Deepavali festival: ಅರ್ಥಪೂರ್ಣವಾಗಿರಲಿ ಬೆಳಕಿನ ಹಬ್ಬ 


Team Udayavani, Nov 13, 2023, 1:11 PM IST

tdy-11

ದೀಪಾವಳಿ ಎನ್ನುತ್ತಿದ್ದಂತೆ ಇಂದಿನ ಜನತೆಗೆ ಸಾಲುಸಾಲು ದೀವಿಗೆಗಳು ನೆನಪಾಗುವ ಮೊದಲು ಕಣ್ಣಿಗೆ ಕಟ್ಟುವುದು ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸಿ ಮಾಯವಾಗುವ ಪಟಾಕಿಗಳು. ಹಬ್ಬದ ಖರೀದಿಗೆಂದು ಹೋದವರು  ಪಟಾಕಿಯ ಪೊಟ್ಟಣಗಳನ್ನು ಕೈಯ್ಯಲ್ಲಿ ಹಿಡಿದು ನೋಡದೆ ಹಿಂದಿರುಗಿದರೆ ಅಪೂರ್ವವೆನಿಸುವ ಕಾಲವಿದು. ಹಣತೆ ಗೂಡುದೀಪಗಳ ದೀಪಾವಳಿ ಹಳೆಯದಾಗಿ, ಹೊಗೆಯನ್ನುಗುಳುವ, ಗೋಲಗಳನ್ನು ಸುಡುವ ಪರಿಪಾಠವು ಇಲ್ಲದ ಮಹತ್ವವನ್ನು ಪಡೆಯುತ್ತಿದೆ.

ಮಾಲಿನ್ಯವು ಬೆಳಕಿನ ಹಬ್ಬದ ಅವಿಭಾಜ್ಯ ಅಂಗವೇ ಆಗಿಹೋಗಿರುವುದು ದೌರ್ಭಾಗ್ಯ. ವರ್ಷದಲ್ಲೊಮ್ಮೆ ಪಟಾಕಿ ಸಿಡಿಸಿ ಸಂಭ್ರಮಿಸುವ ಹಕ್ಕೂ ನಮಗಿಲ್ಲವೆ ಎಂದು ವಾದಿಸುವವರು ಒಂದುಕಡೆಯಾದರೆ, ಮಾಲಿನ್ಯವು ಕೇವಲ ಪಟಾಕಿಗಳಿಂದಷ್ಟೇ ಉಂಟಾಗುವುದೇ ಎಂದು ಪ್ರಶ್ನಿಸಿ, ಅನ್ಯ ಮಾಲಿನ್ಯಕಾರಕಗಳ ಪಟ್ಟಿ ಮಾಡುವವರು ಇನ್ನೊಂದು ಕಡೆ. ಹೀಗಿರುವಾಗ ತಯಾರಕರಿಂದ ಗ್ರಾಹಕರವರೆಗೆ ಅಪಾಯದ ಸರಪಳಿಯಂತೆ ಸುತ್ತಿಕೊಳ್ಳುವ ಈ ಪಟಾಕಿಗಳಿಂದಾಗುವ ಲಾಭ-ನಷ್ಟಗಳ ಕಡೆ ಕಣ್ಣುಹಾಯಿಸಿದರೆ ಕಾಣುವುದು ಕರಾಳ ಕಥೆ.

ದೀಪಾವಳಿ ಸಮೀಪಿಸುತ್ತಿದ್ದಂತೆ ಪಟಾಕಿ ಕಾರ್ಖಾನೆಗಳಲ್ಲಿನ ಕೆಲಸ ಚುರುಕುಗೊಳ್ಳುತ್ತದೆ. ಮಳಿಗೆಗಳಲ್ಲಿ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳ ಜತೆ ಪಟಾಕಿಯ ವ್ಯಾಪಾರ ವೇಗ ಪಡೆದುಕೊಳ್ಳುತ್ತದೆ. ಬೇಡಿಕೆಗೆ ತಕ್ಕಂತೆ ಸರಕುಗಳನ್ನು ಪೂರೈಸಲು ಉತ್ಪಾದನೆಯು ತ್ವರಿತ ಗತಿಯಲ್ಲಿ ಆಗಬೇಕಾದ್ದರಿಂದ ಅನೇಕ ಕಾರ್ಮಿಕರನ್ನು ಕೆಲಸಕ್ಕೆ ಕರೆಯಲಾಗುತ್ತದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದು ನಿಜವಾದರೂ, ಅದು ಆ ಕಾಲಕ್ಕಷ್ಟೇ ಸೀಮಿತವಾಗಿರುತ್ತದೆ. ಅದಲ್ಲದೆ ಅನೇಕ ರೀತಿಯ ಅಪಾಯಗಳನ್ನೂ ಒಳಗೊಂಡಿರುತ್ತದೆ. ಪಟಾಕಿ ತಯಾರಿಕೆಯಂತಹ ಕೆಲಸಕ್ಕೆ ನೇಮಕವಾಗುವ ಕೆಲಸಗಾರರು ಅಸಂಘಟಿತರಾಗಿರುವ ಕಾರಣ, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಅವರ ಪಾಲಿಗೆ ಸಿಗುವುದಿಲ್ಲ. ಪಟಾಕಿಗಳೆಂದರೆ ರಾಸಾಯನಿಕಗಳ ಸಣ್ಣ ಪೊಟ್ಟಣವೆನ್ನಬಹುದಾದ್ದರಿಂದ, ಬೆಂಕಿ ಅವಘಡಗಳ ಅಪಾಯವಿರುವುದನ್ನು ಅಲ್ಲಗಳೆಯುವಂತಿಲ್ಲ. ದೇಶದಲ್ಲಿ ಪ್ರತೀ ವರ್ಷವೂ ಪಟಾಕಿ ಕಾರ್ಖಾನೆಗೋ, ಅದನ್ನು ಶೇಖರಿಸಿಟ್ಟ ಸ್ಥಳಕ್ಕೋ, ಮಾರಾಟ ಮಾಡುವಲ್ಲಿಗೋ ಬೆಂಕಿ ಬಿದ್ದು, ಅದು ಹೊತ್ತಿ ಉರಿಯುವುದನ್ನು ನೋಡಬಹುದು. ಈ ಅವಘಡಗಳಲ್ಲಿ ವ್ಯಾಪಾರಕ್ಕಾದ ನಷ್ಟದೊಂದಿಗೆ ಜೀವಹಾನಿ ಸಂಭವಿಸಿದ್ದೂ ಇದೆ. ಇನ್ನು ಇಡೀ ದಿನ ಅಪಾಯಕಾರಿ ರಾಸಾಯನಿಕಗಳೊಂದಿಗಿನ ಸಂಪರ್ಕದಿಂದ ಕೆಲಸಗಾರರಲ್ಲಿ ಆರೋಗ್ಯ ಸಂಬಂಧಿ ಖಾಯಿಲೆಗಳ ಅಪಾಯ, ಮುಖ್ಯವಾಗಿ ಉಸಿರಾಟಕ್ಕೆ ಸಂಬಂದಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ.

ವ್ಯಾಪಾರಿಗಳ ಪಾಲಿಗೆ ದೀಪಾವಳಿಯೆಂದರೆ ಸುಗ್ಗಿಕಾಲವಿದ್ದಂತೆ. ಉಡುವ- ಉಣ್ಣುವ ವಸ್ತುಗಳನ್ನು ಕೊಳ್ಳಲು ಮುಗಿಬೀಳುವ ಗ್ರಾಹಕರು ಪಟಾಕಿ ಕೊಳ್ಳದೆ ಹೋಗುವುದಿಲ್ಲ. ಹಾಗೆಂದು ಒಮ್ಮೆ ಅವುಗಳಿದ್ದತ್ತ ನಡೆದರೆ, ಎಲ್ಲ ವಿಧದ, ವಿನ್ಯಾಸದ, ಬಣ್ಣದ ಪಟಾಕಿಗಳನ್ನು ಕೊಳ್ಳದೆ ಇರಲಾರರು. ಹಾಗಾಗಿ ಇದು ಲಾಭದಾಯಕವೆಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೀಗೆ ಖರೀದಿಸುವ ವಸ್ತುಗಳಲ್ಲಿ ಬಹುತೇಕ ಸರಕುಗಳು ವಿದೇಶಗಳಿಂದ ಆಮದು ಆಗಿರುತ್ತವೆ. ಹೀಗಿರುವಾಗ ಲಾಭದಲ್ಲಿ ಒಂದು ಪಾಲು ಗ್ರಾಹಕರ ಜೇಬಿನಿಂದ ಗಡಿದಾಟಿ ಹೋಗುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಬಳಸಲು ಸರಕಾರ ಕರೆ ಕೊಟ್ಟರೂ ಕೂಡ, ಅವುಗಳ ಬೆಲೆ ಆಮದಾದ ವಸ್ತುಗಳಿಗಿಂತ ದುಬಾರಿಯಾಗುವ ಕಾರಣ, ಜನ ಸಹಜವಾಗಿ ಕಡಿಮೆ ಬೆಲೆಯ ವಸ್ತುಗಳನ್ನು ಕೊಳ್ಳುತ್ತಾರೆ.

ಸಂಜೆಗತ್ತಲು ಕವಿಯುತ್ತಿದ್ದಂತೆಯೇ ಪಟಾಕಿಗಳು ಪೊಟ್ಟಣಗಳಿಂದ ಹೊರಬರಲು ಪ್ರಾರಂಭವಾಗುತ್ತದೆ. ಮನೆಯ ಅಂಗಳದಲ್ಲಿಯೋ ಅಥವಾ ಬಾನಂಗಳವೇರಿಯೋ ರಂಗುರಂಗಿನ ರಂಗವಲ್ಲಿ ಚಿತ್ರಿಸುವ ಪಟಾಕಿಗಳನ್ನು ನೋಡಿ ಆನಂದಿಸುತ್ತ ಮೈಮರೆಯುವ ಜನ, ಅದರೊಂದಿಗೆ ಉಂಟಾಗುವ ಶಬ್ದದಿಂದ ಪುಳಕಿತರಾಗುತ್ತಾರೆ. ಅವರ ಈ ಕ್ಷಣಿಕ ಸಂತಸವು ಸೂಕ್ಷ್ಮಕಿವಿಯ ಪ್ರಾಣಿಗಳಿಗೆ, ನವಜಾತ ಶಿಶುಗಳಿಗೆ, ವೃದ್ಧರಿಗೆ ಮಾರಕವೆನ್ನುವುದನ್ನು ಮರೆಯುತ್ತಾರೆ.

ಬೆಳಕು ಶಬ್ದಗಳೊಂದಿಗೆ ಏಳುವ ಹೊಗೆಯನ್ನು ಜನ ಕಡೆಗಣಿಸಿಬಿಡುತ್ತಾರೆ. ಪಟಾಕಿ ಸುಟ್ಟ ಪರಿಣಾಮವಾಗಿ ಸೃಷ್ಟಿಯಾಗುವ ಧೂಮದಿಂದ ಮನುಷ್ಯರಿಗಷ್ಟೇ ಅಲ್ಲ, ಪರಿಸರಕ್ಕೂ ತೊಂದರೆ.  ಸುತ್ತಮುತ್ತಲಿನ ವಾತಾವರಣ ಹೊಗೆಯಿಂದ ತುಂಬಿದರೆ, ಮರ-ಗಿಡಗಳು, ಅಮಾಯಕ ಪ್ರಾಣಿ-ಪಕ್ಷಿಗಳು, ಅನೇಕ ಜೀವ-ಜಂತುಗಳು ಉಸಿರಾಡಲು ಕಷ್ಟಪಡುವಂತಾಗುತ್ತದೆ.

ಪಟಾಕಿ ಸಿಡಿದ ಶಬ್ದಕ್ಕೆ, ಬೀರಿದ ಬೆಳಕಿಗೆ ಭಯಪಟ್ಟ ಸಾಕುಪ್ರಾಣಿಗಳು ಅಡಗಲು ಜಾಗ ಹುಡುಕುತ್ತ ಓಡುವುದನ್ನು ಕಾಣಬಹುದು. ಇದು ಮನೆಯವರ ಗಮನಕ್ಕೆ ಬಂದು ಅವರು ಸೂಕ್ತ ಕ್ರಮ ಕೈಗೊಂಡರೆ ತೊಂದರೆಯಿಲ್ಲ. ಆದರೆ ಅವರೂ ಅವುಗಳನ್ನು ಕಡೆಗಣಿಸುವುದು ದುರದೃಷ್ಟಕರ.

ಇಂತಿರುವ ಬೆಳಕಿನ ಹಬ್ಬವು ಅದೆಷ್ಟೋ ಜನರನ್ನು ಅಂಗವಿಕಲಗೊಳಿಸಿ ಆಹುತಿ ಪಡೆದ ಅಸಂಖ್ಯ ಘಟನೆಗಳು ವರ್ಷವರ್ಷವೂ ವರದಿಯಾಗುತ್ತಿವೆಯಾದರೂ ಅದರ ಬಗ್ಗೆ ಎಚ್ಚರಿಕೆ ವಹಿಸುವವರು ಬಹು ವಿರಳ. ಎಲ್ಲರಿಗಿಂತ ಮುಂದೆ ನಿಂತು ಪಟಾಕಿಯ ಬಾಲಕ್ಕೆ ಬೆಂಕಿ ಕೊಡುವುದು ಧೈರ್ಯ-ಶೌರ್ಯಗಳ ಪ್ರಶ್ನೆಯಾದ್ದರಿಂದ ಯಾರೂ ಹಿಂದೆಬೀಳಲು ಬಯಸರು. ತಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆಂದು ತಿಳಿದಿದ್ದರೂ ಕೂಡ ಅಜಾಗರೂಕರಾಗಿ ವರ್ತಿಸಿ ಅದಕ್ಕೆ ತಕ್ಕ ದಂಡ ತೆತ್ತವರೂ ಮರುವರ್ಷ ಅದೇ ತಪ್ಪನ್ನು ಪುನರಾವರ್ತಿಸುತ್ತಾರೆ. ಅದರ ಅಪಾಯವನ್ನು ಅರಿತಿದ್ದರೂ ಕೂಡ ಮಕ್ಕಳನ್ನು ಧೈರ್ಯಶಾಲಿಗಳಾಗಬೇಕೆಂದು ಹುರಿದುಂಬಿಸಿ ಆ ಕಾರ್ಯಕ್ಕೆ ಎಳೆತರುವವರೂ ಇದ್ದಾರೆ.  ಸಾಲದ್ದಕ್ಕೆ, ಬೆಕ್ಕು ಶ್ವಾನಗಳಂತಹ ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿಯೋ, ಅವುಗಳು ಮಲಗಿದ್ದಲ್ಲಿ ಸಿಡಿಮದ್ದು ಸಿಡಿಸಿಯೋ ವಿಧವಿಧವಾಗಿ ಚಿತ್ರಹಿಂಸೆ ಕೊಟ್ಟು ಶೌರ್ಯದ ಹೆಸರಿನಲ್ಲಿ ಕೌರ್ಯ ಮೆರೆಯುತ್ತಾರೆ. ಅದನ್ನೂ ಸಹ ಆಚರಣೆಯ ಭಾಗವೆಂದು ಪರಿಗಣಿಸಿ ಸಂಭ್ರಮಿಸುವುದು ದುರದೃಷ್ಟಕರ ಸಂಗತಿ.

ಕಲ್ಲುಗಳ ನಡುವಿನ ಹರಳಿನಂತೆ, ತಮ್ಮಿಂದ ಯಾರಿಗೂ ಹಾನಿಯಾಗದಿರಲೆಂದು ಬಯಸುವವರನ್ನು ಕೂಡ ನಾವು ಕಾಣಬಹುದು. ಅಂತಹವರು ಅತಿ ವಿರಳವೆಂದೇ ಹೇಳಬಹುದು. ಕೆಲವೊಂಮೆ ಅಂತಹವರೂ ಕೂಡ ತಿಳಿದೂ ತಪ್ಪು ಮಾಡಿಬಿಡುತ್ತಾರೆ. ಗುಂಪಿನಿಂದ ಭಿನ್ನವಾಗಿ ನಿಲ್ಲುವವರಿಗೆ ಟೀಕೆಗಳು ಕಟ್ಟಿಟ್ಟ ಬುತ್ತಿ ಎನ್ನುವಂತೆ, ಪಟಾಕಿಗೆ ಕಿಚ್ಚನ್ನು ಹಚ್ಚುವವರ ನಡುವೆ ಹಣತೆಯಲ್ಲಿ ಜ್ಯೋತಿ ಬೆಳಗುವವರು ಹಾಸ್ಯದ ವಸ್ತುಗಳಾಗುತ್ತಾರೆ. ಪರಿಸರ ಕಾಳಜಿಯ ಕಾರಣ ಕೊಟ್ಟು ಸಿಡಿಮದ್ದಿನಿಂದ ದೂರ ಸರಿದು, ಅದಕ್ಕೆ ಬೆಂಕಿ ಹಚ್ಚುಲು ಹಿಂಜರಿದರೆ ಹೆದರಿದ ಹೇಡಿಗಳೆಂದು ಅನ್ಯರು ಹಂಗಿಸುವಾಗ ಶೌರ್ಯ ಪ್ರದರ್ಶನಕ್ಕೋಸ್ಕರವಾದರೂ ಒಂದೆರಡು ಸಿಡಿಮದ್ದುಗಳಿಗೆ ಬೆಂಕಿ ಹಚ್ಚುವ ಹುಮ್ಮಸ್ಸು ಬರುವುದು ಸಹಜ. ಹೀಗೆ ಒಲ್ಲದ ಮನಸ್ಸಿನಿಂದಲೇ ಹಾನಿಕಾರಕ ಆಚರಣೆಗಳಿಗೆ ತಮ್ಮ ಕೊಡುಗೆಯನ್ನೂ ಸೇರಿಸಿಬಿಡುತ್ತಾರೆ.

ಇವೆಲ್ಲ ಬಾಯಲ್ಲಿ ಹೇಳಲು ಅಥವ ಪುಸ್ತಕದಲ್ಲಿ ಓದಲಷ್ಟೇ ಚಂದವೆನ್ನುವ ಮನಸ್ಥಿತಿಯ ನಡುವೆ, ಭಿನ್ನವಾಗಿ ನಿಲ್ಲಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಆಗಲೇ ಏನಾದರೂ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆಯೆಂದರೆ, ಹಸಿರು ಪಟಾಕಿಯ ಬಳಕೆ. ಅನ್ಯ ಪಟಾಕಿಗಳಿಗಿಂತ ಕಡಿಮೆ ರಾಸಾಯನಿಕಗಳಿಂದ ತಯಾರಿಸಲ್ಪಡುವ ಇವು ಹೊರಸೂಸುವ ಹೊಗೆಯಲ್ಲಿನ ವಿಷಕಾರಿ ಅಂಶದ ಪ್ರಮಾಣ ಕೊಂಚ ಕಡಿಮೆ. ಪಟಾಕಿಗಳೇ ಇಲ್ಲದೆ ಹಬ್ಬವನ್ನಾಚರಿಸುತ್ತೇವೆ ಅಂದರೆ ಅದು ಅತ್ಯುತ್ತಮ. ಇದರಿಂದ ಸಾಂಪ್ರದಾಯಿಕ ರೀತಿಯ ಆಚರಣೆಯ ಅಪೂರ್ವ ಅನುಭವ ಸಿಗುವುದಷ್ಟೇ ಅಲ್ಲದೆ, ಇನ್ನೊಬ್ಬರಿಗೆ ಹಾನಿ ಮಾಡಿ ನಾವು ಖುಷಿಪಡಲಿಲ್ಲವೆಂಬ ಸಂತೃಪ್ತಿಯೂ ಇರುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ, ತಯಾರಿಸುವ ಕಾರ್ಖಾನೆಗಳಲ್ಲಿ, ಕೂಡಿಡುವ ಅಂಗಡಿಗಳಿಗೆ ಇಲ್ಲವೆ ಕೊಂಡು ತಂದ ಗ್ರಾಹಕರ ಅಂಗಳದಲ್ಲಿ ಅವಾಂತರ ಸೃಷ್ಟಿಸುವ ಪಟಾಕಿಯೆಂಬ ಪಿಶಾಚಿಯನ್ನು ದೂರವಿರಿಸಿ ಹಬ್ಬ-ಹರಿದಿನಗಳನ್ನು ಆಚರಿಸೋಣ.

ಸುಡುವುದಿದ್ದರೆ ದುರ್ಗುಣಗಳನ್ನು ಸುಡೋಣ. ಸಂಭ್ರಮಿಸುವುದಿದ್ದರೆ ಸದ್ಗುಣಗಳನ್ನು ಸಂಭ್ರಮಿಸೋಣ.

-ಮೈತ್ರಿ ಎಸ್.‌ ಅಶ್ವತ್ಥಪುರ

ಸಂತ ಅಲೋಶಿಯಸ್ ಕಾಲೇಜು

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali 2023: ಬೆಳಕಿನ ಹಬ್ಬ…ನೀರು ತುಂಬುವ ಹಬ್ಬ

Deepavali 2023: ಬೆಳಕಿನ ಹಬ್ಬ…ನೀರು ತುಂಬುವ ಹಬ್ಬ

Deepavali: ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಮಂಗಳದ ಚಿಹ್ನೆ

Deepavali: ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಮಂಗಳದ ಚಿಹ್ನೆ

Deepavali 2023: ದೀಪಾವಳಿಯ ಬಲಿಪಾಡ್ಯಮಿ… ಪೂಜ್ಯನೀಯ ಗೋ ಪೂಜೆ

Deepavali 2023: ದೀಪಾವಳಿಯ ಬಲಿಪಾಡ್ಯಮಿ… ಪೂಜ್ಯನೀಯ ಗೋ ಪೂಜೆ

Deepavali 2023; ದೀಪಾವಳಿಗೂ ಲಕ್ಷ್ಮಿದೇವಿಗೂ ಅವಿನಾಭಾವ ಸಂಬಂಧ

Deepavali 2023; ದೀಪಾವಳಿಗೂ ಲಕ್ಷ್ಮಿದೇವಿಗೂ ಅವಿನಾಭಾವ ಸಂಬಂಧ

Deepavali 2023; ಹಳ್ಳಿಗಳಲ್ಲಿ ಆಚರಿಸುವ ಪಾಂಡವರ ಪೂಜೆ

Deepavali 2023; ಹಳ್ಳಿಗಳಲ್ಲಿ ಆಚರಿಸುವ ಪಾಂಡವರ ಪೂಜೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.