Iron ಅದಿರಿಗೆ ಕಡಿಮೆ ಮೌಲ್ಯ: ಪ್ರಕರಣಕ್ಕೆ ಮರುಜೀವ
ರಾಯಧನ ನಿಗದಿಯಲ್ಲಿ ಕಳ್ಳಾಟ; ಪಿಎಸಿ ಮುಂದೆ ಕಡತಗಳ ರಾಶಿ
Team Udayavani, Nov 14, 2023, 7:15 AM IST
ಬೆಂಗಳೂರು: ಬಳ್ಳಾರಿ ಗಣಿಧಣಿಗಳ ವಿರುದ್ಧ ಪಾದಯಾತ್ರೆ ನಡೆಸಿ 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಸಿದ್ದರಾಮಯ್ಯ ನವರ ಆಡಳಿತ ಕಾಲದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸರಕಾರದ ಕಣ್ಣಿಗೆ ಮಣ್ಣೆರಚಿ ರಾಯಧನ ನಿಗದಿಯಲ್ಲಿ ಕಳ್ಳಾಟವಾಡಿದ ಪ್ರಕರಣಕ್ಕೆ ಈಗ ಮರುಜೀವ ಸಿಗುವ ಸಾಧ್ಯತೆ ಇದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯ ಮುಂದೆ ಇದಕ್ಕೆ ಸಂಬಂಧಿಸಿದ ಕಡತಗಳ ರಾಶಿ ಈಗ ಮಂಡನೆಯಾಗಿದೆ.
ಮಾಜಿ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಪಿಎಸಿಯ ಮುಂದೆ 2009-10, 2014-15ರಲ್ಲಿ ನಡೆದ ರಾಯಧನ ವಂಚನೆ ಪ್ರಕರಣದ ವಿಚಾರಣೆ ಮತ್ತೆ ಪ್ರಾರಂಭವಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಮಿತಿ ಮುಂದಾದರೆ ಅಧಿಕಾರಿಗಳು ಹಾಗೂ ಗಣಿ ಗುತ್ತಿಗೆದಾರರಿಗೆ ಕಂಟಕ ಸೃಷ್ಟಿಯಾಗುವ ಸಾಧ್ಯತೆ ಇದೆ. ವಾಣಿಜ್ಯ ಮತ್ತು ಕೈಗಾರಿಕೆ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಪಾತ್ರ ಈ ಹಗರಣದಲ್ಲಿ ಅದಿರು ನಿಕ್ಷೇಪದಂತೆ ಬಗೆದಷ್ಟು ಲಭಿಸುತ್ತಿದೆ. ಒಂದು ಮೂಲದ ಪ್ರಕಾರ ಸಮಿತಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ರಾಯಧನ ನಿರ್ಧಾರಣೆಯ ಸಂದರ್ಭದಲ್ಲಿ ಅಧಿಕಾರಿಗಳು ಗುತ್ತಿಗೆ ದಾರರ ಜತೆಗೆ ಶಾಮೀಲಾಗಿ ಕಡಿಮೆ ಹಣ ನಿಗದಿ ಮಾಡಿದ್ದಾರೆ.
ಇದರಿಂದ ನೇರವಾಗಿ ಬೊಕ್ಕಸಕ್ಕೆ ನಷ್ಟವಾದರೆ, ಕೆಲವು ಪ್ರಕರಣಗಳಲ್ಲಿ ನಿಗದಿ ಮಾಡಿದ್ದಕ್ಕಿಂತಲೂ ಕಡಿಮೆ ವಸೂಲಿ ಮಾಡಲಾಗಿದೆ. ಕರ್ನಾಟಕ ಉಗ್ರಾಣ ನಿಗಮವೂ ಈ ಹಗರಣದಲ್ಲಿ ಭಾಗಿಯಾಗಿದ್ದು, ರಾಯಧನ ಸಂದಾಯ ಸಂದರ್ಭದಲ್ಲಿ ತಪ್ಪೆಸಗಿದೆ. “ಬಳ್ಳಾರಿ ರಿಪಬ್ಲಿಕ್’ ಗಣಿಗಾರಿಕೆ ಸಂದರ್ಭದಲ್ಲಿ ನಡೆಸಿದ ಲೂಟಿಗಿಂತಲೂ ವಾಣಿಜ್ಯ ಮತ್ತು ಕೈಗಾರಿಕೆ, ಅರಣ್ಯ, ಗಣಿ ಭೂ ವಿಜ್ಞಾನ, ಉಗ್ರಾಣ ನಿಗಮದ ಅಧಿಕಾರಿಗಳ ಪರೋಕ್ಷ ಪಾತ್ರದಿಂದ ಸರಕಾರದ ಬೊಕ್ಕಸಕ್ಕೆ ಆದ ನಷ್ಟವೇ ಅಧಿಕವಾಗಿರಬಹುದು ಎಂದು ಪಿಎಸಿ ಅಚ್ಚರಿ ವ್ಯಕ್ತಪಡಿಸಿದೆ.
ಸ್ವಾಧೀನಪಡಿಸಿಕೊಂಡ ಕಬ್ಬಿಣದ ಅದಿರಿನ ಮೌಲ್ಯವನ್ನೇ ಕಡಿಮೆ ತೋರಿಸಿದ ಅಧಿಕಾರಿಗಳು ವಸೂಲಿ ಮಾಡುವಾಗಲೂ ಕಡಿಮೆಗೊಳಿಸುವ ಮೂಲಕ ತಪ್ಪೆಸಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮೂರು ಉಪನಿರ್ದೇಶಕರ ಕಚೇರಿ ಭಾಗಿಯಾಗಿದ್ದು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಕ್ರಿಯಾ ಯೋಜನೆ ಪಡೆಯದೆಯೇ ಗುತ್ತಿಗೆದಾರರಿಗೆ ಗಣಿಗಾರಿಕೆ ನಡೆಸಲು ಅವಕಾಶ ಕೊಡಲಾಗಿದೆ.
ಈ ಎಲ್ಲ ಸಂಗತಿಗಳು ಸಿಎಜಿ ವರದಿಯಲ್ಲೂ ಉಲ್ಲೇಖವಾಗಿವೆ. ಈ ಮಧ್ಯೆ ಸರಕಾರಗಳು ಬದಲಾಗಿವೆ. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಮರಳಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ. ಆದಾಗಿಯೂ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಲೆಕ್ಕಪತ್ರ ಸಮಿತಿಯಾದರೂ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡುವಂತೆ ಸರಕಾರಕ್ಕೆ ಶಿಫಾರಸು ನೀಡಬಲ್ಲುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಪ್ರಮುಖ ಆರೋಪಗಳೇನು ?
-ಅದಿರಿನ ಮೌಲ್ಯವನ್ನು ಕಡಿಮೆಯಾಗಿ ನಿರ್ಧರಿಸಿರುವುದು.
-ಕಡಿಮೆ ರಾಜಧನ ಸಂಗ್ರಹ
-ಮೂರು ಉಪನಿರ್ದೇಶಕರ ರಕ್ಷಣೆ
-ಐಬಿಎಂಗೆ ನೀಡಿದ ಲೆಕ್ಕದಲ್ಲಿ ವ್ಯತ್ಯಾಸ
ಐಬಿಎಂ ದಾಖಲೆಯಲ್ಲೂ ವ್ಯತ್ಯಯ
ಸಮಿತಿಗೆ ಸಲ್ಲಿಕೆಯಾಗಿರುವ ದಾಖಲೆಯ ಪೈಕಿ ಗಣಿಗಾರಿಕೆ ಕ್ರಿಯಾ ಯೋಜನೆಯಲ್ಲಿ ಮಂಜೂರಾತಿ ಹೊಂದಿ ಪರಿಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಖನಿಜಗಳನ್ನು ನಿಕ್ಷೇಪದಿಂದ ತೆಗೆಯಲಾಗಿದೆ. ಭಾರತೀಯ ಗಣಿ ಸಂಸ್ಥೆ (ಐಬಿಎಂ)ಗೆ ಗುತ್ತಿಗೆದಾರರು ವರದಿ ಮಾಡಿದ ಉತ್ಪಾದನ ಅಂಕಿಸಂಖ್ಯೆಗೂ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಧನ ನಿಗದಿ ಮಾಡುವ ಸಂದರ್ಭದಲ್ಲಿ ಪ್ರಸ್ತುತಪಡಿಸಿದ ಅಂಕಿಸಂಖ್ಯೆಗೂ ವ್ಯತ್ಯಾಸ ಕಂಡುಬಂದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯನ್ನು ತೋರಿಸಿದೆ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ದಾಖಲೆಗಳು ಹೇಳುತ್ತಿವೆ.
-ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.