದರೆ ಚಾಲಕರಿಗೆ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಟ್ರಕ್ ಟರ್ಮಿನಲ್ ನಿರ್ಮಾಣ ಆಗದೇ ವಾಹನ ಚಾಲಕರು ಹೆದ್ದಾರಿ ಬದಿಗಳಲ್ಲಿ ಸಿಕ್ಕ ಸಿಕ್ಕ ಕಡೆ ತಮ್ಮ ಗಜ ಗಾತ್ರದ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹೆದ್ದಾರಿಗಳಲ್ಲಿ ಅಕಸ್ಮಿಕವಾಗಿ ರಸ್ತೆ ಅಪಘಾತಗಳು ಸಂಭವಿಸಿ ಅಮಾಯಕರು ಅಸುನೀಗಬೇಕಿದೆ. ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 16 ವರ್ಷ ತುಂಬಿದೆ.
ಚಿಕ್ಕಬಳ್ಳಾಪುರ ಮಾತ್ರವಲ್ಲದೇ ಕನಿಷ್ಠ ತಾಲೂಕು ಕೇಂದ್ರಗಳಲ್ಲಿ ಕೂಡ ಲಾರಿ ಮತ್ತಿತರ ಟ್ರಕ್‌ಗಳ ನಿರ್ಮಾಣಕ್ಕೆ ಟರ್ಮಿನಲ್ ತಲೆ ಎತ್ತಿಲ್ಲ. ದಶಕಗಳ ಹಿಂದೆಯೆ ಚಿಂತಾಮಣಿ ನಗರದ ರಾಮಕುಂಟೆ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ಜಾಗ ಗುರುತಿಸಿದರೂ ಫಲ ಸಿಗಲಿಲ್ಲ. ಟ್ರರ್ಮಿನಲ್ ನಿರ್ಮಾಣಕ್ಕೆ ಗುರುತಿಸಿದ್ದ ಜಾಗ ಹಾಗೆ ಖಾಲಿ ಬಿದ್ದಿದ್ದು ಅಲ್ಲಿಗೆ ಖಾಸಗಿ ಬಸ್ ಸ್ಥಳಾಂತರ ಮಾಡಬೇಕೆಂಬ ನಗರಸಭೆನಿರ್ಧಾರಕ್ಕೂ ಖಾಸಗಿ ಬಸ್‌ಗಳು ಸ್ಪಂದಿಸದೇ ಖಾಸಗಿ ಬಸ್ ನಿಲ್ದಾಣದ ಜಾಗ ವಾರದ ಸಂತೆಯಾಗಿ ಈಗ ಮಾರ್ಪಟ್ಟಿದೆ.
ಚಿಂತಾಮಣಿ ಮೊದಲು:
ಜಿಲ್ಲೆಯ ಪೈಕಿ ರಸ್ತೆ ಅಪಘಾತಗಳ ಪಟ್ಟಿಯಲ್ಲಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಮೊದಲ ಸ್ಥಾನದಲ್ಲಿದೆ. ಚಿಂತಾಮಣಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ವಾಹನಗಳ ಅಪಘಾತ ಸಂಭವಿಸುತ್ತದೆಯೆಂದು ಜಿಲ್ಲೆಯ ಪೊಲೀಸ್ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇಡೀ ಜಿಲ್ಲೆಯ ಪೈಕಿ ಅತಿ ಹೆಚ್ಚು ರಸ್ತೆ ಅಪಘಾತಗಳು ಚಿಂತಾಮಣಿಯಲ್ಲಿ ಸಂಭವಿಸುತ್ತಿವೆ. ಇನ್ನೂ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿಯೆ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಗ್ರಾಮೀಣ ಜನತೆ ಹೆಚ್ಚು ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ನಂತರದಲ್ಲಿ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲೂಕು ಇದೆ.
ಚಿಂತಾಮಣಿಗೆ ಮರೀಚಿಕೆಯಾದ ಸಂಚಾರಿ ಪೊಲೀಸ್ ಠಾಣೆ: ಇಡೀ ಜಿಲ್ಲೆಯಲ್ಲಿಯೆ ವಾಣಿಜ್ಯ ಕೇಂದ್ರವಾಗಿ ಬೆಳೆದಿರುವ ಚಿಂತಾಮಣಿ ನಗರಕ್ಕೆ ಸಂಚಾರಿ ಠಾಣೆ ಬೇಕಿದೆ. ದಶಕಗಳಿಂದಲೂ ರಾಜ್ಯ ಸರ್ಕಾರ ಸಂಚಾರಿ ಠಾಣೆ ಭರವಸೆ ನೀಡುತ್ತಲೇ ಕಾಲಕಳೆಯುತ್ತಿದೆ. ಜಿಲ್ಲೆಯಲ್ಲಿ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುವ ತಾಲೂಕುಗಳ ಪೈಕಿ ಚಿಂತಾಮಣಿ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಚಿಂತಾಮಣಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಿದ್ದು ಚಿಂತಾಮಣಿ ನಗರದಲ್ಲಿ ವಾಹನಗಳ ದಟ್ಟಣೆಗೆ ಸಂಚಾರಿ ಠಾಣೆ ಅವಶ್ಯಕವಾಗಿದೆ. ಜೊತೆಗೆ ಬೆಂಗಳೂರು-ಮದನಪಲ್ಲಿ ಹೆದ್ದಾರಿ ಹಾಗೂ ಶಿರಾ ಮುಳಬಾಗಿಲು ನಡುವಿನ ರಾಷ್ಟ್ರೀಯ ಹೆದ್ದಾರಿ 264 ಚಿಂತಾಮಣಿ ಮೂಲಕ ಹಾದು ಹೋಗುತ್ತದೆ. ಸರಕು ಸಾಗಾಣಿಕೆ ಹಾಗೂ ಇತರೇ ವಾಣಿಜ್ಯ ಬಳಕೆಯ ವಾಹನಗಳು ಚಿಂತಾಮಣಿಯಲ್ಲಿ ಹೆಚ್ಚಿವೆ.
ಅತಿವೇಗ, ಅಜಾಗರೂಕತೆಯೆ ರಸ್ತೆ ಅಪಘಾತಗಳಿಗೆ ಕಾರಣ: ಅತಿವೇಗದಿಂದ ವಾಹನಗಳನ್ನು ಚಾಲನೆ ಮಾಡುತ್ತಿರುವುದು ವಾಹನಗಳ ಚಾಲನೆ ಮಾಡುವಾಗ ಚಾಲಕರು ಮೊಬೈಲ್‌ಗಳಲ್ಲಿ ಮಾತನಾಡಿಕೊಂಡು ಹೋಗುವುದು, ರಸ್ತೆ ದಾಟುವಾಗ ಟ್ರಾಫಿಕ್ ಸಿಗ್ನಲ್‌ಗಳ ಸೂಚನೆಗಳನ್ನು ಪಾಲಿಸದಿರುವುದು, ಪ್ರಮುಖವಾಗಿ ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುವುದು, ರಾತ್ರಿ ವೇಳೆ ರಸ್ತೆಗಳಲ್ಲಿ ಉಬ್ಬುಗಳ ಪರಿಣಾಮ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದು, ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನಗಳನ್ನು ರಸ್ತೆಗೆ ತರುತ್ತಿರುವುದು, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವಾಗ ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡಿಕೊಂಡು ಬರುತ್ತಿರುವುದು, ರಸ್ತೆ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಕಿರಿದಾದ ರಸ್ತೆಗಳ ಜೊತೆಗೆ ರಸ್ತೆಗಳಲ್ಲಿ ರಿಪೇರಿ ಕಾಣದೇ ಮಾರುದ್ದ ಗುಂಡಿಗಳು ಬಿದ್ದಿರುವುದು ಕೂಡ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಹೆದ್ದಾರಿ ಪಕ್ಕ ಸರ್ವಿಸ್ ರಸ್ತೆಗಳು ಇಲ್ಲದೇ ಅಪಘಾತ!: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಪಕ್ಕ ಸಮರ್ಪಕವಾಗಿ ಇಂದಿಗೂ ಸರ್ವಿಸ್ ರಸ್ತೆಗಳು ಇಲ್ಲದೇ ಹೆದ್ದಾರಿ ಅಕ್ಕಪಕ್ಕದ ಗ್ರಾಮಸ್ಥರು, ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಹೆದ್ದಾರಿ ದಾಟಬೇಕಿದೆ. ಹಲವು ಬಾರಿ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಗ್ರಾಮಸ್ಥರು ಪ್ರತಿಭಟನೆ, ಧರಣಿ ನಡೆಸಿ ಜಿಲ್ಲಾಡಳಿತಕ್ಕೆ, ಚುನಾಯಿತ ಜನಪ್ರತಿನಿಧಿಗಳಿಗೆ, ಸಂಸದರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ವಿಶೇಷವಾಗಿ ಚಿಕ್ಕಬಳ್ಳಾಪುರ , ಗುಡಿಬಂಡೆ, ಬಾಗೇಪಲ್ಲಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾಕಷ್ಟು ಕಡೆ ಸರ್ವಿಸ್ ರಸ್ತೆಗಳು ಇಲ್ಲದೇ ಹೆಚ್ಚು ರಸ್ತೆಗಳಲ್ಲಿ ವಾಹನಗಳ ಅಪಘಾತಗಳು ಸಂಭವಿಸಿ ಅಮಾಯಕರು ಸತ್ತು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮಾರ್ಗಸೂಚಿ ಫಲಕಗಳು, ಅಪಘಾತ ವಲಯಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ನೀಡುವ ಜಾಗೃತಿ ಫಲಕಗಳನ್ನು ಅಳವಡಿಸಬೇಕಿದೆ.
ವರಿಷ್ಠಾಧಿಕಾರಿಗಳು ಹೇಳಿದ್ದೇನು?: ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಸ್ತೆ ಅಪಘಾತಗಳು ಹೆಚ್ಚಾಗಿ ದಾಖಲಾಗಿವೆ. ವಾಹನಗಳ ಚಲಾಯಿಸುವ ವೇಳೆ ಅತಿವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಪರಿಣಾಮದಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರುಕಡ್ಡಾಯವಾಗಿ ರಸ್ತೆ ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಕುಡಿದು ಪಾನಮತ್ತರಾಗಿ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಬಾರದು. ಆದಷ್ಟು ನಿಧಾನವಾಗಿ ವಾಹನಗಳನ್ನು ಧರಿಸಬೇಕು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದರು.
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.